ಈ ದಿನ ಸಂಪಾದಕೀಯ | ಸರ್ಕಾರ ಸುಡದಿರಲಿ ಬಿಲ್ ಬಾಕಿ ಬೆಂಕಿ ಕಿಡಿ

Date:

Advertisements
ಗುತ್ತಿಗೆದಾರರು, ಅಧಿಕಾರಿಗಳು ಮತ್ತು ರಾಜಕಾರಣಿಗಳೆಂಬ ಅಕ್ರಮಕೂಟದ ಕರ್ಮಕಾಂಡಗಳು ಜನತೆಗೆ ಗೊತ್ತಿಲ್ಲದ ವಿಷಯವೇನಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ, ಬಿಲ್ ಬಾಕಿಯನ್ನು ಬಗೆಹರಿಸುವುದಾಗಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸದಿರುವುದು, ರಾಜಕೀಯವಾಗಿ ಸರಿಯಾದ ನಡೆ ಅಲ್ಲ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಮೂರು ತಿಂಗಳಲ್ಲಿಯೇ, ಚುನಾವಣೆಗೂ ಮುಂಚಿನ ಆಶ್ವಾಸನೆಗಳಾದ ಐದು ಗ್ಯಾರಂಟಿಗಳಲ್ಲಿ ಮೂರನ್ನು ಜಾರಿಗೆ ತಂದು, ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಬದ್ಧತೆಯಂತೆ ಕಂಡರೂ, ಗ್ಯಾರಂಟಿಗಳನ್ನು ಕಾರ್ಯರೂಪಕ್ಕಿಳಿಸುವುದು, ಮಾತನಾಡಿದಷ್ಟು ಸುಲಭದ ವಿಷಯವಲ್ಲ ಎನ್ನುವುದು ಈಗ ಮುಖ್ಯಮಂತ್ರಿಗಳಿಗೆ ಮನವರಿಕೆಯಾಗಿರಲೂಬಹುದು, ಇರಲಿ.

ಈ ಗ್ಯಾರಂಟಿ ಯೋಜನೆಗಳು ಸಣ್ಣಪುಟ್ಟ ಕಾರ್ಯಕ್ರಮಗಳಲ್ಲ, ವಾರ್ಷಿಕ 58 ಸಾವಿರ ಕೋಟಿಯನ್ನು ಬೇಡುವ ಬಹುದೊಡ್ಡ ಕಲ್ಯಾಣ ಕಾರ್ಯಕ್ರಮಗಳು. ಇವುಗಳನ್ನು ಕಾರ್ಯರೂಪಕ್ಕೆ ತರುವಾಗ ರಾಜ್ಯದ ಆರ್ಥಿಕ ಸ್ಥಿತಿ ಏರುಪೇರಾಗುವುದು ಸಹಜ. ಹಾಗಂತ ಸುಮ್ಮನಿರಲಾಗುವುದಿಲ್ಲ, ಹಿಂದಿನ ಬಿಜೆಪಿ ಸರ್ಕಾರ ಮಾಡಿಟ್ಟ ಆರ್ಥಿಕ ಹಳವಂಡಗಳನ್ನು ಎತ್ತಾಡುವುದೂ ಅಷ್ಟು ಸರಿಯಲ್ಲ.

ರಾಜ್ಯದ ಆರ್ಥಿಕ ಸ್ಥಿತಿಗತಿ ಬಲ್ಲ ಸಿದ್ದರಾಮಯ್ಯನವರು, ತಮ್ಮ ಅನುಭವ ಮತ್ತು ಬುದ್ಧಿವಂತಿಕೆಯನ್ನು ನಿಕಷಕ್ಕೊಡ್ಡಿ ಹೊಸ ಸರ್ಕಾರದ ಸಮಸ್ಯೆಗಳನ್ನು ಸವಾಲಿನಂತೆ ಸ್ವೀಕರಿಸಿದ್ದಾರೆ. ಇಲ್ಲಿಯವರೆಗೆ ಸಮರ್ಥವಾಗಿಯೇ ಸಂಭಾಳಿಸಿದ್ದಾರೆ.

Advertisements

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟ ಸಚಿವರ ಕುರಿತು ಇದೇ ಮಾತುಗಳನ್ನು ಹೇಳಲಾಗುವುದಿಲ್ಲ. ಕೆಲವು ಸಚಿವರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಉತ್ತಮ ಕೆಲಸಗಳ ಮೂಲಕ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಿದರೆ, ಮತ್ತೆ ಕೆಲವರು ತಮ್ಮ ಎಂದಿನ ಕಾಂಗ್ರೆಸ್ ಪಕ್ಷದ ಜೋಭದ್ರಗೇಡಿತನವನ್ನೇ ಮುಂದುವರೆಸಿದ್ದಾರೆ.

ಈ ನಡುವೆ ಅಧಿಕಾರಿಗಳ ವರ್ಗಾವಣೆ ದಂಧೆಯ ರೂಪ ಪಡೆದಿದೆ ಎಂದು ವಿರೋಧ ಪಕ್ಷಗಳು ಹುಯಿಲು ಎಬ್ಬಿಸಿದರೂ, ಹೊಸ ಸರ್ಕಾರ ರಚನೆಯಾದಾಗ ಆಯಕಟ್ಟಿನ ಜಾಗಗಳಿಗೆ ಬೇಕಾದ ಅಧಿಕಾರಿಗಳನ್ನು ನಿಯೋಜಿಸುವುದನ್ನು ಎಲ್ಲ ಸರ್ಕಾರಗಳೂ ವಿಧಿವಿಧಾನದಂತೆ ಮಾಡಿಕೊಂಡೇ ಬಂದಿವೆ. ಇದು ಗೊತ್ತಿದ್ದೂ ವಿರೋಧ ಪಕ್ಷಗಳು ದೊಡ್ಡ ಗಂಟಲಲ್ಲಿ ಕೂಗಾಡುವ ಬದಲು, ದಂಧೆಯನ್ನು ದಾಖಲೆ ಸಮೇತ ಸಾಬೀತುಪಡಿಸಿದರೆ, ಜನತೆಯ ಮುಂದಿಟ್ಟರೆ, ಸರ್ಕಾರದ ಹುಳುಕು ಬಯಲಾಗುವುದಿಲ್ಲವೇ?

ದುರದೃಷ್ಟಕರ ಸಂಗತಿ ಎಂದರೆ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ- ಎರಡೂ ಕೇವಲ ಹೇಳಿಕೆ-ಪ್ರತಿಹೇಳಿಕೆಗಳ ಪ್ರಚಾರಕ್ಕಷ್ಟೇ ಸೀಮಿತವಾಗಿವೆ. ನಿಜಸಂಗತಿ ಬಯಲಿಗೆ ಬರುವುದು ಇಬ್ಬರಿಗೂ ಬೇಡವಾಗಿದೆ.

ಇಂಥದ್ದೇ ಇನ್ನೊಂದು ಸಂಗತಿ ಎಂದರೆ, ಬಿಬಿಎಂಪಿ ಗುತ್ತಿಗೆದಾರರ ಬಿಲ್ ಬಾಕಿ ಬಿಡುಗಡೆ. ಇದು ಕೊಂಚ ಕೈ ಮೀರಿ ಹೋಗುತ್ತಿದೆ. ಆಡಳಿತ ಪಕ್ಷದ ಉಡಾಫೆಯೋ, ವಿರೋಧ ಪಕ್ಷಗಳ ಚಿತಾವಣೆಯೋ, ಅಂತೂ ಗುತ್ತಿಗೆದಾರರು ಹೈರಾಣಾಗಿದ್ದಾರೆ. ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣಕ್ಕೆ ಅನುಮತಿ ಕೋರಿದ್ದಾರೆ. ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರಕ್ಕೆ ಧಮ್ಕಿ ಹಾಕಿದ್ದಾರೆ. ಮುಂದುವರೆದು ಹೊಸ ಸರ್ಕಾರ ಶೇಕಡ 15 ಕಮಿಷನ್ ಕೇಳುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 2019ರಿಂದ 2023ರವರೆಗಿನ, ಸುಮಾರು 2,700 ಕೋಟಿ ರೂಪಾಯಿಗಳ ಬಿಲ್ ಬಾಕಿಯನ್ನು ಹೊಸ ಸರ್ಕಾರ ತಡೆಹಿಡಿದಿರುವುದು ನಿಜ. ಇದರಲ್ಲಿ ಗ್ಯಾರಂಟಿ ಯೋಜನೆ, ಬಿಜೆಪಿ ಸರ್ಕಾರದ 40% ಕಮಿಷನ್, ಅಂಧಾದುಂದಿ ಕಾಮಗಾರಿ, ರಾಜಕಾರಣ, ಪ್ರತಿಷ್ಠೆ- ಎಲ್ಲವೂ ತಳುಕು ಹಾಕಿಕೊಂಡಿದೆ.  

ಇದರ ವಾಸನೆ ಹಿಡಿದ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್, ‘ನಗರದಲ್ಲಿ ಕೈಗೊಂಡ ಕಾಮಗಾರಿಗಳ ಬಿಲ್‌ಗಳ ಸತ್ಯಾಸತ್ಯತೆ ಪರಿಶೀಲಿಸಲು ಕಾಂಗ್ರೆಸ್ ಸರ್ಕಾರ ಎಸ್‌ಐಟಿ ರಚಿಸಿದೆ. ನಾವು ತನಿಖೆಗೆ ಆದೇಶಿಸಿದ್ದೇವೆ. ಗುತ್ತಿಗೆದಾರರು ಮಾಡಿದ ಕೆಲಸವನ್ನು ಸಾಬೀತುಪಡಿಸಲಿ. ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಸರ್ಕಾರ ನ್ಯಾಯ ಕೊಡಿಸಲಿದೆ’ ಎಂದಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಡವರ ಜೀವಕ್ಕೆ ಕಂಟಕ ತರುತ್ತಿರುವ ಜೀವಜಲ; ಆಡಳಿತಶಾಹಿಯೇ ಹೊಣೆ

ಬೆಂಗಳೂರು ಅಭಿವೃದ್ಧಿ ಸಚಿವರು ಹೇಳಿರುವುದರಲ್ಲಿ ಏನೂ ತಪ್ಪಿಲ್ಲ ಎನಿಸಿದರೂ, ಅದು ಅಷ್ಟು ಸಲೀಸಲ್ಲ. ಗುತ್ತಿಗೆದಾರರು, ಅಧಿಕಾರಿಗಳು ಮತ್ತು ರಾಜಕಾರಣಿಗಳೆಂಬ ಅಕ್ರಮಕೂಟದ ಕರ್ಮಕಾಂಡಗಳು ಜನತೆಗೆ ಗೊತ್ತಿಲ್ಲದ ವಿಷಯವೇನಲ್ಲ.

ಇದೇ ಕಾಂಗ್ರೆಸ್ ಪಕ್ಷ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಬಹಿರಂಗಗೊಳಿಸಿದ 40% ಕಮಿಷನ್ ವಿಷಯವನ್ನಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಿತ್ತು. ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಇಟ್ಟುಕೊಂಡು ಪ್ರಚಾರ ಪಡೆದಿತ್ತು. ಪೇ ಸಿಎಂ ಪೋಸ್ಟರ್ ಅಂಟಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಮುಂದುವರೆದು ಚುನಾವಣೆಯಲ್ಲಿ ಪ್ರಯೋಜನವನ್ನೂ ಪಡೆದಿತ್ತು. ಪಕ್ಷ ಅಧಿಕಾರಕ್ಕೆ ಬಂದರೆ, ಬಿಲ್ ಬಾಕಿಯನ್ನು ಬಗೆಹರಿಸುವುದಾಗಿ ಆಶ್ವಾಸನೆಯನ್ನೂ ನೀಡಿತ್ತು.

ಹೊಸ ಸರ್ಕಾರ ರಚನೆಯಾದಾಗ, ಸಹಜವಾಗಿಯೇ ಕೆಂಪಣ್ಣನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಂಡರು, ಅವರು ಅಧಿಕಾರಿಗಳಿಗೆ ಸೂಚಿಸಿದರು. ಆದರೆ, ಅದು ಕಾರ್ಯರೂಪಕ್ಕೆ ಬರದೆ ಸೂಚನೆಯಾಗಿಯೇ ಉಳಿಯಿತು. ಇತ್ತ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್, ಬಿಲ್ ಬಾಕಿ ವಿಷಯವನ್ನು ರಾಜಕೀಯಗೊಳಿಸಿ, ವಿರೋಧ ಪಕ್ಷಗಳೊಂದಿಗೆ ಕುಸ್ತಿಗೆ ಬಿದ್ದಿದ್ದಾರೆ. ಇದು ರಾಜಕೀಯವಾಗಿಯೂ ಸರಿಯಾದ ನಡೆ ಅಲ್ಲ.

ಗುತ್ತಿಗೆದಾರರು ಸತ್ಯಸಂದರಲ್ಲ. ಅವರು ಮಾಡುವ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದಲ್ಲ. ಆ ಕಾಮಗಾರಿಗಳನ್ನು ಪರೀಕ್ಷಿಸುವ ಅಧಿಕಾರಿಗಳು ದಕ್ಷರಲ್ಲ, ಸೇವಾಸಕ್ತರಲ್ಲ. ಇವರಿಬ್ಬರಿಗೂ ಕೆಲಸ ಕೊಡುವ ರಾಜಕಾರಣಿಗಳು ಪ್ರಾಮಾಣಿಕರಾಗಿ ಉಳಿದಿಲ್ಲ. ಇದೆಲ್ಲವೂ ಹಣಕ್ಕಾಗಿ ಆಡುತ್ತಿರುವ ಆಟ ಎನ್ನುವುದು ಜನತೆಗೆ ಗೊತ್ತಿಲ್ಲದ ವಿಷಯವಲ್ಲ. ಬೇಗ ಬಗೆಹರಿಸಿಕೊಂಡು, ಗಂಭೀರ ವಿಷಯಗಳತ್ತ ಗಮನ ಹರಿಸುವುದು ಸದ್ಯಕ್ಕೆ ಸರ್ಕಾರದ ಸರಿಯಾದ ನಡೆಯಾಗಬಹುದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. “ಗುತ್ತಿಗೆದಾರರು ಸತ್ಯಸಂದರಲ್ಲ. ಅವರು ಮಾಡುವ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದಲ್ಲ. ಆ ಕಾಮಗಾರಿಗಳನ್ನು ಪರೀಕ್ಷಿಸುವ ಅಧಿಕಾರಿಗಳು ದಕ್ಷರಲ್ಲ, ಸೇವಾಸಕ್ತರಲ್ಲ. ಇವರಿಬ್ಬರಿಗೂ ಕೆಲಸ ಕೊಡುವ ರಾಜಕಾರಣಿಗಳು ಪ್ರಾಮಾಣಿಕರಾಗಿ ಉಳಿದಿಲ್ಲ. ಇದೆಲ್ಲವೂ ಹಣಕ್ಕಾಗಿ ಆಡುತ್ತಿರುವ ಆಟ ಎನ್ನುವುದು ಜನತೆಗೆ ಗೊತ್ತಿಲ್ಲದ ವಿಷಯವಲ್ಲ. ಬೇಗ ಬಗೆಹರಿಸಿಕೊಂಡು, ಗಂಭೀರ ವಿಷಯಗಳತ್ತ ಗಮನ ಹರಿಸುವುದು ಸದ್ಯಕ್ಕೆ ಸರ್ಕಾರದ ಸರಿಯಾದ ನಡೆಯಾಗಬಹುದು”

    ಇದೇ ಅಂತಿಮ ಸತ್ಯವಾದರೆ, ಹಿಂದುನವರಿಗೆ ಇವರಿಗೆ ವ್ಯತ್ಯಾಸ ಇಲ್ಲವೆಂದಾಯ್ತು..‌ ಪ್ರಮಾಣ ಹೆಚ್ಚು ಕಮ್ಮಿ ಇರಬಹುದು , ಆದರೆ ಕಮಿಷನ್ ಅಂತೂ ಸಾರ್ವತ್ರಿಕ ಸತ್ಯ ಅಂತಾಯ್ತು..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X