ಈ ದಿನ ಸಂಪಾದಕೀಯ | ನರಮೇಧ ನಡೆಸಿದವರೊಂದಿಗೆ ಭಾರತ ನಿಲ್ಲುವುದು ಅಕ್ಷಮ್ಯ ಅಪರಾಧ

Date:

Advertisements
ನರಮೇಧ ನಡೆಸಿದ ಇಸ್ರೇಲ್‌ ಬೆಂಬಲಕ್ಕೆ ದುಷ್ಟ ಅಮೆರಿಕ ನಿಂತಿದೆ. ಸಂಪೂರ್ಣವಾಗಿ ನಾಶವಾಗಿರುವ ಗಾಝಾವನ್ನು ಈಗ ಪುನರ್‌ ನಿರ್ಮಿಸುವ ಮಾತುಕತೆ ನಡೆಯುತ್ತಿದೆ. ಇತಿಹಾಸ ಅರಿಯದ, ವಿದೇಶಾಂಗ ನೀತಿ ಗೊತ್ತಿಲ್ಲದ ಮೋದಿ, ಇಸ್ರೇಲ್-ಅಮೆರಿಕದೊಂದಿಗೆ ಕೈಜೋಡಿಸಿ, ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕುತ್ತಿದ್ದಾರೆ.

ಅಳಿದುಳಿದ ಗಾಝಾದಲ್ಲಿ ಪುನರ್ ನಿರ್ಮಾಣದ ಮಾತುಕತೆ ಶುರುವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ಕೊನೆಗಾಣಿಸಲು, ಗಡುವು ನೀಡಿದ್ದಾರೆ. ಅದಕ್ಕೂ ಮುನ್ನ, ಇಸ್ರೇಲ್ ಅಥವಾ ಹಮಾಸ್‌ಗೆ ಗಾಝಾ ನಿಯಂತ್ರಣವನ್ನು ನೀಡದೆ, ಅಂತಾರಾಷ್ಟ್ರೀಯ ನೇತೃತ್ವದಡಿ- ಟ್ರಂಪ್ ಮತ್ತು ಟೋನಿ ಬ್ಲೇರ್ ನೇತೃತ್ವದ ಬೋರ್ಡ್ ಆಫ್ ಪೀಸ್‌ನಡಿ- ಪುನರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಶಾಂತಿ ಒಪ್ಪಂದ ಎಂಬ ಹಿಂಬಾಗಿಲ ಕುಯುಕ್ತಿಗೆ ಅಮೆರಿಕ ಚಾಲನೆ ಕೊಟ್ಟಿದೆ.

ಅಷ್ಟೇ ಅಲ್ಲ, ಟ್ರಂಪ್, ಸೆ. 30ರಂದು 20-ಪಾಯಿಂಟ್ ಗಾಝಾ ಶಾಂತಿ ಯೋಜನೆ ಘೋಷಿಸಿದ್ದಾರೆ. ಗಾಝಾವನ್ನು ‘ನ್ಯೂ ಗಾಝಾ’ ಆಗಿ ರೂಪಿಸಲು ಇಂಡಿಯಾ-ಮಿಡಲ್ ಈಸ್ಟ್-ಯುರೋಪ್ ಇಕಾನಾಮಿಕ್ ಕಾರಿಡಾರ್(IMEC)ಗೆ ಜವಾಬ್ದಾರಿ ವಹಿಸಿದ್ದಾರೆ. ಇದರಲ್ಲಿ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಪ್ರಮುಖ ಪಾಲುದಾರರಾಗಿದ್ದು, ಗಾಝಾದ ಪುನರ್ ನಿರ್ಮಾಣಕ್ಕೆ ಅಮೆರಿಕ 50 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಹಣಕಾಸಿನ ನೆರವು ನೀಡಲಿದೆ ಎನ್ನಲಾಗುತ್ತಿದೆ.

ಇದನ್ನು ಓದಿದ್ದೀರಾ?: ಮೋದಿಭಕ್ತ ಆಗಿದ್ದ ಸೋನಮ್ ವಾಂಗ್ಚುಕ್ ‘ದೇಶದ್ರೋಹಿ’ ಆಗಿದ್ದಾದರೂ ಹೇಗೆ?

Advertisements

ಇಸ್ರೇಲ್‌, ಗಾಝಾವನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಈಗ ಉಳಿದಿರುವುದು ಇಸ್ರೇಲ್ ಅಕ್ರಮಿತ ಗಾಝಾ ಮತ್ತು ವೆಸ್ಟ್ ಬ್ಯಾಂಕ್ ಮಾತ್ರ. ಗಾಝಾ ಉಳಿಸಲು ಇಸ್ರೇಲ್ ವಿರುದ್ಧ ದಂಗೆ ಎದ್ದ ಹಮಾಸ್ ಬಂಡುಕೋರರನ್ನು ಇನ್ನಿಲ್ಲದಂತೆ ಮಾಡುವುದು ಇಸ್ರೇಲ್ ಮತ್ತು ಅಮೆರಿಕಾದ ಗುರಿ. ಅಂದರೆ ಅವರನ್ನು ಪೂರ್ತಿ ನಿಷ್ಕ್ರಿಯಗೊಳಿಸುವುದು. ಅದಕ್ಕೆ ಶಾಂತಿ ಸ್ಥಾಪನೆಯ ನೆಪ ಒಡ್ಡುವುದು.

ಪ್ಯಾಲೆಸ್ತೀನಿಯರ ಬದುಕನ್ನು ಬೂದಿ ಮಾಡಿದವರು ಇಸ್ರೇಲಿಗರು. ಇಲ್ಲಿಯವರೆಗೆ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರ ಹತ್ಯೆ ಮಾಡಿದ ಇಸ್ರೇಲ್, ಆಸ್ಪತ್ರೆಗಳು, ವಾಸದ ಮನೆಗಳು, ಸಮುದಾಯ ಭವನಗಳನ್ನು ಧ್ವಂಸ ಮಾಡಿದೆ. ಗಾಝಾದಲ್ಲಿ ಒಂದು ಸಣ್ಣ ಹುಲ್ಲು ಕಡ್ಡಿ ಕೂಡ ಹುಟ್ಟದಂತೆ ಮಾಡಿದೆ. ಗಾಝಾ ಪ್ರದೇಶದಲ್ಲಿ ಮಣ್ಣಿಗೆ ಕೈ ಹಾಕಿದರೆ ಮನುಷ್ಯರ ಅಸ್ಥಿಪಂಜರಗಳ ಬೂದಿ ಸಿಗುತ್ತದೆ. ಬದುಕುಳಿದವರು ಅಂಗವಿಕಲರಾಗಿದ್ದಾರೆ, ಇನ್ನು ಕೆಲವರು ಜೀವಂತ ಶವವಾಗಿದ್ದಾರೆ. ಅಳಿದುಳಿದವರು ತಾತ್ಕಾಲಿಕ ಟೆಂಟ್‌ಗಳಲ್ಲಿ ನಿಕೃಷ್ಟವಾಗಿ ಬದುಕುತ್ತ, ಅಮೆರಿಕದಿಂದ ಬರುವ ಆಹಾರಕ್ಕಾಗಿ ಕಾದು ಕುಳಿತಿದ್ದಾರೆ. ಹಸಿದ ಹಸುಳೆಗಳ ಕೈಯಲ್ಲಿನ ಪಾತ್ರೆಗಳು, ಆಹಾರಕ್ಕಾಗಿ ಹಪಾಹಪಿಸುವ ಚಿತ್ರಗಳು, ಅವರ ಮೇಲೆಯೂ ಬಾಂಬ್ ಹಾಕುವ ಇಸ್ರೇಲ್‌ನ ಪೈಶಾಚಿಕ ಕೃತ್ಯಗಳು- ಕರುಳು ಇರಿಯುವಂತಿವೆ.

ವಿಧ್ವಂಸಕ ಕೃತ್ಯಗಳ ಅಪ್ಪನಂತಿರುವ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸಿ, ಬೆನ್ನಿಗೆ ನಿಂತದ್ದು ದುಷ್ಟ ಅಮೆರಿಕ. ಈಗ ಇದೇ ಅಮೆರಿಕ ಗಾಝಾ ಪಟ್ಟಿಯಲ್ಲಿರುವ ನಿರಾಶ್ರಿತರಿಗೆ ತಾತ್ಕಾಲಿಕ ಟೆಂಟ್‌ ನಿರ್ಮಿಸುತ್ತಿದೆ. ಆಹಾರದ ಪೊಟ್ಟಣಗಳನ್ನು, ಔಷಧದ ಕಿಟ್‌ಗಳನ್ನು ಆಕಾಶದಿಂದ ಎಸೆಯುವ ಮೂಲಕ ‘ಮಾನವೀಯತೆ’ ಮೆರೆಯುತ್ತಿದೆ. ಸಾಲದು ಎಂದು ಈಗ ಶಾಂತಿ, ಭದ್ರತೆ ಮತ್ತು ಸ್ಥಿರತೆಯ ಬಗ್ಗೆ ದೊಡ್ಡಣ್ಣನಂತೆ ಮಾತನಾಡುತ್ತಿದೆ. ಗಾಝಾದ ಪುನರ್ ನಿರ್ಮಾಣ- ನ್ಯೂ ಗಾಝಾ ನಿರ್ಮಾಣಕ್ಕೆ ಮುಂದಾಗಿದೆ. ಅದನ್ನು ಆರ್ಥಿಕ ಮತ್ತು ಮಾನವೀಯ ಕೊಡುಗೆ ಎನ್ನುತ್ತಿದೆ. ಜಾಗತಿಕ ಮಟ್ಟದಲ್ಲಿ ಅಮೆರಿಕ ಎಂದರೆ ನೆರವು ನೀಡುವ, ಮನುಷ್ಯತ್ವ ತೋರುವ, ಶಾಂತಿ-ಸಹಬಾಳ್ವೆಗೆ ಹಾತೊರೆಯುವ ದೇಶ ಎಂದು ತೋರಲು ತವಕಿಸುತ್ತಿದೆ.

ಜನರನ್ನು ಕೊಲ್ಲುವವರೂ ಅವರೇ, ಕಾಪಾಡುವವರೂ ಅವರೇ- ಇದು ಉಳ್ಳವರ ಅಹಂಕಾರ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಅಮೆರಿಕದ ವ್ಯಂಗ್ಯ.

ಅಮೆರಿಕ ಮತ್ತು ಇಸ್ರೇಲಿಗರ ಈ ಪೈಶಾಚಿಕ ಕೃತ್ಯವನ್ನು ಇಡೀ ಪ್ರಚಂಚವೇ ದೊಡ್ಡ ದನಿಯಲ್ಲಿ ಖಂಡಿಸುತ್ತಿದೆ. ಆದರೆ, ವಿದೇಶಾಂಗ ನೀತಿ ಅರಿಯದ, ರಾಜತಾಂತ್ರಿಕ ತಿಳಿವಳಿಕೆ ಇಲ್ಲದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು, ಅಮೆರಿಕ ಪರ ಒಲವು ತೋರಿ, ನೇರವಾಗಿ ಇಸ್ರೇಲ್ ಬೆಂಬಲಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈಗ ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿರುವ ಶಾಂತಿ ಸ್ಥಾಪನೆಗೆ, ಗಾಝಾ ಪುನರ್ ನಿರ್ಮಾಣಕ್ಕೆ ಭಾರತೀಯ ತಂತ್ರಜ್ಞರನ್ನು, ಒಂದು ಲಕ್ಷ ಕಾರ್ಮಿಕರನ್ನು ಕಳುಹಿಸಿಕೊಡುತ್ತಿದ್ದಾರೆ. ಆ ಮೂಲಕ ಅಮೆರಿಕ ಹೇಳಿದಂತೆ ಕೇಳುತ್ತಿದ್ದಾರೆ, ಅವರ ಆಳ್ವಿಕೆಗೆ ಒಳಪಟ್ಟ ಗುಲಾಮರಂತೆ ವರ್ತಿಸುತ್ತಿದ್ದಾರೆ. ಭಾರತದ ಮಾನವನ್ನು ಹರಾಜು ಹಾಕುತ್ತಿದ್ದಾರೆ. ದೇಶದ ವಿದೇಶಾಂಗ ನೀತಿ-ನಿಲುವಿಗೆ ಜಾಗತಿಕ ಮಟ್ಟದಲ್ಲಿ ಮಸಿ ಬಳಿಯುತ್ತಿದ್ದಾರೆ.

ಇಸ್ರೇಲ್‌ನ ರಾಯಭಾರಿ ರೆವನ್ ಅಜರ್ ಭಾರತವನ್ನು ‘ಪ್ರಪಂಚದ ಹೊಸ ನಿರ್ಮಾಣಕಾರ’ ಎಂದು ಹೊಗಳುತ್ತಿದ್ದಾರೆ. ಗಾಝಾದಲ್ಲಿ ರಸ್ತೆಗಳು, ಬಂದರುಗಳು ಮತ್ತು ಆರ್ಥಿಕ ವಲಯಗಳ ನಿರ್ಮಾಣಕ್ಕೆ ಭಾರತೀಯ ಕಂಪನಿಗಳನ್ನು ಆಹ್ವಾನಿಸಿದ್ದಾರೆ. ಇಸ್ರೇಲ್‌ನ 200 ಬಿಲಿಯನ್ ಡಾಲರ್ ಟೆಂಡರ್‌ಗಳಲ್ಲಿ ಭಾರತೀಯ ಮೂಲದ ಎಲ್‌ ಅಂಡ್‌ ಟಿ, ಗೌತಮ ಅದಾನಿ ಕಂಪನಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಭಾರತವು ಬಹಳ ಹಿಂದಿನಿಂದಲೂ ಪ್ಯಾಲೆಸ್ತೀನ್‌ನೊಂದಿಗೆ ರಾಜತಾಂತ್ರಿಕ ಮತ್ತು ರಾಜಕೀಯ ಸಂಬಂಧಗಳನ್ನು ಹೊಂದಿದೆ. ಇದು ಸ್ವಾತಂತ್ರ್ಯಕ್ಕೂ ಮುಂಚಿನ ಭಾರತ, ಮಹಾತ್ಮಾ ಗಾಂಧಿಯವರಿಂದಲೇ ಆರಂಭವಾಗಿದೆ. ಅಷ್ಟೇ ಅಲ್ಲ, 1974ರಲ್ಲಿ ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್(PLO)ಗೆ ಬೆಂಬಲಿಸಿ, 1988ರಲ್ಲಿ ಪ್ಯಾಲೆಸ್ತೀನ್ ರಾಜ್ಯವನ್ನು ಭಾರತ ಒಪ್ಪಿಕೊಂಡಿದೆ. 1996ರಲ್ಲಿ ದೆಹಲಿಯಲ್ಲಿ ಪ್ಯಾಲೆಸ್ತೀನ್ ರಾಯಭಾರ ಕಚೇರಿ ಸ್ಥಾಪನೆಗೂ ಅನುವು ಮಾಡಿಕೊಟ್ಟಿದೆ.

ಇದಾವುದನ್ನೂ ಗಮನಿಸದ, ಗಮನಿಸಿದ್ದರೂ ಸೈಡಿಗೆ ಸರಿಸಿದ ಪ್ರಧಾನಿ ಮೋದಿಯವರು, ಭಾರತದ ವಿದೇಶಾಂಗ ನೀತಿಯ ಬಗ್ಗೆ ದೃಢ ನಿಲುವು ತಾಳದೆ, ಗಾಳಿ ಬಂದ ಕಡೆ ತೂರಿಕೊಳ್ಳುವ ತಂತ್ರ ಅನುಸರಿಸುತ್ತಿದ್ದಾರೆ. ಟ್ರಂಪ್ ಅತಿಹೆಚ್ಚು ಸುಂಕ ಹಾಕಿದರೂ,‌ ಯುದ್ಧ ನಿಲ್ಲಿಸಿದ್ದು ನಾನೇ ಎಂದರೂ, ಅದನ್ನು ಭಾರತಕ್ಕಾದ ಅವಮಾನ ಎನ್ನುತ್ತಿಲ್ಲ. ರಷ್ಯಾ-ಚೀನಾ ನಾಯಕರೊಂದಿಗೆ ಕೈ ಕುಲುಕಿದರೂ, ಭಾರತಕ್ಕೆ ಅದರಿಂದ ಲಾಭವೇನು ಎಂದು ಯೋಚಿಸುತ್ತಿಲ್ಲ. ಇಡೀ ಜಗತ್ತೇ ದ್ವೇಷಿಸುತ್ತಿರುವ ಇಸ್ರೇಲ್‌ನೊಂದಿಗೆ ವ್ಯಾಪಾರ-ವ್ಯವಹಾರಕ್ಕೆ ಇತಿಶ್ರೀ ಹಾಡಿಲ್ಲ. ಸೇನಾ ಶಸ್ತ್ರಾಸ್ತ್ರಗಳಾದ ಡ್ರೋನ್, ಮಿಸೈಲ್ ತಂತ್ರಜ್ಞಾನ ಸಹಕಾರ ಪಡೆಯುವುದನ್ನು ನಿಲ್ಲಿಸಿಲ್ಲ.

ಇದನ್ನು ಓದಿದ್ದೀರಾ?: ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಭಾರತದ- ಮೋದಿಯವರ- ಈ ಎಡಬಿಡಂಗಿ ನಿಲುವು ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೀಡಾಗಿದೆ. ಅಷ್ಟೇ ಅಲ್ಲ, ದುಷ್ಟ ಅಮೆರಿಕದ ತಂತ್ರಕ್ಕೆ ಬಲಿಯಾಗಿ, ಪ್ಯಾಲೇಸ್ತೀನಿ ಮಕ್ಕಳ ರಕ್ತದ ಮೇಲೆ ಮಹಲು ಕಟ್ಟಲು ಮುಂದಾಗಿದೆ.

ಗಾಂಧಿ, 1938ರಲ್ಲಿಯೇ ಅರಬ್ಬರ ನೆಲದಲ್ಲಿ ಇಸ್ರೇಲ್‌ ರಾಷ್ಟ್ರಸ್ಥಾಪನೆಯನ್ನು ಅನೈತಿಕ ಎಂದಿದ್ದರು. ಅಂತಹ ಗಾಂಧಿಯನ್ನು ಆರ್‌ಎಸ್‌ಎಸ್‌ ಕೊಂದರೆ; ಈಗ ಜಾಗತಿಕ ಮಟ್ಟದಲ್ಲಿ ಭಾರತ ಎಂದರೆ ಗಾಂಧಿ ಎಂಬ ಪ್ರತೀತಿ ಇದೆ; ಅದನ್ನು ಮೋದಿ ಕೊಲ್ಲುತ್ತಿದ್ದಾರೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

Download Eedina App Android / iOS

X