ಎಪಿಎಂಸಿ ಕಾಯ್ದೆ ಬಂದಾಕ್ಷಣ ರೈತರ ಬದುಕು ಬಂಗಾರವಾಗುತ್ತದೆ ಎಂದು ಭ್ರಮಿಸುವ ಅಗತ್ಯವಿಲ್ಲ. ಇಂತಹ ಹತ್ತಾರು ಕಾಯ್ದೆಗಳು ಈಗಾಗಲೇ ಜಾರಿಯಲ್ಲಿದ್ದರೂ, ರಾಜ್ಯದ ರೈತರ ಬದುಕೇನು ಬಂಗಾರವಾಗಿಲ್ಲ. ಕಾಯ್ದೆ ಬಗ್ಗೆ ಸರ್ಕಾರ ಒಲವು ತೋರುತ್ತಿದೆ, ಜಾರಿಗೆ ತರಲಿ. ಆದರೆ, ಇದು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರೈತ ಸಮುದಾಯವನ್ನು ಸೆಳೆಯುವ ಗಿಮಿಕ್ ಆಗದಿರಲಿ.
ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ರಚಿಸಿದ್ದ ಪರಿಶೀಲನಾ ಸಮಿತಿಯ ವರದಿಯನ್ನು ಬುಧವಾರ ಸದನದಲ್ಲಿ ಮಂಡಿಸಲಾಗಿದೆ. ಎಪಿಎಂಸಿ ಪ್ರಾಂಗಣಗಳ ಸುಧಾರಣೆ, ರೈತಸ್ನೇಹಿ ಮಾರುಕಟ್ಟೆ ವ್ಯವಸ್ಥೆ, ಕೃಷಿ-ಕೈಗಾರಿಕೆಗಳಿಗೆ ಪೂರಕವಾದ ಕೆಲವು ನೀತಿಗಳ ಅನುಸರಣೆ ಸೇರಿದಂತೆ 27 ಶಿಫಾರಸುಗಳನ್ನು ಸಮಿತಿ ಮಾಡಿದೆ. ಈ ವರದಿ ಮಂಡನೆಯ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ಪರ ನಿಲುವು ತಾಳಿರುವುದು, ಅದಕ್ಕೆ ಬಿಜೆಪಿ-ಜೆಡಿಎಸ್ ಸದಸ್ಯರು ಕೂಡ ಬೆಂಬಲಿಸಿರುವುದು ಸ್ವಾಗತಾರ್ಹ ಕ್ರಮ.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಜಾಪ್ರತಿನಿಧಿಗಳು ಪ್ರಜೆಗಳ ಪರವಾಗಿದ್ದಾಗಲೇ ಅದು ಜನಪರ ಸರ್ಕಾರವಾಗುವುದು. ಆ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಡಿಯಿಟ್ಟಿದೆ, ಒಳ್ಳೆಯದು.
ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ತಳೆಯುವ ನಿಲುವಿಗೂ, ವಿರೋಧ ಪಕ್ಷದಲ್ಲಿ ಕೂತಾಗ ತಳೆಯುವ ನಿಲುವಿಗೂ ತದ್ವಿರುದ್ಧವಿರುತ್ತವೆ. ಹಾಗೆಯೇ ಚುನಾವಣೆಗಳು ಎದುರಾದಾಗ ಕೊಡುವ ಭರವಸೆಗಳು ಕೂಡ ಕಾಲಾನಂತರ ಪೊಳ್ಳು ಭರವಸೆಗಳಾಗಿ ಜನರನ್ನು ಮೋಸಗೊಳಿಸುತ್ತವೆ.
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರು ಕೃಷಿ ಕ್ಷೇತ್ರದ ಅಭಿವೃದ್ಧಿಯೇ ದೇಶದ ಅಭಿವೃದ್ಧಿ, ರೈತರು ದೇಶದ ಬೆನ್ನೆಲುಬು ಎಂದಿದ್ದರು. ಬಹುಮತದಿಂದ ಗೆದ್ದು ಗದ್ದುಗೆ ಏರಿದ ನಂತರ, 2020ರಲ್ಲಿ ಪ್ರಧಾನಿ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಮೂರು ಪ್ರಮುಖ- ಕೃಷಿ ಮಾರುಕಟ್ಟೆ(ಎಪಿಎಂಸಿ) ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ ಹಾಗೂ ಅಗತ್ಯ ವಸ್ತುಗಳ(ತಿದ್ದುಪಡಿ) ಕಾಯ್ದೆಗಳಿಗೆ ತಿದ್ದುಪಡಿ ತಂದಿತ್ತು. ಈ ಕಾಯ್ದೆಗಳು ಕೃಷಿ ಕ್ಷೇತ್ರಕ್ಕೇ ಕತ್ತಲಾವರಿಸುವ, ರೈತಮಕ್ಕಳನ್ನು ಕಂಗಾಲಾಗಿಸುವ ಕರಾಳ ಕಾಯ್ದೆಗಳಾಗಿದ್ದವು.
ಆ ಸಂದರ್ಭದಲ್ಲಿ, ಡಿಸೆಂಬರ್ 2020ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಿಜೆಪಿ ಸರ್ಕಾರ, ದೆಹಲಿಯ ನಾಯಕರನ್ನು ಓಲೈಸಲು, ಅವರ ಕೃಪಾಕಟಾಕ್ಷಕ್ಕೆ ಒಳಗಾಗಲು, ಎಪಿಎಂಸಿ ಕಾಯ್ದೆಯನ್ನು ತರಾತುರಿಯಲ್ಲಿ ಸದನದಲ್ಲಿ ಮಂಡಿಸಿ, ಎಪಿಎಂಸಿ ರದ್ದುಗೊಳಿಸುವ ರೈತದ್ರೋಹಿ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯಕ್ಕೆ ಅಂದು ಕಾಂಗ್ರೆಸ್ ವಿರೋಧಿಸಿದ್ದರೆ, ರೈತರ ಪಕ್ಷವಾದ ಜೆಡಿಎಸ್ ಬೆಂಬಲಿಸುವ ಮೂಲಕ ನಾಡಿನ ರೈತ ಬಾಂಧವರನ್ನು ಬೆಚ್ಚಿ ಬೀಳಿಸಿತ್ತು.
ಅದೇ ಸಂದರ್ಭದಲ್ಲಿ ದೇಶದ ರೈತರು ಕೇಂದ್ರದ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದು ದಿಲ್ಲಿ ಚಲೋ ಕೈಗೊಂಡರು. ಸತತ ಒಂದು ವರ್ಷದ ಕಾಲ ಪ್ರತಿಭಟನೆ, ಧರಣಿ, ಸತ್ಯಾಗ್ರಹ ನಡೆಸಿದರು. 700 ರೈತರು ಬಲಿಯಾದರು. ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ನೂರಾರು ತಂತ್ರಗಳ ಮೊರೆಹೋದ ಪ್ರಧಾನಿ ಮೋದಿಯವರು, ಅವರಿಗೆ ಕೊಡಬಾರದು ಕಿರುಕುಳಗಳನ್ನೆಲ್ಲ ಕೊಟ್ಟರು. ಕೊನೆಗೆ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ನವೆಂಬರ್ 2021ರಲ್ಲಿ ರದ್ದುಗೊಳಿಸಿದರು.
ಗಮನಿಸಬೇಕಾದ ಅಂಶವೆಂದರೆ, ದಿಲ್ಲಿಯ ಕೇಂದ್ರ ಸರ್ಕಾರ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದರೂ, ರಾಜ್ಯ ಬಿಜೆಪಿ ಸರ್ಕಾರ ಎಪಿಎಂಪಿ ಕಾಯ್ದೆ ವಾಪಸ್ ಪಡೆಯಲಿಲ್ಲ. 2021ರಿಂದ ಇಲ್ಲಿಯವರೆಗೆ ರಾಜ್ಯದ ಎಪಿಎಂಸಿ ಮಾರುಕಟ್ಟೆಗಳು ರೈತರನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆಯೂ ಸಿಗಲಿಲ್ಲ.
ಇದು ರಾಜ್ಯ ಬಿಜೆಪಿ ರೈತರಿಗೆ ಮಾಡಿದ ಮೋಸವಾದರೆ, 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು, ಆಗಿನ ಕೇಂದ್ರದ ಕಾಂಗ್ರೆಸ್ ಸರ್ಕಾರದ ಮುಂದೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಶಾಸನಾತ್ಮಕವಾಗಿ ಕಡ್ಡಾಯಗೊಳಿಸಿ ಎಂದು ಆಗ್ರಹಿಸಿ ರೈತಪರ ಪೋಸು ಕೊಟ್ಟಿದ್ದರು. 2021ರಲ್ಲಿ ರೈತರು ಪ್ರತಿಭಟನೆ ವಾಪಸ್ ಪಡೆದಾಗ, ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕಾನೂನು ಖಾತರಿಗೆ ಪ್ರೊ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನ ಮಾಡುವುದಾಗಿ ರೈತರಿಗೆ ಭರವಸೆ ನೀಡಿದ್ದರು.
ಈಗ ಅದೇ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿದ್ದಾರೆ. ಗುಜರಾತಿನಲ್ಲಿ ನಿಂತು ಮಾಡಿದ ಆಗ್ರಹವನ್ನು ಮತ್ತು ದೆಹಲಿಯಲ್ಲಿ ಕೂತು ಕೊಟ್ಟ ಭರವಸೆಯನ್ನು ಮರೆತಿದ್ದಾರೆ. ತಮ್ಮ ಕೈಯಲ್ಲಿಯೇ ಅಧಿಕಾರವಿದ್ದರೂ ಜಾರಿಗೆ ತರದೆ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ.
2020ರಲ್ಲಿ ಬಿಜೆಪಿ ಸರ್ಕಾರ ಎಪಿಎಂಸಿ ರದ್ದುಗೊಳಿಸಿದ ಕಾಯ್ದೆಯ ವಿರುದ್ಧವಿದ್ದ ಕಾಂಗ್ರೆಸ್, 2023ರಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಸಮಿತಿ ರಚಿಸಿತು. ಇಂದು ಆ ಸಮಿತಿ ಕೊಟ್ಟ ವರದಿಯನ್ನು ಸದನದಲ್ಲಿ ಮಂಡನೆ ಮಾಡಿದೆ.
ಈ ಕಾಯ್ದೆ ಬಂದಾಕ್ಷಣ ರೈತರ ಬದುಕು ಬಂಗಾರವಾಗುತ್ತದೆ ಎಂದು ಭ್ರಮಿಸುವ ಅಗತ್ಯವಿಲ್ಲ. ಇಂತಹ ಹತ್ತಾರು ಕಾಯ್ದೆಗಳು ಈಗಾಗಲೇ ಜಾರಿಯಲ್ಲಿದ್ದರೂ, ರಾಜ್ಯದ ರೈತರ ಬದುಕೇನು ಬಂಗಾರವಾಗಿಲ್ಲ. ಬದಲಿಗೆ, ಭೀಕರ ಬರಗಾಲಕ್ಕೆ ತುತ್ತಾಗಿ ತತ್ತರಿಸುತ್ತಿದ್ದಾರೆ. ಜಾನುವಾರುಗಳಿಗೆ ಮೇವಿಲ್ಲದೆ, ಕುಡಿಯುವ ನೀರಿಲ್ಲದೆ ಜನ ಗುಳೆ ಹೋಗುತ್ತಿದ್ದಾರೆ. ಪರಿಹಾರ ಕನಸಿನ ಗಂಟಾಗಿದೆ.
ಇಂತಹ ಹೊತ್ತಿನಲ್ಲಿ ಎಪಿಎಂಸಿ ಕಾಯ್ದೆ ಬಗ್ಗೆ ಸರ್ಕಾರ ಒಲವು ತೋರುತ್ತಿದೆ. ಆದರೆ, ಇದು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರೈತ ಸಮುದಾಯವನ್ನು ಸೆಳೆಯುವ ಗಿಮಿಕ್ ಆಗದಿರಲಿ.
