ಈ ದಿನ ಸಂಪಾದಕೀಯ | ಕುಸಿಯುತ್ತಿರುವ ಸಾಮ್ರಾಜ್ಯದ ಹೊಸ ಅಧಿಪತಿ ಡೊನಾಲ್ಡ್ ಟ್ರಂಪ್

Date:

Advertisements
ಅಮೆರಿಕದಲ್ಲಿ ಅತ್ತ ಬೆಂಕಿ-ಹಿಮದಿಂದ ಜನಜೀವನ ಅಸ್ತವ್ಯಸ್ತವಾಗುತ್ತಿದೆ; ಇತ್ತ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮೆರವಣಿಗೆ ಮೇರೆ ಮೀರುತ್ತಿದೆ. ಕುಸಿಯುತ್ತಿರುವ ಸಾಮ್ರಾಜ್ಯದ ಅಧಿಪತಿ ಟ್ರಂಪ್ ಆಡಳಿತ ಪ್ರಾಕೃತಿಕ ವಿಕೋಪಕ್ಕಿಂತಲೂ ದೊಡ್ಡ ದುರಂತ ತಂದೊಡ್ಡಬಹುದೇ?

ಅಮೆರಿಕದ 47ನೇ ಅಧ್ಯಕ್ಷರಾಗಿ 78ರ ಹರೆಯದ ಡೊನಾಲ್ಡ್‌ ಟ್ರಂಪ್‌ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ತಮ್ಮ ‘ಮೇಕ್‌ ಅಮೆರಿಕ ಗ್ರೇಟ್‌ ಅಗೇನ್’ ಗುರಿಯೊಂದಿಗೆ ವೈಟ್‌ಹೌಸ್‌ ಪ್ರವೇಶಿಸಿದ್ದಾರೆ. ಅಮೆರಿಕ ಸೂಪರ್ ಪವರ್ ದೇಶವಾಗಿರಬೇಕು, ಡಾಲರ್ ಮೌಲ್ಯವನ್ನು ಹೆಚ್ಚಿಸಬೇಕು, ಬಿಗ್ ಬ್ರದರ್ ಸ್ಥಾನದಲ್ಲಿ ಮುಂದುವರೆಯಬೇಕು ಎಂಬ ಮಹದಾಸೆ ಹೊಂದಿದ್ದಾರೆ. ಅಮೆರಿಕ ರಾಜಕಾರಣದಲ್ಲಿ ‘ಟ್ರಂಪ್ ಯುಗ’ ಆರಂಭಿಸಿ, ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಮರಳಿ ಕಟ್ಟುವುದಾಗಿ ಭರವಸೆ ನೀಡಿ, ಇಡೀ ವಿಶ್ವವೇ ಬೆರಗಾಗಿ ಅಮೆರಿಕದತ್ತ ನೋಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ.

ಪದಗ್ರಹಣಕ್ಕೆ ಪೂರ್ವಭಾವಿಯಾಗಿ ರಾಜಧಾನಿ ವಾಷಿಂಗ್ಟನ್‌ ಡಿಸಿಯಲ್ಲಿ ನಡೆದ ‘ವಿಕ್ಟರಿ ರ್‍ಯಾಲಿ’ ಉದ್ದೇಶಿಸಿ ಮಾತನಾಡಿರುವ ಟ್ರಂಪ್‌, ‘ನಾಳೆ ಸೂರ್ಯ ಮುಳುಗುವ ಹೊತ್ತಿಗೆ ನಮ್ಮ ದೇಶದ ಮೇಲಿನ ಆಕ್ರಮಣಕ್ಕೆ ಕಡಿವಾಣ ಬಿದ್ದಿರುತ್ತದೆ’ ಎಂಬ ಹೇಳಿಕೆ ನೀಡಿದ್ದಾರೆ.

ಟ್ರಂಪ್ ಹೇಳಿಕೆ, ಅಮೆರಿಕದ ಮೇಲೆ ಆಕ್ರಮಣ ಮಾಡಲು ಸಿದ್ಧರಾಗಿರುವವರು ಯಾರು ಎನ್ನುವ ಪ್ರಶ್ನೆ ಎತ್ತುವುದು ಸಹಜ. ಜಾಗತಿಕ ಮಟ್ಟದಲ್ಲಿ ಈಗ, ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದಲ್ಲಿ ಅಮೆರಿಕ ಇಸ್ರೇಲ್ ಪರ ನಿಂತಿದೆ. ಉಕ್ರೇನ್-ರಷ್ಯಾ ಯುದ್ಧದಲ್ಲಿ ಉಕ್ರೇನ್ ಪರ ನಿಂತಿರುವುದು ಹಾಗೂ ಕೆನಡಾ-ಗ್ರೀನ್ ಲ್ಯಾಂಡ್ ಸ್ವಾಧೀನಪಡಿಸಿಕೊಂಡು ಆರ್ಕ್‌ಟಿಕ್ ಮೇಲೆ ಪ್ರಾಬಲ್ಯ ಹೊಂದಲು ಹವಣಿಸುವ ಮೂಲಕ ಬಲಾಢ್ಯ ರಷ್ಯಾವನ್ನು ಎದುರು ಹಾಕಿಕೊಂಡಿದೆ. ಸಿರಿಯಾದ ಸಿವಿಲ್ ವಾರ್‍‌ನಲ್ಲಿ ಉಗ್ರಗಾಮಿಗಳನ್ನು ಎತ್ತಿಕಟ್ಟಿದೆ. ಚೀನಾ ವಿರುದ್ಧ ಹಾಂಕಾಂಗ್ ಪರ ನಿಲುವು ತಳೆದಿದೆ. ಜೊತೆಗೆ ಮಿಲಿಟರಿ ಟ್ರೇಡ್ ವಾರ್ ಶುರುಮಾಡಿ ಪರೋಕ್ಷವಾಗಿ ಯುದ್ಧಕ್ಕೆ ಆಹ್ವಾನಿಸುತ್ತಿದೆ. ಇವರಲ್ಲಿ ಯಾರಲ್ಲದಿದ್ದರೂ, ರಷ್ಯಾ ಮತ್ತು ಚೀನಾ ಬಗ್ಗೆ ಅಮೆರಿಕಕ್ಕೆ ಭಾರೀ ಭಯವಿದೆ. ಆಕ್ರಮಣ ಮಾಡಬಹುದೆಂಬ ಹೆದರಿಕೆಯೂ ಇದೆ.

Advertisements

ಹೆದರಿಕೆ ಇರುವ ಕಾರಣಕ್ಕೇ ಡೊನಾಲ್ಡ್ ಟ್ರಂಪ್, ಅಧಿಕಾರ ಸ್ವೀಕರಿಸುವ ಮುನ್ನ ಇಸ್ರೇಲ್-ಪ್ಯಾಲೆಸ್ತೀನ್ ಕದನವಿರಾಮ ಘೋಷಿಸುವಂತೆ ನೋಡಿಕೊಂಡಿದ್ದಾರೆ. ಇಲ್ಲದ ಇಮೇಜ್ ಇಮ್ಮಡಿಗೊಳಿಸಿ, ಇಡೀ ಪ್ರಪಂಚದ ಎದುರು ಶಾಂತಿದೂತನಂತೆ ಕಾಣಲು ಹವಣಿಸುತ್ತಿದ್ದಾರೆ.  

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ‘ರೋಹಿತ್‌ ಕಾಯ್ದೆ’ ಜಾರಿಗಾಗಿ ಆಗಬೇಕಿದೆ ‘ಜನಾಂದೋಲನ’

ಪ್ರಪಂಚದ ಇತರ ರಾಷ್ಟ್ರಗಳಿಗೆ ಅಮೆರಿಕ ದೊಡ್ಡಣ್ಣನಂತೆ ಕಂಡರೂ, ದೊಡ್ಡಣ್ಣನ ಮನೆಯ ದೋಸೆಯೇ ತೂತಾಗಿದೆ. ಮಿಲಿಟರಿ ಅಧಿಪತ್ಯವೊಂದನ್ನು ಬಿಟ್ಟು ಮಿಕ್ಕೆಲ್ಲ ಕ್ಷೇತ್ರಗಳಲ್ಲಿ ಅಮೆರಿಕ ಹಿಂದೆ ಬಿದ್ದಿದೆ. ಅತ್ಯಾಧುನಿಕ ಯುದ್ಧಸಾಮಗ್ರಿಗಳ ಸೇನಾ ಬಲ ಹೊಂದಿ, ಪ್ರಪಂಚದ ಬಹುದೊಡ್ಡ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಲು ಇದ್ದಬದ್ದ ಹಣವನ್ನೆಲ್ಲ ರಕ್ಷಣಾ ಕ್ಷೇತ್ರಕ್ಕೆ ಸುರಿಯಲಾಗಿದೆ. ಇದು ಸಹಜವಾಗಿಯೇ ಮಿಕ್ಕೆಲ್ಲ ಕ್ಷೇತ್ರಗಳನ್ನು ಊನಗೊಳಿಸಿದೆ. ಅದರಲ್ಲೂ ನಿರುದ್ಯೋಗ ಮತ್ತು ವಸತಿ ಸಮಸ್ಯೆ ತೀವ್ರವಾಗಿದೆ. ವಲಸೆ ತಲೆನೋವು ತಂದಿಟ್ಟಿದೆ. ಮಧ್ಯಮವರ್ಗ ಮತ್ತು ಕೆಳಮಧ್ಯಮವರ್ಗದ ಜನರ ಬದುಕು ದುರ್ಭರವಾಗಿದೆ. ಡಾಲರ್ ಅನ್ನು ಅಸ್ತ್ರದಂತೆ ಬಳಸಿ, ಇತರೆ ರಾಷ್ಟ್ರಗಳ ಮೇಲೆ ಪ್ರಾಬಲ್ಯ ಸಾಧಿಸಲು ಹವಣಿಸಿ, ಆರ್ಥಿಕ ಪರಿಸ್ಥಿತಿ ಹದಗೆಡುವಂತಾಗಿದೆ.

ಟ್ರಂಪ್ ಇದಕ್ಕೂ ಒಂದು ಹುಸಿ ಕರೆನ್ಸಿ ವ್ಯವಸ್ಥೆ ಸೃಷ್ಟಿಸಿದ್ದಾರೆ. ಮೂರು ದಿನಗಳ ಹಿಂದೆ ‘ಟ್ರಂಪ್ ಡಾಲರ್’ ಎಂಬ ಕ್ರಿಪ್ಟೋ ಕರೆನ್ಸಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಒಂದು ಕಾಯಿನ್ ಬೆಲೆ 64 ಡಾಲರ್ ಇದ್ದು, ಎರಡೇ ದಿನಗಳ ಅಂತರದಲ್ಲಿ 13 ಬಿಲಿಯನ್ ಡಾಲರ್ ಕ್ರಿಪ್ಟೋ ಕರೆನ್ಸಿ ವಹಿವಾಟು ನಡೆದಿದೆ. ಅದಾವುದೂ ಕಣ್ಣಿಗೆ ಕಾಣುವ ಕರೆನ್ಸಿ ಅಲ್ಲ, ಡಿಜಿಟಲ್ ಕರೆನ್ಸಿ. ಅವರು ಅಂಕಿಗಳನ್ನು ತೋರಿಸುತ್ತಾರೆ, ಜಗತ್ತಿನ ಜನ ನಂಬುತ್ತಾರೆ.

ಇಂತಹ ಭ್ರಮಾಜಗತ್ತನ್ನು ಸೃಷ್ಟಿಸುವುದರಲ್ಲಿ ನಿಪುಣರಾಗಿರುವ ಟ್ರಂಪ್, ಅಧಿಕಾರ ಸ್ವೀಕರಿಸಿದ ನಂತರ ತೆಗೆದುಕೊಳ್ಳಬಹುದಾದ ರಾಜಕೀಯ ನಿಲುವುಗಳ ಬಗ್ಗೆ ಎಲ್ಲರ ಚಿತ್ತವಿದೆ. ಅದಕ್ಕೆ ಪೂರಕವಾಗಿ ಟ್ರಂಪ್ ತಳೆದ ನಿಲುವುಗಳಾದ- ಪಕ್ಕದ ದೇಶವಾದ ಕೆನಡಾ ಸ್ವಾಧೀನಪಡಿಸಿಕೊಳ್ಳುವುದು; ಗ್ರೀನ್ ಲ್ಯಾಂಡ್ ಖರೀದಿಸುವುದು; ಪನಾಮಾ ಕಾಲುವೆ ಮೇಲೆ ನಿಯಂತ್ರಣ ಸಾಧಿಸುವುದು; ಅಕ್ರಮ ವಲಸಿಗರ ಸಾಮೂಹಿಕ ಗಡಿಪಾರು ಮಾಡುವುದು; ಜನ್ಮಸಿದ್ಧ ಪೌರತ್ವವನ್ನು ಕೊನೆಗಾಣಿಸುವುದು ಹಾಗೂ ಮಹಿಳಾ ಕ್ರೀಡೆಗಳಿಂದ ಸಲಿಂಗಿಗಳನ್ನು ಹೊರಗಿಡುವುದು- ಅಂತಾರಾಷ್ಟ್ರೀಯ ಸಂಬಂಧಗಳು ಹದಗೆಡಬಹುದು ಎಂಬ ಅನುಮಾನಕ್ಕೆ ದಾರಿ ಮಾಡಿಕೊಡುತ್ತಿದೆ. ಆ ನಿರ್ಧಾರಗಳು ಇತರೆ ರಾಷ್ಟ್ರಗಳೊಂದಿಗಿನ ರಾಜತಾಂತ್ರಿಕ ಒಡಕಿಗೆ ಕಾರಣವಾಗಬಹುದು ಎಂಬ ಆತಂಕವೂ ಇದೆ. ಒಟ್ಟಾರೆ ಹುಚ್ಚನ ಕೈಯಲ್ಲಿ ಕತ್ತಿ ಕೊಟ್ಟಂತಾಗಿದೆ.

ಈ ತಿಕ್ಕಲು ದೊರೆಗೆ ಎಲಾನ್ ಮಸ್ಕ್ ಎಂಬ ಸೇನಾಧಿಪತಿಯಂತೆ ಸಿಕ್ಕಿದ್ದಾನೆ. ಈತ ಮೂಲತಃ ದಕ್ಷಿಣ ಆಫ್ರಿಕಾದವನು. ಅಲ್ಲಿಂದ ಕೆನಡಾಕ್ಕೆ ವಲಸೆ ಬಂದು, ಅಮೆರಿಕಕ್ಕೆ ನುಸುಳಿ, ಅತಿ ಶ್ರೀಮಂತ ಉದ್ಯಮಿ ಎನಿಸಿಕೊಂಡಿದ್ದಾನೆ. ಈಗ ಟ್ರಂಪ್‌ನ ಬಲಗೈ ಬಂಟನಾಗಿದ್ದಾನೆ. ಈತ ಆರ್ಟಿಫಿಷಿಯಲ್ ಇಂಟಲಿಜೆನ್ಸ್(ಎಐ) ಮೂಲಕ ಎಲ್ಲವನ್ನು ನಕಲು ಮಾಡುತ್ತಿದ್ದಾನೆ. ಅಂಗೈನಲ್ಲಿಯೇ ಅಮೆರಿಕ ತೋರುತ್ತಿದ್ದಾನೆ.

ನಕಲು ಪ್ರವೀಣ ಎಲಾನ್ ಮಸ್ಕ್ ಮತ್ತು ತಿಕ್ಕಲು ದೊರೆ ಡೊನಾಲ್ಡ್ ಟ್ರಂಪ್ ಒಂದಾಗಿದ್ದಾರೆ. ಭ್ರಮೆಯನ್ನು ಬಿತ್ತಿ ಬೆಳೆಯುತ್ತಿದ್ದಾರೆ. ಇಬ್ಬರೂ ಉಗ್ರ ಬಲಪಂಥೀಯ ಗುಂಪುಗಳನ್ನು ಬೆಂಬಲಿಸುತ್ತಿದ್ದಾರೆ. ಇದರ ನಡುವೆಯೇ, ಡೀಪ್ ಸ್ಟೇಟ್- ಯುದ್ಧಕೋರ ಮನಸ್ಥಿತಿಯ ಆಡಳಿತಯಂತ್ರ- ಇವರಿಬ್ಬರನ್ನು ಹೇಗೆ ಬಳಸಿಕೊಳ್ಳುತ್ತದೆ, ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದು ಯಾರ ಊಹೆಗೂ ನಿಲುಕದಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದಲ್ಲೇವಾಲ್ ಉಪವಾಸಕ್ಕೂ ಸ್ಪಂದಿಸದ ಮೋದಿ ಮತ್ತೆ ಮಂಡಿಯೂರುವುದು ಸನ್ನಿಹಿತ! 

ಇದೇ ಸಂದರ್ಭದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಒಂದು ವಾರದಿಂದ ನಾಡು-ಕಾಡು ಉರಿದು ಬೂದಿಯಾಗುತ್ತಿದೆ. ಒಹಾಯೊ, ಕೆಂಟಕಿ ಮುಂತಾದ ರಾಜ್ಯಗಳಲ್ಲಿ ಅತಿ ಹಿಮ ಬೀಳುತ್ತಿದೆ. ಪದೇಪದೆ ಯಂತ್ರಗಳಿಂದ ತೆರವುಗೊಳಿಸಿದರೂ, ಕ್ಷಣಮಾತ್ರದಲ್ಲಿ ಹಿಮ ಆವರಿಸಿ ಜನರ ಜೀವನ ಹಿಮದೊಂದಿಗೆ ಕರಗಿಹೋಗುತ್ತಿದೆ. ಒಂದು ಕಡೆ ಬೆಂಕಿ, ಮತ್ತೊಂದು ಕಡೆ ಹಿಮ.

ಏತನ್ಮಧ್ಯೆ, ರೋಮ್ ಹೊತ್ತಿ ಉರಿಯುತ್ತಿರುವಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದಂತೆ, ಅಮೆರಿಕದಲ್ಲಿ ಅತ್ತ ಬೆಂಕಿ-ಹಿಮದಿಂದ ಜನಜೀವನ ಅಸ್ತವ್ಯಸ್ತವಾಗುತ್ತಿದೆ; ಇತ್ತ ಹೊಸ ಅಧ್ಯಕ್ಷ ಟ್ರಂಪ್‌ರ ಮೆರವಣಿಗೆ ಮೇರೆ ಮೀರುತ್ತಿದೆ. ಕುಸಿಯುತ್ತಿರುವ ಸಾಮ್ರಾಜ್ಯದ ಅಧಿಪತಿ ಟ್ರಂಪ್ ಆಡಳಿತ ಪ್ರಾಕೃತಿಕ ವಿಕೋಪಕ್ಕಿಂತಲೂ ದೊಡ್ಡ ದುರಂತ ತಂದೊಡ್ಡಬಹುದೇ?… ನೋಡೋಣ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X