ಪ್ರಜಾತಂತ್ರದ ಆಶಯಗಳನ್ನು ವಿಸ್ತರಿಸಲು, ಮನುಷ್ಯರು ಒಂದು ಸಮುದಾಯವಾಗಿ ಸಮಾಜದೊಳಗೆ ಪ್ರಜಾಪ್ರಭುತ್ವವನ್ನು ಇನ್ನೂ ಹೇಗೆ ಜಾರಿ ಮಾಡಬೇಕೆಂದು ಚಿಂತಿಸಲು ಸಾಂಕೇತಿಕವಾಗಿ ಒಂದು ದಿನ ಇರುವುದು ಒಳ್ಳೆಯದೇ. ಆದರೆ, ಎಲ್ಲವೂ ಸಾಂಕೇತಿಕ ಮಾತ್ರ ಆಗಿಬಿಟ್ಟರೆ ಅದು ಘೋಷಿತ ಉದ್ದೇಶವನ್ನು ಅಣಕ ಮಾಡಿದಂತೆ ಆಗುತ್ತದೆ.
ಸೆ. 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದ್ದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಸಂದೇಶ ಹೊರಟಿದೆ. ಜಗತ್ತಿನ ಹಲವು ದೇಶಗಳು ಈ ಆಚರಣೆಯಲ್ಲಿ ಪಾಲ್ಗೊಳ್ಳುವ ತಯಾರಿ ಮಾಡುತ್ತಿದ್ದು, ಕರ್ನಾಟಕದಲ್ಲಂತೂ ಖುದ್ದು ಸರ್ಕಾರವೇ 2,500 ಕಿ.ಮೀ.ಗಳ ಮಾನವ ಸರಪಳಿಯನ್ನು ಆಯೋಜಿಸುತ್ತಿದೆ. ಪ್ರಜಾತಂತ್ರದ ಆಶಯಗಳನ್ನು ವಿಸ್ತರಿಸಲು, ಮನುಷ್ಯರು ಒಂದು ಸಮುದಾಯವಾಗಿ ಸಮಾಜದೊಳಗೆ ಪ್ರಜಾಪ್ರಭುತ್ವವನ್ನು ಇನ್ನೂ ಹೇಗೆ ಜಾರಿ ಮಾಡಬೇಕೆಂದು ಚಿಂತಿಸಲು ಸಾಂಕೇತಿಕವಾಗಿ ಒಂದು ದಿನ ಇರುವುದು ಒಳ್ಳೆಯದೇ. ಆದರೆ, ಎಲ್ಲವೂ ಸಾಂಕೇತಿಕ ಮಾತ್ರ ಆಗಿಬಿಟ್ಟರೆ ಅದು ಘೋಷಿತ ಉದ್ದೇಶವನ್ನು ಅಣಕ ಮಾಡಿದಂತೆ ಆಗುತ್ತದೆ.
ವಾಕ್ ಸ್ವಾತಂತ್ರ್ಯ, ನಾಗರಿಕ ಹಕ್ಕುಗಳು, ಕಾನೂನುಬದ್ಧ ಆಡಳಿತ, ಉತ್ತರದಾಯಿತ್ವ ಹೊಂದಿರುವ ಸಂಸ್ಥೆಗಳು ಮತ್ತು ಮಾನವ ಹಕ್ಕುಗಳ ರಕ್ಷಣೆ– ಇವುಗಳನ್ನು ಎತ್ತಿಹಿಡಿಯುವ ಮತ್ತು ಗಟ್ಟಿಗೊಳಿಸುವ ಉದ್ದೇಶಕ್ಕಾಗಿ ಈ ದಿನವನ್ನು ಮುಡಿಪಾಗಿಟ್ಟಿದ್ದೇವೆಂದು ವಿಶ್ವಸಂಸ್ಥೆ ಘೋಷಿಸಿಕೊಂಡಿದೆ. ಎಲ್ಲವೂ ಅಗತ್ಯವಿರುವ ಆದರ್ಶಗಳೇ. ಇಂತಹ ಆದರ್ಶಗಳನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದು ಕೆಲಸ ಮಾಡುವ ಒಂದು ಸರ್ವಮಾನ್ಯವಾದ ಸಂಸ್ಥೆ ಇರುವುದು ಈ ಭುವಿಯಲ್ಲಿ ಇನ್ನೂ ಪ್ರಜಾತಂತ್ರ ಉಸಿರಾಡಲು ಅನುವು ಮಾಡಿಕೊಟ್ಟಿದೆ. 1997ರ ಸೆಪ್ಟೆಂಬರಿನಲ್ಲಿ ಅಂತರ್ ಸಂಸದೀಯ ಸಂಸ್ಥೆಯು ಪ್ರಜಾತಂತ್ರದ ಕುರಿತ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿದ್ದರಿಂದ, 2007ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಮಂಡಳಿಯು ಸೆಪ್ಟೆಂಬರ್ 15ಅನ್ನು ಪ್ರಜಾತಂತ್ರದ ದಿನವಾಗಿ ಘೋಷಿಸಿತು.
ಆದರೆ, ಎಲ್ಲವೂ ಅಪಹಾಸ್ಯವೆಂದು ತೋರುವುದು ಇದೇ ವಿಶ್ವಸಂಸ್ಥೆಯ ತೋರುಗಾಣಿಕೆಯ ನಡವಳಿಕೆಯಿಂದ. ಪ್ರಪಂಚದ ಎಷ್ಟೋ ದೇಶಗಳಲ್ಲಿ ಇಂದಿಗೂ ಮೇಲಿನ ಎಲ್ಲಾ ಆಶಯಗಳ ಮೇಲೆ ಅಪಾಯಕಾರಿ ದಾಳಿ ನಡೆಯುತ್ತಲೇ ಇದೆ. ಇದನ್ನು ಈ ವರ್ಷದ ಪ್ರಜಾತಂತ್ರದ ದಿನದ ಸಂದೇಶ ಕಳಿಸಿರುವ ಸೆಕ್ರೆಟರಿ ಜನರಲ್‌ರ ಮಾತುಗಳಲ್ಲೇ ಕಾಣಬಹುದು- ‘ಈ ಹಕ್ಕುಗಳು ಮತ್ತು ಮೌಲ್ಯಗಳು ಜಗತ್ತಿನೆಲ್ಲೆಡೆ ದಾಳಿಗೊಳಗಾಗುತ್ತಿವೆ. ಸ್ವಾತಂತ್ರ್ಯ-ಸ್ವಾಯತ್ತತೆಗಳು ನಶಿಸುತ್ತಿವೆ. ನಾಗರಿಕ ಅವಕಾಶ ಕ್ಷೀಣಿಸುತ್ತಿದೆ. ಧ್ರುವೀಕರಣ ತೀವ್ರಗೊಳ್ಳುತ್ತಿದೆ ಮತ್ತು ಅಪನಂಬಿಕೆ ಬೆಳೆಯುತ್ತಿದೆ’. ಈ ವರ್ಷ ಜಗತ್ತಿನ ಅರ್ಧದಷ್ಟು ಜನಸಂಖ್ಯೆ ಹೊಂದಿರುವ 50 ದೇಶಗಳು ಚುನಾವಣೆ ನಡೆಸುತ್ತಿವೆ ಎಂಬುದನ್ನು ನೆನಪಿಸಿಕೊಳ್ಳುತ್ತಾ ಅವರಾಡಿರುವ ಮಾತುಗಳು ಇವು.
ದೇಶದೊಳಗಿನ ಪ್ರಜಾತಂತ್ರವನ್ನು ವಿಸ್ತರಿಸುವ ಅಗತ್ಯವನ್ನು ಮತ್ತಷ್ಟು ಚರ್ಚೆಗೆ ಒಡ್ಡುತ್ತಲೇ ದೇಶಗಳ ನಡುವಿನ ಪ್ರಜಾತಾಂತ್ರಿಕ ನಡವಳಿಕೆಯ ಕುರಿತೂ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಿದೆ. ನಿರ್ದಿಷ್ಟವಾಗಿ ಪ್ಯಾಲೆಸ್ತೀನಿನ ಮೇಲೆ ಇಸ್ರೇಲಿನ ದುರಾಕ್ರಮಣ, ಅದಕ್ಕೆ ಅಮೆರಿಕದ ಬೆಂಬಲ ಇತಿಹಾಸದಲ್ಲೇ ಅತ್ಯಂತ ಅಪ್ರಜಾತಾಂತ್ರಿಕ ಮತ್ತು ಕ್ರೂರತನದಿಂದ ಕೂಡಿದ್ದಾಗಿದೆ. ಈ ಕುರಿತು ವಿಶ್ವಸಂಸ್ಥೆಯು 45ಕ್ಕೂ ಹೆಚ್ಚು ನಿರ್ಣಯಗಳನ್ನು ತೆಗೆದುಕೊಂಡಿದ್ದರೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು 150ಕ್ಕೂ ಹೆಚ್ಚು ನಿರ್ಣಯಗಳನ್ನು ಕೈಗೊಂಡಿದೆ. ಅವೆಲ್ಲವೂ ಇಸ್ರೇಲ್ – ಅಮೆರಿಕಕ್ಕೆ ಕಾಲಕಸವಾಗಿದ್ದು, ಇಸ್ರೇಲ್ ವಿಶ್ವಸಂಸ್ಥೆಯ ನಿಯಮಾವಳಿಗಳನ್ನು 5,698 ಬಾರಿ ಉಲ್ಲಂಘಿಸಿವೆಯೆಂದು ವರದಿಯಾಗಿದೆ. ಬಲಾಢ್ಯ ದೇಶಗಳು ಇಂತಹ ಉಲ್ಲಂಘನೆ ಮಾಡಿದಾಗ, ನಿರ್ಣಯಗಳನ್ನು ಕೈಗೊಂಡಿದ್ದರ ಆಚೆಗೆ ವಿಶ್ವಸಂಸ್ಥೆ ಏನೂ ಮಾಡಲಾಗಿಲ್ಲ. ಇದು ವಿಶ್ವಸಂಸ್ಥೆಯ ರಚನೆಯಲ್ಲೇ ಇರುವ ಸಮಸ್ಯೆಯಾಗಿದೆ.
ಅದರ ಹೊರತಾಗಿ, ಜಗತ್ತಿನಲ್ಲಿ ಮಾನವ ಹಕ್ಕುಗಳ, ಪ್ರಜಾತಾಂತ್ರಿಕ ಹಕ್ಕುಗಳ ಕುರಿತಾಗಿ ಕಾಲಕಾಲಕ್ಕೆ ಹೊರಡಿಸುವ ನಿರೂಪಗಳಿಂದ ವಿಶ್ವಸಂಸ್ಥೆ ಸಕಾರಾತ್ಮಕ ಪಾತ್ರವನ್ನು ನಿರ್ವಹಿಸುತ್ತಿರುವುದೂ ವಾಸ್ತವ. ಆ ಮೂಲಕ ಪ್ರಜಾತಂತ್ರದ ಪರವಾಗಿ ಲಾಬಿ ನಡೆಸುವ ಗುಂಪುಗಳಿಗೆ ಅದು ಸಾಧ್ಯತೆಗಳನ್ನು ಉಳಿಸಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬುಲ್ಡೋಜರ್, ತಲವಾರು ಹೇಳಿಕೆ; ಬಿಜೆಪಿ ಮುಖಂಡರಿಗೆ ಸೌಹಾರ್ದ ಕರ್ನಾಟಕ ಬೇಕಿಲ್ಲವೇ?!
ಇಲ್ಲಿ ವಿಶ್ವಸಂಸ್ಥೆಯ ಆಚೆಗೆ ಇತರ ಗುಂಪುಗಳು, ಸಮುದಾಯಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು ಆತ್ಮಾವಲೋಕನಕ್ಕೆ ಒಡ್ಡಿಕೊಳ್ಳಬೇಕಾದ ಅಗತ್ಯವಿದೆ. ಉದಾಹರಣೆಗೆ ಇಂದು ಭಾರತದ ಒಕ್ಕೂಟ ಸರ್ಕಾರದ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷವು ನಾಗರಿಕ ಹಕ್ಕುಗಳ ಮತ್ತು ಕನಿಷ್ಠ ಮಾನವೀಯತೆಯ ಹಾಗೂ ನೆಲದ ಕಾನೂನನ್ನು ಪಾಲಿಸುವ ವಿಚಾರದಲ್ಲಿ ಹಲವು ಎಲ್ಲೆಗಳನ್ನು ದಾಟಿಯಾಗಿದೆ. ತಾನು ಗುರಿ ಮಾಡಲು ಬಯಸುವ ಸಮುದಾಯಗಳ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸುವ ಒಂದು ದುಷ್ಟ ಪರಂಪರೆಯನ್ನು ಅದು ಶುರು ಮಾಡಿದೆ. ಮತಾಂಧ ಗುಂಪುಗಳು ಮುಸ್ಲಿಮರನ್ನು ಹತ್ಯೆ ಮಾಡುತ್ತಿವೆ. ಇದನ್ನು ಬಿಜೆಪಿ ಸರ್ಕಾರಗಳು ಮೌನವಾಗಿ ನೋಡುತ್ತಿರುವುದಷ್ಟೇ ಅಲ್ಲ, ಅದಕ್ಕೆ ಪ್ರೋತ್ಸಾಹ ನೀಡುತ್ತಿವೆ. ಇದು ಕಳೆದ ಹತ್ತಿಪ್ಪತ್ತು ವರ್ಷಗಳ ವಿದ್ಯಮಾನವಾಗಿದ್ದರೆ, ದಲಿತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕೊಲೆಗಳ ಅಂಕಿ-ಅಂಶಗಳು ಗಾಬರಿ ಹುಟ್ಟಿಸುತ್ತವೆ. ಇವೆಲ್ಲವೂ ಕೇವಲ ಅಂಕಿ-ಅಂಶಗಳಾಗಿ ಉಳಿದುಬಿಟ್ಟಿರುವ ದುರಂತ ನಮ್ಮ ಮುಂದಿದೆ. ಇಂತಹ ಒಂದು ಸರ್ಕಾರವು ಪ್ರಜಾತಂತ್ರದ ಕುರಿತು ಮಾತನಾಡುವುದೇ ಅಪಹಾಸ್ಯದ ಸಂಗತಿಯಾಗಿದೆ.
ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಸಾವಿರಾರು ಕಿ.ಮೀ.ಗಳ ಮಾನವ ಸರಪಳಿ ಆಯೋಜಿಸುತ್ತಿರುವ ಹೊತ್ತಿನಲ್ಲೆ ರಾಜ್ಯದಲ್ಲಿ ಒಂದು ವಿಚಾರದ ಕುರಿತು ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕಿನಲ್ಲಿ ಯಾರಿಗೂ ಕಾಣದಂತೆ ಪ್ರತಿಭಟನೆ ಮಾಡುವುದನ್ನು ಬಿಟ್ಟು ಬೇರೆ ಅವಕಾಶವಿಲ್ಲದಿರುವುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಆ ಅಭಿಯಾನ ಎತ್ತಿದೆ. ಈ ಸರ್ಕಾರ ಬಂದ ಮೇಲೆ ಪ್ಯಾಲೆಸ್ತೀನ್‌ನಲ್ಲಿ ನಡೆಯುತ್ತಿರುವ ನರಮೇಧದ ವಿರುದ್ಧ ಪ್ರತಿಭಟಿಸಲೂ ಅವಕಾಶ ಇರಲಿಲ್ಲ. ಹೀಗಿರುವಾಗ ಅದೇ ಸರ್ಕಾರವು ಮುಂದೆ ನಿಂತು ಸಾವಿರಾರು ಕಿ.ಮೀ.ಗಳ ಉದ್ದದ ಮಾನವ ಸರಪಳಿ ಆಯೋಜಿಸಿದರೆ ಸಾಕೇ? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಈ ಪ್ರಜಾತಂತ್ರದ ಸರಪಳಿ ಗಟ್ಟಿಯಾಗಬೇಕೆಂದರೆ ಪ್ರತಿಭಟನೆಯ ಅವಕಾಶಗಳನ್ನು ನಿರ್ಬಂಧಿಸುವ ನಿಯಮಗಳನ್ನು ಕರ್ನಾಟಕ ಸರ್ಕಾರ ಹಿಂತೆಗೆದುಕೊಳ್ಳಬೇಕು.
ಪ್ರತಿದಿನದ ಹಲವು ಹಳವಂಡಗಳ ನಡುವೆ ಇಂತಹ ಎಲ್ಲಾ ಪ್ರಶ್ನೆಗಳನ್ನು ಎತ್ತಲಾದರೂ ಒಂದು ದಿನ ಇದೆಯಲ್ಲಾ ಎಂಬುದಷ್ಟೇ ಸಮಾಧಾನಕರ ಸಂಗತಿ. ಈ ವರ್ಷದ ಆಚರಣೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಕೃತಕ ಬುದ್ಧಿಮತ್ತೆಯ ಮೇಲೆ ಕೇಂದ್ರೀಕರಿಸಿದೆ. ‘ಇದನ್ನು ಸರಿಯಾಗಿ ನಿಭಾಯಿಸದಿದ್ದರೆ, ಕೃತಕ ಬುದ್ಧಿಮತ್ತೆಯು ಪ್ರಜಾತಂತ್ರ, ಶಾಂತಿ ಮತ್ತು ಸ್ಥಿರತೆಗಳಿಗೆ ದೊಡ್ಡ ಅಪಾಯವನ್ನೇ ತರಲಿದೆ’ ಎಂದು ಅದು ಹೇಳಿದೆ. ‘ಸುಳ್ಳು ಮಾಹಿತಿಗಳ ಹರಡುವಿಕೆ, ದ್ವೇಷ ಭಾಷಣಗಳು ಮತ್ತು ಡೀಪ್ ಫೇಕ್‌ನಂತಹ ಸಂಗತಿಗಳು ಇದರಿಂದ ಹೆಚ್ಚಾಗಿವೆ’ ಎಂದು ಆತಂಕ ವ್ಯಕ್ತಪಡಿಸಿದೆ. ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು ಎಲ್ಲರಿಗೂ ದಕ್ಕಲಿ ಮತ್ತು ಅದರ ಅಪಾಯಗಳು ಆಗದಂತೆ ನಿರ್ಬಂಧದ ಕ್ರಮಗಳು ಶುರುವಾಗಲಿ ಎಂದು ವಿಶ್ವಸಂಸ್ಥೆ ಹೇಳಿದೆ.
ಅಂತಿಮವಾಗಿ ಅದು ಹೇಳಿರುವಂತೆ, ‘ಅಂತಾರಾಷ್ಟ್ರೀಯ ಪ್ರಜಾತಂತ್ರ ದಿನವಾದ ಇಂದು, ನಾವೆಲ್ಲರೂ ನ್ಯಾಯಯುತವಾದ, ಸಮಾನವಾದ ಮತ್ತು ಎಲ್ಲರನ್ನೂ ಒಳಗೊಳ್ಳುವ ಜಗತ್ತನ್ನು ಕಟ್ಟಲು ಶ್ರಮಿಸೋಣ’.
