ಕೋವಿಡ್ ಸಂದರ್ಭದಲ್ಲಿ ನಡೆದಿರಬಹುದಾದ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ರಾಜ್ಯದ, ದೇಶದ ಜನತೆಗೆ ತಿಳಿಯದ್ದೇನಲ್ಲ. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಎಲ್ಲಾ ಪ್ರಕರಣಗಳ ಕುರಿತು ನಿಷ್ಠುರವಾದ ತನಿಖೆ ಮತ್ತು ಕ್ರಮಗಳಿಗೆ ಮುಂದಾಗಬೇಕಿದೆ.
ಇಂದು ʼದಿ ಹಿಂದೂʼ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಮತ್ತು ಈದಿನ.ಕಾಮ್ಗೂ ಲಭ್ಯವಾಗಿರುವ ಕೋವಿಡ್ ಹಗರಣದ ತನಿಖಾ ವರದಿ ಆತಂಕಕ್ಕಿಂತಲೂ ಹೆಚ್ಚು ನೋವು ಹಾಗೂ ಆಕ್ರೋಶವನ್ನು ಹುಟ್ಟಿಸುತ್ತದೆ. ಇಡೀ ಮನುಕುಲವೇ ಮಾನವೀಯತೆಯಿಂದ ಸ್ಪಂದಿಸಿದ ಘಳಿಗೆಯಲ್ಲೂ ಕರುನಾಡ ಸರ್ಕಾರವನ್ನು ನಡೆಸುತ್ತಿದ್ದ ಜನನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂಬುದು ದುಃಖದಾಯಕ ಸಂಗತಿ.
ಕೋವಿಡ್ ಬಂದ ಸಂದರ್ಭದಲ್ಲಿ ಕತ್ತಲಲ್ಲಿ ಕಳೆದುಹೋದ ಭಾವವಿತ್ತು. ಅದರಲ್ಲೂ ಎರಡನೆಯ ಅಲೆಯ ಹೊತ್ತಿನಲ್ಲಿ ಸಂಭವಿಸಿದ ಸರಣಿ ಸಾವುಗಳು ‘ಭೂಲೋಕದಲ್ಲಿ ಮನುಕುಲ ಎಷ್ಟರಮಟ್ಟಿಗೆ ಉಳಿಯುತ್ತದೋ?’ ಎಂಬ ಪ್ರಶ್ನೆಯನ್ನು ಹುಟ್ಟಿಸಿತ್ತು.
ಸಾಮಾನ್ಯವಾಗಿ ಒಂದು ಸಮಾಜವು ಭಿಕ್ಷುಕರನ್ನೂ ಸಾಕುತ್ತದೆ. ಭಿಕ್ಷಾಟನೆಯೇ ಇಲ್ಲದ ಸಮಾಜ ಬೇಕು ಎಂಬ ಆದರ್ಶವೇ ನಮ್ಮನ್ನು ಮನುಷ್ಯರನ್ನಾಗಿಸುತ್ತದೆ. ಆದರೆ, ಭಿಕ್ಷಾಟನೆ ನಡೆಯುತ್ತಿದ್ದರೆ ಆಗಲೂ ಸಮಾಜ ಅವರನ್ನು ಪೊರೆಯುತ್ತದೆ. ಆದರೆ, ಲಾಕ್ಡೌನ್ ಕಾರಣಕ್ಕೆ ಬೀದಿಯಲ್ಲಿದ್ದ ಬಡಜನರ ಸ್ಥಿತಿಯಂತೂ ಕರುಣಾಜನಕವಾಗಿತ್ತು. 5 ರೂ.ಗೆ ತಿಂಡಿ, 10 ರೂ.ಗೆ ಊಟ ಕೊಡುತ್ತಿದ್ದ ಇಂದಿರಾ ಕ್ಯಾಂಟೀನನ್ನೂ ಕೋವಿಡ್ ಹರಡುತ್ತದೆಂಬ ನೆಪ ಹೇಳಿ ಮುಚ್ಚಿಬಿಟ್ಟಿತ್ತು ಯಡಿಯೂರಪ್ಪನವರ ಸರ್ಕಾರ. ಬೀದಿ ವ್ಯಾಪಾರ ಮಾಡುವವರು ಅಂದಂದಿನ ಬದುಕ ನಡೆಸಲು ರಸ್ತೆಗಿಳಿದರೆ ಪೊಲೀಸ್ ಲಾಠಿಗಳು ಝಳಪಿಸುತ್ತಿದ್ದವು. ಈ ಜನರ ಬದುಕಿಗೆ ವ್ಯವಸ್ಥೆ ಮಾಡಿ ಎಂದು ಹೇಳಬೇಕಾದ ಮಾಧ್ಯಮಗಳು, ಈ ದಾಳಿಯನ್ನು ‘ಬಿಸಿ ಬಿಸಿ ಕಜ್ಜಾಯ’ ಎಂದು ಸಂಭ್ರಮಿಸುತ್ತಿದ್ದವು. ಇದೇ ಹೊತ್ತಿನಲ್ಲಿ ದೇಶದ ಇಬ್ಬರು ಅತಿ ದೊಡ್ಡ ಶ್ರೀಮಂತರು, ಜಗತ್ ಕುಬೇರರಾದರು. ಸತ್ತವರ ಲೆಕ್ಕವನ್ನೇ ಇಡದೇ ತಪ್ಪು ಲೆಕ್ಕ ಕೊಟ್ಟ ಸರ್ಕಾರಗಳು, ಲಕ್ಷ ಲಕ್ಷ ಕೋಟಿ ಪ್ಯಾಕೇಜ್ ಎಂಬ ಹಸೀ ಸುಳ್ಳು ಹೇಳಿ, ಪುಡಿಗಾಸನ್ನೂ ನೀಡದ ವಿಶ್ವಗುರುಗಳು ಭಾರತದಲ್ಲಿ ಅಂಧಾ ದರ್ಬಾರ್ ನಡೆಸಿದರು.
ಇಂತಹವರನ್ನು ಹೊರತುಪಡಿಸಿದರೆ, ಮನುಷ್ಯರೆಲ್ಲರೂ ನೆರೆಮನೆಯ ದುಃಖಕ್ಕೂ ಅತ್ತರು; ಹಸಿವಿಗೂ ಸ್ಪಂದಿಸಿದರು. ಜಾತಿ, ಧರ್ಮದ ಭೇದವಿಲ್ಲದೇ ಮುಸಲ್ಮಾನ ಬಂಧುಗಳು ಎಲ್ಲರ ಶವಸಂಸ್ಕಾರ ಮಾಡಿದರು. ಅದೆಷ್ಟು ಜನರಿಗೆ ‘ಆಹಾರದ ಪೊಟ್ಟಣಗಳ’ ಸರಬರಾಜನ್ನು ಧರ್ಮಾತ್ಮರು ಮಾಡಿದರೋ ಲೆಕ್ಕವಿಲ್ಲ. ವಿದೇಶದಲ್ಲಿದ್ದ ಜನ ಭಾರತಕ್ಕೆ ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ದೊಡ್ಡ ಪ್ರಮಾಣದಲ್ಲಿ ಕಳಿಸಿದರು. ಸ್ವಯಂಪ್ರೇರಿತವಾಗಿ ಕನ್ಸಲ್ಟೇಷನ್, ಕೌನ್ಸೆಲಿಂಗ್ ಮಾಡಲು ಮುಂದೆ ಬಂದವರೂ ದೊಡ್ಡ ಸಂಖ್ಯೆಯಲ್ಲೇ ಇದ್ದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್; ಭವಿಷ್ಯದ ಯುವ ಭಾರತಕ್ಕೂ ಮಾರಕ
ಹೀಗಿದ್ದಾಗ, ಕರ್ನಾಟಕದ ಮುಖ್ಯಮಂತ್ರಿ ಮತ್ತು ಆರೋಗ್ಯ ಮಂತ್ರಿ ಭ್ರಷ್ಟಾಚಾರದಲ್ಲಿ ತೊಡಗಿದ್ದರೆನ್ನುವ ಆರೋಪಗಳನ್ನು ವಿರೋಧ ಪಕ್ಷಗಳು ಮಾಡಿದ್ದವು. ಅದೇ ವಿರೋಧ ಪಕ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದ ತನಿಖೆ ನಡೆಸುವ ಜವಾಬ್ದಾರಿ ಹೊತ್ತಿತ್ತು. ತಡ ಮಾಡಿ, ಅಳೆದೂ ಸುರಿದೂ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ತನಿಖೆಯೂ ಆರಂಭವಾಗಿತ್ತು. ಇದೀಗ ಅವರ ವರದಿಯ ಕೆಲ ಭಾಗಗಳು ಹೊರಬಿದ್ದಿವೆ. 330 ರೂ.ಗೆ ಸ್ಥಳೀಯರೇ ಸರಬರಾಜು ಮಾಡಲು ಸಿದ್ಧವಿದ್ದ ಪಿಪಿಇ ಕಿಟ್ಗೆ 2000 ರೂ.ಗೂ ಹೆಚ್ಚು ಹಣ ನೀಡಿ ಚೀನಾದಿಂದ ತರಿಸಿಕೊಳ್ಳಲಾಯಿತು ಎಂದು ಹೇಳಲಾಗುತ್ತಿದೆ.
ಅದು ಕಷ್ಟದ ಕಾಲವಾಗಿತ್ತು; ತುರ್ತಿನ ಸಂದರ್ಭವಾಗಿತ್ತು. ಹೇಗಾದರೂ ಸರಿ, ಎಲ್ಲಿಂದಲಾದರೂ ಸರಿ ಅಗತ್ಯವಿದ್ದ ಉಪಕರಣಗಳು ಬೇಕು, ಎಷ್ಟು ದುಡ್ಡು ಕೊಟ್ಟಾದರೂ ತೆಗೆದುಕೊಳ್ಳೋಣ ಎಂದು ಹೀಗೆ ಮಾಡಿರಬಹುದೇ ಎಂಬ ಸಂಶಯ ಮೊದಲು ಬಂದು ಹೋಗುತ್ತದೆ. ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಉಪಕರಣಗಳನ್ನು ತರಲು ಅಧಿಕಾರಸ್ಥರು ಏನೇನೋ ಸರ್ಕಸ್ ಮಾಡಿರಬಹುದು– ಹಾಗಾಗಿ ಇದನ್ನು ಅಷ್ಟೊಂದು ಸಂಶಯದಿಂದ ನೋಡಬೇಕೇ ಎಂಬ ಚಿಂತನೆ ನಡೆಯುತ್ತಿದ್ದ ಸಂದರ್ಭದಲ್ಲೇ ಆಂಗ್ಲ ಸುದ್ದಿತಾಣ ‘ದಿ ನ್ಯೂಸ್ ಮಿನಿಟ್’ ಹೊರತಂದ ಇನ್ನೊಂದು ಸಂಗತಿ ಅಸಲಿಯತ್ತನ್ನು ಹೊರಹಾಕಿದೆ.
ಡಿಎಚ್ಬಿ ಗ್ಲೋಬಲ್ ಮತ್ತು ಬಿಗ್ ಫಾರ್ಮಾಸುಟಿಕಲ್ಸ್ ಎಂಬೆರಡು ಕಂಪೆನಿಗಳಿಗೆ ‘ವಿಶೇಷ ಆಫರ್’ ನೀಡಿದ ಕುರಿತು ವರದಿಯಾಗಿತ್ತು. ಅದರಲ್ಲಿ ಬಿಗ್ ಫಾರ್ಮಾ ಎಂಬ ಕಂಪೆನಿಯು 2019ರಲ್ಲಿ ಕೋವಿಡ್ ಸಾಂಕ್ರಾಮಿಕ ತಲೆದೋರುವ ಕೇವಲ ಒಂದು ತಿಂಗಳ ಮುಂಚೆಯಷ್ಟೇ ಶುರುವಾಗಿತ್ತು ಎಂಬುದು ಸಂಶಯಗಳನ್ನು ಹುಟ್ಟುಹಾಕಿದೆ. ಅಷ್ಟು ದೊಡ್ಡ ವ್ಯವಹಾರ ನಡೆಸಿದ ಆ ಕಂಪೆನಿಯು ಈಗ ಪತ್ತೆಯೇ ಇಲ್ಲವಂತೆ. ಸದರಿ ಕಂಪೆನಿಯ ನೋಂದಾಯಿತ ವಿಳಾಸವು ಬೆಂಗಳೂರಿನ ಜೀವನ್ ಬಿಮಾ ನಗರದ್ದಾಗಿದ್ದು, ಈಗ ಅಲ್ಲಿ ಕಂಪೆನಿಯಿಲ್ಲವೆಂದು ಕಟ್ಟಡದ ಮಾಲೀಕರು ಹೇಳುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಆಗಷ್ಟೇ ಹುಟ್ಟಿದ್ದ ಕಂಪನಿಗಳಿಂದ ದುಬಾರಿ ಬೆಲೆಗೆ ಪಿಪಿಇ ಕಿಟ್ ಖರೀದಿ; ಚೀನಾ ಲಾಭಕ್ಕಾಗಿ ಬಿಎಸ್ವೈ, ಶ್ರೀರಾಮುಲು ಭ್ರಷ್ಟಾಚಾರ!
ಇವೆಲ್ಲವೂ ಕೋವಿಡ್ ಸಂದರ್ಭದಲ್ಲಿ ನಡೆದಿರಬಹುದಾದ ಅಕ್ರಮಗಳ ಕುರಿತು ದುರ್ಗಂಧ ಬೀರುತ್ತಿವೆ. ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ರಾಜ್ಯದ, ದೇಶದ ಜನತೆಗೆ ತಿಳಿಯದ್ದೇನಲ್ಲ. ಆದರೆ, ಕಾಂಗ್ರೆಸ್ಸು ಈ ಪ್ರಕರಣವನ್ನು ನಿಷ್ಠುರವಾಗಿ ಹೊರತರುವ ಜವಾಬ್ದಾರಿಯನ್ನಂತೂ ಹೊಂದಿದೆ. ಬಿ.ಎಸ್.ಯಡಿಯೂರಪ್ಪನವರ ಪೋಕ್ಸೋ ಕೇಸಿನ ಕುರಿತು ಈಗ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರು, ಆ ಪ್ರಕರಣ ದಾಖಲಾದಾಗ ಇಷ್ಟೇ ಕಟ್ಟುನಿಟ್ಟಾಗಿ ವರ್ತಿಸಿದ್ದರೇ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. 80 ವಯಸ್ಸು ದಾಟಿರುವ ಯಡಿಯೂರಪ್ಪನವರ ಮೇಲೆ ಹೀನಕೃತ್ಯದ ಆರೋಪವಿತ್ತು. ಆದರೆ, ಅವರಿಗೆ ಘನನ್ಯಾಯಾಲಯವೂ ಸುಲಭದಲ್ಲಿ ಜಾಮೀನು ಕೊಟ್ಟುಬಿಟ್ಟಿತ್ತು. ಹಾಗಾಗಿ ಅವರು ರಾಜಾರೋಷವಾಗಿ ಚುನಾವಣಾ ಪ್ರಚಾರದಲ್ಲೂ ನಿರತರಾಗಿಬಿಟ್ಟಿದ್ದಾರೆ.
ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಎಲ್ಲಾ ಪ್ರಕರಣಗಳ ಕುರಿತು ನಿಷ್ಠುರವಾದ ತನಿಖೆ ಮತ್ತು ಕ್ರಮಗಳಿಗೆ ಮುಂದಾಗಬೇಕಿದೆ. ಆ ಮೂಲಕ ರಾಜ್ಯದಲ್ಲಿ ಹಂತಹಂತವಾಗಿಯಾದರೂ ಭ್ರಷ್ಟಾಚಾರ ಕಡಿಮೆಯಾಗುವ ಕಡೆಗೆ ಹೆಜ್ಜೆಗಳನ್ನಿಡಬೇಕು.
