ಈ ದಿನ ಸಂಪಾದಕೀಯ | ಮಂತ್ರಾಲಯದಲ್ಲಿ ರಾಮನ ವಿಗ್ರಹ; ಆಂಧ್ರದಲ್ಲಿ ಬಿಜೆಪಿಯ ಪ್ರತಿಮಾ ರಾಜಕಾರಣ

Date:

Advertisements

ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಕೆಲವು ರಾಜ್ಯಗಳಲ್ಲಿ ಅದರ ಜೊತೆಯಲ್ಲೇ ವಿಧಾನಸಭಾ ಚುನಾವಣೆಗಳೂ ನಡೆಯಲಿವೆ. ಅಂಥ ರಾಜ್ಯಗಳಲ್ಲಿ ಆಂಧ್ರಪ್ರದೇಶವೂ ಒಂದು. ಆಂಧ್ರದಲ್ಲಿ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಬಿಜೆಪಿ ಹೊಸ ತಂತ್ರ ಹೂಡಿದೆ. ಶ್ರೀರಾಮನ ಬೃಹತ್ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಬಿಜೆಪಿಯು ಪ್ರತಿಮಾ ರಾಜಕಾರಣಕ್ಕೆ ಮುಂದಾಗಿದೆ. 

ಕರ್ನೂಲ್ ಜಿಲ್ಲೆಯ ಮಂತ್ರಾಲಯದಲ್ಲಿ 108 ಅಡಿಯ ರಾಮನ ಪ್ರತಿಮೆ ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ವರ್ಚುಯಲ್ ಆಗಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಸನಾತನ ಧರ್ಮವನ್ನು ಮತ್ತು ಅದರ ಮೌಲ್ಯಗಳನ್ನು ಹರಡುವುದರಲ್ಲಿ ಈ ಪ್ರತಿಮೆಯು ಒಂದು ಮೈಲಿಗಲ್ಲಾಗಲಿದೆ. ಶತಮಾನಗಳ ಕಾಲ ಇದು ಸನಾತನ ಧರ್ಮದ ಕುರುಹಾಗಿ ಉಳಿಯಲಿದೆ ಮತ್ತು ದೇಶದಲ್ಲಿ ಹಾಗೂ ಜಗತ್ತಿನಲ್ಲಿ ವೈಷ್ಣವ ಧರ್ಮಕ್ಕೆ ಇದು ಬಲ ತುಂಬಲಿದೆ ಎಂದು ಅವರು ಹೇಳಿದ್ದಾರೆ. ₹500 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಮಾಹಿತಿಯನ್ನೂ ಅವರು ನೀಡಿದ್ದಾರೆ. ತುಂಗಭದ್ರಾ ನದಿಯ ದಂಡೆಯ ಮೇಲೆ ಇರುವ ಮಂತ್ರಾಲಯದಲ್ಲಿ 10 ಎಕರೆ ಪ್ರದೇಶದಲ್ಲಿಈ ಯೋಜನೆ ಸಾಕಾರವಾಗಲಿದೆ ಎಂದಿದ್ದಾರೆ ಅಮಿತ್ ಶಾ. ಸ್ವದೇಶ ಮತ್ತು ಸ್ವಧರ್ಮದ ಪುನರ್ ಪ್ರತಿಷ್ಠಾಪನೆಗಾಗಿ ಸ್ಥಾಪಿಸಲ್ಪಟ್ಟ ವಿಜಯನಗರದ ಅರಸರ ನೆಲದಲ್ಲಿ ಮತ್ತೊಮ್ಮೆ ಸನಾತನ ಧರ್ಮಕ್ಕೆ ಬಲ ತುಂಬುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಅಮಿತ್ ಶಾ ಅವರ ಹೇಳಿಕೆಯಲ್ಲಿಯೇ ಅವರ ಉದ್ದೇಶ ಏನು ಅನ್ನುವುದು ಸ್ಪಷ್ಟವಾಗಿದೆ. ಸನಾತನ ಧರ್ಮವನ್ನು ಪ್ರಚುರಪಡಿಸುವ ಅವರ ಗುರಿ ಈಗ ಗುಪ್ತವಾಗೇನೂ ಉಳಿದಿಲ್ಲ. ಅವರು ಹೇಳದೇ ಇರುವುದು, ಬಿಜೆಪಿಯು ಈಗ ಏಕೆ ಆಂಧ್ರಪ್ರದೇಶದಲ್ಲಿ ರಾಮನ ಪ್ರತಿಮೆಯನ್ನು ಸ್ಥಾಪಿಸಲು ಹೊರಟಿದೆ ಎನ್ನುವುದರ ಬಗ್ಗೆ. ಅದು ತುಂಬಾ ಸರಳ; ಮುಂದಿನ ವರ್ಷ ನಡೆಯಲಿರುವ ಚುನಾವಣೆ. ತನ್ನ ರಾಜಕೀಯ ಹಿತಾಸಕ್ತಿ ಈಡೇರಿಸಿಕೊಳ್ಳಲು ಬಿಜೆಪಿ ಆಂಧ್ರದಲ್ಲಿ, ಅದೂ ರಾಘವೇಂದ್ರರ ದೇವಾಲಯದಿಂದ ಪ್ರಸಿದ್ಧವಾಗಿರುವ ಮಂತ್ರಾಲಯದಲ್ಲಿ, ರಾಮನ ವಿಗ್ರಹ ಸ್ಥಾಪನೆ ಮಾಡಲು ಹೊರಟಿದೆ.                

Advertisements

ಬಿಜೆಪಿ ಚುನಾವಣೆಯ ದೃಷ್ಟಿಯಿಂದಲೇ ವಿವಿಧ ರಾಜ್ಯಗಳಲ್ಲಿ ಆಯಾ ಪ್ರದೇಶ ಮತ್ತು ಸಂದರ್ಭಕ್ಕೆ ತಕ್ಕಂತೆ ಪ್ರತಿಮೆಗಳನ್ನು ಸ್ಥಾಪಿಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ, ಉತ್ತರ ಪ್ರದೇಶದ ಸರಯೂ ನದಿಯ ದಂಡೆಯಲ್ಲಿ 221 ಅಡಿಯ ರಾಮನ ಪ್ರತಿಮೆ, ಗುಜರಾತ್‌ನಲ್ಲಿ ಸುಮಾರು 600 ಅಡಿಯ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ಸ್ಥಾಪನೆ ಮಾಡಿ, ಅಲ್ಲಿನ ಜನರನ್ನು ಸೆಳೆಯಲು ಯತ್ನಿಸಿದ ಪಕ್ಷ ಬಿಜೆಪಿ.

ಕರ್ನಾಟಕದಲ್ಲಿಯೂ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳ ಮುಂಚೆ 108 ಅಡಿಯ ಕೆಂಪೇಗೌಡ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರೇ ಬಂದಿದ್ದರು. ಈ ಮೂಲಕ ಹಳೇ ಮೈಸೂರು ಭಾಗದ ಒಕ್ಕಲಿಗರನ್ನು ಸೆಳೆಯುವುದು ಬಿಜೆಪಿ ಉದ್ದೇಶವಾಗಿತ್ತು.

ವಿಧಾನಸಭೆ, ಲೋಕಸಭೆ ಚುನಾವಣೆಗಳ ಹಿನ್ನೆಲೆಯಲ್ಲಷ್ಟೇ ಅಲ್ಲ.. ಕ್ಯಾಂಪಸ್ ರಾಜಕಾರಣಕ್ಕೂ ಪ್ರತಿಮಾ ರಾಜಕಾರಣವನ್ನು ತಂದ ಕೀರ್ತಿ ಬಿಜೆಪಿಯದ್ದು. ದೆಹಲಿಯ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ 2019ರ ಕ್ಯಾಂಪಸ್ ಚುನಾವಣೆ ಇನ್ನೇನು ಕೆಲವೇ ವಾರ ಇದೆ ಎನ್ನುವಾಗ ವಿ ಡಿ ಸಾವರ್ಕರ್, ಸುಭಾಷ್ ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಪ್ರತಿಮೆಗಳನ್ನು ಸ್ಥಾಪಿಸಲಾಗಿತ್ತು. ಅದು ವಿವಾದದ ಸ್ವರೂಪವನ್ನು ಪಡೆದುಕೊಂಡಿತ್ತು.

ಭಾರತೀಯ ಜನತಾ ಪಕ್ಷಕ್ಕೆ ಪ್ರತಿಮಾ ರಾಜಕಾರಣ ಹೊಸದೇನಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದನ್ನೇ ತನ್ನ ಅಸ್ತಿತ್ವದ ಪ್ರಶ್ನೆಯನ್ನಾಗಿ ಮಾಡಿಕೊಂಡು ಬೆಳವಣಿಗೆ ಕಂಡ ಪಕ್ಷ ಅದು. ಪಕ್ಷ ಬೃಹತ್ ಆಗಿ ಬೆಳೆದು, ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರವೂ, ದಶಕಗಳು ಸರಿದರೂ, ಅದರ ಮೂಲ ಚಿಂತನೆಯಲ್ಲಿ ಏನೂ ಬದಲಾಗಿಲ್ಲ. ಅಭಿವೃದ್ಧಿಯ ಅಜೆಂಡಾ ಬಿಜೆಪಿ ಪ್ರಣಾಳಿಕೆಯಲ್ಲಿ ಸ್ಥಾನ ಪಡೆದಿಲ್ಲ. ಜನರ ಬದುಕಿನ ಕಷ್ಟಗಳಿಗೆ, ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಸೋತಿರುವ ಬಿಜೆಪಿ, ರಾಮ, ಕೃಷ್ಣ, ಹನುಮಂತ ಮುಂತಾದವರ ನೆಪದಲ್ಲಿ ಧರ್ಮದ ಅಮಲನ್ನು ತುಂಬುವ ಕೆಲಸವನ್ನು ಮುಂದುವರೆಸುತ್ತಿದೆ. 

ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ನಂತರ ಆಂಧ್ರಪ್ರದೇಶ ರೈತರ ಆತ್ಮಹತ್ಯೆಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಅದರಲ್ಲೂ ರಾಯಲಸೀಮೆಯ ಚಿತ್ತೂರು, ಕರ್ನೂಲು, ಅನಂತಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತ್ಯೇಕ ರಾಜ್ಯವಾದ ನಂತರ ಆಂಧ್ರಪ್ರದೇಶ ಆರ್ಥಿಕ ಮುಗ್ಗಟ್ಟಿನಿಂದ ಪರದಾಡುತ್ತಿದೆ. ವಿಶೇಷ ಆರ್ಥಿಕ ಪ್ಯಾಕೇಜ್‌ಗಾಗಿ ಹಾಗೂ ವಿಶೇಷ ಸ್ಥಾನಮಾನಕ್ಕಾಗಿ ಆ ರಾಜ್ಯ ಕೇಂದ್ರ ಸರ್ಕಾರದ ಮೇಲೆ ನಿರಂತರ ಮನವಿ ಸಲ್ಲಿಸುತ್ತಾ, ಒತ್ತಡ ಹೇರುತ್ತಲೇ ಇದೆ. ಇಷ್ಟಾದರೂ ಅಲ್ಲಿನ ಜನರ ಕಷ್ಟಗಳಿಗೆ ಇದುವರೆಗೆ ಸ್ಪಂದಿಸದ, ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡದ ಮೋದಿ, ಅಮಿತ್ ಶಾ ಅವರು, ಅಲ್ಲಿ ಸನಾತನ ಧರ್ಮದ ಪುನರುತ್ಥಾನಕ್ಕೆ ಮುಂದಾಗಿದ್ದಾರೆ.     

ಪ್ರತಿಮೆಗಳ ಮೂಲಕ ರಾಜಕೀಯ ಸಂದೇಶ ರವಾನಿಸುವುದು ಬಿಜೆಪಿಯ ಹಳೆಯ ಶೈಲಿ. ಅದು ಈಗಾಗಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಫಲವಾಗಿರುವುದು ಕಣ್ಣಮುಂದೆಯೇ ಇದೆ. ಆಂಧ್ರದಲ್ಲೂ ಇದೇ ಪುನರಾವರ್ತನೆಯಾಗುವುದು ನಿಶ್ಚಿತ ಎನ್ನಲಾಗುತ್ತಿದೆ. ಬಿಜೆಪಿ ಏನೇ ಕಸರತ್ತು ತಂತ್ರ ಕುತಂತ್ರ ಮಾಡಿದರೂ ಆಂಧ್ರದ ಜನ ಬಿಜೆಪಿಯನ್ನು ನಂಬುವುದಿಲ್ಲ. ಸದ್ಯದ ಅಲ್ಲಿನ ರಾಜಕೀಯ ಪರಿಸ್ಥಿತಿಯೇ ಇದನ್ನು ಹೇಳುತ್ತಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X