ಬಿಜೆಪಿ ಜೊತೆ ಮೈತ್ರಿಯ ನಂತರ ಬಿಜೆಪಿ ನಾಯಕರಿಗಿಂತ ಎಚ್ ಡಿ ಕುಮಾರಸ್ವಾಮಿಯವರೇ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರದ ಹಗರಣಗಳ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿ ಪತ್ರಿಕಾಗೋಷ್ಠಿ ಕರೆದು ಹುರುಳಿಲ್ಲದ ಆರೋಪ ಮಾಡಿ ನಗೆ ಪಾಟಲಿಗೀಡಾಗುತ್ತಿದ್ದಾರೆ. ಆರೋಪಗಳಿಗೆ ದಾಖಲೆ ನೀಡುವಲ್ಲಿ ವಿಫಲರಾಗುತ್ತಿದ್ದಾರೆ.
ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಹೀನಾಯವಾಗಿ ಸೋತ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಸದಾ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ವಿರುದ್ಧ ಒಂದಿಲ್ಲೊಂದು ಆರೋಪ ಮಾಡುತ್ತಲೇ ಬಂದಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೀಳುಮಟ್ಟದ ಪೋಸ್ಟ್‌ಗಳನ್ನು ಹಾಕಿ ಟೀಕೆಗೂ ಒಳಗಾಗಿದ್ದರು.
ಬಿಜೆಪಿ ಜೊತೆ ಮೈತ್ರಿಯ ನಂತರ ಬಿಜೆಪಿ ನಾಯಕರಿಗಿಂತ ಕುಮಾರಸ್ವಾಮಿಯವರೇ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಸರ್ಕಾರದ ವಿರುದ್ಧ ಮತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕನಂತೆ ಅವರು ನಿರಂತರ ಸಕ್ರಿಯರು. ಪ್ರತಿಪಕ್ಷಗಳ ನಿಜವಾದ ಪಾತ್ರವಿದು. ಅಷ್ಟರಮಟ್ಟಿಗೆ ಕುಮಾರಸ್ವಾಮಿ ಸಂಸದೀಯ ಜನತಂತ್ರದ ಉತ್ತಮ ಮಾದರಿ. ಆದರೆ, ಕಾಂಗ್ರೆಸ್ ಸರ್ಕಾರದ ಹಗರಣಗಳ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿ ಪತ್ರಿಕಾಗೋಷ್ಠಿ ಕರೆದು ಹುರುಳಿಲ್ಲದ ಆರೋಪ ಮಾಡಿ ನಗೆ ಪಾಟಲಿಗೀಡಾಗುತ್ತಿದ್ದಾರೆ. ಆರೋಪಗಳಿಗೆ ಅವರು ಸೂಕ್ತ ಪುರಾವೆ ಒದಗಿಸುತ್ತಿಲ್ಲ. ಆರೋಪಗಳನ್ನು ಸಾಬೀತು ಮಾಡುವಲ್ಲಿ ವಿಫಲರಾಗುತ್ತಿದ್ದಾರೆ.
ಸರ್ಕಾರ ಅಧಿಕಾರಕ್ಕೆ ಬಂದು ಒಂದೆರಡು ತಿಂಗಳಾಗುತ್ತಿದ್ದಂತೆ ಮುಖ್ಯಮಂತ್ರಿಗಳ ಪುತ್ರ ಡಾ ಯತೀಂದ್ರ ಅವರು ಸಿ ಎಂ ಕಚೇರಿಯಲ್ಲಿಯೇ ವರ್ಗಾವಣೆ ಧಂದೆ ನಡೆಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಪುರಾವೆ, ವಿಡಿಯೋ ಸಾಕ್ಷ್ಯ ನನ್ನ ಬಳಿ ಇವೆಯೆಂದು ಪೆನ್‌ಡ್ರೈವ್ ತೋರಿಸಿ ತಮ್ಮ ಜೇಬಿನಲ್ಲೇ ಇರಿಸಿಕೊಂಡಿದ್ದರು. ಆ ಪೆನ್‌ಡ್ರೈವ್‌ನಲ್ಲಿ ಏನಿದೆ ಎಂದು ಇದುವರೆಗೂ ಬಹಿರಂಗ ಆಗಲೇ ಇಲ್ಲ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ಮಾಧ್ಯಮಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದರು. ಈಗಲೂ ಅವಕಾಶ ಸಿಕ್ಕಾಗಲೆಲ್ಲ ಮಾಧ್ಯಮ ಪ್ರತಿನಿಧಿಗಳು ಪೆನ್ ಡ್ರೈವ್ ಯಾವಾಗ ಕೊಡ್ತೀರಿ ಎಂದು ಕೇಳುತ್ತಿದ್ದಾರೆ.
ಸದ್ಯ ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿ ಮಾಡಿ, “ವಿಜಯೇಂದ್ರ ಬಗ್ಗೆ ಆರೋಪ ಮಾಡಿದ್ದ ಸಿದ್ದರಾಮಯ್ಯ ದೊಡ್ಡ ಪ್ರಾಮಾಣಿಕರಾ” ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂದ್ರ ಹತ್ತಾರು ಮಂದಿ ಇರುವ ಸಭೆಯೊಂದರಲ್ಲಿ ಜನರ ಅಹವಾಲು ಸ್ವೀಕರಿಸುತ್ತ, ಅದೇ ಸಮಯದಲ್ಲಿ ಫೋನ್‌ನಲ್ಲಿ ಮಾತನಾಡುತ್ತಿರುವ ವಿಡಿಯೊವನ್ನು ಶೇರ್ ಮಾಡಿ, “ಕಾಸಿಗಾಗಿ ಹುದ್ದೆ ಉರುಫ್ #CashForPosting ಧಂದೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. Indian National Congress – Karnataka ಸರಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ” ಎಂದು ಬರೆದಿದ್ದಾರೆ.
ಆದರೆ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿರುವ ಸಂಭಾಷಣೆಯಲ್ಲಿ ವರ್ಗಾವಣೆ ಕುರಿತ ಮಾತುಕತೆ ಎಂಬ ಅನುಮಾನ ಬರುವ ಯಾವುದೇ ಅಂಶ ಇಲ್ಲ. ನ. 12 ರಂದು ದೀಪಾವಳಿಯ ದಿನ ಎಚ್‌ಡಿಕೆ ಅವರ ಜೆಪಿ ನಗರದ ಮನೆಗೆ ದೀಪಾಲಂಕಾರ ಮಾಡಲು ಅನಧಿಕೃತವಾಗಿ ರಸ್ತೆ ಬದಿಯ ಕಂಬದಿಂದ ವಿದ್ಯುತ್ ಪಡೆದಿದ್ದಾರೆ ಎಂಬ ದೂರು ಬಂದ ನಂತರ ಅವರ ಮೇಲೆ ಬೆಸ್ಕಾಂ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದರು. ಈ ವಿಚಾರ ಒಂದಿಷ್ಟು ಕೆಸರೆರಚಾಟಕ್ಕೂ ಕಾರಣವಾಗಿತ್ತು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಚೇರಿಯ ಆವರಣದಲ್ಲಿ ಅವಮಾನಕರ ಪೋಸ್ಟರ್ ಅಂಟಿಸಿರುವುದು ಈ ಎಲ್ಲ ಬೆಳವಣಿಗೆಗಳಿಂದ ಎಚ್‌ಡಿಕೆ ಅವರು ಇನ್ನಷ್ಟು ವ್ಯಗ್ರರಾಗಿ ಇಂದು ಪ್ರತಿಕ್ರಿಯಿಸಿದಂತಿದೆ.
ಕುಮಾರಸ್ವಾಮಿ ಅವರ ಆರೋಪವನ್ನು ಅಲ್ಲಗಳೆದಿರುವ ಸಿಎಂ ಸಿದ್ದರಾಮಯ್ಯ ಅವರು, ವರುಣ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರು ಮತ್ತು ಕೆಡಿಪಿ ಸದಸ್ಯರಾಗಿರುವ ಮಾಜಿ ಶಾಸಕ ಡಾ.ಯತೀಂದ್ರ ಅವರು ಸಿಎಸ್‌ಆರ್ ಹಣವನ್ನು ಬಳಸಿಕೊಂಡು ಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗಳ ಸುಧಾರಣೆಗೆ ತೊಡಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಐದು ಫಲಾನುಭವಿ ಶಾಲೆಗಳ ಪಟ್ಟಿ ಬಗ್ಗೆ ಮಾತನಾಡಿದ್ದಾರೆ ಎಂದು ಆ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ.
ಅದೇನೇ ಇದ್ದರೂ ಎಚ್‌ಡಿ ಕುಮಾರಸ್ವಾಮಿ ಅವರು ಹೀಗೆ ಆಧಾರ ರಹಿತ ಆರೋಪ ಮಾಡುವುದರ ಉದ್ದೇಶ ಏನು? ಸದಾ ಒಂದಿಲ್ಲೊಂದು ಆರೋಪ ಮಾಡುತ್ತಾ ಸರ್ಕಾರದ ವಿರೋಧಿಗಳಿಗೆ ಆಹಾರ ಒದಗಿಸುವುದು, ಈ ಆರೋಪಗಳನ್ನು ಜನರು ಸದಾ ನೆನಪಿನಲ್ಲಿಟ್ಟುಕೊಂಡು ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಲಿ ಎಂಬ ಉದ್ದೇಶ ಇರುವಂತಿದೆ. ಆದರೆ, ಒಬ್ಬ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಆಗಿದ್ದು ತನ್ನ ಆರೋಪಗಳಲ್ಲಿ ಸತ್ಯಾಂಶ ಇರಬೇಕು ಎಂದು ಜನ ಬಯಸುತ್ತಾರೆ ಎಂಬ ಕನಿಷ್ಠ ಅರಿವು ಅವರಿಗೆ ಇದ್ದಂತಿಲ್ಲ.
ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲಾರದೆ ಯೋಜನೆ ಹಳ್ಳ ಹಿಡಿದಿದೆ ಎಂಬುದು ಎಚ್‌ಡಿಕೆ ಅವರ ಮತ್ತೊಂದು ಆರೋಪ. ವಾಸ್ತವದಲ್ಲಿ ಶಕ್ತಿ ಯೋಜನೆ ಜಾರಿಯಾಗಿ ಐದು ತಿಂಗಳು ಕಳೆದಿದೆ. ಅದರ ಬಗ್ಗೆ ಯಾವುದೇ ದೂರುಗಳಿಲ್ಲ. ನಷ್ಟದಲ್ಲಿದ್ದ ಕೆಎಸ್‌ಆರ್‌ಟಿಸಿಯ ನಾಲ್ಕೂ ವಲಯಗಳು ಲಾಭದಲ್ಲಿ ನಡೆಯುತ್ತಿದ್ದು, ಒಂದು ಸಾವಿರಕ್ಕೂ ಹೆಚ್ಚು ಹೊಸ ಬಸ್‌ಗಳನ್ನು ಖರೀದಿಸಲಾಗುತ್ತಿದೆ. ಸಿಬ್ಬಂದಿ ವೇತನ ಬಿಡುಗಡೆಯೂ ವಿಳಂಬವಿಲ್ಲದೇ ಆಗುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಅರ್ಜಿ ಹಾಕಿದ ಎಲ್ಲರಿಗೂ ನಾಲ್ಕು ತಿಂಗಳಿಂದ 200 ಯೂನಿಟ್ ಉಚಿತ ವಿದ್ಯುತ್ ಸಿಗುತ್ತಿದೆ. ಗೃಹಲಕ್ಷಿ ಯೋಜನೆಯಲ್ಲಿ ಮೊದಲ ಕಂತು ಜಮೆ ಆದ ನಂತರ ಉಂಟಾದ ಕೆಲವು ತಾಂತ್ರಿಕ ತೊಂದರೆಯಿಂದಾಗಿ ಎರಡು ತಿಂಗಳು ಹಣ ಹಾಕಿರಲಿಲ್ಲ. ಈಗ ಅದೂ ಸರಿಯಾಗಿದೆ. ಈ ತಿಂಗಳ ಮೊದಲ ವಾರವೇ ಎರಡು ತಿಂಗಳ ಕಂತು ಒಟ್ಟಿಗೆ ಮಹಿಳೆಯರ ಖಾತೆಗಳಿಗೆ ಜಮೆಯಾಗಿದೆ. ಯುವನಿಧಿ ಡಿಸೆಂಬರ್‌ನಲ್ಲಿ ಜಾರಿಗೊಳಿಸುವ ಭರವಸೆ ಸರ್ಕಾರ ನೀಡಿದೆ. ಇಷ್ಟು ವಾಸ್ತವಾಂಶಗಳು ನಮ್ಮ ಮುಂದಿರುವಾಗ ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಸಡಿಲ ಹೇಳಿಕೆ ನೀಡಿದರೆ ಅವರ ಗೌರವ ಅವರೇ ಕಳೆದುಕೊಂಡಂತೆ.
ನಿಜ ಏನೆಂದರೆ ಗ್ಯಾರಂಟಿ ಯೋಜನೆಗಳ ಜಾರಿಯೇ ವಿರೋಧ ಪಕ್ಷದವರನ್ನು ಗಾಢ ಚಿಂತೆಗೀಡು ಮಾಡಿದಂತೆ ತೋರುತ್ತಿದೆ. ಒಂದು ಕಡೆ ಒಬ್ಬರಾದ ನಂತರ ಒಬ್ಬರಂತೆ ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಬರುತ್ತಿದೆ. ಎಚ್‌ಡಿಕೆ ಅವರಿಗೆ ತಮ್ಮ ಅಸ್ತಿತ್ವದ ಪ್ರಶ್ನೆ ಗಾಢವಾಗಿ ಕಾಡುತ್ತಿದ್ದಂತಿದೆ.