ಈ ಹಿಂದೆ ಬಿಜೆಪಿ ಸರ್ಕಾರ ಈ ಕಾಯಿದೆಗೆ ತಂದಿದ್ದ ಇಂತಹುದೇ ತಿದ್ದುಪಡಿ ತಂದು 10 ಸಾವಿರ ಕೋಟಿ ರುಪಾಯಿಗಳಷ್ಟು ಮೊತ್ತವನ್ನು ಇತರೆ ಉದ್ದೇಶಗಳಿಗೆ ವರ್ಗಾಯಿಸಿತ್ತು. ಕಾಂಗ್ರೆಸ್ ಪಕ್ಷ ಮತ್ತು ದಲಿತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದೀಗ ಕಾಂಗ್ರೆಸ್ ಸರ್ಕಾರ ಕೂಡ ಅದೇ ವಂಚನೆಯ ದಾರಿಯನ್ನು ತುಳಿದಿದೆ ಎಂದು ತೀವ್ರ ಅಸಮಾಧಾನ ಪ್ರಕಟಿಸಿವೆ
ತಾನು ರೂಪಿಸಿ ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ತುಂಬಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲು ನಿಧಿಗೆ ಕೈ ಹಾಕಿರುವ ರಾಜ್ಯ ಸರ್ಕಾರದ ನಡೆ ಯಾವ ಕಾರಣಕ್ಕೂ ಸರಿಯಲ್ಲ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ ನಿಗದಿಯಾಗಿದ್ದ ನಿಧಿಯಿಂದ 11,144 ಸಾವಿರ ಕೋಟಿ ರುಪಾಯಿಗಳ ಮೊತ್ತವನ್ನು ಐದು ಗ್ಯಾರಂಟಿ ಯೋಜನೆಗಳಿಗೆ ತಿರುಗಿಸಿಕೊಂಡಿದೆ ರಾಜ್ಯ ಕಾಂಗ್ರೆಸ್ ಸರ್ಕಾರ. ಕೇಂದ್ರ ಸರ್ಕಾರ ಅನುದಾನಗಳನ್ನು ಹಿಡಿದಿಟ್ಟುಕೊಂಡಿರುವ ಕಾರಣವನ್ನು ಮುಂದೆ ಮಾಡಲಾಗಿದೆ. ಈ ದೂರಿನಲ್ಲಿ ವಾಸ್ತವಾಂಶ ಇದ್ದೀತು. ಆದರೆ ಈ ಕೊರತೆಯ ಕೊಡಲಿ ಪೆಟ್ಟು ದನಿ ಸತ್ತ, ದಲಿತ ದಮನಿತ ಸಮುದಾಯಗಳ ಮೇಲೆಯೇ ಯಾಕೆ ಬೀಳಬೇಕು? ಈ ದಲಿತ ವಿರೋಧಿ ಕ್ರಮದ ವಿರುದ್ಧ ದಲಿತ ಸಂಘಟನೆಗಳು ತೋಳೇರಿಸಿರುವುದು ಸರ್ವಥಾ ಸಮರ್ಥನೀಯ.
ಪರಿಶಿಷ್ಟರಿಗೆಂದು ಮೀಸಲಿರಿಸಿದ್ದ 34.294 ಕೋಟಿ ರುಪಾಯಿಗಳಿಂದ ಈ ಮೊತ್ತವನ್ನು ಖೋತಾ ಮಾಡಿರುವ ರಾಜ್ಯ ಸರ್ಕಾರದ ಈ ನಡೆಯನ್ನು ರಾಜ್ಯ ಬಿಜೆಪಿಯು ದಲಿತ ವಿರೋಧಿ ಎಂದು ಬಣ್ಣಿಸಿದೆ. ಆದರೆ ಇಂತಹ ದಲಿತವಿರೋಧಿ ನಡೆಯಲ್ಲಿ ಬಿಜೆಪಿಯೇನೂ ಹಿಂದೆ ಬಿದ್ದಿರಲಿಲ್ಲ. ಉರ್ದುವನ್ನು ಆಡುಮಾತಿನಲ್ಲಿ ಹೆಚ್ಚು ಬಳಸುವ ಕಲ್ಯಾಣ ಕರ್ನಾಟಕ ಸೀಮೆಯಲ್ಲಿ ಗಾದೆಯೊಂದು ಬಳಕೆಯಲ್ಲಿದೆ. ‘ಹಮಾಮ್ ಮೇಂ ಸಬ್ ನಂಗಾ ಹೈ’ (ಸ್ನಾನದ ಕೋಣೆಯಲ್ಲಿ ಎಲ್ಲರೂ ನಗ್ನರೇ) ಎಂಬ ಈ ಗಾದೆ ಬಿಜೆಪಿ-ಕಾಂಗ್ರೆಸ್ಸು ಎರಡಕ್ಕೂ ಅನ್ವಯಿಸುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಸಕರು ಪಕ್ಷಭೇದ ಮರೆತು ಈ ತೀರ್ಮಾನವನ್ನು ವಿರೋಧಿಸದೆ ಇರುವುದು ದುರದೃಷ್ಟಕರ.
ನೆರೆಯ ತಮಿಳುನಾಡಿನ ಡಿ.ಎಂ.ಕೆ. ಸರ್ಕಾರ ಕೂಡ ದಲಿತರ ವಿಶೇಷ ಘಟಕ ಯೋಜನೆಗೆ ಮೀಸಲಾದ ಹಣವನ್ನು ಮಹಿಳೆಯರಿಗೆ ಆರ್ಥಿಕ ನೆರವಿನ ಕಾರ್ಯಕ್ರಮವೊಂದಕ್ಕೆ ಬಳಸಿಕೊಂಡು ತೀವ್ರ ಟೀಕೆಗೆ ಗುರಿಯಾಗಿದೆ. ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಗಳು ತಮಿಳುನಾಡು ಸರ್ಕಾರದಿಂದ ಸಮಜಾಯಿಷಿ ಕೋರಿವೆ.
11,144 ಕೋಟಿ ರುಪಾಯಿಯನ್ನು ಗ್ಯಾರಂಟಿ ಯೋಜನೆಗಳಡಿ ಪರಿಶಿಷ್ಟರಿಗೇ ವೆಚ್ಚ ಮಾಡಲಾಗುವುದು. 5,075 ಕೋಟಿ ರುಪಾಯಿಗಳನ್ನು ಗೃಹಲಕ್ಷ್ಮೀ ಯೋಜನೆಗೆ, 2,779 ಕೋಟಿ ರುಪಾಯಿಗಳನ್ನು ಅನ್ನಭಾಗ್ಯಕ್ಕೆ, 2,410 ಕೋಟಿ ರುಪಾಯಿಗಳನ್ನು ಗೃಹಜ್ಯೋತಿ, 812 ಕೋಟಿ ರುಪಾಯಿಗಳನ್ನು ಶಕ್ತಿ ಹಾಗೂ 67.50 ಕೋಟಿ ರುಪಾಯಿಗಳನ್ನು ಯುವನಿಧಿ ಯೋಜನೆಗೆ ವಿನಿಯೋಗಿಸಲಾಗುವುದು. ಐದು ಗ್ಯಾರಂಟಿಗಳ ಪರಿಶಿಷ್ಟ ಜಾತಿ ಪಂಗಡಗಳ ಫಲಾನುಭವಿಗಳ ಕುರಿತು ಅಂಕಿಅಂಶ ಸಂಗ್ರಹಿಸಲಾಗುವುದು ಮತ್ತು ಹೆಚ್ಚುವರಿ ಮೊತ್ತ ಉಳಿದರೆ ಅದನ್ನು ಪರಿಶಿಷ್ಟ ಕಲ್ಯಾಣ ನಿಧಿಗೇ ಮರಳಿಸಲಾಗುವುದು ಎಂಬುದು ರಾಜ್ಯ ಸರ್ಕಾರದ ಸಮಜಾಯಿಷಿ. ಅವರಿಗೆಂದು ಕಾಯಿದೆ ಪ್ರಕಾರ ಮೀಸಲಿಟ್ಟ ಹಣವನ್ನು ಅವರಿಗೆ ನೀಡಲಾಗುತ್ತಿದೆಯೇ ವಿನಾ, ದಲಿತರಿಗೆ ಹೊಸದಾಗಿ ಸಿಕ್ಕಿದ್ದಾದರೂ ಏನು? ದಲಿತ ಸಮುದಾಯಗಳನ್ನು ನಿತ್ಯವೂ ಸುಟ್ಟು ತಿನ್ನುವ ಹತ್ತಾರು ಸಮಸ್ಯೆಗಳು ಜೀವಂತವಾಗಿಯೇ ಇವೆಯಲ್ಲ?
ರಾಜ್ಯ ಸರ್ಕಾರದ ಈ ನಡೆಯ ಸುಳಿವನ್ನು ಮುಂದಾಗಿಯೇ ಅರಿತಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪ್ರತಿಭಟಿಸಿದ್ದವು. ಈ ಉದ್ದೇಶವನ್ನು ಕೈಬಿಡಬೇಕೆಂಬ ಅವುಗಳ ಆಗ್ರಹಕ್ಕೆ ಸಿದ್ದು ಸರ್ಕಾರ ಕಿವುಡಾಗಿರುವುದು ನಿಚ್ಚಳ.
ಕರ್ನಾಟಕ ಅನುಸೂಚಿತ ಜಾತಿ ಪಂಗಡಗಳ ಉಪಯೋಜನೆ ಕಾಯಿದೆಯ ಪ್ರಕಾರ ರಾಜ್ಯ ಸರ್ಕಾರ ತನ್ನ ವಾರ್ಷಿಕ ಬಜೆಟ್ಟಿನ ಶೇ.24.1ರಷ್ಟು ಹಣವನ್ನು ಪರಿಶಿಷ್ಟರ ಕಲ್ಯಾಣಕ್ಕೆಂದು ವೆಚ್ಚ ಮಾಡಬೇಕು. ಈ ಕಾಯಿದೆಯನ್ನು ರೂಪಿಸಿದ ಮೂಲ ಉದ್ದೇಶವೇ ದಲಿತರ ಅಭಿವೃದ್ಧಿಗೆಂದು ಮೀಸಲಿಟ್ಟ ಮೊತ್ತಕ್ಕೆ ‘ಕನ್ನ’ ಬೀಳುವುದನ್ನು ಅಥವಾ ದುರ್ವಿನಿಯೋಗವನ್ನು ತಪ್ಪಿಸಲು. ಇದೀಗ ಈ ಕಾಯಿದೆಗೆ ಸಿದ್ದರಾಮಯ್ಯ ಸರ್ಕಾರ ತಿದ್ದುಪಡಿ ತಂದು ಈ ಕಾಯಿದೆಯ ಮೂಲ ಉದ್ದೇಶವನ್ನೇ ವಿಫಲಗೊಳಿಸಿದೆ ಕಾಂಗ್ರೆಸ್ ಸರ್ಕಾರ.
ಶಿಕ್ಷಣ, ಆರೋಗ್ಯ, ಮಹಿಳೆ, ಕಾರ್ಮಿಕ ಹಾಗೂ ದೈಹಿಕ ವಿಶೇಷ ಚೇತನರಿಗೆಂದು ರೂಪಿಸುವ ಸಾಮಾನ್ಯ ಕ್ಷೇತ್ರದ ಯೋಜನೆಗಳಲ್ಲಿ ದಲಿತರ ಮೇಲೆ ವಿನಿಯೋಗ ಮಾಡುವ ಹಣವನ್ನು ಪರಿಶಿಷ್ಟರ ಉಪಯೋಜನೆಗಳ ಮೀಸಲು ಮೊತ್ತದಿಂದ ತೆಗೆದುಕೊಳ್ಳಲು ಈ ತಿದ್ದುಪಡಿ ಅವಕಾಶ ಕಲ್ಪಿಸಿದೆ.
ಈ ಹಿಂದೆ ಬಿಜೆಪಿ ಸರ್ಕಾರ ಈ ಕಾಯಿದೆಗೆ ತಂದಿದ್ದ ಇಂತಹುದೇ ತಿದ್ದುಪಡಿ ತಂದು 10 ಸಾವಿರ ಕೋಟಿ ರುಪಾಯಿಗಳಷ್ಟು ಮೊತ್ತವನ್ನು ಇತರೆ ಉದ್ದೇಶಗಳಿಗೆ ವರ್ಗಾಯಿಸಿತ್ತು. ರಸ್ತೆ, ಜಲಾಶಯಗಳು ಮುಂತಾದ ಭಾರೀ ಮೂಲಸೌಲಭ್ಯಗಳನ್ನು ಸಾಮಾನ್ಯ ವರ್ಗಗಳ ಜನ ಮಾತ್ರವೇ ಬಳಸುವುದಿಲ್ಲ. ಇವುಗಳ ಪ್ರಯೋಜನವನ್ನು ಪರಿಶಿಷ್ಟ ಫಲಾನುಭವಿಗಳೂ ಪಡೆಯುತ್ತಾರೆ ಎಂಬುದು ಬಿಜೆಪಿ ಸರ್ಕಾರದ ಸಮರ್ಥನೆಯಾಗಿತ್ತು. ಕಾಂಗ್ರೆಸ್ ಪಕ್ಷ ಮತ್ತು ದಲಿತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದೀಗ ಕಾಂಗ್ರೆಸ್ ಸರ್ಕಾರ ಕೂಡ ಅದೇ ವಂಚನೆಯ ದಾರಿಯನ್ನು ತುಳಿದಿದೆ ಎಂದು ತೀವ್ರ ಅಸಮಾಧಾನ ಪ್ರಕಟಿಸಿವೆ. ದಲಿತ ಸಮುದಾಯಗಳಲ್ಲಿ ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ದಲಿತ ವಿದ್ಯಾರ್ಥಿಗಳಿಗೆ ಸೂಕ್ತ ಹಾಸ್ಟೆಲ್ ಸೌಲಭ್ಯಗಳ ಕೊರತೆಯಿದೆ. ಮಹಿಳೆಯರ ಸ್ಥಿತಿಗತಿಗಳು ಶೋಚನೀಯ. ಈ ಹಿನ್ನೆಲೆಯಲ್ಲಿ ಮೀಸಲು ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ತಿರುಗಿಸಿಕೊಳ್ಳುವುದು ಯಾವ ನ್ಯಾಯ ಎಂಬ ದಲಿತರ ಪ್ರಶ್ನೆ ನ್ಯಾಯಬದ್ಧವಾಗಿದೆ. ತಲೆಮಾರುಗಳುದ್ದಕ್ಕೂ ನಡೆದು ಬಂದಿರುವ ಮೋಸದ ಮುಂದುವರಿಕೆಯಿದು.
