ರಾಜಕಾರಣದಲ್ಲಿ ಭ್ರಷ್ಟಾಚಾರ ಎನ್ನುವುದು ಆಡಳಿತದಲ್ಲಿ, ವ್ಯವಸ್ಥೆಯಲ್ಲಿ ರಕ್ತ-ಮಾಂಸದಂತೆ ಬೆರೆತುಹೋಗಿದೆ. ಜನ ಕೂಡ ಅದನ್ನು ಒಪ್ಪಿಕೊಂಡಿದ್ದಾರೆಂಬ ಅನುಮಾನ ಹುಟ್ಟುತ್ತದೆ. ಆದರೂ, ರಾಜಕಾರಣಿಗಳು ಮತ್ತು ಸುದ್ದಿ ಮಾಧ್ಯಮಗಳು ಇವತ್ತಿಗೂ ಭ್ರಷ್ಟಾಚಾರ ಕುರಿತು ಗಂಭೀರವಾಗಿ ಚರ್ಚಿಸುತ್ತಾರೆ. ಅರ್ಥಹೀನ ಪ್ರಲಾಪವಾದರೂ ಅದನ್ನೇ ಅಸ್ತ್ರದಂತೆ ಬಳಸುತ್ತಾರೆ.
‘ಭ್ರಷ್ಟಾಚಾರಿಗಳಿಂದ, ಭ್ರಷ್ಟಾಚಾರಿಗಳಿಗೋಸ್ಕರ, ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ’ ಎಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಮುಡಾ ಮತ್ತು ವಾಲ್ಮೀಕಿ ಅಕ್ರಮ ಹಣ ವರ್ಗಾವಣೆ ಹಗರಣಗಳನ್ನು ಜನತೆಗೆ ತಿಳಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಪಕ್ಷಗಳು ಹಮ್ಮಿಕೊಂಡಿರುವ ಪಾದಯಾತ್ರೆ ಕುರಿತು ಲೇವಡಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ‘ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭ್ರಷ್ಟಾಚಾರದ ಪಿತಾಮಹ. ಕಾಂಗ್ರೆಸ್ ನಡೆಸುತ್ತಿರುವುದು ಪಶ್ಚಾತ್ತಾಪದ ಯಾತ್ರೆ. ಭ್ರಷ್ಟಾಚಾರರಹಿತ ಆಡಳಿತ ನಡೆಸುವ ಭರವಸೆ ನೀಡಿ, ಜನರ ಕಿವಿಗೆ ಹೂವು ಮುಡಿಸಿದ್ದಾರೆ. ಹಗರಣಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಉತ್ತರ ಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಕೊಂಚ ಸಿಟ್ಟಾದ ಶಿವಕುಮಾರ್, ‘ನೀನು ಗಂಡಸೇ ಆಗಿದ್ದರೆ, ನಾನು ಮಹಾಭ್ರಷ್ಟ ಎಂಬುದಕ್ಕೆ ದಾಖಲೆ ಬಿಡುಗಡೆ ಮಾಡಬೇಕು. ನಿನ್ನದು ಏನೇನು ಇದೆಯೋ ಅದೆಲ್ಲವನ್ನೂ ಬಿಚ್ಚಿಡುತ್ತೇನೆ’ ಎಂದಿದ್ದಾರೆ. ಅಷ್ಟೇ ಅಲ್ಲ, ‘ಎಚ್.ಡಿ ದೇವೇಗೌಡ ಮತ್ತು ಅವರ ಕುಟುಂಬದ ಆಸ್ತಿಯ ಮೂಲ ಮತ್ತು ಮೌಲ್ಯದ ವಿವರಗಳನ್ನು ಕುಮಾರಸ್ವಾಮಿ ಬಿಚ್ಚಿಡಬೇಕು’ ಎಂದು ಅಬ್ಬರಿಸಿದ್ದಾರೆ.
ಇತ್ತೀಚೆಗೆ ಮುಗಿದ ಮುಂಗಾರು ಅಧಿವೇಶನದ ಸಂದರ್ಭದಲ್ಲಿ, ಮುಡಾ ಮತ್ತು ವಾಲ್ಮೀಕಿ ಹಗರಣಗಳ ಕುರಿತ ವಿಪಕ್ಷ ನಾಯಕರು ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿದಾಗ, ಕೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ನಿಮ್ಮದನ್ನೂ ಬಿಚ್ಚಿಡುತ್ತೇನೆ’ ಎಂದು ಬೆದರಿಕೆ ಹಾಕಿದರು. ಅಷ್ಟೇ ಅಲ್ಲ, ಬಿಜೆಪಿ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ನಡೆದಿದ್ದ 22 ಹಗರಣಗಳನ್ನು ದಾಖಲೆಸಮೇತ ಪತ್ರಿಕೆಗಳಿಗೆ ಜಾಹೀರಾತು ನೀಡುವ ಮೂಲಕ, ಬಯಲು ಮಾಡಿ, ಬಾಯ್ಮುಚ್ಚಿಸಲು ನೋಡಿದರು.
ಸದನ ಮುಗಿದ ನಂತರ, ಮೂಡಾ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇವರ ಈ ನಡೆಯಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 55.80 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಾಮಾಜಿಕ ಹೋರಾಟಗಾರ ಟಿ.ಜೆ ಅಬ್ರಹಾಂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರಿಗೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ. ಅಬ್ರಹಾಂ ದೂರು ಕೊಟ್ಟ ದಿನವೇ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಸಾಮಾಜಿಕ ಹೋರಾಟಗಾರ ಟಿ.ಜೆ ಅಬ್ರಹಾಂ ಕುರಿತು ಡಿ.ಕೆ. ಶಿವಕುಮಾರ್, ‘ಆತ ಬ್ಲ್ಯಾಕ್ ಮೇಲ್ ಗಿರಾಕಿ. ಆತನ ಮೇಲೆ ಸುಲಿಗೆಯ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಮಂತ್ರಿ ಪರಿಷತ್ ಸಭೆಯಲ್ಲಿ ಅಬ್ರಹಾಂ ಕೊಟ್ಟಿರುವ ಖಾಸಗಿ ದೂರನ್ನು ತಿರಸ್ಕರಿಸಲು, ಮುಖ್ಯಮಂತ್ರಿಗೆ ನೀಡಿರುವ ನೋಟಿಸನ್ನು ವಾಪಸ್ ಪಡೆಯಲು ಸಭೆ ನಿರ್ಣಯಿಸಿರುವುದನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ’ ಎಂದಿದ್ದಾರೆ.
80ರ ದಶಕದಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ವಿರುದ್ಧ ಬಾಟ್ಲಿಂಗ್, ರೇವಜೀತು ಮತ್ತು ಟೆಲಿಫೋನ್ ಟ್ಯಾಪಿಂಗ್ ಹಗರಣಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲ ಜಿ. ವೆಂಕಟಸುಬ್ಬಯ್ಯನವರಿಗೆ ದೂರು ಸಲ್ಲಿಸಲಾಗಿತ್ತು. ಅದೇ ರೀತಿ 2011ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಡಿ ನೋಟಿಫಿಕೇಷನ್ ಸಂಬಂಧ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ರಿಗೆ ದೂರು ನೀಡಲಾಗಿತ್ತು. ಇಬ್ಬರ ಮೇಲಿನ ಆರೋಪಗಳು ಮೇಲ್ನೋಟಕ್ಕೇ ಸಾಬೀತಾಗಿ, ಇಬ್ಬರು ಮುಖ್ಯಮಂತ್ರಿಗಳೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.
ಇದಕ್ಕೂ ಹಿಂದೆ, 1972ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಆಡಳಿತದಲ್ಲಿ ಹಲವಾರು ಸುಧಾರಣೆಗಳನ್ನು ತಂದು, ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಹೆಸರು ಗಳಿಸಿದ್ದರು. ಆ ಸಂದರ್ಭದಲ್ಲಿ ಮೇಲ್ಮನೆಯಲ್ಲಿ ಎ.ಕೆ. ಸುಬ್ಬಯ್ಯನವರು, ಕೆಳಮನೆಯಲ್ಲಿ ಎಚ್.ಡಿ. ದೇವೇಗೌಡರು ವಿಪಕ್ಷ ನಾಯಕರಾಗಿದ್ದರು. ಪ್ರತಿದಿನ ಒಂದಿಲ್ಲೊಂದು ಹಗರಣವನ್ನು ಬಯಲಿಗೆಳೆದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಕೊನೆಗೆ ದೇವರಾಜ ಅರಸು ಅವರ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ತನಿಖೆಗಾಗಿ ಕೇಂದ್ರ ಸರ್ಕಾರ ಗ್ರೋವರ್ ಕಮಿಷನ್ ನೇಮಕ ಮಾಡಿತು. ವಿಚಾರಣೆ, ತನಿಖೆ ನಡೆದು ಅರಸು ಆರೋಪಮುಕ್ತರಾದಾಗ, ವಿಪಕ್ಷ ನಾಯಕ ದೇವೇಗೌಡರು 1978ರಲ್ಲಿ, ವಿಧಾನಸಭೆಯಲ್ಲಿ ‘ಇನ್ನುಮುಂದೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ’ ಎಂದು ಶಪಥ ಮಾಡಿದ್ದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪತ್ರಿಕಾ ಸ್ವಾತಂತ್ರ್ಯವನ್ನು ನೇಣಿಗೇರಿಸಲು ಮೋದಿ ಸರ್ಕಾರ ಹೊಸೆಯುತ್ತಿರುವ ಹೊಸ ಕುಣಿಕೆ ‘ಬ್ರಾಡ್ಕಾಸ್ಟ್ ಬಿಲ್’
ರಾಜ್ಯ ರಾಜಕಾರಣದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಹಲವಾರು ಘಟನೆಗಳು ತೆರೆದುಕೊಳ್ಳುತ್ತವೆ. ಹಲವು ನಾಯಕರ ನಿಜಬಣ್ಣವೂ ಬಯಲಾಗುತ್ತದೆ. ಸರ್ಕಾರಗಳು ಉರುಳಿದ್ದಕ್ಕೆ ಸಾಕ್ಷಿಗಳೂ ಸಿಗುತ್ತವೆ. ರಾಜಕಾರಣದಲ್ಲಿ ಭ್ರಷ್ಟಾಚಾರ ಎನ್ನುವುದು ಲಂಚ, ವಸೂಲಿ, ಉಡುಗೊರೆ, ಲಾಬಿ, ಶಿಫಾರಸು, ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗಗಳ ರೂಪದಲ್ಲಿರುವಂಥದ್ದು. ಅದು ಆಡಳಿತದಲ್ಲಿ, ವ್ಯವಸ್ಥೆಯಲ್ಲಿ ರಕ್ತ-ಮಾಂಸದಂತೆ ಬೆರೆತುಹೋಗಿದೆ. ಜನ ಕೂಡ ಅದನ್ನು ಒಪ್ಪಿಕೊಂಡಿದ್ದಾರೆಂಬ ಅನುಮಾನ ಹುಟ್ಟುತ್ತದೆ. ಆದರೂ, ರಾಜಕಾರಣಿಗಳು ಮತ್ತು ಸುದ್ದಿ ಮಾಧ್ಯಮಗಳು ಇವತ್ತಿಗೂ ಭ್ರಷ್ಟಾಚಾರ ಕುರಿತು ಗಂಭೀರವಾಗಿ ಚರ್ಚಿಸುತ್ತಾರೆ. ಅರ್ಥಹೀನ ಪ್ರಲಾಪವಾದರೂ ಅದನ್ನೇ ಅಸ್ತ್ರದಂತೆ ಬಳಸುತ್ತಾರೆ.
ಬಿಜೆಪಿಯ ಭ್ರಷ್ಟಾಚಾರವನ್ನು ಅಸ್ತ್ರದಂತೆ ಬಳಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ 14 ತಿಂಗಳು ಕಳೆಯುವಷ್ಟರಲ್ಲಿಯೇ ಎರಡು ಗುರುತರ ಆರೋಪಗಳಿಗೆ ಗುರಿಯಾಗಿದೆ. ವಿರೋಧ ಪಕ್ಷದಲ್ಲಿರುವ ಬಿಜೆಪಿ ಮತ್ತು ಜೆಡಿಎಸ್, ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಂಡಿವೆ. ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಸರಣಿ ಸಮಾವೇಶ ಶುರುಮಾಡಿದೆ. ಅವರು ಇವರನ್ನು ಭ್ರಷ್ಟರು ಎನ್ನುತ್ತಿದ್ದಾರೆ; ಇವರು ಅವರನ್ನು ಭ್ರಷ್ಟರು ಎನ್ನುತ್ತಿದ್ದಾರೆ. ಅಂದರೆ ಇಬ್ಬರೂ ಭ್ರಷ್ಟರೇ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಇಬ್ಬರೂ ಕಳೆದುಕೊಂಡಿದ್ದಾರೆ. ಒಂದು ರೀತಿಯಲ್ಲಿ ರಾಜಕೀಯ ನಾಯಕರು ಹೀಗೆ ಸಾರ್ವಜನಿಕವಾಗಿ ಒಬ್ಬರನ್ನೊಬ್ಬರು ಬಿಚ್ಚಿಡುವುದು, ಬೆತ್ತಲಾಗುವುದು ಒಳ್ಳೆಯದೇ.
ಆದರೆ, ನೈತಿಕತೆ ಇಲ್ಲದವರನ್ನು ನಾಯಕರೆಂದುಕೊಳ್ಳುವುದು, ಅವರನ್ನೇ ಮತ್ತೆ ಮತ್ತೆ ಆಯ್ಕೆ ಮಾಡಿಕೊಳ್ಳುವುದು, ಅವರಾರಿಗೂ ಶಿಕ್ಷೆಯಾಗದಿರುವುದು ವ್ಯವಸ್ಥೆಯ ಬಗ್ಗೆ ಸಿಟ್ಟು ತರಿಸುತ್ತದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಕೂಡ ವ್ಯರ್ಥವೆನಿಸುತ್ತದೆ. ಸರಳ ಶಿಸ್ತು ರೂಢಿಸಿಕೊಂಡ ಪ್ರಾಮಾಣಿಕರಿಗೆ ರೇಜಿಗೆ ಹುಟ್ಟಿಸುತ್ತದೆ. ಆದರೆ ಸುಲಭದ ಹಣ- ಲಂಚದ ಹಣ- ಅಮೇಧ್ಯ ಎನ್ನುವುದು, ತಿಂದವರ ತಿಳಿವಳಿಕೆಗೆ ಬಂದು ಬದಲಾಗುವವರೆಗೂ ಕಾಯಬೇಕಷ್ಟೇ.