ಬೆಲೆ ಏರಿಕೆ ಎನ್ನುವುದು ಎಲ್ಲ ಕಾಲದಲ್ಲೂ ಇರುವ ಸಾಮಾನ್ಯ ಸಂಗತಿಯಾದರೂ, ಅದಕ್ಕೊಂದು ಲೆಕ್ಕಾಚಾರವಿರಬೇಕು. ತರ್ಕವಿರಬೇಕು. ಆ ಲೆಕ್ಕಾಚಾರ ಮತ್ತು ತರ್ಕ ದೇಶದ ಬಡವರ ಬದುಕನ್ನು ಬಂಗಾರವನ್ನಾಗಿಸಲಾಗದಿದ್ದರೂ, ಸಹ್ಯಗೊಳಿಸುವಂತಿರಬೇಕು.
ಏಪ್ರಿಲ್ ಒಂದು- ಜನರನ್ನು ಮೂರ್ಖರನ್ನಾಗಿಸುವ ದಿನ. ನಾವೇ ಆರಿಸಿ ಕಳುಹಿಸಿದ ಸರ್ಕಾರಗಳು ದೈನಂದಿನ ವಸ್ತುಗಳ ಬೆಲೆ ಏರಿಸಿ, ನಮ್ಮನ್ನು ಬದುಕಲೂ ಆಗದ, ಸಾಯಲೂ ಆಗದ ಸ್ಥಿತಿಗೆ ತಂದು ನಿಲ್ಲಿಸಿವೆ. ಮೂರ್ಖರ ದಿನವೇ ದಿನಬಳಕೆಯ ವಸ್ತುಗಳ ಬೆಲೆ ಏರಿಸಿ, ಆಯ್ಕೆ ಮಾಡಿದವರನ್ನೇ ಮೂರ್ಖರನ್ನಾಗಿಸಿ ಅಪಹಾಸ್ಯ ಮಾಡುತ್ತಿವೆ.
ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಭಾರತೀಯ ಜನತಾ ಪಕ್ಷದ ದುರಾಡಳಿತ, ಭ್ರಷ್ಟಾಚಾರದಿಂದ ಬೇಸತ್ತ ಮತದಾರರು, ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡರು. ಭಾರೀ ಬಹುಮತ ನೀಡಿ, ನಿರಾತಂಕದಿಂದ ಆಡಳಿತ ಮಾಡಿ ಎಂದು ಹರಸಿದರು. ಅಧಿಕಾರಕ್ಕೇರಿದ ಕಾಂಗ್ರೆಸ್, ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ಗುಳೆ ಹೋಗುತ್ತಿದ್ದವರನ್ನು ಊರುಗಳಲ್ಲಿ ಉಳಿಯುವಂತೆ ಮಾಡಿತು. ಬರ-ನೆರೆಯನ್ನು ತಡೆದುಕೊಳ್ಳುವಂತಾಯಿತು. ಬಡ-ಮಧ್ಯಮವರ್ಗದವರು ಬದುಕುವಂತಾಯಿತು. ಮಹಿಳೆಯರು ಮನೆಯಿಂದ ಹೊರಬಂದರು. ಆರ್ಥಿಕ ಚಲನಶೀಲತೆಗೆ ಶಕ್ತಿ ತುಂಬಿದರು.
ಆದರೆ, ಸರ್ಕಾರಕ್ಕೆ ಎರಡು ವರ್ಷ ತುಂಬುವ ಮೊದಲೇ, ಅಭಿವೃದ್ಧಿಗೆ ಅನುದಾನ ನೀಡುವಲ್ಲಿ, ವಾರ್ಷಿಕ ಸರಾಸರಿ 56 ಕೋಟಿ ವೆಚ್ಚದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವಲ್ಲಿ, ದಕ್ಷ ಆಡಳಿತ ನೀಡುವಲ್ಲಿ, ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಸೋತಿತು. ಗೆಲ್ಲಿಸಿದ ಜನರ ಆಶೋತ್ತರಗಳನ್ನು ಮರೆಯಿತು. ಅಧಿಕಾರಕ್ಕಾಗಿ ಕಿತ್ತಾಟಕ್ಕಿಳಿದು, ಕೆಸರೆರಚಾಟಕ್ಕಿಳಿದು ಜನರಲ್ಲಿ ಅಸಹ್ಯ ಹುಟ್ಟಿಸಿತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬುಲ್ಡೋಝರ್ ಅನ್ಯಾಯ- ಸುಪ್ರೀಮ್ ತೀರ್ಪನ್ನು ಹರಿದು ಗಾಳಿಗೆ ತೂರುತ್ತಿರುವ ಬಿಜೆಪಿ ಸರ್ಕಾರಗಳು
ಈಗ, ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲಿಕ್ಕಾಗಿ, ಸಂಪನ್ಮೂಲ ಕ್ರೋಡೀಕರಣಕ್ಕಾಗಿ ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನು ಅಸ್ತ್ರ ಮತ್ತು ಗುರಾಣಿಯಂತೆ ಪ್ರಯೋಗಿಸತೊಡಗಿದೆ. ಆರ್ಥಿಕ ಸಂಕಷ್ಟ ಸುಧಾರಣೆಗಾಗಿ ಸರ್ಕಾರ ಮೊದಲಿಗೆ ಗಮನ ಹರಿಸಿದ್ದು ಮದ್ಯ ಮಾರಾಟ ಮತ್ತು ಮುದ್ರಾಂಕ ಶುಲ್ಕದತ್ತ. ಅದು ಬಹುಸಂಖ್ಯಾತರನ್ನು ಬಾಧಿಸದಿರುವುದರಿಂದ, ಯಾರೂ ಪ್ರಶ್ನಿಸಲಿಲ್ಲ.
ಈ ಅನುಕೂಲಕರ ಅಸ್ತ್ರವನ್ನು ಇನ್ನಷ್ಟು ತೀವ್ರವಾಗಿ ಪ್ರಯೋಗಕ್ಕೊಡ್ಡಿದ ರಾಜ್ಯ ಸರ್ಕಾರ, ಜನರ ನಿತ್ಯ ಬಳಕೆಯ ಹಾಲು, ನೀರು, ವಿದ್ಯುತ್, ತ್ಯಾಜ್ಯ, ಬಸ್, ಮೆಟ್ರೋ ದರ ಏರಿಸಿತು. ಸಾಲದು ಎಂದು ಡೀಸೆಲ್ ಬೆಲೆಯನ್ನೂ ಹೆಚ್ಚಿಸಿತು. ಡೀಸೆಲ್ ಬೆಲೆ ಏರುವ ಮೂಲಕ ಸಾಗಾಣಿಕೆ ದರ ಏರುತ್ತದೆ. ಅದು ದೈನಂದಿನ ಬಳಕೆಯ ವಸ್ತುಗಳು, ಹಣ್ಣು-ತರಕಾರಿಗಳು, ತಿಂಡಿ-ತಿನಿಸುಗಳು, ಕಟ್ಟಡ ನಿರ್ಮಾಣ ಸಾಮಗ್ರಿಗಳು ಹಾಗೂ ಇನ್ನಿತರ ಅವಲಂಬಿತ ಕ್ಷೇತ್ರಗಳ ವಸ್ತುಗಳ ಬೆಲೆಯನ್ನು ಸ್ವಯಂಚಾಲಿತವಾಗಿಯೇ ಹೆಚ್ಚಿಸುತ್ತದೆ.
ಅದಕ್ಕೆ ಸಮಾನಾಂತರವಾಗಿ ಸರ್ಕಾರ ಹೊಸ ಹೊಸ ಉದ್ಯೋಗಳ ಸೃಷ್ಟಿ, ಜೀವನಮಟ್ಟ ಸುಧಾರಣೆ, ಮೂಲಭೂತ ಸೌಕರ್ಯಗಳ ಸುಧಾರಣೆ ಮಾಡುತ್ತಿಲ್ಲ. ಮಾನವ ಸಂಪನ್ಮೂಲದ ಬಳಕೆ ಮತ್ತು ಅಭಿವೃದ್ಧಿಯಾಗುತ್ತಿಲ್ಲ. ಜನರ ಆದಾಯ ಅಷ್ಟೇ ಇದ್ದು, ಬೆಲೆ ಏರಿಕೆ ನಿಯಂತ್ರಣಕ್ಕೆ ಸಿಗದಿದ್ದಾಗ, ಬದುಕು ದುಬಾರಿಯಾಗುತ್ತದೆ. ಬಡವರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ಮತ್ತು ಮಧ್ಯಮವರ್ಗದವರ ಬದುಕು ದುರ್ಭರವಾಗುತ್ತದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರು, ‘ಬೇರೆ ರಾಜ್ಯಗಳ ಬೆಲೆ ಏರಿಕೆ ಗಮನಿಸಿದರೆ, ನಮ್ಮ ರಾಜ್ಯದಲ್ಲಿಯೇ ಬೆಲೆ ಏರಿಕೆ ಇತಿಮಿತಿಯಲ್ಲಿರುವುದು’ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೊಳಪಡುವ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ, ಅಂತಾರಾಷ್ಟ್ರೀಯ ಕಚ್ಚಾತೈಲದ ಬೆಲೆ ಇಳಿಕೆಯಾದಾಗಲೂ ಬೆಲೆ ಇಳಿಸದ ಬಗ್ಗೆ ದೂರುತ್ತಿದ್ದಾರೆ. ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಹಾಗೂ ಹೊಸ ತೆರಿಗೆ ನೀತಿಯಿಂದ ಆರ್ಥಿಕ ಕ್ಷೇತ್ರದಲ್ಲಾದ ಅಲ್ಲೋಲ ಕಲ್ಲೋಲವನ್ನು ಎಳೆದು ತಂದು ಮುಖ ಮುಚ್ಚಿಕೊಳ್ಳುತ್ತಿದ್ದಾರೆ.
ಈ ನಡುವೆ ವಿರೋಧ ಪಕ್ಷವಾದ ಬಿಜೆಪಿ ಬೆಲೆ ಏರಿಕೆ ವಿರುದ್ಧ ಅಹೋರಾತ್ರಿ ಧರಣಿ ಹಮ್ಮಿಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಪರ ನಿಲ್ಲುವ ಮೂಲಕ ಮೊದಲ ಬಾರಿಗೆ ಜನಪರ ವಿಷಯವನ್ನು ಎತ್ತಿಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಶಾಸನಸಭೆಯಲ್ಲಿ ಶೇ. 50ರಷ್ಟು ಶಾಸಕರ ಸಂಬಳ, ಭತ್ಯೆ ಹೆಚ್ಚಳವಾದಾಗ, ಸಾಂಕೇತಿಕವಾಗಿಯಾದರೂ ವಿರೋಧ ವ್ಯಕ್ತಪಡಿಸಲಿಲ್ಲ. ಇದನ್ನು ನಾನು ತಿರಸ್ಕರಿಸುತ್ತೇನೆ ಎಂದು ಯಾವೊಬ್ಬ ಶ್ರೀಮಂತ ಶಾಸಕನೂ ಹೇಳುವ ಧೈರ್ಯ ತೋರಲಿಲ್ಲ. ಇಂತಹ ಆರಾಮಕೋರ ರಾಜಕಾರಣಿಗಳು ಈಗ ಬೀದಿಯಲ್ಲಿ ನಿಂತು ಬಡವರ ಪರ ಎಂದರೆ ನಂಬಲಾಗುವುದೇ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪತ್ರಿಕೋದ್ಯಮದ ಪಾವಿತ್ರ್ಯವನ್ನು ಪಾತಾಳಕ್ಕಿಳಿಸಿದ ‘ಪತ್ರಕರ್ತರು’!
ಬೆಲೆ ಏರಿಕೆ ಎಂಬುದು ಗಂಭೀರ ವಿಷಯ. ಬದಲಾಗುತ್ತಿರುವ ಜನಸಂಖ್ಯೆ, ಕೊಳ್ಳುವ ಶಕ್ತಿ, ಆದಾಯ, ಬೆಲೆಗಳು, ಮಾರುಕಟ್ಟೆಗಳ ಅನುಕೂಲಗಳನ್ನೆಲ್ಲ ಅವಲಂಬಿಸಿರುತ್ತದೆ. ಹಾಗಾಗಿ ಬೆಲೆ ಏರಿಕೆಯನ್ನು ಯಾವ ರಾಜಕೀಯ ಪಕ್ಷಗಳೂ ಹಗುರವಾಗಿ ಪರಿಗಣಿಸಬಾರದು. ರಾಜಕೀಯವಾಗಿ ಅಷ್ಟೇ ಇಲ್ಲ, ಆರ್ಥಿಕವಾಗಿಯೂ ಬೆಲೆ ಏರಿಕೆ ತುಂಬ ಅಪಾಯಕಾರಿ ವಿದ್ಯಮಾನ. ಈ ಬೆಲೆ ಏರಿಕೆ ಎನ್ನುವುದು ಎಲ್ಲ ಕಾಲದಲ್ಲೂ ಇರುವ ಸಾಮಾನ್ಯ ಸಂಗತಿಯಾದರೂ, ಅದಕ್ಕೊಂದು ಲೆಕ್ಕಾಚಾರವಿರಬೇಕು. ತರ್ಕವಿರಬೇಕು. ಆ ಲೆಕ್ಕಾಚಾರ ಮತ್ತು ತರ್ಕ ದೇಶದ ಬಡವರ ಬದುಕನ್ನು ಬಂಗಾರವನ್ನಾಗಿಸಲಾಗದಿದ್ದರೂ, ಸಹ್ಯಗೊಳಿಸುವಂತಿರಬೇಕು.
ಬದಲಿಗೆ ಅಗತ್ಯ ವಸ್ತುಗಳ ಬೆಲೆ ಏರಿಸಿ ಆರಿಸಿ ಕಳುಹಿಸಿದವರನ್ನೇ ಮೂರ್ಖರನ್ನಾಗಿಸುವ; ಬಡವರ ಬದುಕಿನ ಬಗ್ಗೆ ನಿರ್ಲಕ್ಷ್ಯ ತೋರುವ ಸರ್ಕಾರಗಳನ್ನು ಜನವಿರೋಧಿ ಸರ್ಕಾರಗಳೆಂದೇ ಪರಿಗಣಿಸಬೇಕು. ಸಮಯ ಬಂದಾಗ ತಕ್ಕ ಪಾಠ ಕಲಿಸಬೇಕು.
