ಈ ಬಾರಿಯ ಚುನಾವಣೆ ಎಂಬ ರಣರಂಗದಲ್ಲಿ ಎದುರಾಳಿಗಳೇ ಇಲ್ಲದಂತೆ ಮೋದಿ ನೋಡಿಕೊಂಡರು. ಒಬ್ಬರೇ ಓಡಾಡಿ, ಹಾಳೂರಿಗೆ ಉಳಿದವನೇ ಗೌಡನಾಗಿ ಮತ್ತೆ ಅಧಿಕಾರಕ್ಕೇರುವುದು ನಿಶ್ಚಿತ ಎಂದುಕೊಂಡರು. ಆದರೆ ನೆಲದ ನ್ಯಾಯ ಹಾಗೂ ಮತದಾರ ಪ್ರಭುವಿನ ಮುಂದೆ ಮೋದಿಯವರ ಆಟ ನಡೆಯದಾಯಿತು. 3ನೇ ಹಂತದ ಮತದಾನದ ವೇಳೆಗೆ ಮೋದಿ ಮರ್ಮಾಘಾತಕ್ಕೆ ಒಳಗಾಗಿ, ‘ನನ್ನ ಸಮಾಧಿಯನ್ನು ವಿಪಕ್ಷ ಬಯಸುತ್ತಿದೆ’ ಎಂದು ಹೇಳುವಲ್ಲಿಗೆ ತಂದು ನಿಲ್ಲಿಸಿದೆ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಮಾ. 21ರಂದು ಬಂಧಿಸಿತ್ತು. ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಆನಂತರ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಇದನ್ನು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರಿಗೆ ಸಿಕ್ಕ ಜಯವೆಂದು ಹಾಗೂ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವ ದ್ಯೋತಕವೆಂದು ವ್ಯಾಖ್ಯಾನಿಸಲಾಗುತ್ತಿದೆ.
ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟವಾಗುವ ಮೊದಲೇ ಪ್ರಧಾನಿ ಮೋದಿಯವರು, ವಿರೋಧ ಪಕ್ಷದ ನಾಯಕರು ರಚಿಸಿಕೊಂಡಿದ್ದ ‘ಇಂಡಿಯಾ’ ಒಕ್ಕೂಟದ ಒಗ್ಗಟ್ಟು ಮುರಿಯುವ ಪ್ರಯತ್ನಕ್ಕೆ ಕೈಹಾಕಿದ್ದರು. ಮೊದಲಿಗೆ ನಿತೀಶ್ ಕುಮಾರ್ ಅವರನ್ನು ಸೆಳೆದುಕೊಂಡರು. ಲಾಲೂ ಮೇಲಿದ್ದ ಹಳೆಯ ಕೇಸಿಗೆ ಜೀವ ಕೊಟ್ಟರು. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಇಡಿ ಬಳಸಿ, ಬಂಧಿಸಿ ಜೈಲಿಗೆ ಕಳುಹಿಸಿದರು. ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್ ಸೀಜ್ ಮಾಡಿದರು. ಆದಾಯ ತೆರಿಗೆ ಬಾಕಿ ಕಟ್ಟಿ ಎಂದು ನೋಟಿಸ್ ನೀಡಿ ಚುನಾವಣಾ ಖರ್ಚಿಗೆ ಹಣವಿಲ್ಲದಂತೆ ಮಾಡಲು, ಸಂಕಷ್ಟಕ್ಕೆ ಸಿಲುಕಿಸಲು ನೋಡಿದರು. ಪಶ್ಚಿಮ ಬಂಗಾಲದಲ್ಲಿ ಗಲಭೆ ಸೃಷ್ಟಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೈ ಕಟ್ಟಿಹಾಕಲು ನೋಡಿದರು. ತಮಿಳುನಾಡಿನ ಸ್ಟಾಲಿನ್ ಆಪ್ತರ ಮನೆ ಮೇಲೆ ಐಟಿ ದಾಳಿ ಮಾಡಿಸಿದರು. ಗ್ಯಾರಂಟಿಗಳಿಂದಾಗಿ ಕರ್ನಾಟಕದ ಕಾಂಗ್ರೆಸ್ ಆಡಳಿತ ಹಳ್ಳ ಹಿಡಿದಿದೆ, ದಿವಾಳಿ ಎದ್ದಿದೆ ಎಂದರು.
ಆನಂತರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಸಿಲುಕಿಸಲು, ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ನಿರಂತರವಾಗಿ ಒಂಭತ್ತು ಸಮನ್ಸ್ ಕಳಿಸಿದರು. ದೆಹಲಿ ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ, ಮಾ. 21ರಂದು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿದರು.
ಅಂದರೆ ವಿರೋಧಪಕ್ಷದ ನಾಯಕರು ಭ್ರಷ್ಟರು, ಲೂಟಿಕೋರರು, ಆಡಳಿತ ನಡೆಸಲಿಕ್ಕೆ ಲಾಯಕ್ಕಲ್ಲದವರು ಎಂಬುದನ್ನು ದೇಶದ ಜನತೆಯ ಮುಂದಿಡುವುದು; ತಾನೊಬ್ಬನೇ ದಕ್ಷ, ಪ್ರಾಮಾಣಿಕ ಎಂದು ತೋರ್ಪಡಿಸಿಕೊಳ್ಳುವುದು ಮೋದಿಯವರ ಮಹದಾಸೆಯಾಗಿತ್ತು. ಅದಕ್ಕಾಗಿ ಅವರು ಅಧಿಕಾರ ಮತ್ತು ಇಡಿ-ಸಿಬಿಐ-ಐಟಿ ಎಂಬ ಸರ್ಕಾರಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಮಟ್ಟ ಹಾಕಿದರು. ಚುನಾವಣೆ ಎಂಬ ರಣರಂಗದಲ್ಲಿ ಎದುರಾಳಿಗಳೇ ಇಲ್ಲದಂತೆ ನೋಡಿಕೊಂಡರು. ಒಬ್ಬರೇ ಓಡಾಡಿ, ಹಾಳೂರಿಗೆ ಉಳಿದವನೇ ಗೌಡನಾಗಿ ಮತ್ತೆ ಅಧಿಕಾರಕ್ಕೇರುವುದು ನಿಶ್ಚಿತ ಎಂದುಕೊಂಡರು.
ಆದರೆ ನೆಲದ ನ್ಯಾಯ ಹಾಗೂ ಮತದಾರ ಪ್ರಭುವಿನ ಮುಂದೆ ಮೋದಿಯವರ ಆಟ ನಡೆಯದಾಯಿತು. ಏ. 7ರ ಮೊದಲ ಹಂತದ ಮತದಾನವಾಗುತ್ತಿದ್ದಂತೆ, ಮೋದಿ ವರ್ಚಸ್ಸು ಕಳೆಗುಂದತೊಡಗಿತು. ಏ. 26 ಮತ್ತು ಮೇ 7ರ ನಂತರವಂತೂ ಮೋದಿ ಅಲೆ ಮಾಯವಾಗಿ ಬದಲಾವಣೆಯ ಹೊಸ ಗಾಳಿ ಬೀಸತೊಡಗಿತು. ಸರ್ವಧರ್ಮಗಳನ್ನು ಸಮಾನವಾಗಿ ಕಾಣಬೇಕಾದ ಪ್ರಧಾನಿಗಳು ವಿಚಲಿತರಾಗಿ, ಮೊಘಲ್, ಮುಸ್ಲಿಂ, ಮೀಸಲಾತಿ, ಮಂಗಳಸೂತ್ರಕ್ಕೆ ಕೈ ಹಾಕಿದರು. ಕೀಳು ಮಟ್ಟದ ಭಾಷೆ ಬಳಸಿ ಕೆಟ್ಟದಾಗಿ ಮಾತನಾಡತೊಡಗಿದರು. ರಾಮನನ್ನು ಎಳೆದುತಂದು ಹಿಂದೂ ಹೃದಯ ಸಾಮ್ರಾಟನ ಪೋಸು ಕೊಡತೊಡಗಿದರು. ಮೊದಮೊದಲು ರಾಹುಲ್ ಗಾಂಧಿಯನ್ನು ಪಪ್ಪು ಎಂದು ಗೇಲಿ ಮಾಡುತ್ತಿದ್ದ ಬಿಜೆಪಿಗರು, ‘ಈ ಚುನಾವಣೆ ಮೋದಿ ವರ್ಸಸ್ ರಾಹುಲ್ ಗಾಂಧಿಯದು’ ಎಂದು ಬಹಿರಂಗವಾಗಿ ಹೇಳುವ ಮಟ್ಟಕ್ಕೆ ಬಂದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವೋಟಿಗಾಗಿ ಮುಸ್ಲಿಂ ಜನಸಂಖ್ಯೆ ಹೆಚ್ಚಳದ ಗುಮ್ಮ ಬಿಟ್ಟರು ಹತಾಶ ಮೋದಿ
ಬಿಜೆಪಿ ಹೇಳಿಕೊಳ್ಳುತ್ತಿದ್ದ 400ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೇವೆ ಎಂಬ ಮಾತು, ದಿನ ಕಳೆದಂತೆ ‘ಮೋದಿ ಜುಮ್ಲಾ’ ಖಾತೆಗೆ ಜಮೆಯಾಗತೊಡಗಿದೆ. ಸೋಲಿನ ವಾಸನೆ ಹಿಡಿದ ಪ್ರಧಾನಮಂತ್ರಿ ಹಾಗೂ ಗೃಹಮಂತ್ರಿ ಕಚೇರಿಯಲ್ಲಿ ತಳವೂರಿದ್ದ ಗುಜರಾತ್ ಮೂಲದ ಉನ್ನತ ಅಧಿಕಾರಿಗಳು, ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡತೊಡಗಿದ್ದಾರೆ. ಮೋದಿಯವರ ಭಜನೆ ಮಾಡುತ್ತಿದ್ದ ಮಾಧ್ಯಮ ಸಂಸ್ಥೆಗಳಾದ ಝೀ ನ್ಯೂಸ್, ಆಜ್ ತಕ್ ಮತ್ತು ಇಂಡಿಯಾ ಟುಡೇ ಸಂಸ್ಥೆಗಳು, ಮೋದಿ ಭಕ್ತ ಪತ್ರಕರ್ತರನ್ನು ಕೆಲಸದಿಂದ ತೆಗೆದಿದ್ದಾರೆ. ಭಜನೆ ನಿಲ್ಲಿಸಿ ಭಿನ್ನರಾಗ ಹಾಡತೊಡಗಿದ್ದಾರೆ. ಕಾಂಗ್ರೆಸ್ಸಿನ ಜಾಹೀರಾತುಗಳನ್ನು ಪ್ರಕಟಿಸುತ್ತಿದ್ದಾರೆ.
ಇದು ಸಾಲದೆಂದು, ಮೋದಿಯೇ ಮುಂದಾಗಿ ಅದಾನಿ-ಅಂಬಾನಿಗಳ ಕಪ್ಪುಹಣ ಕಾಂಗ್ರೆಸ್ಸಿಗೆ ಎಂದು ಹೇಳಿಕೆ ಕೊಟ್ಟು ಎಡವಟ್ಟು ಮಾಡಿಕೊಂಡಿದ್ದಾರೆ. ಒಂದು ಕಡೆಯಿಂದ ರಾಹುಲ್ ಗಾಂಧಿ, ಮತ್ತೊಂದು ಕಡೆಯಿಂದ ಅದಾನಿ-ಅಂಬಾನಿ ಹಾಗೂ ಸೋಷಿಯಲ್ ಮೀಡಿಯಾದ ದಾಳಿಗೆ ಸಿಕ್ಕು ಜರ್ಜರಿತಗೊಂಡಿದ್ದಾರೆ.
ಹಿರಿಯ ಪತ್ರಕರ್ತ ಎನ್. ರಾಮ್, ‘ಚುನಾವಣೆ ತಿರುವು ಪಡೆಯುತ್ತಿದೆಯೇ’ ಎಂದು ಪ್ರಶ್ನಿಸಿದರೆ; ಯುವ ಯೂ ಟ್ಯೂಬರ್ ಧ್ರುವ್ ರಾಠಿ, ‘ಸಮುದ್ರದ ಅಲೆಯಬ್ಬರ ಮಗ್ಗುಲು ಬದಲಿಸಿದೆ… ಬೀಸಲಿದೆ ಚಂಡಮಾರುತವೊಂದು’ ಎಂದಿದ್ದಾರೆ.
ಇದೇ ಸಮಯಕ್ಕೆ ಸರಿಯಾಗಿ ಸರ್ವೊಚ್ಚ ನ್ಯಾಯಾಲಯ ಅರವಿಂದ ಕೇಜ್ರಿವಾಲ್‌ರಿಗೆ ಮಧ್ಯಂತರ ಜಾಮೀನು ನೀಡಿದೆ. ಉಳಿದಿರುವ ನಾಲ್ಕು ಹಂತಗಳ ಚುನಾವಣೆಯಲ್ಲಿ ಕೇಜ್ರಿವಾಲ್ ಬಿರುಸಿನ ಭಾಷಣಕ್ಕೆ ಸಿದ್ಧರಾಗುತ್ತಿದ್ದಾರೆ. ಇಂಡಿಯಾ ಒಕ್ಕೂಟದಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿದೆ. ಬಿಜೆಪಿ ಪಾಳೆಯದಲ್ಲಿ ಉತ್ಸಾಹ ಉಡುಗಿ ಆತಂಕ ಆವರಿಸಿದೆ.
ಇದು ಅಂತಿಂಥ ಬೆಳವಣಿಗೆಯಲ್ಲ, ಸರ್ವಾಧಿಕಾರಿಯ ನಿರ್ಗಮನವನ್ನು ಸೂಚಿಸುವಂಥದ್ದು. ದೇಶದ ಇವತ್ತಿನ ಈ ಬದಲಾವಣೆಗೆ ಮುಖ್ಯ ಕಾರಣ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಬಗ್ಗೆ ತಳೆದ ದಿಟ್ಟ ನಿಲುವು. ಆ ನಂತರ ದೇಶದಲ್ಲಾದ ಬೆಳವಣಿಗೆಗಳು, ಬೆತ್ತಲಾದ ಮೋದಿಯಿಂದ, ‘ನನ್ನ ಸಮಾಧಿಯನ್ನು ವಿಪಕ್ಷ ಬಯಸುತ್ತಿದೆ’ ಎಂದು ಹೇಳಿಸುವಲ್ಲಿಗೆ ತಂದು ನಿಲ್ಲಿಸಿದೆ.
ಇದು ನಿಜವಾದ ಪ್ರಜಾಪ್ರಭುತ್ವ.

ಮೇಲಿನ ವರದಿಯನ್ನು ನೋಡಿದಾಗ ನೀವು ಯಾವ ಪಕ್ಷ ವಹಿಸಿಕೊಂಡು ಹೇಳುತ್ತಿದ್ದೀರ ಎಂದು ತಿಳಿಯಿತು. ನಿಧಾನವಾಗಿ ಮೇಲಿನ ವರದಿ ಓದಿ. ಸತ್ಯ ಏನು ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಿ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಬಾರದಾ. ಪ್ರಜ್ವಲ್ ಈಗ NDA ಗೆ ಸೇರಿದವನಾದರೂ ಶಿಕ್ಷೆ ಆಗುವುದಿಲ್ಲವೇ. ರೇವಣ್ಣ ರನ್ನು ಬಂಧಿಸಿಲ್ಲವೇ. ಕೇಜ್ರಿವಾಲ್ ಮೋಸ ಮಾಡಿರುವುದು ಎಲ್ಲರಿಗೂ ಗೊತ್ತು. ಅಣ್ಣಾ ಹಜಾರೆ ಕೂಡ ಒಪ್ಪಿಲ್ಲವೇ. ಸ್ವಲ್ಪ ತಿಳಿದುಕೊಂಡು ವರದಿ ಮಾಡಿರಿ. ದಯವಿಟ್ಟು.
ಗೆಳೆಯ, ನಮ್ಮ ದೇಶದ ಕಾನೂನಿನಲ್ಲಿ ದೇಶದ್ರೋಹ, ಭಯೋತ್ಪಾದನೆ ಮುಂತಾದ ತೀವ್ರತವಾದ ಕೃತ್ಯಗಳಿಗೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಲ್ಲಿ ಬೆಲ್ ಸಿಗುವುದು ಕಷ್ಟ, ಆದರೆ ಈಗ 2018 ರಲ್ಲಿ Prevention of corruption act ಗೆ ತಿದ್ದುಪಡಿ ತಂದು ED ಒಬ್ಬ ವ್ಯಕ್ತಿ ಭ್ರಷ್ಟಾಚಾರ ಮಾಡಿದ್ದಾನೆ ಎಂಬ ಅನುಮಾನದ ಮೇಲೆ ಬಂಧಿಸಿ ಸುದೀರ್ಘವಾಗಿ ವರ್ಷಗಳ ಕಾಲ ವಿಚಾರಣೆ ಮಾಡಬಹುದು ಎಂಬ ತಿದ್ದುಪಡಿ ಮಾಡಿದೆ. ಹಾಗಾಗಿ ಈ ಕಾಯ್ದೆಯನ್ವಯ ನೀವು ಭ್ರಷ್ಟಾಚಾರ ಮಾಡಿದ್ದರೂ ಅಥವಾ ಮಾಡಿರಬಹುದು ಎಂದು ಬಂಧಿಸಬಹುದು. ಬಂಧಿಸಲಿ ತೊಂದರೆ ಇಲ್ಲ ಆದರೆ ತಮ್ಮ ಪಕ್ಷಕ್ಕೆ ಅನುಕೂಲವಾಗುವ ಭ್ರಷ್ಟಾಚಾರಿಗಳನ್ನು ತಮ್ಮೊಂದಿಗೆ ಸೇರಿಸಿಕೊಳ್ಳೋದು (ಉದಾ: ಅಜಿತ್ ಪವಾರ್) ತಮ್ಮ ಕಡು ವಿರೋಧಿಗಳನ್ನು ಭ್ರಷ್ಟಾಚಾರಿಗಳೆಂದು ಬಿಂಬಿಸೋದು. ನಮ್ಮ ಪ್ರದಾನಿಗಳು ಅಂತ ಭ್ರಷ್ಟಾಚಾರ ಕಡು ವಿರೋದಿಯಾದರೆ ಎಲ್ಲರಿಗೂ ಸಮಾನವಾಗಿ ಪರಿಗಣಿಸಲ್ಪಡುವ ಸ್ವತಂತ್ರವಾಗಿ ನೇಮಕವಾಗಿ, ಕಾರ್ಯನಿರ್ವಹಿಸಬಲ್ಲ ಲೋಕಪಾಲವನ್ನು ಜಾರಿಗೊಳಿಸಬಹುದಲ್ಲವೇ.
ಅವರು ಅಧಿಕಾರ ಪಡೆಯಲು ಅದು ಒಂದು ಮುಖ್ಯ ವಿಚಾರವಾಗಿತ್ತು ಆದರೆ ಈಗ…….. ಅದರ ನೆನಪೇ ಇಲ್ಲ
ಈ ಪತ್ರಿಕೆಯ ವರಸೆ ನೋಡಿದಾಗ ಗೊತ್ತಾಯಿತು ಇದೊಂದು ಕಳಂಕಿತರಿಗೆ ಬೆಂಬಲಿಸುವ ಎಂಜಲು ಗೀಚುವ ಚಾಳಿಯದ್ದು. ಇನ್ನು ಕೆಲವೇ ದಿನದಲ್ಲಿ ತಿಳಿಯುತ್ತದೆ ವಾಸ್ತವ್ಯ ಏನು ಅಂತ. ಇಂತಹ ಪತ್ರಿಕಾ ಧರ್ಮಕ್ಕೆ ಧಿಕ್ಕಾರವಿರಲಿ