ಈ ದಿನ ಸಂಪಾದಕೀಯ | ಸ್ಯಾಂಕಿ ಕೆರೆಯಲ್ಲಿ ಸರ್ಕಾರಿ ಪ್ರಾಯೋಜಿತ ಮೌಢ್ಯಾರತಿ, ಯಾರಿಗಾಗಿ?

Date:

Advertisements
ಸ್ಯಾಂಕಿ ಕಟ್ಟಿದ ಕೆರೆಗೆ ಕಾವೇರಿ ಮಾತೆಯ ನೆಪದಲ್ಲಿ ಆರತಿ ಎತ್ತಲು ಮುಂದಾಗಿರುವ ಕಾಂಗ್ರೆಸ್ ನಾಯಕರಿಗೆ ನಾಡಿನ ಪ್ರಜ್ಞಾವಂತರು ಮಂಗಳಾರತಿ ಎತ್ತಬೇಕಿದೆ. ಈ ನಾಡನ್ನು ಬಸವ, ಟಿಪ್ಪು, ಕುವೆಂಪುರವರು ಕಟ್ಟಿದ ವೈಚಾರಿಕ ಮತ್ತು ಜಾತ್ಯತೀತ ನಾಡನ್ನಾಗಿಯೇ ಉಳಿಸಿಕೊಳ್ಳುವ ಬಗ್ಗೆ ಯೋಚಿಸಬೇಕಿದೆ...

ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ಮಾದರಿಯಲ್ಲಿಯೇ ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ ಬೆಂಗಳೂರು ಜಲಮಂಡಳಿ ಮಾ. 21ರಂದು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಸದಾಶಿವನಗರದ ಬಳಿ ಇರುವ ಸ್ಯಾಂಕಿ ಕೆರೆಗೆ ಕಾವೇರಿ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ.

ಸ್ಯಾಂಕಿ ಕೆರೆಗೆ ಕಾವೇರಿ ಆರತಿ ಕಾರ್ಯಕ್ರಮದ ಉಸ್ತುವಾರಿ ಹೊತ್ತ ಜಲಮಂಡಳಿ ಕೊಡುತ್ತಿರುವ ಕಾರಣವೆಂದರೆ, ನಮ್ಮ ರಾಜ್ಯಕ್ಕೆ ಕಾವೇರಿ ನದಿ ಕೇವಲ ಒಂದು ನದಿಯಲ್ಲ, ಜೀವನಾಡಿ. ಜನರ ಹೃದಯದಲ್ಲಿ ಪವಿತ್ರವಾದ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮ ರಾಜ್ಯಕ್ಕೆ ಮಾತ್ರವಲ್ಲದೆ, ಪಕ್ಕದ ರಾಜ್ಯಗಳ ಜನರ ದಾಹವನ್ನೂ ಸಹ ತೀರಿಸುತ್ತದೆ. ಬೆಂಗಳೂರಿಗೂ ಈ ನದಿ ವರದಾನವಾಗಿದ್ದು, ನಗರದ ಶೇ. 70ರಷ್ಟು ಜನರ ದಾಹವನ್ನು ಪೂರೈಸುತ್ತಿದೆ.

ಈ ಎಲ್ಲಾ ಪ್ರಯೋಜನಗಳನ್ನು ಒದಗಿಸುತ್ತಿರುವ ಕಾವೇರಿ ನದಿಗೆ ಗೌರವ ಸಲ್ಲಿಸುವ ಸಲುವಾಗಿ, ಕರ್ನಾಟಕ ಸರ್ಕಾರವು ಈ ಮಹತ್ವದ ಸಮಾರಂಭವನ್ನು ಆಯೋಜಿಸಿದೆ. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಈ ಸಮಾರಂಭಕ್ಕಾಗಿ ಉತ್ತರ ಪ್ರದೇಶದ ವಾರಣಾಸಿಯಿಂದ ಪುರೋಹಿತರನ್ನು ವಿಮಾನದ ಮೂಲಕ ಕರೆತರಲಾಗುತ್ತಿದೆ ಎಂದು ಜಲಮಂಡಳಿ ತಿಳಿಸಿದೆ.

Advertisements

ಹಾಗಾದರೆ, ಇಷ್ಟು ವರ್ಷ ನದಿ ನೀರು ಕುಡಿದ ಜನ ಕಾವೇರಿಯನ್ನು ಕಡೆಗಣಿಸಿದ್ದರೇ, ಇಲ್ಲಿಯವರೆಗೂ ಇಲ್ಲದಿದ್ದ ಕಾವೇರಿ ಆರತಿ ಈಗ ಸ್ಯಾಂಕಿ ಕೆರೆಯಲ್ಲೇಕೆ, ಇದರ ಹಿಂದಿರುವ ಉದ್ದೇಶವಾದರೂ ಏನು ಎನ್ನುವ ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುವುದು ಸಹಜ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮನರೇಗ- ಕೂಲಿ ಸಂಕಟಕ್ಕೆ ಮೋದಿ ತಾತ್ಸಾರ

ಸಾರ್ವಜನಿಕರ ಪ್ರಶ್ನೆಗಳ ಪ್ರತಿಫಲನವೆಂಬಂತೆ, ಕಾವೇರಿ ಆರತಿ ಕಾರ್ಯಕ್ರಮವು 2019ರ ಜಲ ಸಂಪನ್ಮೂಲ ಸಂರಕ್ಷಣೆ ಕಾಯ್ದೆಯನ್ನು ಉಲ್ಲಂಘಿಸಲಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟ ವಕೀಲ ಜಿ.ಆರ್. ಮೋಹನ್ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮೂಲಕ ಕಾವೇರಿ ಆರತಿಗೆ ತಡೆ ಕೋರಿದ್ದಾರೆ. ಅಲ್ಲದೆ, ನೈಜ ಹೋರಾಟಗಾರರ ವೇದಿಕೆಯು ಸ್ಯಾಂಕಿ ಕೆರೆಯಲ್ಲಿ ನಡೆಯಲಿರುವ ಕಾವೇರಿ ಆರತಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿರುವ ಎಲ್ಲಾ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ಕೆರೆ ಆವರಣವನ್ನು ಯಾವುದೇ ರೀತಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ವ್ಯಾವಹಾರಿಕ ಉದ್ದೇಶಗಳಿಗೆ ಬಳಸಬಾರದೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿದೆ.

ಸುಷ್ಮಾ ಅಯ್ಯಂಗಾರ್ ಎನ್ನುವವರು, ‘ಯಾರು ಏನೂ ಅನ್ನಬಾರದು ಎನ್ನುವ ಕಾರಣದಿಂದ ಕಾವೇರಿ ಅಂತ ಹೆಸರು ಸೇರಿಸಿಬಿಡುವುದು. ಈ ಬೇಸಿಗೆಯ ಬೇಗೆಯಲ್ಲಿ, ಕೆರೆಗಳ ನೀರು ಆವಿಯಾಗುವ ಸಮಯದಲ್ಲಿ, ನಿಂತ ನೀರಲ್ಲಿ ಆರತಿ… ಆ ಉತ್ತರ ಭಾರತದ ಆಚರಣೆಯನ್ನು ಅನುಕರಿಸುವ ರೋಗ ಬರಿ ರೋಗವಲ್ಲ, ಅವೈಜ್ಞಾನಿಕವಾದ ಮನೋರೋಗ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗೆಯೇ, ಸ್ಯಾಂಕಿ ಟ್ಯಾಂಕ್ ಕಟ್ಟಿದವರು ಕನ್ನಡಿಗರಲ್ಲ. ಅವರ ಕಾಳಜಿಯ ಹಿಂದೆ ಯಾವ ದುರುದ್ದೇಶವೂ ಇರಲಿಲ್ಲ. 1882ರಲ್ಲಿ ಮದ್ರಾಸ್ ರೆಜಿಮೆಂಟ್‌ನ ಕರ್ನಲ್ ರಿಚರ್ಡ್ ಸ್ಯಾಂಕಿಯವರು, ಬೆಂಗಳೂರು ನಗರದ ಪಶ್ಚಿಮ ಭಾಗದ ಜನರಿಗೆ ನೀರು ಒದಗಿಸುವ ನಿಟ್ಟಿನಲ್ಲಿ ನಿರ್ಮಿಸಿದ್ದೇ ಸ್ಯಾಂಕಿ ಟ್ಯಾಂಕ್. ಕಾಲಾನಂತರ ಅದನ್ನು ಅವರ ಹೆಸರಿನಿಂದಲೇ ಕರೆಯಲಾಯಿತು. ಅವರ ಕಾಳಜಿ ಮತ್ತು ಉದ್ದೇಶಗಳನ್ನು ಅವಮಾನಿಸುವಂತೆ, ಸ್ಯಾಂಕಿ ಕೆರೆಗೆ ಆರತಿ ಎತ್ತುತ್ತಿರುವುದು ವಿಷಾದನೀಯ ಎನ್ನುವವರೂ ಇದ್ದಾರೆ.  

2021ರಲ್ಲಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಮೊದಲಿಗೆ ‘ತುಂಗಾ ಆರತಿ’ ಯೋಜನೆಯನ್ನು ಘೋಷಿಸಲಾಯಿತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ, ತುಂಗಾ ಆರತಿಗೆ 30 ಕೋಟಿ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ಎತ್ತಿಡಲಾಗಿದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಯಿತು. ಇದು ಹಿಂದುತ್ವದ ಪ್ರಚಾರಕ್ಕೆ ಅನುಗುಣವಾಗಿ ಮಾಡಿದ ಘೋಷಣೆಯಾಗಿತ್ತು. ಅದರ ಹಿಂದೆ ಬಿಜೆಪಿಯ ಸೈದ್ಧಾಂತಿಕ ಮುಖವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥರನ್ನು ಸಂತೃಪ್ತರನ್ನಾಗಿಸುವ ಇರಾದೆ ಇತ್ತು.

ಇದರ ಮುಂದುವರೆದ ಭಾಗವಾಗಿ ಅಕ್ಟೋಬರ್ 2022ರಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಸರ್ಕಾರ, ಕಾವೇರಿ ನದಿ ಉತ್ಸವದ ಅಂಗವಾಗಿ ಮೊದಲ ಬಾರಿಗೆ ಕೊಡಗು ಜಿಲ್ಲೆಯ ಭಾಗಮಂಡಲ, ಕುಶಾಲನಗರ, ಕಣಿವೆ ಕಾವೇರಿ ನದಿ ತಟದಲ್ಲಿ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನೆರವೇರಿಸಿತ್ತು.

ಬಿಜೆಪಿಗರು ದೇವರು, ಧರ್ಮವನ್ನು ಮುನ್ನೆಲೆಗೆ ತಂದು ಮೌಢ್ಯ ಬಿತ್ತುವ ಮೂಲಕ ಸಮಾಜವನ್ನು ಪುರಾತನ ಕಾಲಕ್ಕೆ ಕೊಂಡೊಯ್ದು ಕತ್ತಲಲ್ಲಿರಿಸುವುದು ಅವರ ಅಜೆಂಡಾ. ಆರತಿ, ಸಂಸ್ಕೃತಿ ಎಂಬ ಧಾರ್ಮಿಕ ಅಮಲಿನಲ್ಲಿ ಮತದಾರರನ್ನು ತೇಲಿಸಿ, ಅಧಿಕಾರಕ್ಕೇರುವುದು ಅವರ ಷಡ್ಯಂತ್ರ. ಆಗ ಅದನ್ನು ಕಟುವಾಗಿ ಟೀಕಿಸಿದ್ದ ಸಿದ್ದರಾಮಯ್ಯನವರು, ಈಗ ಅದನ್ನೇ ಮಾಡಲು ಮುಂದಾಗಿದ್ದಾರೆ.

ಸಮಾಜವಾದಿ ಮತ್ತು ವೈಚಾರಿಕ ಹಿನ್ನೆಲೆಯಿಂದ ಬಂದ ಸಿದ್ಧರಾಮಯ್ಯನವರಿಗೆ ಇಂತಹ ಮೌಢ್ಯಾಚರಣೆಗಳು ಬೇಕಿತ್ತೆ? ಹರಿದ್ವಾರ ಮತ್ತು ವಾರಣಾಸಿಗಳಲ್ಲಿ ಹಲವು ಶತಮಾನಗಳಿಂದ ಆಚರಣೆಯಲ್ಲಿರುವ ಗಂಗಾರತಿ, ಸ್ಥಳೀಯ ಸಂಸ್ಕೃತಿ. ಉತ್ತರದ ಆ ಸಂಸ್ಕೃತಿಯು ನಮ್ಮ ನೆಲಕ್ಕೆ ಏಕೆ ಬೇಕು? ಬಿಜೆಪಿಗರದು ಹಾರ್ಡ್ ಕೋರ್ ಹಿಂದುತ್ವವಾದರೆ, ನಿಮ್ಮದು ಸಾಫ್ಟ್ ಹಿಂದುತ್ವವೇ? ಕಾಂಗ್ರೆಸ್ ಪಕ್ಷ ಪಾಲಿಸಿಕೊಂಡು ಬಂದ ಜಾತ್ಯತೀತ ನಿಲುವು, ಸರ್ವಜನಾಂಗದ ಶಾಂತಿಯ ತೋಟಗಳೆಂಬ ಹೇಳಿಕೆಗಳು ಜನರ ಕಣ್ಣಿಗೆ ಮಣ್ಣೆರೆಚುವ ನಾಟಕವೇ?

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಾರ್ಪೊರೇಟ್‌ ಕೈಯಲ್ಲಿ ಶಿಕ್ಷಣ, ಖರ್ಗೆಯವರ ಸಿಟ್ಟು ಮತ್ತು ಬಡವರ ಮಕ್ಕಳು

ಆಳುವ ಸರ್ಕಾರಗಳು ಅಂತರ್ಜಲ ಮಟ್ಟ ಕುಸಿಯದಂತೆ, ಜಲಮೂಲಗಳನ್ನು ಸಂರಕ್ಷಿಸುವಂತೆ, ಮಳೆನೀರು ಕೊಯ್ಲನ್ನು ಕಡ್ಡಾಯವಾಗಿ ಅಳವಡಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಅದರಲ್ಲೂ ಈ ಬಿರುಬೇಸಿಗೆಯಲ್ಲಿ ನೀರಿನ ಸದುಪಯೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಗಿಡ-ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಣೆ ಮಾಡುವಂತೆ ಜನರನ್ನು ಉತ್ತೇಜಿಸಬೇಕು. ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ ಮೊದಲ ಆದ್ಯತೆ ನೀಡಬೇಕು. ಅದು ಬಿಟ್ಟು, ರಾಜ್ಯ ಸರ್ಕಾರವೇ ಮುಂದೆ ನಿಂತು, ಸಾರ್ವಜನಿಕರ ತೆರಿಗೆಯ ಹಣವನ್ನು ನೀರಿಗೆ ದೀಪಗಳೆಂಬ ಬೆಂಕಿ ಉಂಡೆಗಳನ್ನು ಹಚ್ಚಿ ಸಂಭ್ರಮಿಸುವ ಮೌಢ್ಯಾರತಿ ಮಾಡಲು ಮುಂದಾಗುತ್ತದೆಂದರೆ, ಏನು ಹೇಳುವುದು?

ಇದು ನಾಡಿನ ಜ್ವಲಂತ ಸಮಸ್ಯೆಗಳನ್ನು ಪ್ರಜ್ಞಾಪೂರ್ವಕವಾಗಿ ಹಿನ್ನೆಲೆಗೆ ಸರಿಸುವ, ಜನರ ಮನಸ್ಸನ್ನು ಧಾರ್ಮಿಕವಾಗಿ, ಭಾವನಾತ್ಮಕವಾಗಿ ಸೆಳೆಯುವ ಸಂಚು ಅಲ್ಲವೇ? ಆ ಮೂಲಕ ರಾಜ್ಯವನ್ನು ಶಿಲಾಯುಗದತ್ತ ಕೊಂಡೊಯ್ಯುತ್ತಿಲ್ಲವೇ?

ಸ್ಯಾಂಕಿ ಕಟ್ಟಿದ ಕೆರೆಗೆ ಕಾವೇರಿ ಮಾತೆಯ ನೆಪದಲ್ಲಿ ಆರತಿ ಎತ್ತಲು ಮುಂದಾಗಿರುವ ಕಾಂಗ್ರೆಸ್ ನಾಯಕರಿಗೆ ನಾಡಿನ ಪ್ರಜ್ಞಾವಂತರು ಮಂಗಳಾರತಿ ಎತ್ತಬೇಕಿದೆ. ಈ ನಾಡನ್ನು ಬಸವ, ಟಿಪ್ಪು, ಕುವೆಂಪುರವರು ಕಟ್ಟಿದ ವೈಚಾರಿಕ ಮತ್ತು ಜಾತ್ಯತೀತ ನಾಡನ್ನಾಗಿಯೇ ಉಳಿಸಿಕೊಳ್ಳುವ ಬಗ್ಗೆ ಯೋಚಿಸಬೇಕಿದೆ. 

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X