ಕ್ರಿಕೆಟ್ ಎನ್ನುವುದು ಇವತ್ತಿನ ದಿನಗಳಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟುಳ್ಳ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಶ್ರೀಮಂತರ ಆಟವಾಗಿರುವುದರ ನಡುವೆಯೇ ಬಡವರ ಮಕ್ಕಳ ಬೆರಗಿನ ಆಟಕ್ಕೂ ಅವಕಾಶ ಸಿಕ್ಕಿದೆ. ಕ್ರೀಡಾ ಕ್ಷೇತ್ರಕ್ಕೂ ಜಾತಿಯ ಸೋಂಕು ತಗುಲಿದೆ. ಅದು ಅಯೋಗ್ಯರಿಗೆ ಅವಕಾಶ-ಅನುಕೂಲವನ್ನೂ ಕಲ್ಪಿಸಿಕೊಡುತ್ತಿದೆ. ಅಮಿತ್ ಶಾ ಮಗ, ಮೊದ್ಮಣಿ ಜೈ ಶಾ ಮುಂದೆ ನಡುಬಗ್ಗಿಸಿ ನಿಲ್ಲುವಂತಹ ಸಂದರ್ಭವನ್ನೂ ಸೃಷ್ಟಿಸುತ್ತಿದೆ.
ಭಾರತದಲ್ಲಿ ಕ್ರಿಕೆಟ್ ಇಂದು ಕೇವಲ ಆಟವಾಗಿ ಉಳಿದಿಲ್ಲ. ಕ್ರಿಕೆಟ್ ಎನ್ನುವುದು ಇವತ್ತಿನ ದಿನಗಳಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟುಳ್ಳ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಕ್ರಿಕೆಟ್ ಆಟಗಾರ ರನ್ ಹೊಳೆ ಹರಿಸುವ, ವಿಕೆಟ್ ಉರುಳಿಸುವ, ಕ್ಯಾಚ್ ಹಿಡಿಯುವ ಮೆಷಿನ್ ಆಗಿದ್ದಾನೆ. ಪ್ರೇಕ್ಷಕರು ಹುಚ್ಚು ಅಭಿಮಾನಿಗಳಾಗಿ, ದೇಶಪ್ರೇಮಿಗಳಾಗಿ ರೂಪಾಂತರಗೊಂಡಿದ್ದಾರೆ. ಗೆದ್ದರೆ ಹೊಗಳುವ, ಸೋತರೆ ಕೆರಳುವ ಜನ, ಅದನ್ನೊಂದು ಆಟ, ಅಲ್ಲಿ ಸೋಲು-ಗೆಲುವು ಸಾಮಾನ್ಯ ಎನ್ನುವುದನ್ನೇ ಮರೆತಿದ್ದಾರೆ.
ಇಂತಹ ಒತ್ತಡದಲ್ಲಿ ಆಡಬೇಕಾದ ಆಟಗಾರ, ಆಟದ ಸೊಗಸನ್ನು, ಕಲಾತ್ಮಕತೆಯನ್ನು ಕಡೆಗಣಿಸಿ, ತಂತ್ರಗಾರಿಕೆಗೆ ತಲೆಬಾಗಿದ್ದಾನೆ. ಪ್ರೇಕ್ಷಕರು, ಆಯ್ಕೆದಾರರು, ಜಾಹೀರಾತುದಾರರು, ಬೆಟ್ಟಿಂಗ್ ಕಟ್ಟುವವರ ಒತ್ತಡಕ್ಕೆ ಒಳಗಾಗಿ ಜೀವವನ್ನು ಒತ್ತೆಯಿಟ್ಟು ಮೈದಾನಕ್ಕಿಳಿಯಬೇಕಾದ ಸ್ಥಿತಿ ಎದುರಾಗಿದೆ.
ಇಂತಹ ಬಿಕ್ಕಟ್ಟಿನ ಸಮಯದಲ್ಲಿಯೂ, ಕ್ರಿಕೆಟ್ ಶ್ರೀಮಂತರ ಆಟವಾಗಿರುವ ಸಂದರ್ಭದಲ್ಲಿಯೂ, ಮೊನ್ನೆ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ನಾಲ್ವರು ಆಟಗಾರರು, ತಮ್ಮ ಸೊಗಸಾದ ಆಟದಿಂದ ಕ್ರಿಕೆಟ್ ಪ್ರಿಯರ ಮನ ಗೆದ್ದಿದ್ದಾರೆ. ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ತಾವು ಪ್ರತಿನಿಧಿಸುವ ಭಾರತ ತಂಡವನ್ನು ಗೆಲ್ಲಿಸಿದ್ದಾರೆ. ಶಿಸ್ತು, ಶ್ರದ್ಧೆ ಮತ್ತು ತನ್ಮಯತೆಯಿಂದ ಆಡಿ, ಬೆನ್ನಿಗಿದ್ದ ಬಡತನವನ್ನೂ ಗೆದ್ದು ಬಡವರ ಮಕ್ಕಳಲ್ಲಿ ಕ್ರಿಕೆಟ್ ಬಗ್ಗೆ ಭರವಸೆ ಹುಟ್ಟಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡ ಟೆಸ್ಟ್‌ನಲ್ಲಿ 434 ರನ್‌ಗಳ ಭಾರೀ ಅಂತರದಿಂದ ಜಯ ಗಳಿಸಿದ್ದು ಇದೇ ಮೊದಲು. 2021 ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ 372 ರನ್‌ಗಳ ಜಯ ಸಾಧಿಸಿದ್ದು, ಭಾರತದ ಅತಿದೊಡ್ಡ ಗೆಲುವಾಗಿ ದಾಖಲೆಗೆ ಸೇರಿತ್ತು.
ರಾಜಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ 557 ರನ್‌ಗಳ ಬೃಹತ್ ಮೊತ್ತ ಪೇರಿಸಿದ, ದೈತ್ಯರ ಎದುರು ಧೈರ್ಯವಾಗಿ ಆಡಿ ತಂಡವನ್ನು ಗೆಲ್ಲಿಸಿದ ಮೂವರು ಹೊಸ ಆಟಗಾರರಾದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ಸರ್ಫರಾಜ್ ಖಾನ್ ಬಗ್ಗೆ ಇಂದು ಇಡೀ ದೇಶ ಮಾತನಾಡುತ್ತಿದೆ. ಅದಕ್ಕೆ ಕಾರಣ ಅವರ ಕೌಟುಂಬಿಕ ಹಿನ್ನೆಲೆ ಮತ್ತು ಅದನ್ನು ಮರೆಸುವಂತಹ ಅಮೋಘ ಆಟ.
ಚಿಗುರು ಮೀಸೆಯ ಚಿಗರೆಯಂತಿರುವ ತೆಳ್ಳನೆಯ ಜೈಸ್ವಾಲ್, ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಹತ್ತು ರನ್ನಿಗೆ ಔಟಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಡಜನ್ ಸಿಕ್ಸರ್ ಸಿಡಿಸಿ, 214 ರನ್ ಗಳಿಸಿ, ಔಟಾಗದೆ ಉಳಿದು ದಾಖಲೆಗಳನ್ನು ಪುಡಿಗಟ್ಟಿದರು. ಇವರ ತಂದೆ ಸಣ್ಣ ಹಾರ್ಡ್‌ವೇರ್ ಅಂಗಡಿಯ ಮಾಲೀಕರು. ಮಗನ ಕ್ರಿಕೆಟ್ ಪ್ರೀತಿಗೆ ಕರಗಿ, ಕಷ್ಟದಲ್ಲೂ ಕಲಿಕೆಗೆ ಪ್ರೋತ್ಸಾಹಿಸಿದವರು.
ಶುಭಮನ್ ಗಿಲ್ ಎಂಬ ಮತ್ತೊಬ್ಬ ಹುಡುಗ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 91 ರನ್ ಗಳಿಸಿ ಔಟಾದರು. ಇವರ ತಂದೆ ಕೃಷಿಕರು. ಬೆವರಿಳಿಸುವ ಬದುಕಿನ ನಡುವೆಯೂ ಮಗನ ಕ್ರಿಕೆಟ್ ಆಟಕ್ಕೆ ಬೆಂಬಲವಾಗಿ ನಿಂತವರು.
ಇನ್ನು ಮತ್ತೊಬ್ಬ ಹೊಸ ಆಟಗಾರ, ಇದೇ ಪಂದ್ಯದ ಮೂಲಕ ಪದಾರ್ಪಣೆ ಪಡೆದ ಸರ್ಫರಾಜ್ ಖಾನ್, 62 ಮತ್ತು 68 ರನ್ ಗಳಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇವರ ತಂದೆ ಮುಂಬೈನ ರೈಲುಗಳಲ್ಲಿ ಸೌತೇಕಾಯಿ ಮಾರುವ ಬಡ ವ್ಯಾಪಾರಸ್ಥರು. ಅಪ್ಪನೇ ಮಗನಿಗೆ ತರಬೇತುದಾರನಾಗಿ, ಮಗನ ಕ್ರಿಕೆಟ್ ಕನಸಿಗೆ ಕಣ್ಣಾಗಿ, ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದವರು. ಮಗ ಭಾರತ ತಂಡಕ್ಕೆ ಆಯ್ಕೆಯಾಗಿ, ಪದಾರ್ಪಣೆಯ ದಿನ ಕ್ರಿಕೆಟ್ ಕ್ಯಾಪ್ ಧರಿಸುತ್ತಿದ್ದಂತೆ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತರು. ಮಗನ ಆಕರ್ಷಕ ಹೊಡೆತಗಳನ್ನು, ಜನ ಮೆಚ್ಚುಗೆಯ ಮಾತುಗಳನ್ನು ಕಂಡು ಈಗ ಪುನೀತರಾಗಿದ್ದಾರೆ.
ಇನ್ನು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ರವೀಂದ್ರ ಜಡೇಜ, ಈಗಾಗಲೇ ಹಲವಾರು ಪಂದ್ಯಗಳನ್ನು ಆಡಿರುವ ಹಿರಿಯ ಅನುಭವಿ ಆಟಗಾರ. ತಮ್ಮ ತವರುನೆಲದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಡೇಜ, 112 ರನ್ ಗಳಿಸಿ, 7 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಜಡೇಜ ಅತ್ಯಂತ ಬಡ ಕುಟುಂಬದಿಂದ ಬಂದವರು. ತಂದೆ ವಾಚ್‌ಮನ್ ಆಗಿದ್ದವರು. ತಂಗಿ ನರ್ಸ್ ಆಗಿ ಈಗಲೂ ಕೆಲಸ ಮಾಡುತ್ತಿರುವವರು. ಕಷ್ಟದಲ್ಲೂ ಮಗನ ಕ್ರಿಕೆಟ್ ಹುಚ್ಚಿಗೆ, ಕೊಸರಿಕೊಂಡೇ ಸಹಕರಿಸಿದವರು.
ಈ ನಾಲ್ವರು ಆಟಗಾರರ ಕೌಟುಂಬಿಕ ಹಿನ್ನೆಲೆ, ಬಡತನ, ಹಸಿವು, ಅವಮಾನಗಳು ಅವರನ್ನು ಆ ಅಮೋಘ ಆಟಕ್ಕೆ ಅಣಿಗೊಳಿಸಿರಬಹುದು. ಹಲವರಿಗೆ ಅದು ಸ್ಪೂರ್ತಿಯಾಗಲೂಬಹುದು. ಆದರೆ, ಇತ್ತೀಚೆಗೆ ಕ್ರೀಡಾ ಕ್ಷೇತ್ರ ಕೂಡ ಕೊಳಕು ಜಾತಿ-ಧರ್ಮಕ್ಕೆ ಜಾಗ ಮಾಡಿಕೊಡುತ್ತಿದೆ. ಅಯೋಗ್ಯರಿಗೆ ಅವಕಾಶ-ಅನುಕೂಲ ಕಲ್ಪಿಸಿಕೊಡುತ್ತಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಮಗ, ಮೊದ್ಮಣಿ ಜೈ ಶಾ ಮುಂದೆ ನಡುಬಗ್ಗಿಸಿ ನಿಲ್ಲುವಂತಹ ಸಂದರ್ಭವನ್ನು ಸೃಷ್ಟಿಸುತ್ತಿದೆ.
ಸೋಜಿಗವೆಂದರೆ, ಕಲ್ಲುಬಂಡೆಗಳ ನಡುವೆ ಸಿಡಿದು ನಿಲ್ಲುವ ಚಿಗುರಿನಂತೆ ಜೈಸ್ವಾಲ್, ಸರ್ಫರಾಜ್‌ಗಳು ಎದ್ದು ನಿಲ್ಲುವುದೂ ಇದೆ. ಪ್ರತಿಭೆಗೆ ಪ್ರೋತ್ಸಾಹವೂ ಇದೆ. ಪಡಪೋಶಿತನದ ಪೋಷಣೆಯೂ ಇದೆ.
