ಪ್ರಧಾನಿ ಮೋದಿಯಾಗಲಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಗಲಿ, ಮುಖ್ಯಮಂತ್ರಿ ಸ್ಟಾಲಿನ್ ಆಗಲಿ, ಇಲ್ಲಿ ಯಾರೂ ಮುಖ್ಯರಲ್ಲ. ದೇಶವೆಂದರೆ ಮಣ್ಣಲ್ಲ. ದೇಶದ ಜನರ ಕುರಿತು ಕ್ಷುಲ್ಲಕವಾಗಿ ಮಾತನಾಡುವವರು ಮನುಷ್ಯರೂ ಅಲ್ಲ.
ಸೋಮವಾರ ಲೋಕಸಭೆಯಲ್ಲಿ ‘ತಮಿಳುನಾಡಿನ ವಿದ್ಯಾರ್ಥಿಗಳ ಭವಿಷ್ಯವನ್ನು ಡಿಎಂಕೆ ಸರ್ಕಾರ ಹಾಳುಮಾಡುತ್ತಿದೆ. ಭಾಷೆಗಳ ನಡುವೆ ಗೋಡೆ ಕಟ್ಟುತ್ತಿದೆ. ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದೆ. ಅವರು ಪ್ರಜಾಪ್ರಭುತ್ವ ವಿರೋಧಿಗಳು, ಅನಾಗರಿಕರು’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಆಕ್ರೋಶಭರಿತರಾಗಿ ಕೂಗಾಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಮತ್ತು ತ್ರಿಭಾಷಾ ಸೂತ್ರ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಧರ್ಮೇಂದ್ರ ಪ್ರಧಾನ್, ‘ಮೊದಲು ತಮಿಳುನಾಡು ಸರ್ಕಾರ ಎನ್ಇಪಿ ಒಪ್ಪಿ ಸಹಿ ಮಾಡಿತ್ತು. ಆದರೆ, ಈಗ ನಿಲುವು ಬದಲಾಯಿಸಿ, ವಿರೋಧಿಸುತ್ತಿದೆ. ಇದೊಂದೇ ರಾಜ್ಯವಲ್ಲ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಕೂಡ ಮೊದಲು ಒಪ್ಪಿ, ನಂತರ ವಿರೋಧ ಮಾಡುತ್ತಿವೆ’ ಎಂದು ಹರಿಹಾಯ್ದರು.
ಕೇಂದ್ರದ ಒಕ್ಕೂಟ ಸರ್ಕಾರ 2020ರಲ್ಲಿ ಎನ್ಇಪಿಯನ್ನು ಜಾರಿಗೆ ತಂದಾಗ, ಆಗಿನ ರಾಜ್ಯ ಬಿಜೆಪಿ ಸರ್ಕಾರ ಒಪ್ಪಿ ಸಹಿ ಹಾಕಿದ್ದು ನಿಜ. ಆದರೆ, ಶಿಕ್ಷಣದ ಕೇಂದ್ರೀಕರಣ, ಖಾಸಗೀಕರಣ, ಕಾರ್ಪೊರೇಟರೀಕರಣ ಮತ್ತು ಕೋಮುವಾದೀಕರಣವನ್ನು ತನ್ನ ಒಡಲಾಳದಲ್ಲಿ ಇಟ್ಟುಕೊಂಡಿತ್ತು. ಸಂವಿಧಾನದ ಮೂಲ ಆಶಯವಾದ ಒಕ್ಕೂಟ ಮತ್ತು ಪ್ರಜಾಸತ್ತಾತ್ಮಕ ತತ್ವಕ್ಕೆ ಮಾರಕವಾಗಿತ್ತು. ಆದಕಾರಣ ಹಲವು ರಾಜ್ಯಗಳು ಎನ್ಇಪಿಯನ್ನು ಒಮ್ಮತದಿಂದ ತಿರಸ್ಕರಿಸಿದ್ದವು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಸಹ ಎನ್ಇಪಿಯನ್ನು ತಿರಸ್ಕರಿಸಿ, ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ರಚಿಸಿತು.
ಕೇಂದ್ರದ ಒಕ್ಕೂಟ ಸರ್ಕಾರ ಇದನ್ನು ಅವಮಾನವೆಂದು ಭಾವಿಸಿ, ಎನ್ಇಪಿ ಒಪ್ಪದ ರಾಜ್ಯಗಳ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಯಿತು. ಅದರ ಮುಂದುವರೆದ ಭಾಗವಾಗಿ, ಕಳೆದ ತಿಂಗಳು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ‘ತ್ರಿಭಾಷಾ ಸೂತ್ರ ಮತ್ತು ಎನ್‌ಇಪಿ ಒಪ್ಪಿಕೊಳ್ಳುವವರೆಗೆ ತಮಿಳುನಾಡಿಗೆ ಅನುದಾನ ಬಿಡುಗಡೆ ಮಾಡುವುದಿಲ್ಲ’ ಎಂದು ಬೆದರಿಕೆ ಹಾಕಿದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪರೇಶ್ ಮೇಸ್ತಾ ಟು ಫರಂಗಿಪೇಟೆ- ಸಂಘಪರಿವಾರದ ಪಿತೂರಿ ಬಯಲು!
ಹೇಳಿದಂತೆಯೇ ಸಮಗ್ರ ಶಿಕ್ಷಾ ಯೋಜನೆಯಡಿ ಕೇಂದ್ರದಿಂದ ತಮಿಳುನಾಡಿಗೆ ಬರಬೇಕಾದ 2,152 ಕೋಟಿ ರೂ.ಗಳನ್ನು ತಡೆಹಿಡಿದರು. ತ್ರಿಭಾಷಾ ನೀತಿಯ ಪರವಾಗಿ ತಮಿಳುನಾಡು ಬಿಜೆಪಿಯನ್ನು ಎತ್ತಿಕಟ್ಟಿ, ಸಿಎಂ ಸ್ಟಾಲಿನ್ ವಿರುದ್ಧ ಸಹಿ ಅಭಿಯಾನವನ್ನು ಹಮ್ಮಿಕೊಳ್ಳುವಂತೆ ನೋಡಿಕೊಂಡರು. ತಮಿಳುನಾಡು, ಕೇಂದ್ರದ ವಿರುದ್ಧವಿದೆ, ಅದು ಅಪಾಯಕಾರಿ ಎಂದು ಕಿಡಿಕಾರಿದರು.
ಕೇಂದ್ರದ ಸಚಿವರೊಬ್ಬರು ಒಂದು ರಾಜ್ಯದ ಚುನಾಯಿತ ಮುಖ್ಯಮಂತ್ರಿಯನ್ನು ಮತ್ತು ಅವರನ್ನು ಆಯ್ಕೆ ಮಾಡಿದ ಜನತೆಯನ್ನು ಅನಾಗರಿಕರು ಎನ್ನುವುದು ಎಷ್ಟು ಸರಿ? ದೇಶದ ಆತ್ಮದಂತಿರುವ ಲೋಕಸಭೆಯಲ್ಲಿ ನಿಂತು ಹೀಗೆ ಮಾತನಾಡುತ್ತಾರೆಂದರೆ, ಅವರು ನಾಗರಿಕ ಪ್ರಜೆಯೇ? ಇದನ್ನು ಕೇಳಿಸಿಕೊಂಡು ಸುಮ್ಮನಿರಬೇಕೇ?
ಸುಮ್ಮನಿರದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ‘ರಾಜ್ಯದಲ್ಲಿ ಸರಣಿ ಪ್ರತಿಭಟನೆಗಳಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಚೋದನೆ ನೀಡಿದ್ದಾರೆ. ಸ್ಥಾನದ ಘನತೆಯನ್ನು ಮರೆತಿದ್ದಾರೆ. ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳಲು ಬೆದರಿಕೆ ಒಡ್ಡುತ್ತಿದ್ದಾರೆ. ಬ್ರಿಟಿಷ್ ವಸಾಹತುಶಾಹಿ ಬದಲು ಹಿಂದಿ ವಸಾಹತುಶಾಹಿಯನ್ನು ತಮಿಳುನಾಡಿನ ಜನ ಸಹಿಸುವುದಿಲ್ಲ. ಕೇಂದ್ರ ಸಚಿವರು ಹಣ ಬಿಡುಗಡೆ ಮಾಡದೆ ತಮಿಳುನಾಡಿಗೆ ವಂಚಿಸಿದ್ದಾರೆ. ತಮಿಳುನಾಡಿನ ಜನರನ್ನು ಅವಮಾನಿಸಿದ್ದಾರೆ. ಪ್ರಧಾನಿ ಮೋದಿ ಇದನ್ನು ಒಪ್ಪುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, ‘ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಾನು ರಾಜನೆಂದು ಭಾವಿಸಿ, ದುರಹಂಕಾರದಿಂದ ಮಾತನಾಡಿದ್ದಾರೆ. ಅವರು ತಮ್ಮ ನಾಲಿಗೆಯನ್ನು ಬಿಗಿ ಹಿಡಿದು ಮಾತನಾಡಲಿ’ ಎಂದು ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಪೂರಕವಾಗಿ ಡಿಎಂಕೆ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಭಾರೀ ಪ್ರತಿಭಟನೆಯನ್ನು ನಡೆಸಿದ್ದಾರೆ.
ನೆಲ, ಜಲ ಮತ್ತು ಭಾಷೆಯ ವಿಷಯಕ್ಕೆ ಬಂದಾಗ, ದೇಶದ ಯಾವುದೇ ಭಾಗದ ಜನರಾದರೂ ಸರಿ, ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಅದರಲ್ಲೂ, ಹಿಂದಿ ಹೇರಿಕೆ ಎಂದಾಕ್ಷಣ ತಮಿಳುನಾಡಿನ ಜನರ ನಿಲುವು, ಧೋರಣೆಗಳೇ ಬೇರೆ. ಅದು ಉಗ್ರರೂಪ ತಾಳುತ್ತದೆ. ಸರ್ಕಾರಗಳನ್ನೇ ಬದಲಿಸುತ್ತದೆ.
ದೇಶದ ಶೇ. 34ರಷ್ಟು ಜನರಿಗೆ ಮಾತ್ರ ಹಿಂದಿಯು ಮಾತೃಭಾಷೆಯಾಗಿದೆ. ಹಾಗಿದ್ದಾಗ, ಅದನ್ನು ಇನ್ನುಳಿದ ಶೇ. 66ರಷ್ಟು ಜನರ ಮೇಲೆ ಹೇರುವುದು ಎಷ್ಟು ಸರಿ? ಅದು ಪ್ರಜಾಸತ್ತಾತ್ಮಕ ನಿರ್ಣಯವೇ?
ದೇಶದ 29 ರಾಜ್ಯಗಳ ಪೈಕಿ 21ರಲ್ಲಿ ಮತ್ತು ಕೇಂದ್ರಾಡಳಿತಕ್ಕೊಳಪಟ್ಟ ಪ್ರದೇಶಗಳಲ್ಲಿ ಹಿಂದಿ ಭಾಷೆಯ ಬಳಕೆ ಹೆಚ್ಚಾಗಿಲ್ಲ. ಪ್ರಾದೇಶಿಕವಾಗಿ ನೋಡಿದರೆ, ಪೂರ್ವೋತ್ತರ ಭಾರತದ ಏಳು ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ; ದಕ್ಷಿಣ ಭಾರತದ ಆರು ರಾಜ್ಯಗಳಲ್ಲಿ; ಪಶ್ಚಿಮ ಭಾರತದ ಮಹಾರಾಷ್ಟ್ರ, ಗೋವಾ, ಗುಜರಾತ್‌ಗಳಲ್ಲಿ; ಉತ್ತರ ಭಾರತದ ಸಿಕ್ಕಿಂ, ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ಹಿಂದಿಯು ರಾಜ್ಯಭಾಷೆಯಾಗಿಲ್ಲ. ಜಾರ್ಖಂಡ್ ಬುಡಕಟ್ಟುಗಳ ರಾಜ್ಯವಾದ್ದರಿಂದ ಬಹುತೇಕರು ಆಯಾ ಬುಡಕಟ್ಟು ಭಾಷೆಯನ್ನು ಬಳಸುತ್ತಾರೆಯೇ ಹೊರತು, ಹಿಂದಿ ಮಾತನಾಡುವುದಿಲ್ಲ. ಹಿಂದಿ ಭಾಷೆಯನ್ನಾಡುವ ರಾಜ್ಯಗಳಲ್ಲೂ ಪ್ರಾದೇಶಿಕ ಭಾಷೆ ಬಳಕೆಯಲ್ಲಿದ್ದು, ಹಿಂದಿ ಬಳಕೆಯಲ್ಲಿಲ್ಲ.
ವಾಸ್ತವ ಹೀಗಿರುವಾಗ, ಹಿಂದಿಯನ್ನು ಕಡ್ಡಾಯವಾಗಿ ಬಹುಸಂಖ್ಯಾತರ ಭಾಷೆ ಎನ್ನುವುದು ಮತ್ತು ಹೇರುವುದು ಸರಿಯೇ? ಅದರಲ್ಲೂ ದಕ್ಷಿಣ ರಾಜ್ಯಗಳ ಜನರನ್ನು ಕೇಂದ್ರದ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುವುದು; ಎನ್‌ಇಪಿಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಅವುಗಳ ನ್ಯಾಯಯುತ ಪಾಲನ್ನು ನಿರಾಕರಿಸುವುದು- ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅಪಚಾರವಲ್ಲವೇ? ಸರ್ವಾಧಿಕಾರಿ ಧೋರಣೆಯಲ್ಲವೇ?
ಒಕ್ಕೂಟ ವ್ಯವಸ್ಥೆಯಲ್ಲಿರುವ ನಾವು, ನಮ್ಮ ದೇಶದ ಎಲ್ಲ ರಾಜ್ಯಗಳೂ ಸಮಾನವಾಗಿ ಅಭಿವೃದ್ಧಿ ಹೊಂದಬೇಕು ಎಂಬುದನ್ನು ಒಪ್ಪಿದ್ದೇವೆ. ಇದನ್ನು ಈ ಹಿಂದಿನ ಕೇಂದ್ರ ಸರ್ಕಾರಗಳು ಪಾಲಿಸಿಕೊಂಡು ಬಂದಿವೆ. ಆದರೆ, ಈಗ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ, ಹಿಂದಿ ರಾಜ್ಯಗಳು ಮತ್ತು ದಕ್ಷಿಣದ ಇತರ ಭಾಷಿಕ ರಾಜ್ಯಗಳ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಹಿಂದಿಯನ್ನು ಬಲವಂತವಾಗಿ ಹೇರುತ್ತಿದೆ. ಹಿಂದೂ ರಾಷ್ಟ್ರವನ್ನಾಗಿಸುತ್ತೇವೆ ಎಂದು ಬೊಬ್ಬೆ ಹಾಕುತ್ತಿದೆ. ಇದು ಭಾರತದ ಬಹುತ್ವಕ್ಕೆ, ಬಹುಜನ ಸಂಸ್ಕೃತಿಗೆ ಧಕ್ಕೆಯಲ್ಲವೇ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಹಿಳಾ ದಿನ ಕೇವಲ ಆಚರಣೆ ಮಾತ್ರವಲ್ಲ ಹಿರಿಮೆ
ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಬೇಕಾದ್ದು ಕೇಂದ್ರ ಸರ್ಕಾರದ ಜವಾಬ್ದಾರಿ. ಆದರೆ ಕೇಂದ್ರದ ಎನ್ಇಪಿ, ಯುಜಿಸಿ, ಕ್ಷೇತ್ರ ಪುನರ್ ವಿಂಗಡಣೆಯನ್ನು ಒಪ್ಪಲಿಲ್ಲವೆಂಬ ಕಾರಣಕ್ಕೆ, ಇಡೀ ರಾಜ್ಯದ ಜನರನ್ನು ಅನಾಗರಿಕರು ಎನ್ನುವುದು, ಅಕ್ಷಮ್ಯ ಅಪರಾಧ.
ಪ್ರಧಾನಿ ಮೋದಿಯಾಗಲಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಗಲಿ, ಮುಖ್ಯಮಂತ್ರಿ ಸ್ಟಾಲಿನ್ ಆಗಲಿ, ಇಲ್ಲಿ ಯಾರೂ ಮುಖ್ಯರಲ್ಲ. ದೇಶವೆಂದರೆ ಮಣ್ಣಲ್ಲ. ದೇಶದ ಜನರ ಕುರಿತು ಕ್ಷುಲ್ಲಕವಾಗಿ ಮಾತನಾಡುವವರು ಮನುಷ್ಯರೂ ಅಲ್ಲ.
