ವಿಶೇಷ ನ್ಯಾಯಾಧೀಶರ ನೇಮಕ ಮಾಡಿ ನಿತ್ಯ ವಿಚಾರಣೆ ನಡೆಯುವಂತೆ ಮಾಡಿದರೆ ಮಾತ್ರವೇ ಗೌರಿಯ ಹಂತಕರು ಕಾನೂನಿನ ಕುಣಿಕೆಗೆ ಸಿಗಬಲ್ಲರು. 'ನಿಧಾನ ನ್ಯಾಯದಾನ ಎಂಬುದು ನಿರಾಕರಿಸಿದ ನ್ಯಾಯದಾನ' (Justice delayed is Justice denied) ಎಂಬ ಇಂಗ್ಲಿಷ್ ನಾಣ್ನುಡಿಯೊಂದಿದೆ. ಗೌರಿ ಹತ್ಯೆಯ ಪ್ರಕರಣದಲ್ಲಿ ರಾಜ್ಯ ಸರ್ಕಾರ ತ್ವರಿತ ನ್ಯಾಯದಾನಕ್ಕೆ ತಕ್ಕ ಏರ್ಪಾಡು ಮಾಡಲೇಬೇಕು.
ಸ್ವಸ್ಥ ಸಮಾಜದ ಕನಸನ್ನು ನನಸಾಗಿಸಲು ಹೈರಾಣಾದರೂ ಬಿಡದೆ ಹಲ್ಲು ಕಚ್ಚಿ ದುಡಿದೇ ದುಡಿದ ಗೌರಿ ಲಂಕೇಶ್ ಹಂತಕರ ಗುಂಡೇಟುಗಳಿಗೆ ಜೀವ ತೆತ್ತು ಇಂದಿಗೆ ಆರು ವರ್ಷಗಳಾದವು.
ಆರೋಪ ಪಟ್ಟಿ ಸಲ್ಲಿಸಿ ಐದು ವರ್ಷಗಳೇ ಸರಿದಿದ್ದರೂ ವಿಚಾರಣೆ ಮುಗಿದಿಲ್ಲ. ಕಾನೂನಿನ ಕೈಗೆ ಸಿಕ್ಕಿರುವ ಹಂತಕರು ಈಗಲೂ ದಂಡನೆಯಿಂದ ದೂರ ಉಳಿದಿದ್ದಾರೆ. ಅತ್ಯಂತ ದಕ್ಷತೆ ಪ್ರಾಮಾಣಿಕತೆ ಪ್ರತಿಬದ್ಧತೆಯಿಂದ ತನಿಖೆ ನಡೆಸಿದ ವಿಶೇಷ ತಂಡ 9,000 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ವಿಳಂಬವಾಗಿ ಶುರುವಾದ ವಿಚಾರಣೆ ಈಗಲೂ ತೆವಳುತ್ತಿದೆ. ಮೂವರು ನ್ಯಾಯಾಧೀಶರು ಬದಲಾಗಿದ್ದಾರೆ. ತಿಂಗಳಿಗೆ ಮೂರರಿಂದ ಐದು ದಿನಗಳ ಕಾಲ ಮಾತ್ರ ವಿಚಾರಣೆಯ ಕಲಾಪ ಜರುಗುತ್ತಿದೆ. ಇಂದಿನ ತೆವಳು ಗತಿಯೇ ಮುಂದುವರೆದರೆ ವಿಚಾರಣೆ ಪೂರ್ಣಗೊಳ್ಳಲು ಇನ್ನೂ ಹಲವಾರು ವರ್ಷಗಳು ಹಿಡಿಯುವುದು ನಿಶ್ಚಿತ.
ವಿಶೇಷ ನ್ಯಾಯಾಧೀಶರ ನೇಮಕ ಮಾಡಿ ನಿತ್ಯ ವಿಚಾರಣೆ ನಡೆಯುವಂತೆ ಮಾಡಿದರೆ ಮಾತ್ರವೇ ಗೌರಿಯ ಹಂತಕರು ಕಾನೂನಿನ ಕುಣಿಕೆಗೆ ಸಿಗಬಲ್ಲರು. ‘ನಿಧಾನ ನ್ಯಾಯದಾನ ಎಂಬುದು ನಿರಾಕರಿಸಿದ ನ್ಯಾಯದಾನ’ (Justice delayed is Justice denied) ಎಂಬ ಇಂಗ್ಲಿಷ್ ನಾಣ್ನುಡಿಯೊಂದಿದೆ. ಗೌರಿ ಹತ್ಯೆಯ ಪ್ರಕರಣದಲ್ಲಿ ರಾಜ್ಯ ಸರ್ಕಾರ ತ್ವರಿತ ನ್ಯಾಯದಾನಕ್ಕೆ ತಕ್ಕ ಏರ್ಪಾಡು ಮಾಡಲೇಬೇಕು.
ಪತ್ರಿಕಾ ವರದಿಗಾರನ ನನ್ನ ಕಸುಬು ಸುಮಾರು ಎರಡು ದಶಕಕ್ಕೂ ಹೆಚ್ಚು ಕಾಲ ದಿಲ್ಲಿಯಲ್ಲೇ ಸವೆದು ಹೋದ ಕಾರಣ ಗೌರಿ ಲಂಕೇಶ್ ಅವರ ಸನಿಹ ಸಂಪರ್ಕ ಕೆಲ ಕಾಲ ಹತ್ತಿರದ್ದೂ ಮತ್ತು ಬಹುಕಾಲ ದೂರದ್ದೂ ಅತ್ಯಂತ ಆತ್ಮೀಯತೆಯದೂ ಆಗಿ ಉಳಿಯಿತು.
1996ರಲ್ಲಿ ‘ಕನ್ನಡಪ್ರಭ’ ನನ್ನನ್ನು ದಿಲ್ಲಿಯ ಬಾತ್ಮೀದಾರನನ್ನಾಗಿ ಕಳಿಸುವ ತನಕ ಹನ್ನೆರಡು ವರ್ಷಗಳ ಕಾಲ ಬೆಂಗಳೂರಲ್ಲಿ ಕೆಲಸ. ಇಂಗ್ಲಿಷ್ ಪತ್ರಕರ್ತರು ಅದರಲ್ಲಿಯೂ ಹೆಣ್ಣುಮಕ್ಕಳು ಕನ್ನಡ ಪತ್ರಕರ್ತರೊಂದಿಗೆ ದೂರ ಕಾಯ್ದುಕೊಳ್ಳುತ್ತಿದ್ದರು. ಕೃತಕ ಗೋಡೆಗಳು ಎದ್ದು ನಿಂತಿರುತ್ತಿದ್ದವು. ಈ ಮಾತಿಗೆ ಅಪವಾದದಂತೆ ನಡೆದುಕೊಳ್ಳುತ್ತಿದ್ದ ವಿರಳರಲ್ಲಿ ಗೌರಿ ಲಂಕೇಶ್ ಕೂಡ ಒಬ್ಬರಾಗಿದ್ದರು. ಹೌದು, ಗೌರಿ ಇಂಗ್ಲಿಷ್ ಪತ್ರಕರ್ತೆಯಾಗಿದ್ದರು. ದಿನನಿತ್ಯದ ವರದಿಗಾರಿಕೆಯಲ್ಲಿ ಆಗಾಗ ಮುಖಾಮುಖಿಯಾಗುತ್ತಿದ್ದರು. ನಿಗರ್ವಿಯೂ ಸ್ನೇಹಪರರೂ ಹಾಗೂ ಸರಳ ಸ್ವಭಾವದವರು. ಕನ್ನಡ ಇಂಗ್ಲಿಷಿನ ದೂರದಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಎಂಬತ್ತರ ದಶಕ. ಆ ವೇಳೆಗಾಗಲೆ ಅವರು ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್ ಸಂಸ್ಥೆಯಲ್ಲಿ ಓದಿ ಪದವಿ ಪಡೆದವರಾಗಿದ್ದರು. ಅವರ ಮೇಲೆ ತಂದೆ ಲಂಕೇಶರ ಸಾಮಾಜಿಕ ರಾಜಕೀಯ ಚಿಂತನೆಯ ದಟ್ಟ ಪ್ರಭಾವವಿತ್ತು. ದೆಹಲಿಯ ಜೆ.ಎನ್.ಯು.ವಿನ ಸಮಸಮಾಜದ ಆಶಯದ ವಾತಾವರಣ ಅದನ್ನು ಗಟ್ಟಿಗೊಳಿಸಿತ್ತು.
ಗೌರಿ ತಮ್ಮ ತಂದೆಯವರು ನಡೆಸುತ್ತಿದ್ದ ಲಂಕೇಶ್ ಪತ್ರಿಕೆಯ ಅಪಾರ ಯಶಸ್ಸಿನ ನೆರಳಿನಿಂದ ಪ್ರಜ್ಞಾಪೂರ್ವಕವಾಗಿ ದೂರ ಉಳಿಯಬಯಸಿದ್ದರು. ಇಂಗ್ಲಿಷ್ ಪತ್ರಿಕೋದ್ಯಮ ಅವರ ಆಯ್ಕೆಯಾಗಿತ್ತು. Mid Day, Sunday ಆಗ ರಭಸದ ತನಿಖಾ ಪತ್ರಿಕೋದ್ಯಮ ನಡೆಸಿದ ಪತ್ರಿಕೆಗಳು. ಆನಂತರ Times of India, ಇಂಗ್ಲಿಷ್ ದೈನಿಕ, ETV, News Timeಗೆ ವರದಿ ಮಾಡಿದರು ಗೌರಿ. ಇಂಡಿಯಾ ಟುಡೇ ಸಮೂಹದ Headlines Todayಯಲ್ಲೂ ಮಾಡಿದ ವರದಿಗಾರಿಕೆ ಅವರ ಕಸಬುದಾರಿಕೆಗೆ ಸಾಣೆ ಹಿಡಿದಿತ್ತು. ಹೊಳಪು ಹರಿತ ಎರಡೂ ದಕ್ಕಿಸಿಕೊಟ್ಟಿತ್ತು.
ದೆಹಲಿಯಲ್ಲಿ ಹಲವು ವರ್ಷ ಕೆಲಸ ಮಾಡಿದ ಅವರಿಗೆ ದೇಶದ ರಾಜಧಾನಿಯ ರಾಜಕಾರಣದ ಒಳಸುಳಿಗಳ ಮೇಲೆ ಹಿಡಿತ ಸಿಕ್ಕಿತ್ತು. ದೆಹಲಿಯಲ್ಲೂ ಗೌರಿ ನನ್ನ ಪಾಲಿಗೆ ಅವರು ಅದೇ ಬೆಂಗಳೂರಿನ ನಿಗರ್ವಿ ಸಹೋದ್ಯೋಗಿ. ದೆಹಲಿಯಲ್ಲಿ ಕನ್ನಡ ಮೂಲದ ಮತ್ತೊಬ್ಬ ಯಶಸ್ವೀ ಇಂಗ್ಲಿಷ್ ಪತ್ರಕರ್ತ ಗಿರೀಶ್ ನಿಕ್ಕಮ್, ಗೌರಿ, ಔಟ್ ಲುಕ್ ನಿಯತಕಾಲಿಕದ ವರದಿಗಾರ್ತಿ ಭಾವದೀಪ್ ಕಾಂಗ್, ದೈನಿಕ್ ಜಾಗರಣ್ ನ ಹಿರಿಯ ವರದಿಗಾರ ನಿರ್ಮಲ್ ಪಾಠಕ್, ಇಂಡಿಯಾ ಟುಡೇಯ ಜಾವೇದ್ ಅನ್ಸಾರಿ ಒಂದು ಗುಂಪಾಗಿ ಸುದ್ದಿ ಸಂಗ್ರಹಕ್ಕೆ ಅಲೆಯುತ್ತಿದ್ದೆವು. ಅನುಕೂಲಸ್ಥ ತಂದೆಯಿದ್ದಾರೆ ಎಂಬ ಭಾವದಿಂದ ಗೌರಿ ಯಾವೊತ್ತೂ ಕೆಲಸ ಕದಿಯಲಿಲ್ಲ. ಕಠಿಣ ಪರಿಶ್ರಮಕ್ಕೆ ಅಳುಕಲಿಲ್ಲ. ಅದಾಗಲೇ ಲಂಕೇಶರು ಅನಾರೋಗ್ಯಕ್ಕೆ ಒಳಗಾಗಿದ್ದರು. ತಂದೆ ಮಗಳು ಒಬ್ಬರನ್ನೊಬ್ಬರು ಬಹಳ ಹಚ್ಚಿಕೊಂಡಿದ್ದವರು. ತಂದೆಯ ಅನಾರೋಗ್ಯ ನೆನೆಸಿಕೊಂಡು ಗೌರಿ ಆಗಾಗ ಹನಿಗಣ್ಣಾಗುತ್ತಿದ್ದರು. ಬೆಂಗಳೂರಿಗೆ ತೆರಳಿ ಕೆಲ ದಿನ ಇದ್ದು ಬರುತ್ತಿದ್ದರು. ಯಾವ ಸುದ್ದಿಯನ್ನು ಕೇಳುವ ದಿನದ ಹೆದರಿಕೆಯಿತ್ತೋ ಆ ಕೆಟ್ಟ ಸುದ್ದಿ ಬಂದೇ ಬಿಟ್ಟಿತು. ಲಂಕೇಶರ ಆರೋಗ್ಯ ಬಿಗಡಾಯಿಸಿತ್ತು. ಒಮ್ಮೆ ಹೀಗೆ ಅಳುತ್ತಲೇ ಬೆಂಗಳೂರಿಗೆ ತೆರಳಿದ ಗೌರಿ ಮತ್ತೆ ದೆಹಲಿಗೆ ವಾಪಸು ಬರಲಿಲ್ಲ.
ತಂದೆ ತೊರೆದು ಹೋದ ಹೊಸ ರೂಹಿನ ಪತ್ರಿಕೋದ್ಯಮದ ‘ಬೃಹತ್ ಪಾದರಕ್ಷೆ’ಗಳಲ್ಲಿ ಗೌರಿ ತಮ್ಮ ಪುಟ್ಟ ಪಾದಗಳನ್ನು ಅಳುಕದೆ ಇರಿಸಿದ ದಿಟ್ಟ ಹೆಣ್ಣುಮಗಳು. ಇಂಗ್ಲಿಷಿನಲ್ಲೇ ಪತ್ರಿಕೋದ್ಯೋಗ ನಡೆಸಿದ್ದ ಗೌರಿಗೆ ಕನ್ನಡ ಒಲಿಯುವುದು ಸುಲಭವಿರಲಿಲ್ಲ. ಆದರೂ ಕಠಿಣ ಪರಿಶ್ರಮದಿಂದ ಪರಿಣಾಮಕಾರಿಯಾಗಿ ಬರೆಯುವಷ್ಟು ಕನ್ನಡ ಕಲಿತರು. ಅಲ್ಲಲ್ಲಿ ನ್ಯೂನತೆಗಳಿದ್ದಾವು. ಆದರೆ ಆಕೆಯ ಧಗಧಗಿಸುವ ಸಾಮಾಜಿಕ ಕಾಳಜಿಯ ಮುಂದೆ ಇಂತಹ ನ್ಯೂನತೆಗಳು ತೃಣಸಮಾನವೆಂದೇ ಹೇಳಬೇಕು. ಲಂಕೇಶರು ನಡೆಸಿದ್ದು ಕೇವಲ ಪತ್ರಿಕೋದ್ಯಮ ಮಾತ್ರ ಆಗಿರಲಿಲ್ಲ. ಸಾಮಾಜಿಕ ಎಚ್ಚರದ ಹೊಸ ಪೀಳಿಗೆಯನ್ನೇ ರೂಪಿಸಿದರು. ತಂದೆಯ ಪ್ರಖರ ಪ್ರತಿಭೆ, ಭಾಷೆಯೊಂದಿಗಿನ ಮಾಂತ್ರಿಕ ಸ್ಪರ್ಶ, ಅಪಾರ ಓದು, ಆಳದ ಸಾಮಾಜಿಕ ರಾಜಕೀಯ ಒಳನೋಟಗಳು ಮಗಳಿಗಿರಲಿಲ್ಲ ನಿಜ. ಆದರೆ ತಂದೆ ಹಾಕಿಕೊಂಡಿದ್ದ ಗೆರೆಯನ್ನು ದಾಟಿ ಮುಂದೆ ಹೋಗಿದ್ದಳು ಮಗಳು. ಪತ್ರಿಕೆಯನ್ನು ತುಳಿಸಿಕೊಂಡ ಜನರ ನೋವಿನ ದನಿಯಾಗಿಸಲು, ಕೋಮುವಾದಿಗಳ ವಿರುದ್ಧದ ಹರಿತ ಹತಾರು ಆಗಿಸಲು ಹಗಲಿರುಳು ಶ್ರಮಿಸಿದರು. ಅಪರೂಪದ ಹೋರಾಟಗಾರ್ತಿ ಪತ್ರಕರ್ತೆ ಆದರು. ಪತ್ರಿಕೋದ್ಯೋಗದ ವ್ಯಾಖ್ಯೆಗೆ ಹೊಸ ಆಯಾಮವನ್ನೇ ತಗುಲಿಸಿದರು.
ತಂದೆ ಆರಂಭಿಸಿದ ಪತ್ರಿಕೆ ತಮ್ಮನ ಪಾಲಾದಾಗಲೂ ಧೃತಿಗೆಡದೆ ಮತ್ತೊಂದನ್ನು ಶುರು ಮಾಡಿದರು. ಕಾಲಾನುಕ್ರಮದಲ್ಲಿ ಬರೆಯಲು ಮಾತ್ರವೇ ಅಲ್ಲ, ಕನ್ನಡದಲ್ಲಿ ಆಲೋಚಿಸಲೂ ಕಲಿತರು. ”ಕಂಡದ್ದು ಕಂಡ ಹಾಗೆ” ಶೀರ್ಷಿಕೆಯಡಿ ಅವರು ಬರೆದ ಸಂಪಾದಕೀಯ ಸರಳ ಸಂವಹನಕ್ಕೆ ಮಾದರಿಯಾಗಿ ರೂಪುಗೊಂಡಿತು. ಹೊಸ ಪತ್ರಿಕೆ ಪತ್ರಿಕೆಯಷ್ಟೇ ಆಗಿ ಉಳಿಯಲಿಲ್ಲ. ಅದೊಂದು ಚಳವಳಿಯಾಗಿ ಬೆಳೆಯಿತು. ಗೌರಿಯವರನ್ನೂ ಬೆಳೆಸಿತು. ಅವರ ಅಂತರಂಗವನ್ನು ಅರಳಿಸಿತು.
ತುಂಟತನ, ಜೀವಕಾರುಣ್ಯ, ಜೀವನಪ್ರೀತಿ, ಕಕ್ಕುಲಾತಿ ಅವರನ್ನು ಸುತ್ತಮುತ್ತಲ ಕರ್ನಾಟಕ ಸಮಾಜದೊಂದಿಗೆ ಮತ್ತಷ್ಟು ಗಟ್ಟಿಯಾಗಿ ಬೆಸೆಯಿತು. ಯುವಪೀಳಿಗೆಯೊಂದಿಗೆ ಸಂವಾದಕ್ಕೆ ಅವರಷ್ಟು ತೆರೆದುಕೊಂಡ ಅವರ ಓರಗೆಯ ಮತ್ತೊಬ್ಬ ಪತ್ರಕರ್ತರನ್ನು ನಾನು ಕಂಡಿಲ್ಲ. ಅಮ್ಮನ- ಅಕ್ಕನ ವಾತ್ಸಲ್ಯ ಅವರದು.
ಲಂಕೇಶರು ನಂಬಿದ್ದ ಲೋಹಿಯಾವಾದಿ-ಸಮಾಜವಾದ ಮತ್ತು ಗಾಂಧೀವಾದದ ಆಚೆಗೂ ಸರಿದರು ಗೌರಿ. ತಂದೆ ಹಾಕಿಕೊಂಡಿದ್ದ ಗೆರೆಯನ್ನು ದಾಟಿದರು ಎಡಪಂಥೀಯ ವಿಚಾರಧಾರೆಯನ್ನು ದೂರ ಇರಿಸಲಿಲ್ಲ. ದಲಿತರು ಮತ್ತು ಎಡಪಂಥೀಯರನ್ನು ತಾವು ನಡೆಸಿದ ಪತ್ರಿಕೆಯಲ್ಲಿ ತಂದೆಗಿಂತ ಹೆಚ್ಚು ಹತ್ತಿರವಿಟ್ಟುಕೊಂಡರು. ಜನಾಂದೋಲನಗಳ ಜೊತೆ ಸಕ್ರಿಯವಾಗಿ ಬೆರೆತು ಗುರುತಿಸಿಕೊಂಡರು. ತಮ್ಮನ್ನು ‘ಆ್ಯಕ್ಟಿವಿಸ್ಟ್ ಜರ್ನಲಿಸ್ಟ್’ ಎಂದು ಹೆಮ್ಮೆಯಿಂದ ಕರೆದುಕೊಂಡರು.
ಪ್ರಚಂಡ ಕೋಮುವಾದಿ ಫ್ಯಾಸಿಸ್ಟ್ ರಾಜಕೀಯ ಎದುರಾಳಿಯ ಎದುರು ದಲಿತರ ನೀಲಿ ಮತ್ತು ಎಡಪಂಥೀಯರ ಕೆಂಪು ರಂಗುಗಳು ಎಲ್ಲ ಮತಭೇದವನ್ನೂ ಬದಿಗಿಟ್ಟು ಒಂದಾಗಬೇಕೆಂಬುದು ಅವರ ಅಚಲ ಆಶಯವಾಗಿತ್ತು. ನೀಲಿ ಮತ್ತು ಕೆಂಪು ಎರಡರ ಗೌರವವನ್ನೂ ಸಂಪಾದಿಸಿಕೊಂಡ ಪ್ರೀತಿ ವಾತ್ಸಲ್ಯದ ‘ಅಮ್ಮ’ನಾಗಿ ಹೊರಹೊಮ್ಮಿದ್ದರು. ಈ ಎರಡೂ ರಂಗುಗಳ ನಡುವೆ ನಡೆದ ವೈಚಾರಿಕ ಕದನಗಳು ಆಕೆಯ ಮನಸ್ಸನ್ನು ಘಾಸಿಗೊಳಿಸಿತ್ತು. ಅಲ್ಪಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತರ ಕುರಿತು ತಂದೆಯದೇ ಬದ್ಧತೆ, ಪ್ರೀತಿ ಅವರಿಗಿತ್ತು. ಕನ್ಹಯ್ಯಕುಮಾರ್, ಉಮರ್ ಖಾಲಿದ್ ಹಾಗೂ ಜಿಗ್ನೇಶ್ ಮೇವಾನಿ, ಶೆಹ್ಲಾ ರಷೀದ್ ಅವರನ್ನು ತಮ್ಮ ದತ್ತುಮಕ್ಕಳೆಂದು ಬಹಿರಂಗವಾಗಿ ಕರೆದುಕೊಂಡಿದ್ದರು. ಹಂತಕರ ಗುಂಡು ಆಕೆಯನ್ನು ಬಲಿ ತೆಗೆದುಕೊಳ್ಳುವ ಕೆಲ ತಿಂಗಳುಗಳ ಹಿಂದೆ ದೆಹಲಿಗೆ ಬಂದಿದ್ದಾಗ ಕನ್ಹಯ್ಯನಿಗೆ ಹೊಸ ಉಡುಪುಗಳ ಉಡುಗೊರೆ ತಂದಿದ್ದುಂಟು.
ದೆಹಲಿಯಲ್ಲಿದ್ದ ನನಗೆ ಪತ್ರಿಕೆ ನಡೆಸಲು ಆಕೆ ತನ್ನ ತಂಡದೊಂದಿಗೆ ಪಡುತ್ತಿದ್ದ ಪಡಿಪಾಟಲಿನ ಕಲ್ಪನೆಯೇ ನನಗಿರಲಿಲ್ಲ. ದೆಹಲಿ ರಾಜಕಾರಣದ ದಿಕ್ಕು ದೆಸೆಗಳನ್ನು ತಿಳಿದುಕೊಳ್ಳಲು ಆಗಾಗ ಫೋನ್ ಕರೆ ಮಾಡುತ್ತಿದ್ದರು. ಚುನಾವಣೆಗಳ ಸಂದರ್ಭದಲ್ಲಿ ಕರ್ನಾಟಕದ ಚುನಾವಣಾ ರಾಜಕಾರಣದ ಸ್ಥಿತಿಗತಿಗಳ ವ್ಯಾಖ್ಯಾನಕಾರ್ತಿಯಾಗಿ ದೆಹಲಿಯಲ್ಲಿ ಖ್ಯಾತ ಟೀವಿ ಚಾನೆಲ್ಲುಗಳ ಪ್ಯಾನೆಲ್ ಡಿಸ್ಕಷನ್ ಗಳಲ್ಲಿ ವಾರಗಟ್ಟಲೆ ಕುಳಿತುಕೊಳ್ಳುತ್ತಿದ್ದರು. ಅದರಿಂದ ಬಂದ ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ಪತ್ರಿಕೆ ನಡೆಸಲು ಬಳಸುತ್ತಿದ್ದ ವಿಚಾರ ನನಗೆ ತಿಳಿದದ್ದು ಆಕೆ ಗತಿಸಿದ ನಂತರವೇ. ದೆಹಲಿಗೆ ಬಂದಿದ್ದ ಅಂತಹ ದಿನಗಳಲ್ಲಿ ಊಟಕ್ಕೆ ಕುಳಿತಾಗಲೂ ಈ ಕಷ್ಟವನ್ನು ಹೇಳಿಕೊಳ್ಳದೆ ನಗು ನಗುತ್ತ ಹರಟುತ್ತಿದ್ದ ದೊಡ್ಡ ಹೃದಯದ ತಾಯಿ ಗೌರಿ.
ಸಾಮಾಜಿಕ-ರಾಜಕೀಯ-ಧಾರ್ಮಿಕ-ವೈಚಾರಿಕ ಅಸಹಿಷ್ಣುತೆ ಅತ್ಯುಗ್ರ ರೀತಿಯಲ್ಲಿ ಪ್ರಕಟವಾದಾಗ ಪತ್ರಿಕೆಯ ಕಚೇರಿಯಲ್ಲಿ ಕುಳಿತುಕೊಳ್ಳದೆ ಬಯಲಿಗಿಳಿದು ಪ್ರವಾಸ ನಡೆಸಿ ಅದನ್ನು ಮುಖಾಮುಖಿಯಾದ ಅಪರೂಪದ ಪತ್ರಕರ್ತೆ ಆಕೆ.
ತಾವು ಗುಂಡಿಟ್ಟದ್ದು ಗೌರಿಯ ದೇಹಕ್ಕೇ ವಿನಾ ವಿಚಾರಕ್ಕಲ್ಲ ಎಂಬುದನ್ನು ದುರುಳರೂ ಮೂರ್ಖರೂ ಆದ ಹಂತಕರಿಗೆ ಈಗಲೂ ತಿಳಿದಿಲ್ಲ, ಮುಂದೆಯೂ ತಿಳಿಯುವುದಿಲ್ಲ.
ಸಾಮಾಜಿಕ ಕಾಳಜಿಗಳ ಕುರಿತ ಪ್ರತಿಬದ್ಧತೆಗೆ, ವೃತ್ತಿನಿಷ್ಠೆಗೆ, ಸಾಮಾಜಿಕ ಋಣಸಂದಾಯಕ್ಕೆ ಜ್ವಲಂತ ನಿದರ್ಶನ ಗೌರಿ. ದಿಕ್ಕು ತಪ್ಪಿ ಗೊಂದಲಕ್ಕೆ ಬಿದ್ದಿರುವ, ಕೇವಲ ಸಂಬಳ, ಸುರಕ್ಷತೆ, ಉದ್ಯೋಗ ಭದ್ರತೆಯೇ ಪರಮವೆಂದು ಭಾವಿಸುವ ಇಂದಿನ ಯುವಪತ್ರಕರ್ತರು ಗೌರಿಯ ಬದುಕು ಬರೆಹಗಳಿಂದ ಸಾಸಿವೆಯಷ್ಟಾದರೂ ಪ್ರೇರಣೆ ಪಡೆಯಬೇಕು.

ಡಿ ಉಮಾಪತಿ
ಹಿರಿಯ ಪತ್ರಕರ್ತರು