ಈ ದಿನ ಸಂಪಾದಕೀಯ | ಪ್ರಶ್ನಿಸುವವರಿಗೆ ನೈತಿಕತೆ ಇದ್ದರೆ ಪ್ರಶ್ನೆಗೆ ಬೆಲೆ, ಅಲ್ಲವೇ?

Date:

Advertisements
ಸರ್ಕಾರದ ನೂರೆಂಟು ಹಳವಂಡಗಳನ್ನು, ಹಗರಣಗಳನ್ನು ಸದನದಲ್ಲಿ ಎದ್ದುನಿಂತು ಪ್ರಶ್ನಿಸಬೇಕಾದ ವಿರೋಧ ಪಕ್ಷಗಳು, ಪ್ರಶ್ನಿಸಲು ಬೇಕಾದ ನೈತಿಕತೆಯನ್ನೇ ಕಳೆದುಕೊಂಡಿವೆ. ಅಧಿಕಾರದಲ್ಲಿದ್ದಾಗ ಹಗರಣಗಳಲ್ಲಿ ಮುಳುಗೆದ್ದು, ಹೊಂದಾಣಿಕೆ ರಾಜಕಾರಣಕ್ಕೆ ಒಗ್ಗಿಹೋಗಿವೆ. ಪ್ರಶ್ನಿಸುವ ಬದಲಿಗೆ, ಕೇಸರಿ ಶಾಲು ಧರಿಸುವುದು, ಜೈ ಶ್ರೀರಾಮ್ ಎಂದು ಕೂಗುವುದು ಮಕ್ಕಳಾಟದಂತೆ ಕಂಡು ಕನಿಕರ ಹುಟ್ಟಿಸುತ್ತಿದೆ. ಇದು, ರಾಜ್ಯದ ಜನತೆಯ ಪಾಲಿಗೆ- ಆಡಳಿತ ಮತ್ತು ವಿರೋಧ ಪಕ್ಷಗಳು ಮಾಡುವ ಮಹಾ ಮೋಸ.

ಫೆ. 12ರಿಂದ ಬಜೆಟ್ ಅಧಿವೇಶನ ಶುರುವಾಗಿದೆ. ಇದು ರಾಜ್ಯದ ಆಗು-ಹೋಗುಗಳನ್ನು ನಿರ್ಧರಿಸುವ ಬಜೆಟ್. ಇದು ಕಾಂಗ್ರೆಸ್ ಪಕ್ಷದ ಸರ್ಕಾರ ಮಂಡಿಸುತ್ತಿರುವ ಎರಡನೇ ಬಜೆಟ್.

ಮೊದಲ ದಿನ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಬರೆದುಕೊಂಡು ಬಂದ ಭಾಷಣವನ್ನು ಓದಿದ್ದಾರೆ. ಯಥಾಪ್ರಕಾರ ಅದನ್ನು ವಿರೋಧಪಕ್ಷಗಳು ವಿರೋಧಿಸಿವೆ. ಅದು ಸುದ್ದಿಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಇದು ಪ್ರತಿವರ್ಷ ನಡೆಯುವ ರಾಜಕೀಯ ನಾಟಕ. ರಾಜ್ಯಪಾಲರು ಆಡಳಿತ ಪಕ್ಷದ ಪರವಾಗಿ ಮಾತನಾಡುವುದು, ವಿರೋಧ ಪಕ್ಷಗಳು ಅದನ್ನು ಉಗ್ರವಾಗಿ ಟೀಕಿಸುವುದು. ಹಾಗೆಯೇ, ರಾಜ್ಯಪಾಲರು ಸಾಮಾನ್ಯವಾಗಿ ಉತ್ತರ ಭಾರತದವರೇ ಆಗಿರುವುದರಿಂದ, ಅವರು ಭಾಷಣವನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಓದುವುದರಿಂದ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್‌ರಿಂದಲೂ ಒಂದು ವಿರೋಧ ಇದ್ದೇ ಇರುತ್ತದೆ.

Advertisements

ಇದನ್ನು ಬಿಟ್ಟು ಬಜೆಟ್ ಬಗ್ಗೆ, ಅದು ರಾಜ್ಯದ ಜನತೆಯ ಮೇಲೆ ಬೀರುವ ಗಂಭೀರ ಪರಿಣಾಮಗಳ ಬಗ್ಗೆ, ಅಂಕಿ-ಅಂಶಗಳನ್ನಿಟ್ಟು ತರ್ಕಬದ್ಧವಾಗಿ ಮಾತನಾಡುವ ಮುತ್ಸದ್ದಿಯನ್ನು ಕನ್ನಡನಾಡು ಕಂಡಿದ್ದಿಲ್ಲ. ಅಕಸ್ಮಾತ್, ಅಂತಹ ವಿದ್ವತ್ತು, ಜ್ಞಾನ, ಅನುಭವವುಳ್ಳ ನಾಯಕರು ಇದ್ದರೂ, ಅವರಿಗೆ ಮಾತನಾಡುವ ಅವಕಾಶ ಸಿಗುವುದಿಲ್ಲ. ಇದು ನಮ್ಮ ರಾಜಕೀಯ ವ್ಯವಸ್ಥೆ.

ಇದ್ದುದರಲ್ಲಿಯೇ ಅನುಭವ, ಹಿರಿತನ ಮತ್ತು ಬುದ್ಧಿವಂತಿಕೆಯುಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಬಜೆಟ್ ಚಾಂಪಿಯನ್. ಕಳೆದ ವರ್ಷ ಆಗತಾನೆ ಅಧಿಕಾರಕ್ಕೆ ಬಂದಿದ್ದರೂ, ನಮ್ಮದೇ ಪೂರ್ಣ ಪ್ರಮಾಣದ ಬಜೆಟ್ ಎಂದ ಸಿದ್ದರಾಮಯ್ಯನವರು, 3,27,747 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿ, ಇದು ನಮ್ಮ ಗ್ಯಾರಂಟಿ ಬಜೆಟ್, ಅಹಿಂದ ಬಜೆಟ್ ಎಂದು ಘೋಷಿಸಿದ್ದರು. ಅದು ನಿಜವಾಗಲು ಗ್ಯಾರಂಟಿ ಪಾಲಾಯಿತಾ ಅಥವಾ ಅಹಿಂದ ವರ್ಗಕ್ಕೆ ಬಳಕೆಯಾಗಿ ಅಭಿವೃದ್ಧಿ ಕಂಡಿತಾ- ವಿರೋಧ ಪಕ್ಷಗಳು ಹೇಳಬೇಕು.

ಈ ಬಾರಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಒಳ್ಳೆಯ ರಾಜಕೀಯ ಸಂಬಂಧವನ್ನು ಇಟ್ಟುಕೊಂಡಿರುವ ಮುಖ್ಯಮಂತ್ರಿಗಳು, ಅವರು ಕೇಂದ್ರದಿಂದ ನಿಯೋಜನೆಗೊಂಡವರು ಎಂದು ಗೊತ್ತಿದ್ದರೂ, ಅವರಿಂದಲೇ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಮಾತನಾಡಿಸಿದ್ದಾರೆ. ರಾಜ್ಯ ಭೀಕರ ಬರಗಾಲಕ್ಕೆ ತುತ್ತಾದರೂ, ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಜನತೆಯನ್ನು ಸಂಕಷ್ಟದಿಂದ ಪಾರು ಮಾಡಿದ ಬಗೆಯನ್ನು ಬಹಳ ನಾಜೂಕಾಗಿ ನಿಭಾಯಿಸಿದ್ದಾರೆ.

ಇದು ನಿಜಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚತುರ ನಡೆ. ಏಕೆಂದರೆ, ಪಕ್ಕದ ತಮಿಳುನಾಡಿನಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಬಂಧ ಹಳಸಿಕೊಂಡಿದೆ. ರಾಜ್ಯಪಾಲರನ್ನು ಗೋಡ್ಸೆ ಅನುಯಾಯಿ ಎಂದು ಸಭಾಧ್ಯಕ್ಷರೇ ಹೇಳುವಷ್ಟು ಅತಿರೇಕಕ್ಕೆ ಹೋಗಿದೆ.

ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್. ರವಿಯವರು ಕೂಡ ಕೇಂದ್ರದಿಂದ ನಿಯೋಜನೆಗೊಂಡವರು. ಮುಖ್ಯಮಂತ್ರಿ ಸ್ಟಾಲಿನ್ ಮತ್ತು ರಾಜ್ಯಪಾಲ ರವಿಯವರ ನಡುವೆ ಆಗಾಗ್ಗೆ ಜಟಾಪಟಿ ಜರುಗುತ್ತದೆ. ಮೊನ್ನಿನ ಬಜೆಟ್ ಅಧಿವೇಶನದಲ್ಲಿ, ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಬೇಕಾದ ರಾಜ್ಯಪಾಲರು ಸರ್ಕಾರದ ಪರವಾಗಿ ಮಾತನಾಡದೆ ಮೌನಕ್ಕೆ ಜಾರಿದ್ದಾರೆ. ಜೊತೆಗೆ, ‘ರಾಜ್ಯಪಾಲರಿಗೆ ಸಿದ್ಧಪಡಿಸಿ ಕೊಟ್ಟಿದ್ದ ಭಾಷಣದಲ್ಲಿ ತಪ್ಪುದಾರಿಗೆ ಎಳೆಯುವ ಸಂಗತಿಗಳು ಇದ್ದವು. ಅವುಗಳನ್ನು ಓದಿದ್ದರೆ ಸಂವಿಧಾನವನ್ನು ನಗೆಪಾಟಲಿಗೆ ಈಡುಮಾಡಿದಂತೆ ಆಗುತ್ತಿತ್ತು’ ಎಂದು ರಾಜ್ಯಪಾಲ ರವಿ ಅವರ ಕಚೇರಿ ತಿಳಿಸಿದೆ.

ಕರ್ನಾಟಕದ ರಾಜ್ಯಪಾಲರ ಭಾಷಣವನ್ನು ಹಾಗೂ ತಮಿಳುನಾಡಿನ ರಾಜ್ಯಪಾಲರ ನಡೆಯನ್ನು ಗಮನಿಸಿದ ರಾಜ್ಯ ಬಿಜೆಪಿ-ಜೆಡಿಎಸ್ ನಾಯಕರು ಉರಿದುರಿದು ಹೋಗುತ್ತಿದ್ದಾರೆ. ವಿರೋಧ ಪಕ್ಷಗಳು ನಿಜಕ್ಕೂ ಜನಪರವಾಗಿದ್ದರೆ, ಬಜೆಟ್ ಅಧಿವೇಶನ ಅವರಿಗೆ ಸಿಕ್ಕ ಅಪೂರ್ವ ಅವಕಾಶ. ಅದನ್ನು ಅವರು ಬಳಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಸರ್ಕಾರವನ್ನು ಮುಜುಗರಕ್ಕೆ ಈಡುಮಾಡುವ ಹಗರಣಗಳನ್ನು ಹೊರಗೆಳೆದು, ನಾಡಿನ ಜನತೆಯ ವಿಶ್ವಾಸ ಗಳಿಸಬಹುದು.

ಈ ಹಿಂದೆ ಕಾಂಗ್ರೆಸ್, 40 ಪರ್ಸೆಂಟ್ ಕಮಿಷನ್, ಪೇ ಸಿಎಂ ಎಂದು ದೊಡ್ಡ ಮಟ್ಟದಲ್ಲಿ ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆದು ಬೀದಿಯಲ್ಲಿ ನಿಲ್ಲಿಸಿತ್ತು. ಚುನಾವಣೆಯಲ್ಲಿ ಅದರ ಲಾಭ ಪಡೆದಿತ್ತು. ಅಧಿಕಾರಕ್ಕೂ ಬಂದಿತ್ತು. ಈಗ ಅದೇ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಕಾಂಗ್ರೆಸ್ ಸರ್ಕಾರದ ವಿರುದ್ಧವೂ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಇದಲ್ಲದೆ ವರ್ಗಾವಣೆ ದಂಧೆಯ ರೂಪ ಪಡೆದಿರುವುದು, ಭೀಕರ ಬರಗಾಲ ಬಂದೆರಗಿರುವುದು, ಬರ ಪರಿಹಾರ ನೀಡದಿರುವುದು, ಗ್ಯಾರಂಟಿಗೆ ಹಣ ಹರಿದು ಅಭಿವೃದ್ಧಿ ಯೋಜನೆಗಳು ಕುಂಠಿತಗೊಂಡಿರುವುದು, ಮಂಡ್ಯದ ಹನುಮಧ್ವಜ, ಹಾನಗಲ್ ಅತ್ಯಾಚಾರ, ಕುಡಿಯುವ ನೀರಿನ ಸಮಸ್ಯೆ, ಜನರ ಗುಳೆ, ಲ್ಯಾಪ್ ಟಾಪ್ ಖರೀದಿ ಅಕ್ರಮ, ಎನ್ಇಪಿ-ಎಸ್ಇಪಿ ಗೊಂದಲ, ಕೆಪಿಎಸ್‌ಸಿ ಕಾಳಗ… ಒಂದಾ ಎರಡಾ?

ಕೊರತೆ ಕಾಣುತ್ತಿರುವುದು, ವಿರೋಧ ಪಕ್ಷಗಳಲ್ಲಿ. ಸರ್ಕಾರದ ನೂರೆಂಟು ಹಳವಂಡಗಳನ್ನು, ಹಗರಣಗಳನ್ನು ಸದನದಲ್ಲಿ ಎದ್ದುನಿಂತು ಪ್ರಶ್ನಿಸಬೇಕಾದ ವಿರೋಧ ಪಕ್ಷಗಳು, ಪ್ರಶ್ನಿಸಲು ಬೇಕಾದ ನೈತಿಕ ಹಕ್ಕನ್ನೇ ಕಳೆದುಕೊಂಡಿವೆ. ಅಧಿಕಾರದಲ್ಲಿದ್ದಾಗ ಹಗರಣಗಳಲ್ಲಿ ಮುಳುಗೆದ್ದು, ಹೊಂದಾಣಿಕೆ ರಾಜಕಾರಣಕ್ಕೆ ಒಗ್ಗಿಹೋಗಿವೆ. ಪ್ರಶ್ನಿಸುವ ಬದಲಿಗೆ, ಕೇಸರಿ ಶಾಲು ಧರಿಸುವುದು, ಜೈ ಶ್ರೀರಾಮ್ ಎಂದು ಕೂಗುವುದು ಮಕ್ಕಳಾಟದಂತೆ ಕಂಡು ಕನಿಕರ ಹುಟ್ಟಿಸುತ್ತಿದೆ. ಇದು, ರಾಜ್ಯದ ಜನತೆಯ ಪಾಲಿಗೆ- ಆಡಳಿತ ಮತ್ತು ವಿರೋಧ ಪಕ್ಷಗಳು ಮಾಡುವ ಮಹಾ ಮೋಸ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X