ಈ ದಿನ ಸಂಪಾದಕೀಯ | ನಬಾರ್ಡ್ ಸಾಲ ಖೋತಾ ಮಾಡಿದ ಮೋದಿ ಸರ್ಕಾರ ರೈತಪರವೇ?

Date:

Advertisements
ಮೋದಿ ಸರ್ಕಾರ ದೊಡ್ಡ ದೊಡ್ಡ ಉದ್ದಿಮೆಪತಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಶೇ. 30ರಿಂದ ಶೇ. 22ಕ್ಕೆ ಇಳಿಸಿ, ಅವರಿಗೆ ವರ್ಷಕ್ಕೆ 2 ಲಕ್ಷ ಕೋಟಿ ರೂ.ಗಳ ಅನುಕೂಲ ಮಾಡಿಕೊಟ್ಟಿದೆ. ಸಾಲದು ಎಂದು ಸುಮಾರು 20 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಕಾರ್ಪೊರೇಟ್ ಕಂಪನಿಗಳ ಮೇಲಿನ ಸಾಲವನ್ನು ಮನ್ನಾ ಮಾಡಿದೆ. ಆದರೆ ದೇಶಕ್ಕೆ ಅನ್ನ ನೀಡುವ ರೈತರಿಗೆ ಕೊಡುವ ಸಾಲದ ಪ್ರಮಾಣದಲ್ಲಿ ಶೇ. 58ರಷ್ಟು ಖೋತಾ ಮಾಡಿದೆ.

ನಬಾರ್ಡ್(ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವಲಪ್‌ಮೆಂಟ್)ನಿಂದ ರಾಜ್ಯಕ್ಕೆ ಕಳೆದ ವರ್ಷ 5,600 ಕೋಟಿ ಸಾಲದ ಮೊತ್ತ ನೀಡಲಾಗಿತ್ತು. ಅದನ್ನು ಈ ವರ್ಷ 2,340 ಕೋಟಿ ರೂ.ಗಳಿಗೆ ಇಳಿಸಲಾಗಿದೆ. ಇದನ್ನು ಹಣಕಾಸು ಸಚಿವೆಯ ಗಮನಕ್ಕೆ ತಂದು, ರಾಜ್ಯದ ರೈತರಿಗೆ ಆಗುವ ಅನ್ಯಾಯವನ್ನು, ಅದು ಕೃಷಿ ಕ್ಷೇತ್ರದ ಮೇಲೆ ಬೀರುವ ದುಷ್ಪರಿಣಾಮವನ್ನು ವಿವರಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದಾರೆ.

ರಾಜ್ಯದ ಸುಮಾರು 30ರಿಂದ 35 ಲಕ್ಷ ಕೃಷಿಕರು ಕೃಷಿ ಸಾಲಕ್ಕಾಗಿ ಡಿಸಿಸಿ ಬ್ಯಾಂಕ್‌ಗಳನ್ನು ಆಶ್ರಯಿಸಿದ್ದಾರೆ. ನಬಾರ್ಡ್‌ನಿಂದ ಸಾಲ ಪಡೆವ ಸಹಕಾರಿ ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಕೃಷಿ ಸಾಲ ನೀಡುತ್ತವೆ. ರಾಜ್ಯದ ಕೃಷಿ ಮತ್ತು ಕೃಷಿ ಪೂರಕ ವಲಯದ ಹಣಕಾಸು ಹರಿವಿನ ಪ್ರಮುಖ ಮೂಲವೇ ಸಹಕಾರ ವಲಯದ ಕೃಷಿ ಸಾಲ. ಆದರೆ, ಇದೀಗ ನಬಾರ್ಡ್‌ ಸಹಕಾರ ಬ್ಯಾಂಕುಗಳಿಗೆ ನೀಡುವ ಸಾಲದ ಮೊತ್ತವನ್ನು ಇದ್ದಕ್ಕಿದ್ದಂತೆ ಕಡಿತ ಮಾಡಿದೆ.

ಆಶ್ಚರ್ಯಕರ ಸಂಗತಿ ಎಂದರೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್ ಭಾಷಣದಲ್ಲಿ ಸಹಕಾರ ಇಲಾಖೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಇದರ ಜೊತೆಗೆ ‘ಸಹಕಾರ್ ಸೆ ಸಮೃದ್ಧಿ’ ಎಂದೂ ಸಹ ಘೋಷಣೆ ಮಾಡಿದ್ದರು. ಆದರೆ ಮೂರು ವರ್ಷ ಕಳೆಯುವುದರಲ್ಲಿ ಸಹಕಾರ ಇಲಾಖೆ ‘ಸಮೃದ್ಧಿ’ ಬದಲು ‘ಸಮಾಧಿ’ ಆಗುತ್ತಿದೆ. ಮೋದಿ ಮತ್ತವರ ಸರ್ಕಾರ ಏನು ಹೇಳುತ್ತದೋ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತದೆ ಎಂಬುದನ್ನು, ಕಳೆದ 10 ವರ್ಷಗಳಿ೦ದ ನೋಡುತ್ತ ಬಂದಿದ್ದೇವೆ.

Advertisements

ಇದನ್ನು ಓದಿದ್ದೀರಾ?: ಮಣಿಪುರ | ಮತ್ತೆ ಮತ್ತೆ ಭುಗಿಲೇಳುತ್ತಿರುವ ಹಿಂಸಾಚಾರ; 356 ವಿಧಿ ಜಾರಿ ಅನಿವಾರ್ಯ

ಇದನ್ನು ಗಮನಿಸಿಯೇ, ಕಳೆದ ವಾರ 71ನೇ ಸಹಕಾರಿ ಸಪ್ತಾಹದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಕೃಷಿ ಸಾಲವನ್ನು ಸುಮಾರು ಶೇ. 58ರಷ್ಟು ಕಡಿಮೆ ಮಾಡಿದೆ. ಇದು ರೈತರಿಗೆ ವಾಡಿಕೆಯಂತೆ ಸಾಲ ನೀಡುವ ಸಹಕಾರಿ ಸಂಸ್ಥೆಗಳ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ. ಇದು ಕೃಷಿ ಒಳಹರಿವಿನ ಮೇಲೆ ಹೂಡಿಕೆ ಮಾಡಲು ಸಾಧ್ಯವಾಗದ ರೈತರನ್ನು ದುರ್ಬಲಗೊಳಿಸುತ್ತದೆ ಮತ್ತು ಅವರ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ’ ಎಂದು ಹೇಳುವ ಮೂಲಕ, ನಬಾರ್ಡ್ ಸಾಲ ನೆಚ್ಚಿದ ಕೃಷಿ ಕ್ಷೇತ್ರ ಹೇಗೆ ನಶಿಸುತ್ತದೆ, ಕೃಷಿಕರು ಹೇಗೆ ನರಳುತ್ತಾರೆ ಎಂಬುದನ್ನು ವಿವರಿಸಿದ್ದರು. ಅದಕ್ಕೆ ಪರ್ಯಾಯವಾಗಿ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿರುವ ಸಾಲ ಸೌಲಭ್ಯವನ್ನೂ ವಿವರಿಸಿದ್ದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುಂಚೆ, 2013-14ರಲ್ಲಿ ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ, ನಬಾರ್ಡ್‌ನ ಬಜೆಟ್ ಕಡಿಮೆ ಇದ್ದಾಗಲೂ ಕರ್ನಾಟಕ ರಾಜ್ಯಕ್ಕೆ 4,025 ಕೋಟಿಗಳನ್ನು ಸಾಲವಾಗಿ ನೀಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ, ಪ್ರತಿ ವರ್ಷವೂ ಸಾಲ ಸೌಲಭ್ಯ ಏರುಗತಿಯಲ್ಲಿಯೇ ಇತ್ತು. 2023-24ರಲ್ಲಿ ಅದು 5,600 ಕೋಟಿ ಕೂಡ ದಾಟಿತ್ತು. ಈಗ, ಮೋದಿ ಸರ್ಕಾರ ಈ ಮೊತ್ತವನ್ನು ದಿಢೀರನೆ 2,340 ಕೋಟಿಗೆ ಇಳಿಸಿದೆ. ಈ ಇಳಿಕೆಯ ಪ್ರಮಾಣ ಶೇ. 58ರಷ್ಟಿದೆ. ಶೇ. 4.5ರ ಬಡ್ಡಿದರದಲ್ಲಿ ಸಾಲ ನೀಡುವ ಪುನರ್ಧನ(ರೈತ ಪಡೆದ ಸಾಲವನ್ನು ನಿಗಧಿತ ಅವಧಿಯಲ್ಲಿ ತೀರಿಸಿ, ಮತ್ತೆ ಸಾಲ ಕೊಡುವ ಯೋಜನೆ) ಯೋಜನೆಯಡಿ ರಾಜ್ಯಕ್ಕೆ ಹಿಂದೆಂದೂ ಆಗದ ಮಟ್ಟಿಗೆ ಮೋಸವಾಗಿದೆ.

ಇದಕ್ಕೆ ಪೂರಕವಾಗಿ, ಕರ್ನಾಟಕ ರಾಜ್ಯದಿಂದ ವ‍ರ್ಷಕ್ಕೆ 4.5 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತ ತೆರಿಗೆ ಸಂಗ್ರಹಿಸಿದರೂ ಸಹ, ಕೇಂದ್ರ ನಮಗೆ 59 ಸಾವಿರ ಕೊಟ್ಟು ಅನ್ಯಾಯ ಮಾಡುತ್ತಿರುವುದಲ್ಲದೇ, ಈಗ ರೈತರಿಗೆ ಸಾಲ ಕೊಡುವುದರಲ್ಲೂ ದ್ರೋಹವೆಸಗುತ್ತಿದ್ದಾರೆ. ಇದನ್ನು ಗಮನಿಸಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ. ದೇವೇಗೌಡ, ‘ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ಸಹಕಾರ ಸಂಘಗಳಿಗೆ ನೀಡುತ್ತಿದ್ದ ಸಾಲದ ಪ್ರಮಾಣ ಇಳಿಸಿರುವುದು ಸರಿಯಲ್ಲ. ಸಹಕಾರ ಕ್ಷೇತ್ರಕ್ಕೆ ಕೇಂದ್ರ ಅಸಹಕಾರ ನೀಡುತ್ತಿದೆ ಎಂದು ಭಾವಿಸಬೇಕಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ಎಂಬ ಕಾರಣಕ್ಕಾಗಿಯೂ ಇರಬಹುದು. ಅಥವಾ ದಕ್ಷಿಣ ಭಾರತದ ರಾಜ್ಯಗಳನ್ನು ನಿರ್ಲಕ್ಷಿಸುವ ಉತ್ತರದವರ ಮಲತಾಯಿ ಧೋರಣೆಯೂ ಆಗಿರಬಹುದು. ಆದರೆ, ರೈತರು ದೇಶದ ಅನ್ನದಾತರು. ಕಾಯಕಜೀವಿಗಳು. ಇವರು ಯಾವ ಜಾತಿ, ಧರ್ಮಕ್ಕೂ ಸೇರದವರು. ಇವರ ಬಗ್ಗೆ ಮೋದಿ ಸರ್ಕಾರಕ್ಕೆ ಇರುವ ‘ಪ್ರೀತಿ’ ಎಂಥದು ಎಂಬುದು, ಕಳೆದ ವರ್ಷ ಕೊಟ್ಟ 5,600 ಕೋಟಿಗೂ, ಈ ವರ್ಷ ಕೊಟ್ಟ 2,340 ಕೋಟಿಗೂ ಇರುವ ವ್ಯತ್ಯಾಸವನ್ನು ಗಮನಿಸಿದರೆ ಅರ್ಥವಾಗುತ್ತದೆ. ಜೊತೆಗೆ, ಕೇಂದ್ರದ ಮೂರು ಕರಾಳ ಕಾಯ್ದೆಗಳ ವಿರುದ್ಧ ಒಂದು ವರ್ಷ ಕಾಲ ದೆಹಲಿಯಲ್ಲಿ ಧರಣಿ ಮಾಡಿದ ರೈತರನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ನೆನೆದರೆ, ಮನದಟ್ಟಾಗುತ್ತದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಯಾಕಿಲ್ಲ?

ಹಾಗೆಯೇ ನಬಾರ್ಡ್ ಈ ಮೊದಲು ಸಹಕಾರ ಸಂಘಗಳಿಗೆ ಶೇ. 1ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿತ್ತು. ಆದರೆ ಈಗ ಬಡ್ಡಿದರವನ್ನು ಶೇ 4.5ಕ್ಕೆ ಏರಿಕೆ ಮಾಡಿದೆ. ಇನ್ನೂ ಹೆಚ್ಚು ಸಾಲ ಕೇಳಿದರೆ ಶೇ. 8.5ರ ಬಡ್ಡಿ ದರದಲ್ಲಿ ನೀಡುತ್ತೇವೆ ಎನ್ನುತ್ತಿದೆ.

ಕುತೂಹಲಕರ ಸಂಗತಿ ಎಂದರೆ, ಇದೇ ಮೋದಿ ಸರ್ಕಾರ ದೊಡ್ಡ ದೊಡ್ಡ ಉದ್ದಿಮೆಪತಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಶೇ. 30ರಿಂದ ಶೇ. 22ಕ್ಕೆ ಇಳಿಸಿ, ಅವರಿಗೆ ವರ್ಷಕ್ಕೆ 2 ಲಕ್ಷ ಕೋಟಿ ರೂ.ಗಳ ಅನುಕೂಲ ಮಾಡಿಕೊಟ್ಟಿದೆ. ಸಾಲದು ಎಂದು ಸುಮಾರು 20 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಕಾರ್ಪೊರೇಟ್ ಕಂಪನಿಗಳ ಮೇಲಿನ ಸಾಲವನ್ನು ಮನ್ನಾ ಮಾಡಿದೆ.

ಆದರೆ ದೇಶಕ್ಕೆ ಅನ್ನ ನೀಡುವ ರೈತರಿಗೆ ಕೊಡುವ ಸಾಲದ ಪ್ರಮಾಣದಲ್ಲಿ ಶೇ. 58ರಷ್ಟು ಖೋತಾ ಮಾಡಿದೆ. ಇದನ್ನು ರೈತಪರ ಸರ್ಕಾರ ಎನ್ನಬೇಕೋ ಅಥವಾ ರೈತದ್ರೋಹಿ ಸರ್ಕಾರ ಎನ್ನಬೇಕೋ ನೀವೇ ನಿರ್ಧರಿಸಿ.  

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X