ಮಳೆಯಿಂದಾಗುವ ಅನಾಹುತ ಕೃಷಿ, ಕಂದಾಯ, ತೋಟಗಾರಿಕೆ, ನೀರಾವರಿ ಇಲಾಖೆಗಳಿಗೆ ತಿಳಿದ ವಿಷಯವೇ ಆಗಿದೆ. ಆದರೆ, ಅದನ್ನು ನಿಭಾಯಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ಸಮಸ್ಯೆ ಎದುರಾದಾಗ ಎಚ್ಚರಗೊಂಡು ಓಡಾಡುವುದು, ಒಂದಷ್ಟು ಕಾಳಜಿ ತೋರುವುದು ಎಲ್ಲ ಸರ್ಕಾರಗಳ ಕಣ್ಣೊರೆಸುವ ತಂತ್ರದ ಭಾಗವೇ ಆಗಿಹೋಗಿದೆ.
ರಾಜ್ಯದಲ್ಲಿ ಈ ಬಾರಿ ಅವಧಿಗೆ ಮುನ್ನವೇ ಬೇಸಿಗೆ ಮುಗಿದು, ಮೇ ತಿಂಗಳಿನಲ್ಲಿಯೇ ಮುಂಗಾರು ಆರಂಭವಾಗಿದೆ. ಮುಂಗಾರು ಮಳೆ ಎನ್ನುವುದು ಕೃಷಿಕರ ಬದುಕಿನಲ್ಲಿ ಸಂಭ್ರಮ ಮೂಡಿಸುವಂಥದ್ದು. ಕೃಷಿ ಚಟುವಟಿಕೆಗಳಿಗೆ ತೊಡಗುವಂಥದ್ದು. ಹೊಸ ಬದುಕಿಗೆ ತೆರೆದುಕೊಳ್ಳುವಂಥದ್ದು. ಆದರೆ, ಈ ಬಾರಿಯ ಮುಂಗಾರು ಮಳೆ ಗ್ರಾಮೀಣ ಜನತೆಯ ಪಾಲಿಗೆ ಸಂಭ್ರಮದ ಸಂಕೇತವಲ್ಲ, ಸೂತಕದ ಛಾಯೆ ಆವರಿಸಿದೆ. ಕೃಷಿ ಮತ್ತು ಅದನ್ನು ಅವಲಂಬಿಸಿದವರ ಬದುಕು ಅಸ್ತವ್ಯಸ್ತವಾಗಿದೆ. ಸಂಕಷ್ಟಗಳನ್ನೇ ತಂದೊಡ್ಡಿದೆ.
ಇಪ್ಪತ್ತು ವರ್ಷಗಳ ಹಿಂದೆ, ಹೀಗಿರಲಿಲ್ಲ. ಜೂನ್ ಮೊದಲ ವಾರದಿಂದ ಆರಂಭವಾಗುವ ಮುಂಗಾರು ಸೆಪ್ಟೆಂಬರ್‍ವರೆಗೆ, ಕಾಲ ಕಾಲಕ್ಕೆ ಬೆಳೆಗಳಿಗೆ ಬೇಕಾದ ಹದ ಮಳೆಯಾಗಿ ಹನಿಯುತ್ತಿತ್ತು. ಹಳ್ಳ, ಕಟ್ಟೆ, ಕೆರೆ, ನದಿ, ಹೊಳೆಗಳು ತುಂಬುತ್ತಿದ್ದವು. ಆ ನಂತರ ಜಲಾಶಯಗಳು ಭರ್ತಿಯಾಗುತ್ತಿದ್ದವು. ವರ್ಷವೆಲ್ಲ ನೀರಿದ್ದು, ಕೃಷಿಗೆ, ಕುಡಿಯುವ ನೀರಿಗೆ, ಜನ-ಜಾನುವಾರಿಗೆ ತೊಂದರೆಯಾಗುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ, ಕಾಲ ಕಾಲಕ್ಕೆ ಬರುವ ಮಳೆ ಮಾಡು ಸೇರಿ, ಮನಸ್ಸು ಬಂದಾಗ ಸುರಿದು ಸಮಸ್ಯೆ ಸೃಷ್ಟಿಸುತ್ತಿದೆ.
ಈ ಬಾರಿ ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಹಾಸನ ಜಿಲ್ಲೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಅದರಲ್ಲೂ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಿಟ್ಲರ್ ತದ್ರೂಪವಾಗಿ ಕಾಣಿಸಿಕೊಂಡ ಇಸ್ರೇಲ್ ಪ್ರಧಾನಿ ನೇತನ್ಯಾಹು?
ಮಳೆಯ ರಭಸಕ್ಕೆ ಗುಡ್ಡ ಕುಸಿತ, ಸೇತುವೆ ಮುರಿತ, ರಸ್ತೆ ಸಂಚಾರ ಅಸ್ತವ್ಯಸ್ತ, ಮನೆಗಳು-ಮರಗಳು-ವಿದ್ಯುತ್ ಕಂಬಗಳು ನೆಲಕ್ಕುರುಳಿ ಅಪಾರ ಹಾನಿಯಾಗಿದೆ. ಕೆಲವು ಕಡೆ ವೃದ್ಧರು-ಮಕ್ಕಳು ಮಳೆ ನೀರಿನಲ್ಲಿ ಕೊಚ್ಚಿಹೋಗಿ ಸಾವು-ನೋವು ಸಂಭವಿಸಿದೆ. ನದಿಗಳು ಉಕ್ಕಿ ಹರಿಯುತ್ತಿವೆ, ಜಲಾಶಯಗಳು ಭರ್ತಿಯಾಗುತ್ತಿವೆ. ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇನ್ನು ಮಳೆ ರೈತರ ಮುಖದಲ್ಲಿ ನಗು ಮೂಡಿಸುತ್ತದೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಮರೆಯಾಗುತ್ತಿದೆ. ಮುಂಗಾರು ಆರಂಭವಾಗುತ್ತಿದ್ದಂತೆ ರೈತರು ತಮ್ಮ ಶಕ್ತಿಮೀರಿ ಹೊಲ-ಗದ್ದೆ-ತೋಟಗಳನ್ನು ಹಸನು ಮಾಡಬಹುದು. ಆದರೆ ಬಿತ್ತನೆ ಬೀಜ, ಗೊಬ್ಬರ ಸಮಯಕ್ಕೆ ಸರಿಯಾಗಿ ಸಿಗದೆ ಭಾರೀ ತೊಂದರೆಗೆ ಈಡಾಗುವುದು, ಅದಕ್ಕಾಗಿ ರೈತರು ಸಾಲುಗಟ್ಟಿ ನಿಲ್ಲುವುದು, ಪ್ರತಿಭಟಿಸುವುದು, ಕೆಲವು ಕಡೆ ಲಾಠಿ ಚಾರ್ಜ್- ಪ್ರತಿವರ್ಷದ ಸಾಮಾನ್ಯ ಸುದ್ದಿಯಾಗಿದೆ.
ಇಷ್ಟಾದರೂ, ಆಳುವ ಸರ್ಕಾರ, ಸಚಿವರು, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಿಲ್ಲ.
ಕಳೆದ ವಾರ ಕೋಲಾರ ಮತ್ತು ಶ್ರೀನಿವಾಸಪುರದ ರೈತರು ಟನ್‌ಗಟ್ಟಲೆ ಮಾವಿನ ಫಸಲನ್ನು ರಸ್ತೆಗೆ ಸುರಿದು ಪ್ರತಿಭಟಿಸಿದರು. ವರ್ಷವೆಲ್ಲ ಮರಗಳನ್ನು ಕಾದು, ಕಷ್ಟಪಟ್ಟು ಬೆಳೆದ ಫಸಲನ್ನು ರೈತರು ರಸ್ತೆಗೆ ಸುರಿಯುತ್ತಾರೆಂದರೆ, ಅವರ ಹೃದಯ ಎಷ್ಟು ಕಲ್ಲಾಗಿರಬೇಕು? ಕೋಲಾರದಲ್ಲಿ ಅತಿಹೆಚ್ಚು ಮಾವು ಬೆಳೆಯುವುದು ಗೊತ್ತಿದ್ದರೂ ಸರ್ಕಾರ, ಅಲ್ಲಿ ಒಂದು ಸಂಸ್ಕರಣಾ ಘಟಕ ಸ್ಥಾಪಿಸಿಲ್ಲ, ಮಾವಿಗೆ ಬೆಂಬಲ ಬೆಲೆ ಘೋಷಿಸಿಲ್ಲ. ಮಾವಿನ ಪಲ್ಪ್‌ನಲ್ಲಿ ಐಸ್ ಕ್ರೀಂ, ಜ್ಯೂಸ್ ಮಾಡುವ ಕೆಎಂಎಫ್ ಕೂಡ ನಮ್ಮ ರೈತರಿಂದ ಮಾವು ಖರೀದಿಸುವುದಿಲ್ಲ. ಪರ್ಯಾಯ ಮಾರ್ಗಗಳನ್ನು ಯೋಚಿಸದ ತೋಟಗಾರಿಕೆ ಸಚಿವರ ಸೋಮಾರಿತನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಲೆ ಕೊಡಬೇಕಾಗಿ ಬಂದಿದೆ. ಆಂಧ್ರದ ಸಿಎಂಗೆ ಮತ್ತು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಅಲ್ಲಿಗೆ ಅವರ ಜವಾಬ್ದಾರಿ ಮುಗಿಸಿದ್ದಾರೆ!
ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಬೀಸುತ್ತಿರುವ ಗಾಳಿಯಿಂದ ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ, ಲಿಂಗಸುಗೂರು ಸೇರಿದಂತೆ ತುಂಗಭದ್ರ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 2.50 ಲಕ್ಷ ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಶೇ.80ರಷ್ಟು ಭತ್ತದ ಬೆಳೆ ನಾಶವಾಗಿದೆ ಎಂದು ರೈತ ಸಂಘ ತಿಳಿಸಿದೆ.
ಬೆಳಗಾವಿ ಜಿಲ್ಲೆಯಲ್ಲಿ 407 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆ ನೆಲವಿಡಿದು ಮಲಗಿದೆ. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಭಾಗಗಳಲ್ಲಿ ಕಟಾವಿಗೆ ಸಿದ್ಧವಾಗಿದ್ದ ಮೆಕ್ಕೆಜೋಳ ನೀರಿನಿಂದ ಹಾಳಾಗಿದೆ. ಹಾವೇರಿ ಜಿಲ್ಲೆಯಲ್ಲಿ ಕೈಗೆ ಬಂದ ಬಿಳಿ ಜೋಳದ ಬೆಳೆ, ಕಟಾವು ಮಾಡಿದ ಜೋಳದ ತೆನೆಗಳು ಭಾರೀ ಮಳೆಯಿಂದ ಇಟ್ಟಲ್ಲಿಯೇ ಮೊಳಕೆಯೊಡೆದಿವೆ.
ಮಲೆನಾಡು ಭಾಗದಲ್ಲಿ ಅಡಿಕೆ ತೋಟಗಳು ಮಳೆಯಿಂದ ಹಾನಿಗೊಳಗಾಗಿವೆ. ಇದರಿಂದ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ. ತೊಗರಿ, ಈರುಳ್ಳಿ, ಹತ್ತಿ, ಕಬ್ಬು, ಶೇಂಗಾ, ಸೋಯಾಬೀನ್, ಮೆಣಸಿನಕಾಯಿ, ಸೂರ್ಯಕಾಂತಿ, ಅರಿಶಿಣ, ಕಾಳುಮೆಣಸು ಕಟಾವಿಗೆ ಸಿದ್ಧವಾಗಿದ್ದ ಬೆಳೆಗಳು ನೀರಿನಿಂದ ಕೊಳೆತಿವೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಕೆಲ ಭಾಗಗಳಲ್ಲಿ ಭಾರೀ ಮಳೆಯಿಂದ ರಾಗಿ ಬೆಳೆ ಕೊಳೆಯುವ ಸ್ಥಿತಿಗೆ ತಲುಪಿವೆ. ಕೋಲಾರ ಜಿಲ್ಲೆಯಲ್ಲಿ ತರಕಾರಿಗಳು ಮತ್ತು ಹೂವಿನ ಬೆಳೆಗಳಿಗೆ ಹಾನಿಯಾಗಿದೆ. ಚಾಮರಾಜನಗರದಲ್ಲಿ ಅರಿಶಿನ, ತರಕಾರಿ ಬೆಳೆಗಳಿಗೆ ತೊಂದರೆಯಾಗಿದೆ. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಂಗಾರು ಮಳೆ ಇಂತಹ ಅವಧಿಯಲ್ಲಿಯೇ ಕಾಣಿಸಿಕೊಳ್ಳುತ್ತದೆ ಎನ್ನುವುದು ಹವಾಮಾನ, ಕೃಷಿ, ತೋಟಗಾರಿಕೆ, ನೀರಾವರಿ ಇಲಾಖೆಗಳಿಗೆ ತಿಳಿದ ವಿಷಯವೇ ಆಗಿದೆ. ಆದರೆ, ಅದನ್ನು ಎದುರಿಸಲು ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ, ಸರ್ಕಾರವಾಗಲಿ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ಸಮಸ್ಯೆ ಎದುರಾದಾಗ ಎಚ್ಚರಗೊಂಡು ಓಡಾಡುವುದು, ಒಂದಷ್ಟು ಕಾಳಜಿ ತೋರುವುದು ಎಲ್ಲ ಸರ್ಕಾರಗಳ ಕಣ್ಣೊರೆಸುವ ತಂತ್ರದ ಭಾಗವೇ ಆಗಿಹೋಗಿದೆ.
ನೆಲ ನಂಬಿ ಬದುಕುವವರಿಗೆ ಮಳೆಯಿಂದಾದ ಅನಾಹುತಗಳು, ಒಂದು ರೀತಿಯಲ್ಲಿ ಹೃದಯ ಹೆಪ್ಪುಗಟ್ಟುವ ವಿಷಯವಾದರೆ; ತುರ್ತು ಕಾರ್ಯಾಚರಣೆ, ಪರಿಹಾರ, ಸಂತ್ರಸ್ತರ ನೆರವಿನ ನೆಪದಲ್ಲಿ ನಡೆಯುವ ‘ಕಾಮಗಾರಿ’ ಸಿಟ್ಟಿಗೇಳಿಸುತ್ತದೆ. ಮಳೆಯಿಂದಾಗುವ ಅವಘಡ ಪರೋಕ್ಷವಾಗಿ ಅಧಿಕಾರಸ್ಥರಿಗೆ ಮತ್ತು ಅಧಿಕಾರಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ. ‘ತುರ್ತು’ ನೆಪದಲ್ಲಿ ಕೋಟ್ಯಂತರ ರೂಪಾಯಿಗಳು ನೀರಿನಂತೆಯೇ ಹರಿದುಹೋಗುತ್ತದೆ.
ರಕ್ಷಣಾ ಕಾರ್ಯಾಚರಣೆ, ಸುರಕ್ಷಿತ ತಾಣಗಳತ್ತ ಸಂತ್ರಸ್ತರ ರವಾನೆ, ತಾತ್ಕಾಲಿಕ ಊಟ-ವಸತಿ ವ್ಯವಸ್ಥೆಯತ್ತ ಗಮನ ಹರಿಸುವ ಜಿಲ್ಲಾಡಳಿತ, ಆ ನಂತರ ಕೊಚ್ಚಿಹೋದ ರಸ್ತೆಗಳು, ಮುರಿದುಬಿದ್ದ ಸೇತುವೆಗಳ ಮರು ನಿರ್ಮಾಣದ ಕಾಮಗಾರಿಗಳತ್ತ ನೋಡುತ್ತದೆ. ಹಾಗಾಗಿ ಸರಕಾರಿ ಇಲಾಖೆಗಳಿಗೆ ಕೈ ತುಂಬಾ ಹೊಸ ಕೆಲಸ, ಅಧಿಕಾರಿಗಳ ಸರಬರ ಓಡಾಟ, ಗುತ್ತಿಗೆದಾರರ ಗೆಬರಾಟ- ಎಲ್ಲವೂ ವಾರದೊಪ್ಪತ್ತಿನಲ್ಲಿ ಮುಗಿದುಹೋಗಿರುತ್ತದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವಿಮಾನಯಾನದ ವಿಶ್ವಾಸ ಕುಂದುತ್ತಿದೆ – ಗಂಭೀರ ಚಿಂತನೆ, ಕ್ರಮಗಳ ಅಗತ್ಯವಿದೆ!
ತಾಲೂಕಿಗೊಬ್ಬರು ಶಾಸಕರಿದ್ದಾರೆ, ಜಿಲ್ಲೆಗೊಬ್ಬರು ಉಸ್ತುವಾರಿ ಸಚಿವರಿದ್ದಾರೆ, ಆಡಳಿತಯಂತ್ರವಿದೆ. ಆದರೂ ಆಳುವ ಸರಕಾರಕ್ಕೆ ಬರವನ್ನು ಎದುರಿಸುವ ಸಾಮರ್ಥ್ಯವೂ ಇಲ್ಲ, ಮಳೆ ಅನಾಹುತವನ್ನು ನಿರ್ವಹಿಸುವ ಬುದ್ಧಿವಂತಿಕೆಯೂ ಬರಲಿಲ್ಲ. ಪ್ರಕೃತಿಯ ಮೇಲೆ ನಡೆಸುವ ಅತ್ಯಾಚಾರವೂ ನಿಲ್ಲುವುದಿಲ್ಲ.
