ಐ.ಟಿ. ಸೇರಿದಂತೆ ಪತ್ರಿಕೋದ್ಯೋಗ ಮತ್ತು ಸಂವಹನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ಹೆಣ್ಣುಮಕ್ಕಳು 2023ರಲ್ಲಿ ವಾರಕ್ಕೆ 56.5 ತಾಸುಗಳಷ್ಟು ದೀರ್ಘ ಕಾಲ ಕೆಲಸ ಮಾಡಿದ್ದಾರೆಂದು ಅಧ್ಯಯನಗಳು ತಿಳಿಸುತ್ತವೆ. ವಿಶ್ವದಲ್ಲೇ ಅತಿ ದೀರ್ಘ ಅವಧಿಯಿದು. ಅತಿ ದೀರ್ಘ ಮಾತ್ರವೇ ಅಲ್ಲ, ಪುರುಷಾಧಿಪತ್ಯವೇ ಅಧಿಕವಾಗಿರುವ ಕ್ಷೇತ್ರಗಳಿವು
ಗಂಡಾಳಿಕೆಯಿಂದ ಹೆಣ್ಣಿನ ನಿರಂತರ ಶೋಷಣೆ ಭಾರತದ ಪುರಾತನ ಸಾರ್ವತ್ರಿಕ ಲಜ್ಜೆಗೇಡಿ ಸತ್ಯಗಳಲ್ಲೊಂದು. ಆನಾ ಸೆಬಾಸ್ಟಿಯನ್ ಪೆರಯಿಲ್ ಎಂಬ 26 ವರ್ಷ ವಯಸ್ಸಿನ ಹೆಣ್ಣುಮಗಳು ಪುಣೆಯ Earnst & Young ಎಂಬ ಕಂಪನಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್. ಕೆಲಸದ ವಿಪರೀತ ಹೊರೆಯಿಂದ ಉಂಟಾದ ಒತ್ತಡದಿಂದ ಇತ್ತೀಚೆಗೆ ಸಾವಿಗೀಡಾದಳು. ಆಕೆಯ ತಾಯಿ ಅನಿತಾ ಅಗಸ್ಟೈನ್ ಅವರು ಮಗಳ ದಾರುಣ ಸಾವನ್ನು ಕುರಿತು Earnst & Young ಕಂಪನಿಯ ಛೇರ್ಮನ್‌ಗೆ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್’ ಆಯಿತು.
ಐ.ಟಿ. ಸೇರಿದಂತೆ ಪತ್ರಿಕೋದ್ಯೋಗ ಮತ್ತು ಸಂವಹನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ಹೆಣ್ಣುಮಕ್ಕಳು 2023ರಲ್ಲಿ ವಾರಕ್ಕೆ 56.5 ತಾಸುಗಳಷ್ಟು ದೀರ್ಘ ಕಾಲ ಕೆಲಸ ಮಾಡಿದ್ದಾರೆಂದು ಅಧ್ಯಯನಗಳು ತಿಳಿಸುತ್ತವೆ. ವಿಶ್ವದಲ್ಲೇ ಅತಿ ದೀರ್ಘ ಅವಧಿಯಿದು. ಅತಿ ದೀರ್ಘ ಮಾತ್ರವೇ ಅಲ್ಲ, ಪುರುಷಾಧಿಪತ್ಯವೇ ಅಧಿಕವಾಗಿರುವ ಕ್ಷೇತ್ರಗಳಿವು. ಬೇರೆ ಯಾವುದೇ ಉದ್ಯೋಗಗಳಿಗಿಂತ ಅತ್ಯಧಿಕ ದುಡಿಮೆಯಿದು. ಐದು ದಿನಗಳ ವಾರವನ್ನು ಗಣನೆಗೆ ತೆಗೆದುಕೊಂಡರೆ ದಿನಕ್ಕೆ 11 ತಾಸುಗಳ ದುಡಿತ. ವಿಜ್ಞಾನ ಮತ್ತು ತಾಂತ್ರಿಕ ಚಟುವಟಿಕೆಗಳ ಉದ್ಯೋಗಗಳಲ್ಲಿ ಈ ಅವಧಿ ವಾರಕ್ಕೆ 53.2 ತಾಸುಗಳು.
‘ದಿ ಹಿಂದೂ’ ಪತ್ರಿಕೆ ಅಂಕಿಅಂಶಗಳ ಮೂಲಕ ಈ ಕಟುಸತ್ಯದ ಮೇಲೆ ಬೆಳಕು ಚೆಲ್ಲಿದೆ. ಹೊರಗೆ ದುಡಿಯುವ ಈ ಹೆಣ್ಣುಮಕ್ಕಳಿಗೆ ಅವರ ಮನೆಗೆಲಸದಲ್ಲಿ ಯಾವುದೇ ರಿಯಾಯಿತಿ ಸಿಗುತ್ತಿಲ್ಲ. ಹೊರಗೆ ದುಡಿಯುವ ಮಹಿಳೆಯನ್ನು ಸ್ವೀಕರಿಸಿರುವ ಭಾರತೀಯ ಕೌಟುಂಬಿಕ ಪದ್ಧತಿಯು ಆಕೆಯ ಮನೆಗೆಲಸದ ಭಾರವನ್ನು ಹಂಚಿಕೊಳ್ಳುತ್ತಿಲ್ಲ. ಗೃಹಿಣಿಯಾಗಿ ಆಕೆ ದೈನಂದಿನ ಸರಾಸರಿ 7.5 ತಾಸುಗಳಷ್ಟು ಚಾಕರಿ ಮಾಡುತ್ತಾಳೆ. ಆದರೆ ಕೂಲಿಯೇ ಇಲ್ಲದ ಕೆಲಸವದು. ಹೊರಗೆ ದುಡಿಯುವ ಮಹಿಳೆಯೂ ದಿನಕ್ಕೆ 5.8 ತಾಸುಗಳಷ್ಟು ಮನೆಗೆಲಸದ ಹೊರೆ ಹೊತ್ತಿದ್ದಾಳೆ. ದುಡಿಯುವ ಮಹಿಳೆಯರಿಗೆ ದಿನ ನಿತ್ಯ ವಿಶ್ರಾಂತಿಗೆ ದೊರೆಯುವ ಅವಧಿ ಕೇವಲ 7-10 ತಾಸುಗಳು ಮಾತ್ರ. ವಾಸ್ತವವಾಗಿ ದುಡಿಯುವ ಮಹಿಳೆ ಎಂಬ ಪದಬಳಕೆಯೇ ಅರ್ಥವಿಲ್ಲದ್ದು. ಯಾಕೆಂದರೆ ಆಕೆ ಎಲ್ಲಿದ್ದರೂ ದುಡಿಮೆ ತಪ್ಪಿದ್ದಲ್ಲ. ದುಡಿಮೆಯ ಮತ್ತೊಂದು ಪದವೇ ಹೆಣ್ಣು. ಉದ್ಯೋಗಸ್ಥ ಮಹಿಳೆಯರಿಗೆ ಹೋಲಿಸಿದರೆ ನಿರುದ್ಯೋಗಿ ಪುರುಷರು ಮನೆಗೆಲಸದಲ್ಲಿ ತೊಡಗುವ ಅವಧಿ ಮೂರೂವರೆ ತಾಸುಗಳು ಅಷ್ಟೇ. ವಿವಾಹಿತ ಮಹಿಳೆಯರು ಉದ್ಯೋಗಸ್ಥರಾಗಿರಲಿ, ಗೃಹಿಣಿಯೇ ಇದ್ದಿರಲಿ, ದಿನಕ್ಕೆ ಸರಾಸರಿ ಎಂಟು ತಾಸುಗಳ ಸಂಬಳರಹಿತ ಚಾಕರಿ ಮಾಡಲೇಬೇಕಿದೆ. ಅವಿವಾಹಿತ ಮಹಿಳೆಯರ ಕೆಲಸಕ್ಕೆ ಹೋಲಿಸಿದರೆ ದುಪ್ಪಟ್ಟು. ಗ್ರಾಮೀಣ ಮತ್ತು ನಗರಪ್ರದೇಶದ ಮಹಿಳೆಯರ ಕೆಲಸದ ಹೊರೆಗಳಲ್ಲಿ ಇನ್ನೂ ಹೆಚ್ಚು ತರತಮ ಉಂಟು.
ಆದಿಕಾಲದ ಬೇಟೆಗಾರ ಪುರುಷ ಈಟಿ ಮತ್ತು ಬೀಸು ಕೋಲಿನ್ನಷ್ಟೇ ಹಿಡಿದು ಹಗುರಕ್ಕೆ ನಡೆಯುತ್ತಿದ್ದರೆ, ಆತನ ಹಿಂದೆ ಹೆಜ್ಜೆ ಹಾಕುತ್ತಿದ್ದ ಆಕೆಯ ಮೇಲೆ ಅವರಿಬ್ಬರ ಕೂಸು, ಬಿಡಾರ ಹೂಡಿದರೆ ಛಾವಣಿಯಾಗಬಲ್ಲ ಪರಿಕರ, ಬುತ್ತಿ ಗಂಟುಗಳ ಜೊತೆಗೆ ಅಗೆಯುವ ಬಡಿಗೆಯ ಒಜ್ಜೆ. ಕೂಳು ಬೇಯಿಸಲು ಕಟ್ಟಿಗೆಯನ್ನು ಆಯುವುದು, ನೀರು ಹೊರುವುದು ಅಡಿಗೆ ಮಾಡುವುದು ಆಕೆಯದೇ ಕೆಲಸ. ಹೆಣ್ಣು ಗಂಡುಗಳ ನಡುವೆ ಸಾರ್ವತ್ರಿಕ ಶ್ರಮ ವಿಭಜನೆ ಎಂದರೆ ಆಕೆಯ ಪಾಲಿಗೆ ಮೈ ಮುರಿಯುವ ಗಾಣದೆತ್ತಿನ ಎಡೆಬಿಡದ ದುಡಿತ. ಕ್ರೀಡೆ, ಕನಸು, ಧರ್ಮ, ಕಲಾತ್ಮಕ ಅಭಿವ್ಯಕ್ತಿ, ಆಚರಣೆಗಳು ಆತನದೇ ವಿಶೇಷಾಧಿಕಾರ. ಪಶುಗಳನ್ನು ಪಳಗಿಸಿದ ನಂತರ ಪುರುಷ ಅವುಗಳನ್ನು ನೊಗಕ್ಕೆ ಹಚ್ಚಿ ದುಡಿಸಿದ. ಪಳಗಿಸಿದ ಪಶು ಸತ್ತಾಗ ಪುನಃ ನೊಗಕ್ಕೆ ನೇಗಿಲಿಗೆ ಹೆಗಲು ಕೊಟ್ಟದ್ದು ಆಕೆಯೇ. ಹಿಂದೆ ನಿಂತು ಆಕೆಯನ್ನು ಚಾವಟಿ ಬೀಸಿ ನಡೆಸಿದ ಅಧಿಕಾರ ಆತನದೇ. ಇಂದಿಗೂ ಬಹಳಷ್ಟು ರೈತಾಪಿ ಕುಟುಂಬಗಳಲ್ಲಿ ಎತ್ತುಗಳನ್ನು ನಡೆಸಿಕೊಂಡಷ್ಟು ಉತ್ತಮವಾಗಿ ಹೆಣ್ಣನ್ನು ನಡೆಸಿಕೊಳ್ಳುವುದಿಲ್ಲ. ಆಕೆ ಕಂತೆ ಒಗೆದರೆ ಮತ್ತೊಬ್ಬ ತೊತ್ತು ಬೇಡಿಕೊಂಡು ಬಂದಾಳು. ಆದರೆ ಎತ್ತುಗಳು ಸತ್ತರೆ ಮತ್ತೆ ತರಲು ಹಣ ಸುರಿಯಬೇಕಲ್ಲ?
ಅನಾದಿ ಕಾಲದಿಂದ ಮಹಿಳೆಯ ಶ್ರಮ ಶಕ್ತಿಯ ಕುರಿತ ಈ ವ್ಯಾಖ್ಯಾನ ಖ್ಯಾತ ಸ್ತ್ರೀ ಚಿಂತಕಿ ಜರ್ಮೇನ್ ಗ್ರೀಕ್ ಅವರದು. The Whole Woman ಎಂಬ ಕೖತಿಯಲ್ಲಿ ಹೆಣ್ಣು ಗಂಡಿನ ನಡುವೆ ಶ್ರಮ ಶಕ್ತಿ ವಿಭಜನೆಯ ಈ ಅನ್ಯಾಯದ ತಾರತಮ್ಯವನ್ನು ಬಿಡಿಸಿಡುತ್ತಾರೆ. ಕೆಲಸ ಒಜ್ಜೆಯದು ಎಂದು ಆಕೆ ಎಂದೂ ಮಾಡದೆ ಬಿಟ್ಟವಳಲ್ಲ. ಬುದ್ಧಿಶಕ್ತಿ ಬೇಕಿರುವ ಮತ್ತು ನಿರ್ವಹಣಾ ಕೌಶಲ ಒಳಗೊಳ್ಳುವ ಕೆಲಸವನ್ನು ಆಕೆಗೆ ನಿರಾಕರಿಸಲಾಗಿತ್ತು. ಕತ್ತೆ ಕಾಯುವ ಕೆಲಸಾನೂ ಕೂಡ ಆಕೆಗೆ ಕೊಡ್ತಿರಲಿಲ್ಲ. ದಾರಿಯ ದೂರವನ್ನು ಕತ್ತೆಯ ಮೇಲೆ ಕುಳಿತು ಕ್ರಮಿಸುವ ರೈತಾಪಿ ಪುರುಷ ಮತ್ತು ಜೊತೆ ಜೊತೆಯಲ್ಲೇ ಓಡು ನಡಿಗೆಯಲ್ಲಿ ಧಾವಿಸುವ ಆತನ ಪತ್ನಿಯನ್ನು ಈಗಲೂ ಅಲ್ಲಲ್ಲಿ ಕಾಣುವುದು ಸಾಧ್ಯ. ಸಿರಿವಂತ ಪ್ರಪಂಚದಲ್ಲಿ ಈ ಸಂಬಂಧ ಕುಟಂಬದ ಕಾರು ಸವಾರಿಯ ಸುಖ ಗಂಡನದಾದರೆ, ನಡೆದು ದೂರ ಕ್ರಮಿಸುವ ಇಲ್ಲವೇ ಬಸ್ಸಿನಲ್ಲಿ ಓಡಾಡುವ ಹೆಂಡತಿಯ ದೖಶ್ಯವಾಗಿ ಬದಲಾದೀತು.
ಭಾರದ, ಮೈಮುರಿಯುವ, ನಿತ್ಯ ಮಾಡಿದ್ದನ್ನೇ ಮಾಡುವ ಅರ್ಥವಿಲ್ಲದ ದುಡಿತ ಆಕೆಯದು. ಜಗತ್ತಿನ ತುಂಬೆಲ್ಲ ಇದೇ ಕತೆ. ಕೂಳು ಬೇಯಿಸುವ ವಿರಳ ಉರುವಲನ್ನು ಹುಡುಕಿ ಹೆಕ್ಕಿ ಮುರಿದು ಹೊರೆಯಾಗಿ ಬಿಗಿದು ತಲೆಯ ಮೇಲೋ ಬೆನ್ನ ಮೇಲೆಯೋ ಹೊತ್ತು ತರುವವಳು ಆಕೆಯೇ. ದುರ್ಲಭ ನೀರನ್ನು ದೂರದಿಂದ ನೆತ್ತಿ ನುಗ್ಗಾಗುವಂತೆ ಹೊತ್ತು ತರುವುದು ಈಗಲೂ ಆಕೆಯದೇ ಕೆಲಸ. ಪುರುಷರು ಭಾರ ನೀರನ್ನು ಹೊರುವುದು ವಿರಳವಾಗಿ ಲಭಿಸುವ ನೋಟ. ಶ್ರಮವನ್ನು ಹಗುರ ಮಾಡುವ ಊರ್ಜೆಯ ಮೂಲ ದೊರೆತ ಮರುಕ್ಷಣವೇ ಅಂತಹ ಕೆಲಸವನ್ನು ಪುರುಷರು ಬಾಚಿಕೊಳ್ಳುವರು. ಸೊಂಟ ಬಗ್ಗಿಸಿಯೋ ಕುಕ್ಕರಗಾಲಲ್ಲಿ ಕುಳಿತೋ ಕಳೆಗುದ್ದಲಿ ಮತ್ತು ಪಿಕಾಸಿಗಳಲ್ಲೇ ಮಾಡಬೇಕಿದ್ದಷ್ಟು ದಿನ ಉಳುಮೆಯ ಕೆಲಸ ಆಕೆಯದು. ಟ್ರ್ಯಾಕ್ಟರುಗಳು, ಟಿಲ್ಲರುಗಳು ಬಂದೊಡನೆಯೇ ಆತನದಾಗಿಬಿಡುತ್ತದೆ!
ವಿಶ್ವಸಂಸ್ಥೆಯ ಯೋಜನೆಯೊಂದು ಮಹಿಳಾ ವ್ಯಾಪಾರಿಗಳಿಗೆ ಹಂಚಿದ ಬೈಸಿಕಲ್್ಗಳನ್ನು ಕಿತ್ತುಕೊಂಡು ಸವಾರಿ ಮಾಡಿದವರು ಅವರ ಗಂಡಂದಿರು. ಮಹಿಳೆಯರು ಎಂದಿಂತೆ ತಮ್ಮ ಉತ್ಪನ್ನಗಳ ಮೂಟೆ ಹೊರೆಯನ್ನು ನೆತ್ತಿಯ ಮೇಲೆ ಹೊತ್ತು ಮೈಲಿಗಟ್ಟಲೆ ನಡೆಯುವುದು ತಪ್ಪಲಿಲ್ಲ. ಇಂದೆಂದರೆ ಇಂದಿಗೂ ಈ ಕ್ಷಣಕ್ಕೂ ಪೇಟೆ ಪಟ್ಟಣಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಗಂಡಸಿಗಿಂತ ದುಪ್ಪಟ್ಟು ದುಡಿಮೆ ಹೆಂಗಸಿನದೇ. ಇನ್ನು ಹೆರವರ ಹೊಲಗಳಲ್ಲಿ ಕೂಲಿ ಮಾಡುವ ಹೆಣ್ಣಾಳುಗಳಿಗೆ ಅರ್ಧ ಕೂಲಿಯ ಅವಮಾನ ಪೇಟೆ ಪಟ್ಟಣಗಳಲ್ಲಿ ಆಕೆಯ ಬದುಕು ಅಡುಗೆ ಕೋಣೆಗಳಲ್ಲಿ ಬಳಸುವ ಮಸಿಬಟ್ಟೆ. ನಸುಕಿನಿಂದ ಇರುಳಿನ ತನಕ ಆಕೆ ಮಾಡುವ ಮನೆಗೆಲಸ, ಗಂಡನ ಸೇವೆ, ಮಕ್ಕಳ ಚಾಕರಿ ಉತ್ಪಾದಕ ಕೆಲಸ
ಎನ್ನಿಸಿಕೊಳ್ಳುವುದೇ ಇಲ್ಲ. ರಜೆ ಸಂಬಳ ಬಡ್ತಿ ಮುಷ್ಕರ ರಾಜೀನಾಮೆ ಆಕೆಯ ಚಾಕರಿಯಲ್ಲಿ ಅಪರಿಚಿತ ಶಬ್ದಗಳು. ಹೊರಗೆ ಹೋಗಿ ನೌಕರಿ ಮಾಡಿ ಸಂಜೆ ಮನೆಗೆ ಮರಳುವ, ಪಗಾರ ಎಣಿಸುವ ಪುರುಷನದೇ ಅಸಲು ದುಡಿಮೆ. ಆತನೇ ಮನೆಯ ಯಜಮಾನ.
ಇನ್ನು ಹೊರಗೂ ದುಡಿದು ಮನೆಯಲ್ಲೂ ಚಾಕರಿ ಮಾಡುವ ಹೆಣ್ಣುಮಕ್ಕಳದು ದುಪ್ಪಟ್ಟು ಗುಲಾಮಗಿರಿ. ಕಸ ಗುಡಿಸಲು ನೆಲ ಒರೆಸಲು ಬಟ್ಟೆ ಒಗೆಯಲು ಹೆಣ್ಣಾಳಿನ ನೆರವು ಆಕೆಗೆ ಇದ್ದೀತು. ಆದರೆ ಮನೆಗೆಲಸ ಮತ್ತು ಹೊರಗಿನ ಕೆಲಸದ ದುಪ್ಪಟ್ಟು ಭಾರ ಹೊರುವ ಆಕೆ ಕೂಡ ಹೆಂಗಸೇ. ಹೆಣ್ಣಿಗೆ ನೆರವಾಗುವ ಹೆಣ್ಣಾಳಿನದು ಮತ್ತಷ್ಟೂ ದುರ್ಗತಿ. ಮೈಮುರಿದು ದುಡಿದರೂ ತಿಂಗಳ ಕೊನೆಗೆ ಕೈಗೆ ಬೀಳುವುದು ಹೊಟ್ಟೆಗೆ ಸಾಲದು, ಬಟ್ಟೆಗೂ ಬಾರದು.
ಸಮಾನತೆಯ ಬರೆಹಗಳಿಗೆ ಹೆಸರಾಗಿರುವ ರಂಗನಾಯಕಮ್ಮ ಅವರ ಪ್ರಕಾರ ಹಣ್ಣಿಗಾಗಿ ಮರದ ಮೇಲೆ ಹುಡುಕಬೇಕು, ಮೀನಿಗಾಗಿ ನೀರಲ್ಲಿ! ಸಮಾನತೆಗಾಗಿ ಶ್ರಮ ಸಂಬಂಧಗಳಲ್ಲಿ. ಇದು ಪ್ರಕೖತಿ ಸತ್ಯ, ಖಚಿತವಾದ ಸಾಮಾಜಿಕ ಸತ್ಯ. ಗಂಡ ಹೆಂಡಿರ ನಡುವೆ ಕೂಡ ಶ್ರಮ ಸಂಬಂಧಗಳು ಉಂಟು. ಗಂಡ ಪೋಷಣ ಉತ್ಪತ್ತಿಗಳನ್ನು ದುಡಿದು ತರುವ ಮತ್ತು ಹೆಂಡತಿ ಮನೆಗೆಲಸ ಮಾಡುವ ಈ ಸಂಬಂಧಗಳಲ್ಲಿ ಗಂಡನ ಶ್ರಮವನ್ನು ಹೆಂಡತಿಯೂ, ಹೆಂಡತಿಯ ಶ್ರಮವನ್ನು ಗಂಡನೂ ಬಳಸಿಕೊಳ್ಳುವನು. ಆದರೆ ಈ ಸಂಬಂಧಗಳು ಶ್ರಮದ ದರೋಡೆಯ ಸಂಬಂಧಗಳು ಆಗಕೂಡದು. ಶ್ರಮ ದರೋಡೆಯ ಸಂಬಂಧಗಳಲ್ಲಿ ಶ್ರಮಿಕರಿಗೆ ಉದ್ಯೋಗ ನೀಡುವ ವ್ಯಕ್ತಿ ಯಜಮಾನನಾಗಿಯೂ, ಶ್ರಮಿಕರು ಜೀತ ಪದ್ಧತಿಯ ಪ್ರಕಾರ ಕೆಲಸ ಮಾಡುವವರೂ ಆಗಿರುತ್ತಾರೆ. ಶ್ರಮ ದರೋಡೆ ಸಂಬಂಧದಲ್ಲಿ ಯಜಮಾನ ಸದಾ ಶ್ರಮಿಕರ ಶ್ರಮವನ್ನು ಹೀರುತ್ತಾನೆ. ಶ್ರಮಿಕರು ಯಜಮಾನನಿಂದ ಯಾವುದೇ ಶ್ರಮವನ್ನು ಪಡೆಯುವವರಲ್ಲ. ಆದರೆ ಗಂಡ ಹೆಂಡಿರ ಶ್ರಮ ಸಂಬಂಧಗಳು ಈ ಮಾದರಿಯವಲ್ಲ. ಇಬ್ಬರೂ ಒಬ್ಬರ ಶ್ರಮವನ್ನು ಮತ್ತೊಬ್ಬರು ಅವಲಂಬಿಸಿರುತ್ತಾರೆ. ಅಸಮಾನ ಶ್ರಮ ವಿಭಜನೆಯಲ್ಲಿ ಕುಟುಂಬದ ಪೋಷಕ ಪುರುಷನೇ ಆಗಿರುವ ಕಾರಣ ಆತನೇ ಕುಟುಂಬದ ಯಜಮಾನ ಕೂಡ ಆಗಿ ಬಿಡುತ್ತಾನೆ. ಹೆಂಡತಿ ಎಂಬ ಸ್ತ್ರೀ ಈ ಯಜಮಾನನಿಗೆ ಅಡಿಯಾಳು. ಹೀಗೆ ಅಸಮಾನ ಶ್ರಮ ವಿಭಜನೆಯಲ್ಲಿ ಗಂಡ ಹೆಂಡತಿ ಸಂಬಂಧ ಕುಟುಂಬದ ಪರಿಧಿಯ ಯಜಮಾನ- ಸೇವಕ ಸಂಬಂಧ ಆಗಿ ಮಾರ್ಪಡುತ್ತದೆ.
ಆನಾ ಸೆಬಾಸ್ಟಿಯನ್ ಪರಯಿಲ್ ಪುಣೆಯೆಂಬ ದೊಡ್ಡ ಪಟ್ಟಣದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಹುದ್ದೆಯಲ್ಲಿ ದುಡಿ ದುಡಿದು ಸತ್ತು ಸುದ್ದಿಯಾದಳು. ವಿಶಾಲ ಭಾರತದ ಸಣ್ಣಪುಟ್ಟ ಪೇಟೆ ಪಟ್ಟಣಗಳಲ್ಲಿ, ಹಬ್ಬಿ ಹರಡಿರುವ ಹಳ್ಳಿಗಾಡಿನಲ್ಲಿ ಸಾಯುವ ಆನಾ ಸೆಬಾಸ್ಟಿಯನ್ ಪರಯಿಲ್ ಗಳ ಸಾವು ಸುದ್ದಿ ಆಗುವುದೇ ಇಲ್ಲ. ಅವರ ಸಂಖ್ಯೆ ಎಷ್ಟೆಂದು ಲೆಕ್ಕ ಇಟ್ಟವರಾರು? ಬದುಕಿದ್ದರೂ ಸತ್ತಂತೆ ಜೀವಿಸುತ್ತಿರುವ ಹೆಣ್ಣು ಜೀವಚ್ಛವಗಳಿಗೆ ಸಂಖ್ಯೆ ಎಷ್ಟೆಂದು ಹೇಳುವ ಜನಗಣತಿ ಅದ್ಯಾವುದಾದರೂ ಇದೆಯೇ?
