ಈ ದಿನ ಸಂಪಾದಕೀಯ | ಸರ್ಕಾರಕ್ಕೆ ನೂರು, ಸಮಸ್ಯೆ ನೂರಾರು

Date:

Advertisements
ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸರ್ಕಾರದ ಕಾರ್ಯಕ್ರಮಗಳ ಮೂಲಕ ತಲುಪಬೇಕೆಂಬ ಆಶಯವನ್ನೇನೋ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಂದಿದ್ದಾರೆ. ಆದರೆ, ಸಚಿವ ಸಂಪುಟ ಸಹೋದ್ಯೋಗಿಗಳಲ್ಲಿ ಅದಕ್ಕೆ ಬೇಕಾದ ಒಳನೋಟ, ದೂರದೃಷ್ಟಿ ಕಾಣದಾಗಿದೆ. ಭ್ರಷ್ಟಾಚಾರಮುಕ್ತ ಆಡಳಿತ ಎನ್ನುವುದು ಮಾಧ್ಯಮಗಳ ಹೇಳಿಕೆಗಳಿಗಷ್ಟೇ ಸೀಮಿತವಾಗಿದೆ.

ಭಾರತೀಯ ಜನತಾ ಪಕ್ಷ ಬಿತ್ತಿದ ಬೆಂಕಿ ಮಳೆ ನಾಡನ್ನು ಸುಡುವ ಮುನ್ನ ಎಚ್ಚೆತ್ತುಕೊಂಡ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಮತ್ತು ಭರವಸೆಯನ್ನಿಟ್ಟು 135 ಅಭ್ಯರ್ಥಿಗಳನ್ನು ಗೆಲ್ಲಿಸಿ ಪೂರ್ಣ ಬಹುಮತದ ಸುಭದ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟರು. ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ, ಸಂಘಟನಾ ಚತುರ ಡಿ.ಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಇದೇ ಆ. 27ಕ್ಕೆ ನೂರು ದಿನಗಳು ಕಳೆದಿವೆ.

ಸರ್ಕಾರಕ್ಕೆ ನೂರು ದಿನಗಳು ತುಂಬಿದ ಈ ಸಂದರ್ಭದಲ್ಲಿ, ಜನರು ನೀಡಿರುವ ಈ ಅಪೂರ್ವ ಅವಕಾಶವನ್ನು ಕಾಂಗ್ರೆಸ್ ಸರ್ಕಾರ ಸದುಪಯೋಗಪಡಿಸಿಕೊಂಡಿದೆಯೇ; ಜನರ ನಿರೀಕ್ಷೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆಯೇ ಎನ್ನುವ ಪ್ರಶ್ನೆಗಳು ಎದುರಾಗುವುದು ಸಹಜ.

ಜನರ ನಿರೀಕ್ಷೆಗಳನ್ನು ಹುಸಿಗೊಳಿಸದ ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೇರುವ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ಅನ್ನ ಭಾಗ್ಯ, ಶಕ್ತಿ, ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು ಆರ್ಥಿಕ ಮುಗ್ಗಟ್ಟಿನ ನಡುವೆಯೂ ಅನುಷ್ಠಾನಕ್ಕೆ ತಂದಿದೆ. ಉಚಿತ ಸಾರಿಗೆ ವ್ಯವಸ್ಥೆಯ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ದುಡಿಯುವ ಮಹಿಳೆಯರಿಂದಾಗಿ ಆರ್ಥಿಕ ಚಕ್ರ ತಿರುಗಲಾರಂಭಿಸಿದೆ. ಕೇಂದ್ರದ ಅಸಹಕಾರದ ನಡುವೆಯೂ ಹಸಿವು ನೀಗಿಸುವ ಅನ್ನಭಾಗ್ಯ ಬಡವರ ಹೊಟ್ಟೆ ತುಂಬಿಸುತ್ತಿದೆ. ವಿದ್ಯುತ್ ದರ ಏರಿಕೆಯ ಶಾಕ್ ಕೊಡುತ್ತಲೇ ಗೃಹ ಜ್ಯೋತಿ, ಬಡವರ ಬಾಳಲ್ಲಿ ಬೆಳಕು ತರುತ್ತಿದೆ. ಇನ್ನು ಗೃಹಲಕ್ಷ್ಮಿ ಯೋಜನೆಗೆ ಇನ್ನಷ್ಟೇ ಚಾಲನೆ ಸಿಗಬೇಕಿದೆ.

Advertisements

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ವಿವಿಧ ಅಕ್ರಮ, ಹಗರಣಗಳ ತನಿಖೆಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶ ಮಾಡಿದೆ. ಇದನ್ನು ಹೊರತುಪಡಿಸಿದರೆ ಈ ನೂರು ದಿನಗಳಲ್ಲಿ ಸರ್ಕಾರದ ಸಾಧನೆ ಎಂಬ ಹೆಗ್ಗರುತು ಅಷ್ಟೇನೂ ಕಾಣಸಿಗದು. ಬಜೆಟ್‌ನಲ್ಲಿ ಘೋಷಿಸಿದ್ದ ಹಲವು ಯೋಜನೆಗಳು ಅನುದಾನದ ಕೊರತೆಯಿಂದಾಗಿ ಹೇಳಿಕೆಗಳಿಗಷ್ಟೇ ಸೀಮಿತವಾಗಿವೆ. ಆ ಅನುದಾನಗಳ ಕೊರತೆಯಿಂದಾಗಿಯೋ, ಕಾಂಗ್ರೆಸ್ ಪಕ್ಷದ ಜೋಭದ್ರಗೇಡಿತನದಿಂದಾಗಿಯೋ, ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತು ದಿನೇಶ್ ಗುಂಡೂರಾವ್ ರಂತಹ ಉತ್ಸಾಹಿಗಳು ಕೊಂಚ ಚುರುಕಾಗಿ ಸರ್ಕಾರವನ್ನು ಜೀವಂತವಾಗಿಟ್ಟರೆ, ಹೆಚ್ಚಿನವರು ವಿರೋಧಿಗಳಿಗೆ ಉತ್ತರ ಕೊಡುವುದಷ್ಟೇ ಮಂತ್ರಿಗಿರಿ ಎಂದು ತಿಳಿದಂತಿದೆ. 

ಬಹುಮತ ಗಳಿಸಿದ ಕಾಂಗ್ರೆಸ್ ಪಕ್ಷದಲ್ಲಿ ಗೆದ್ದ ಶಾಸಕರೆಲ್ಲರಿಗೂ ಮಂತ್ರಿಯಾಗುವಾಸೆ, ಆಗದಿದ್ದಾಗ ಬಂಡಾಯ, ಭಿನ್ನಮತ ಸಹಜ. ಆ ನಿಟ್ಟಿನಲ್ಲಿ ಹಿರಿಯರಾದ ಬಿ.ಆರ್. ಪಾಟೀಲ್, ಬಿ.ಕೆ. ಹರಿಪ್ರಸಾದ್, ರಾಯರೆಡ್ಡಿ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಟೀಕೆಗಿಳಿದದ್ದು, ಸರ್ಕಾರಕ್ಕೆ ಇರುಸು ಮುರುಸುಂಟು ಮಾಡಿದೆ. ಭಿನ್ನಮತವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಸರ್ಕಾರ, ರಾಜಕೀಯ ಕಾರ್ಯದರ್ಶಿ, ಕಾನೂನು ಸಲಹೆಗಾರ, ದೆಹಲಿ ಪ್ರತಿನಿಧಿ, ಆಪ್ತ ಸಲಹೆಗಾರರೆಂಬ ಹುದ್ದೆಗಳನ್ನು ಸೃಷ್ಟಿಸಿ, ನೇಮಿಸಿ, ಸಚಿವ ಸ್ಥಾನಮಾನ ಕಲ್ಪಿಸಿ, ಅನಗತ್ಯ ಖರ್ಚುವೆಚ್ಚಗಳಿಗೆ ಆಸ್ಪದ ಕೊಟ್ಟಿದ್ದು ಸಾರ್ವಜನಿಕ ವಲಯದಲ್ಲಿ ಟೀಕೆಗೂ ಗುರಿಯಾಗಿದೆ. 

ಕಾಂಗ್ರೆಸ್ ಪಕ್ಷ ಅಧಿಕಾರಿಕ್ಕೇರಿ ಆಡಳಿತ ಯಂತ್ರಕ್ಕೆ ಚಾಲನೆ ಕೊಡುತ್ತಿದ್ದಂತೆ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ಲಂಚ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಹೊಸ ಸರ್ಕಾರ ರಚನೆಯಾದಾಗ ಅಧಿಕಾರಿಗಳ ವರ್ಗಾವಣೆ ಸಹಜ ಎಂದರೂ, ವರುಣಾ ಕ್ಷೇತ್ರದ ಪುಢಾರಿಗಳಿಂದಾಗಿ ಸಿಎಂ ಸಹಿ ಕೂಡ ದುರುಪಯೋಗವಾಗಿದ್ದು, ವರ್ಗಾವಣೆ ದಂಧೆಯ ರೂಪ ಪಡೆದದ್ದು, ವಿರೋಧ ಪಕ್ಷಗಳಿಗೆ ಅವಕಾಶ ಕಲ್ಪಿಸಿಕೊಟ್ಟಿತು. ಇದರ ಬೆನ್ನಲ್ಲೆ ಹಿಂದಿನ ಸರ್ಕಾರದ ಅವಧಿಯಲ್ಲಾದ ಕಾಮಗಾರಿಗಳ ಹಣ ಬಿಡುಗಡೆ ಮಾಡಲು ಗುತ್ತಿಗೆದಾರರಿಂದ ಕಮಿಷನ್ ಎಂಬ ಗುರುತರ ಆರೋಪಕ್ಕೆ ಕಾಂಗ್ರೆಸ್ ಸರ್ಕಾರವೂ ಗುರಿಯಾಗಿದೆ.

ಹಿಂದಿನ ಸರ್ಕಾರದ ನೀತಿ-ನಿಲುವುಗಳನ್ನು ಮೈಗೂಡಿಸಿಕೊಂಡಿದ್ದ; ಪಿಎಸ್ಐ ಹಗರಣ, 40% ಕಮಿಷನ್, ಟಿಪ್ಪು ವಿರುದ್ಧದ ದ್ವೇಷ ಭಾಷಣ, ಸಿದ್ದರಾಮಯ್ಯರನ್ನು ಹೊಡೆದುಹಾಕಿ ಎಂಬ ಕೊಲೆ ಪ್ರಚೋದನೆಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದ ಅಂದಿನ ಸರ್ಕಾರದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಎಂಬ ಐಎಎಸ್ ಅಧಿಕಾರಿಯನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಮುಂದುವರೆಸಿದ್ದು; ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ಹತ್ತು ಯೋಜನಾ ಪ್ರಾಧಿಕಾರಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದು; ರಾಷ್ಟ್ರೋತ್ಥಾನ ಪರಿಷತ್ತಿಗೆ ಗೋಮಾಳ ಮಂಜೂರು ಮಾಡಿದ ಎನ್. ಜಯರಾಮ್ ಎಂಬ ಅಧಿಕಾರಿಗೆ ಮತ್ತೆ ಮಣೆ ಹಾಕಿದ್ದು- ಬಿಜೆಪಿಗೂ ಕಾಂಗ್ರೆಸ್ ಸರ್ಕಾರಕ್ಕೂ ಏನಾದರೂ ವ್ಯತ್ಯಾಸವಿದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. 

ಮುಖ್ಯಮಂತ್ರಿಗಳ ಸುತ್ತಮುತ್ತ ಮತ್ತದೇ ಜಾತಿಬಾಂಧವರು ಕೋಟೆ ಕಟ್ಟುತ್ತಿರುವುದು; ಸ್ವಜಾತಿ ಪ್ರೇಮದ ಫಲವಾಗಿ, ತಮ್ಮ ಆಪ್ತ ಬಳಗಕ್ಕೆ ಕೆಲವರನ್ನು ನೇಮಿಸಿಕೊಂಡಿರುವುದು- ಮುಖ್ಯಮಂತ್ರಿಗಳು ಸದಾ ಹೇಳುವ ಸರ್ವ ಜನಾಂಗದ ಶಾಂತಿಯ ತೋಟದ ಆಶಯವನ್ನೇ ಅಣಕಿಸುವಂತಿದೆ.

ಇನ್ನು ಕಾಂಗ್ರೆಸ್ ಪಕ್ಷ ಬಹುಮತ ಗಳಿಸುವಲ್ಲಿ ದಲಿತರು, ಅಲ್ಪಸಂಖ್ಯಾತರ ಪಾತ್ರವಿರುವುದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯರ ಆಯ್ಕೆಯಲ್ಲಿ ಅರ್ಹ ಅಲ್ಪಸಂಖ್ಯಾತರನ್ನು, ದಲಿತರನ್ನು ಕಡೆಗಣಿಸಿದ್ದು ಆ ಸಮುದಾಯಗಳಿಗೆ ಮಾಡಿದ ಮಹಾ ಮೋಸ. ನಿವೃತ್ತ ಅಧಿಕಾರಿ ಸುಧಾಮ್ ದಾಸ್ ಅವರನ್ನು ಎಂಎಲ್ಸಿ ಮಾಡಿದ್ದು ಸರಿಯಲ್ಲ ಎಂದು ನಾಲ್ವರು ಸಚಿವರು ಹೈಕಮಾಂಡಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದರೂ, ಇವರಾರೂ ದಮನಿತ ಸಮುದಾಯಗಳತ್ತ ತಿರುಗಿಯೂ ನೋಡದವರು. ಒಂದು ಕಡೆ ಅರ್ಹರಿಗೆ ಅನ್ಯಾಯ, ಮತ್ತೊಂದು ಕಡೆ ತಮ್ಮ ಸಮುದಾಯದಿಂದ ಸಚಿವರಾದವರಿಂದ ಕಡೆಗಣನೆ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಮಸ್ಯೆ ತರಲಿದೆ ಎಂಬ ಮಾತು ದಲಿತ-ದಮನಿತರ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸರ್ಕಾರದ ಕಾರ್ಯಕ್ರಮಗಳ ಮೂಲಕ ತಲುಪಬೇಕೆಂಬ ಆಶಯವನ್ನೇನೋ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಂದಿದ್ದಾರೆ. ಆದರೆ, ಸಚಿವ ಸಂಪುಟ ಸಹೋದ್ಯೋಗಿಗಳಲ್ಲಿ ಅದಕ್ಕೆ ಬೇಕಾದ ಒಳನೋಟ, ದೂರದೃಷ್ಟಿ ಕಾಣದಾಗಿದೆ. ಭ್ರಷ್ಟಾಚಾರಮುಕ್ತ ಆಡಳಿತ ಎನ್ನುವುದು ಮಾಧ್ಯಮಗಳ ಹೇಳಿಕೆಗಳಿಗಷ್ಟೇ ಸೀಮಿತವಾಗಿದೆ. ನಾಡಿನ ಜನತೆ ನೆರೆ-ಬರಕ್ಕೆ ತುತ್ತಾಗಿ ತತ್ತರಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ನಿದ್ರೆಯಿಂದ ಎದ್ದು ಆರಿಸಿ ಕಳಿಸಿದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಬೇಕಾಗಿದೆ. ಇಲ್ಲದಿದ್ದರೆ, ಬಿಜೆಪಿಗಾದ ಗತಿಯೇ ಕಾಂಗ್ರೆಸ್‌ಗೂ ಕಾದಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X