ಈ ದಿನ ಸಂಪಾದಕೀಯ | ‘ಇನ್‌ಸ್ಟಾ ಹೆಲ್ಪ್‌’ -ಗೃಹ ಕಾರ್ಮಿಕರನ್ನು ಮತ್ತಷ್ಟು ಅಭದ್ರತೆಗೆ ದೂಡುವ ಅಪಾಯ

Date:

Advertisements
ಅರ್ಬನ್ ಕಂಪನಿಯು ನಿಜವಾಗಿಯೂ ದೇಶೀಯ ಗೃಹ ಕೆಲಸದ ರಚನೆಯನ್ನು ಪರಿವರ್ತಿಸಲು ಬಯಸಿದರೆ, ಅದು ದಕ್ಷತೆ ಮತ್ತು ವೆಚ್ಚ ಕಡಿತವನ್ನು ಮೀರಿ ಹೋಗಬೇಕು. ನೈತಿಕ ಕಾರ್ಮಿಕ ಪದ್ಧತಿಗಳು, ವೇತನ ಭದ್ರತೆ ಮತ್ತು ತಾರತಮ್ಯ ವಿರೋಧಿ ಕ್ರಮಗಳಿಗೆ ಮುಂದಾಗಬೇಕು. 

ಭಾರತ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದೆ. ಮೋದಿ ಸರ್ಕಾರ ಹಿಂದುತ್ವದ ಹೆಸರಿನಲ್ಲಿ ಯುವಜನರ ಕಣ್ಣಿಗೆ ಮಣ್ಣು ಎರಚಿ, ನಿರುದ್ಯೋಗ ಸಮಸ್ಯೆಯನ್ನು ಮರೆಮಾಚುತ್ತಿದೆ ಎಂಬುದು ಗೊತ್ತೇ ಇರುವ ಸಂಗತಿ. ನಿರುದ್ಯೋಗ ಸಮಸ್ಯೆ ಒಂದೆಡೆಯಾದರೆ, ಔದ್ಯೋಗಿಕ ಕ್ಷೇತ್ರಗಳಲ್ಲಿ ಮಹಿಳೆಯ ಭಾಗವಹಿಸುವಿಕೆ ಗಣನೀಯವಾಗಿ ಕಡಿಮೆ ಇದೆ ಎಂಬುದು ಮತ್ತೊಂದು ಗಮನಾರ್ಹ ವಿಚಾರ. ದುಡಿಮೆಯಲ್ಲಿ ತೊಡಗಿರುವ ಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಗಾರ್ಮೆಂಟ್‌ ಮತ್ತು ಮನೆಗೆಲಸಗಳಂತಹ ಉದ್ಯೋಗಗಳನ್ನು ಮಾಡುತ್ತಿದ್ದಾರೆ ಎಂಬುದು ವಾಸ್ತವ. ಅಂತೆಯೇ ಅವರು ಕಡಿಮೆ ವೇತನ ಅಥವಾ ವೇನತ ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಎಂಬುದೂ ಅಷ್ಟೇ ಕಟು ಸತ್ಯ.

ಭಾರತದಲ್ಲಿ ಗೃಹ ಕಾರ್ಮಿಕರನ್ನು (ಮನೆಗೆಲಸದವರು) ನೇಮಿಸಿಕೊಳ್ಳುವ ಪರಿಪಾಠ ಹೊಸತೇನೂ ಅಲ್ಲ. ಭಾರತ ಸರ್ಕಾರ ಹೇಳುವ ಅಧಿಕೃತ ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ 47.5 ಲಕ್ಷ ಮಹಿಳೆಯರು ಗೃಹ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಭಾರತದಲ್ಲಿ ಗೃಹ ಕಾರ್ಮಿಕರ ಸಂಖ್ಯೆ 8 ಕೋಟಿವರೆಗೆ ಇರಬಹುದು ಎಂದು ‘ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಷನ್’ (ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ – ಐಎಲ್‌ಒ) ಹೇಳಿದೆ. ಇಷ್ಟು ಬೃಹತ್ ಸಂಖ್ಯೆಯಲ್ಲಿರುವ ಮನೆಗೆಲಸದ ಕಾರ್ಮಿಕರನ್ನು ಮೂಲಭೂತ ಸಾಮಾಜಿಕ ರಕ್ಷಣೆಯಿಂದ ಹೊರಗಿಡಲಾಗಿದೆ.

ಇವರಲ್ಲಿ ಬಹುತೇಕ ಕಾರ್ಮಿಕರು ಕೆಲಸದ ಅಭದ್ರತೆ ಮತ್ತು ಅನಿಶ್ಚಿತ ವೇತನಗಳಿಂದಾಗಿ ಆಂತಕದಲ್ಲಿಯೇ ದುಡಿಯುತ್ತಿದ್ದಾರೆ. ಅವರ ಕೆಲಸಕ್ಕ ಯಾವುದೇ ಭದ್ರತೆ ಇಲ್ಲ. ಇಎಸ್‌ಐ, ಆರೋಗ್ಯ ಸೇರಿದಂತೆ ಯಾವುದೊಂದು ವಿಮಾ ಸೌಲಭ್ಯಗಳೂ ಅವರಿಗೆ ದೊರೆಯುತ್ತಿಲ್ಲ. ನೇರವಾಗಿ ಹೇಳಬೇಕೆಂದರೆ, ಅವರನ್ನು ಕಾರ್ಮಿಕರು ಎಂದೇ ಪರಿಗಣಿಸಲಾಗಿಲ್ಲ. ಅವರಿಗಾಗಿ ಯಾವುದೇ ನೀತಿ, ನಿಯಮ, ಕಾನೂನು, ಮಾರ್ಗಸೂಚಿಗಳೂ ಇಲ್ಲ.

Advertisements

ಪರಿಣಾಮವಾಗಿ, ದುಡಿಮೆಯಲ್ಲಿನ ಅಭದ್ರತೆ ಅವರನ್ನು ನಿರಂತರವಾಗಿ ಕಾಡುತ್ತಲೇ ಇದೆ. ಇಂತಹ ಸಮಯದಲ್ಲಿ, ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ಕಳೆದ ತಿಂಗಳು, ‘ಅರ್ಬನ್ ಕಂಪನಿ’ಯು ‘ಇನ್‌ಸ್ಟಾ ಮೇಡ್’ ಎಂಬ ಅಪ್ಲಿಕೇಷನ್‌ಅನ್ನು ಹೊರತಂದಿತು. ಬಳಿಕ, ಅದನ್ನು’ಇನ್‌ಸ್ಟಾ ಹೆಲ್ಪ್’ ಎಂದು ಮರುನಾಮಕರಣ ಮಾಡಿತು. ಇದು, ಮನೆಗೆಲಸಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಮಾಲೀಕರಿಗೆ ‘ಗೃಹ ಸಹಾಯ’ವನ್ನು ಒದಗಿಸುವ, ಅಂದರೆ, ಗೃಹ ಕಾರ್ಮಿಕರನ್ನು ಪೂರೈಸುವ ಹೊಸ ಸೇವೆ.

‘ಅರ್ಬನ್ ಕಂಪನಿ’ಯ ಈ ಹೊಸ ಸೇವೆಯು ಈಗ ಗೃಹ ಕಾರ್ಮಿಕರಾಗಿ ದುಡಿಯುತ್ತಿರುವ ಜನರ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುತ್ತದೆಯೇ ಅಥವಾ ಈಗಾಗಲೇ ಸಂಕಷ್ಟದಲ್ಲಿರುವ ಅವರ ಸ್ಥಿತಿಗತಿಯನ್ನು ಮತ್ತಷ್ಟು ಅಭದ್ರ ಮತ್ತು ದುರ್ಬಲಗೊಳಿಸುತ್ತದೆಯೇ ಎಂಬ ಆತಂಕ ಉದ್ಭವಿಸಿವೆ.

‘ಇನ್‌ಸ್ಟಾ ಹೆಲ್ಪ್’ ಜಾಹೀರಾತುಗಳನ್ನು ಗಮನಿಸಿದರೆ, ಈ ಅಪ್ಲಿಕೇಷನ್‌ ಅಕ್ಷರಶಃ ಗೃಹ ಕಾರ್ಮಿಕರ ವೇತನ ಭದ್ರತೆಗೆ ದೊಡ್ಡ ಬೆದರಿಕೆಯೊಡ್ಡುತ್ತದೆ. ಈ ವೇದಿಕೆಯು ಗಂಟೆಗೆ 49 ರೂ. ವೇತನ ಕೊಡುವುದಾಗಿ ಹೇಳಿಕೊಂಡಿದೆ. ಇದು ಗೃಹ ಕಾರ್ಮಿಕರು ಸಾಮಾನ್ಯವಾಗಿ ಅನೌಪಚಾರಿಕ ನೆಟ್‌ವರ್ಕ್‌ಗಳ ಮೂಲಕ ಮಾತುಕತೆ ನಡೆಸಿ ಪಡೆಯುತ್ತಿರುವ ವೇತನಕ್ಕಿಂತ ಗಮನಾರ್ಹವಾಗಿ ಕಡಿಮೆ ಮೊತ್ತವಾಗಿದೆ.

ಇದನ್ನು ಓದಿದ್ದೀರಾ?: ಬೆಲೆ ಏರಿಸಿ ಆರಿಸಿದವರನ್ನೇ ಮೂರ್ಖರನ್ನಾಗಿಸುತ್ತಿರುವ ಸರ್ಕಾರಗಳು

ಅನೇಕ ಪ್ರದೇಶಗಳಲ್ಲಿ, ಗೃಹ ಕಾರ್ಮಿಕರು ಸಾಮೂಹಿಕವಾಗಿ ತಮ್ಮ ಕೆಲಸದ ಆಧಾರದ ಮೇಲೆ ವೇತನವನ್ನು ನಿರ್ಧರಿಸುತ್ತಾರೆ. ಯಾರೂ ನಿರ್ದಿಷ್ಟ ದರಕ್ಕಿಂತ ಕಡಿಮೆ ಕೆಲಸ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಅವರು ಯಾವುದೇ ಸಂಘ ಅಥವಾ ಒಕ್ಕೂಟಗಳನ್ನು ಹೊಂದಿಲ್ಲದಿದ್ದರೂ, ಈ ಅನೌಪಚಾರಿಕ ಜಾಲವು ಅವರಿಗೆ ವೇತನ ರಕ್ಷಣೆಯನ್ನು ಒದಗಿಸುತ್ತಿದೆ. ಈ ವ್ಯವಸ್ಥೆಯನ್ನು ಬುಡಮೇಲು ಮಾಡಿ, ‘ಇನ್‌ಸ್ಟಾ ಹೆಲ್ಪ್’ ಸ್ಥಳೀಯ ಚೌಕಾಸಿ ಮತ್ತು ವೇತನ ನಿರ್ಣಯಿಸುವಿಕೆಯನ್ನು ನಾಶ ಮಾಡುತ್ತದೆ. ವೇತನ ಕುರಿತ ಚರ್ಚೆಗಳೇ ಇಲ್ಲದಂತೆ ಮಾಡುತ್ತದೆ.

ಭಾರತದಾದ್ಯಂತ ಕಾನೂನುಬದ್ಧವಾಗಿ ಗೃಹ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗದಿಪಡಿಸುವ ಕಾನೂನು ಇಲ್ಲ. ಆದಾಗ್ಯೂ ಆಂಧ್ರಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಒಡಿಶಾ, ರಾಜಸ್ಥಾನ, ಹರಿಯಾಣ, ಪಂಜಾಬ್, ತಮಿಳುನಾಡು ಹಾಗೂ ತ್ರಿಪುರ ರಾಜ್ಯಗಳು ಗೃಹ ಕಾರ್ಮಿಕರನ್ನು ಆಯಾ ಕನಿಷ್ಠ ವೇತನ ಕಾಯ್ದೆಗಳ ಅಡಿಯಲ್ಲಿ ಸೇರಿಸಿಕೊಂಡಿವೆ. ‘ಇನ್‌ಸ್ಟಾ-ಹೆಲ್ಪ್’ ಈ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಿದರೆ, ಅದರ ವೇತನ ರಚನೆಯ ಮೇಲೆ ಕಾನೂನು ಸವಾಲುಗಳು ಉದ್ಭವಿಸಬಹುದು.

ಇದಲ್ಲದೆ, ಭಾರತದಲ್ಲಿ ಗೃಹ ಕೆಲಸವು ಬಹಳ ಹಿಂದಿನಿಂದಲೂ ಜಾತಿ ಮತ್ತು ವರ್ಗ ಶ್ರೇಣಿಗಳಿಂದ ರೂಪುಗೊಂಡಿದೆ. ಗೃಹ ಕಾರ್ಮಿಕರರು ಅನುಕೂಲಸ್ಥ ಖಾಸಗಿ ಮನೆಗಳಲ್ಲಿ ಕೆಲಸ ಮಾಡುತ್ತಾರೆ. ಉದ್ಯೋಗದಾತ ಮತ್ತು ಉದ್ಯೋಗಿ ನಡುವಿನ ಸಂಬಂಧವು ವೃತ್ತಿಪರವಲ್ಲವಾದರೂ, ಕಾರ್ಮಿಕರು ಮತ್ತು ಉದ್ಯೋಗದಾತರ ನಡುವೆ ಸಂವಹನ ಇರುತ್ತದೆ. ಆ ದೈನಂದಿನ ಸಂವಹನದಲ್ಲಿ ಜಾತಿ ಮತ್ತು ಧಾರ್ಮಿಕ ತಾರತಮ್ಯವು ವ್ಯಕ್ತವಾಗುತ್ತಿರುತ್ತದೆ. ಜೊತೆಗೆ, ಸಂವಹನವು ಸಂಪೂರ್ಣವಾಗಿ ಉದ್ಯೋಗದಾತರ ಆಣತಿಯಲ್ಲಿರುತ್ತದೆ.

ಇದು, ಕೆಲವು ಅಗತ್ಯದ ಸಮಯದಲ್ಲಿ ದಯೆ-ದಾಕ್ಷಿಣ್ಯ ಎಂಬ ಆರ್ಥಿಕ ಸಹಾಯ, ಗೃಹ ಕಾರ್ಮಿಕರಿಗೆ ಪ್ರತ್ಯೇಕ ಪಾತ್ರೆಗಳನ್ನು ಇರಿಸುವುದು, ಮನೆಯ ಪೀಠೋಪಕರಣಗಳ ಮೇಲೆ ಕುಳಿತುಕೊಳ್ಳಲು ಬಿಡದಿರುವುದು ಸೇರಿದಂತೆ ನಾನಾ ರೀತಿಯ ತಾರತಮ್ಯದ ಅಭ್ಯಾಸಗಳನ್ನು ಹೊಂದಿರುತ್ತದೆ. ಇಂತಹ ತಾರತಮ್ಯವನ್ನು ಇಲ್ಲವಾಗಿಸಿ, ಸೇವಾ ದಕ್ಷತೆ ನೀಡುತ್ತೇವೆಂದು ಡಿಜಿಟಲ್ ವೇದಿಕೆಯು ಭರವಸೆ ನೀಡುತ್ತದೆ. ಆದರೆ, ಅದು ಈ ತಾರತಮ್ಯವನ್ನು ಆಧುನಿಕ, ಡಿಜಿಟಲ್ ಮಾದರಿಗೆ ಕೊಂಡೊಯ್ಯುತ್ತದೆಯೇ ಹೊರತು, ಕಿತ್ತುಹಾಕುವುದಿಲ್ಲ ಎಂಬ ಗ್ಯಾರಂಟಿ ಇಲ್ಲ.

ಇದನ್ನು ಓದಿದ್ದೀರಾ?: ‘ಎಂಪುರಾನ್‌’ ವಿವಾದ: ಹಿಂದುತ್ವ ರಾಜಕಾರಣಕ್ಕೆ ಬೆಚ್ಚಿದ ಚಿತ್ರತಂಡ

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಗೃಹ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದು ಹೊಸ ರೀತಿಯ ಹೊರಗಿಡುವಿಕೆಗೆ ಕಾರಣವಾಗುತ್ತದೆ. ಸಾಂಪ್ರದಾಯಿಕ ಗೃಹ ಕೆಲಸಕ್ಕಿಂತ ಭಿನ್ನವಾಗಿ, ಅಲ್ಲಿ ನೇಮಕಾತಿಯು ಹೆಚ್ಚಾಗಿ ಇಂಗ್ಲಿಷ್ ಪ್ರಾವೀಣ್ಯತೆ ಅಥವಾ ವೃತ್ತಿಪರ ಶಿಷ್ಟಾಚಾರದಂತಹ ಮಾನದಂಡಗಳನ್ನು ವಿಧಿಸುತ್ತವೆ. ಇಂತಹ ಷರತ್ತುಗಳು ಈಗಾಗಲೇ ಗೃಹ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರನ್ನು ಕೆಲಸದಿಂದ ಹೊರಗಿಡಬಹುದು. ಔಪಚಾರಿಕ ಶಿಕ್ಷಣ ಹೊಂದಿರುವರನ್ನು ನೇಮಕ ಮಾಡಿಕೊಳ್ಳಲು ಹೆಚ್ಚು ಒತ್ತುಕೊಡಬಹುದು. ‘ಇನ್‌ಸ್ಟಾ ಹೆಲ್ಪ್’ ವೇದಿಕೆಯು ಚಂದಾದಾರಿಕೆ ಆಧಾರಿತ ಸೇವೆಯಾಗಿ ಪರಿವರ್ತನೆಗೊಳ್ಳಬಹುದು. ಗೃಹ ಕಾರ್ಮಿಕರ ಚೌಕಾಶಿ ಶಕ್ತಿಯನ್ನು ಸಹ ನಾಶಪಡಿಸಬಹುದು, ಕಡಿಮೆ ವೇತನಕ್ಕೆ ದುಡಿಯುವಂತೆ ಮಾಡಬಹುದು.

ಯಾವುದೇ ಕ್ಷೇತ್ರದಲ್ಲಿ, ಉದ್ಯೋಗವನ್ನು ಸುವ್ಯವಸ್ಥಿತಗೊಳಿಸಲು ತಂತ್ರಜ್ಞಾನವನ್ನು ಬಳಸುವುದರಲ್ಲಿ ತಪ್ಪಿಲ್ಲ. ಆದಾಗ್ಯೂ, ನ್ಯಾಯಯುತ ವೇತನ, ಸಾಮಾಜಿಕ ರಕ್ಷಣೆ ಮತ್ತು ಕೆಲಸದ ಸ್ಥಳಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಹೀಗಾಗಿಯೇ, ದೆಹಲಿ ಮತ್ತು ಇತರ ನಗರ ಕೇಂದ್ರಗಳಲ್ಲಿ ಗೃಹ ಕಾರ್ಮಿಕರು ತಮ್ಮ ಕೆಲಸದಲ್ಲಿ ಮಾನ್ಯತೆ, ನ್ಯಾಯಯುತ ವೇತನ ಮತ್ತು ಘನತೆಗಾಗಿ ಹೋರಾಡುತ್ತಿದ್ದಾರೆ. ಅವರ ಹೋರಾಟದ ಫಲವಾಗಿ, 2019ರಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ‘ಗೃಹ ಕೆಲಸಗಾರರ ಕರಡು ರಾಷ್ಟ್ರೀಯ ನೀತಿ’ಯನ್ನು ರಚಿಸಿದೆ. ಆದರೆ, ಅದನ್ನು ಇನ್ನೂ ಪ್ರಕಟಿಸಿಲ್ಲ. ಇಂತಹ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿರುವ ಡಿಜಿಟಲ್ ವೇದಿಕೆಯು ಕಾರ್ಮಿಕರ ಹೋರಾಟವನ್ನೂ ಬುಡಮೇಲು ಮಾಡಬಹುದು.

ಅರ್ಬನ್ ಕಂಪನಿಯು ನಿಜವಾಗಿಯೂ ದೇಶೀಯ ಗೃಹ ಕೆಲಸದ ರಚನೆಯನ್ನು ಪರಿವರ್ತಿಸಲು ಬಯಸಿದರೆ, ಅದು ದಕ್ಷತೆ ಮತ್ತು ವೆಚ್ಚ ಕಡಿತವನ್ನು ಮೀರಿ ಹೋಗಬೇಕು. ನೈತಿಕ ಕಾರ್ಮಿಕ ಪದ್ಧತಿಗಳು, ವೇತನ ಭದ್ರತೆ ಮತ್ತು ತಾರತಮ್ಯ ವಿರೋಧಿ ಕ್ರಮಗಳಿಗೆ ಮುಂದಾಗಬೇಕು. ಇಲ್ಲದಿದ್ದರೆ, ಇನ್‌ಸ್ಟಾ ಹೆಲ್ಪ್ ಗೃಹ ಕಾರ್ಮಿಕರನ್ನು ಸಬಲೀಕರಣಗೊಳಿಸುವುದಿಲ್ಲ. ಬದಲಾಗಿ, ಹಳೆಯ ಶ್ರೇಣೀಕೃತ ತಾರತಮ್ಯವನ್ನು ಡಿಜಿಟಲೀಕರಣಗೊಳಿಸಿದಂತಾಗುತ್ತದೆ. ಇದರಿಂದ, ಕಾರ್ಮಿಕರಿಗೆ ಯಾವುದೇ ಲಾಭ ದೊರೆಯುವುದಿಲ್ಲ. ಸಂಪೂರ್ಣ ಅನುಕೂಲ ‘ಇನ್‌ ಸ್ಟಾ ಹೆಲ್ಪ್‌’ಗೆ ಮಾತ್ರವೇ ದೊರೆಯುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X