ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ ಮತ್ತು ಔಷಧ ತಲುಪಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರಿಂದ ಹಿಡಿದು ಸಚಿವ ದಿನೇಶ್ ಗುಂಡೂರಾವ್‌ವರೆಗೆ, ಮನಸ್ಸಿಟ್ಟು ಮಾಡಿದರೆ 'ಗೃಹ ಆರೋಗ್ಯ' ಯೋಜನೆ ರಾಜ್ಯಕ್ಕೆ ಹೆಸರು ತರಲಿದೆ.
ಆಧುನಿಕ ಜೀವನ ಶೈಲಿ, ಹವಾಮಾನ ವೈಪರೀತ್ಯ, ಅವಧಿಗೆ ಮುನ್ನವೇ ಬಂದ ಮಾನ್ಸೂನ್ ಮಳೆ ಸೇರಿದಂತೆ ಅನೇಕ ಕಾರಣಗಳಿಂದ ಆರೋಗ್ಯ ಸಮಸ್ಯೆಗಳು ಇತ್ತೀಚೆಗೆ ಗಂಭೀರವಾಗುತ್ತಿವೆ. ಅದರಲ್ಲೂ ಕೋವಿಡ್ ಬಳಿಕ ಜನರ ಆರೋಗ್ಯದಲ್ಲಿ ಬಹಳ ದೊಡ್ಡ ಮಟ್ಟದ ಏರುಪೇರು ಉಂಟಾಗಿದೆ. ಕೋವಿಡ್‌ನಿಂದ ಪಾರಾಗಿದ್ದು ಒಂದು ರೀತಿಯ ಬಿಡುಗಡೆಯಾದರೆ, ಆ ನಂತರದ ಆರೋಗ್ಯ ಸಮಸ್ಯೆಗಳು ಬೇರೆ ಬಗೆಯಲ್ಲಿ ಬಾಧಿಸತೊಡಗಿವೆ. ವಯಸ್ಸನ್ನೂ ಲೆಕ್ಕಿಸದೆ ಜನರ ಜೀವ ತೆಗೆಯುತ್ತಿವೆ.
ಆರೋಗ್ಯವೇ ಭಾಗ್ಯ ಎಂದು ಎಷ್ಟೇ ಹೇಳಿದರೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭದ ವಿಷಯವಲ್ಲ. ಅದರಲ್ಲಿಯೂ ಹಳ್ಳಿಗಾಡಿನ ಜನರಿಗೆ, ಬಡವರಿಗೆ ಇವತ್ತಿಗೂ ಆರೋಗ್ಯಭಾಗ್ಯ ಎನ್ನುವುದು ಗಗನ ಕುಸುಮವೇ. ಇತ್ತೀಚಿನ ದಿನಗಳಲ್ಲಿ ಈ ಜನರಲ್ಲಿ ತಿಳಿವಳಿಕೆಯ ತೊಂದರೆಯಿಂದಲೋ, ಹಣಕಾಸಿನ ಸಮಸ್ಯೆಯಿಂದಲೋ ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಸಾಮಾನ್ಯವಾಗಿದೆ. ನಿಯಮಿತ ತಪಾಸಣೆ, ಚಿಕಿತ್ಸೆ, ಔಷಧ ತೆಗೆದುಕೊಳ್ಳುವವರಿಗಿಂತ ನಿರ್ಲಕ್ಷ್ಯ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
ದೇಶದಲ್ಲಿನ ಸಾವುಗಳಲ್ಲಿ ಸರಿಸುಮಾರು ಶೇ. 63ರಷ್ಟು ಸಾಂಕ್ರಾಮಿಕವಲ್ಲದ ರೋಗಗಳಿಂದ ಆಗುತ್ತವೆ ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ಶೇ. 26.9ರಷ್ಟು ಜನರು ಅಧಿಕ ರಕ್ತದೊತ್ತಡದಿಂದ, ಶೇ. 15.6ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಶೇ. 11.5ರಷ್ಟು ಜನರು ಬಾಯಿಯ ಕ್ಯಾನ್ಸರ್, ಶೇ. 26ರಷ್ಟು ಜನರು ಸ್ತನ ಕ್ಯಾನ್ಸರ್ ಮತ್ತು ಶೇ. 18.3ರಷ್ಟು ಜನರು ಗರ್ಭಕಂಠದ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಬಡವರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡ ರಾಜ್ಯ ಸರ್ಕಾರ, ಸಾಂಕ್ರಾಮಿಕವಲ್ಲದ ರೋಗಗಳಿಂದ ಉಂಟಾಗುವ ತೊಂದರೆಗಳು ಮತ್ತು ಅಕಾಲಿಕ ಮರಣವನ್ನು ಕಡಿಮೆ ಮಾಡುವ, ತಡೆಗಟ್ಟುವ ಕ್ರಮವಾಗಿ ರಾಜ್ಯದಲ್ಲಿ ‘ಗೃಹ ಆರೋಗ್ಯ’ ಯೋಜನೆಯನ್ನು ಪ್ರಾರಂಭಿಸಿದೆ.
ಇದನ್ನು ಓದಿದ್ದೀರಾ?: ಸ್ಥಳೀಯ ಸರ್ಕಾರಗಳ ಚುನಾವಣೆ ವಿಳಂಬ; ಕಾಂಗ್ರೆಸ್ ನಡೆ ಸಂವಿಧಾನ ವಿರೋಧಿಯಲ್ಲವೇ?
ಈ ಯೋಜನೆಯು ಮಧುಮೇಹ, ಅಧಿಕ ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಡಯಾಬಿಟಿಕ್ ಫೂಟ್ ಮತ್ತು ರೆಟಿನೋಪತಿ, ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ನರವೈಜ್ಞಾನಿಕ ಅಸ್ವಸ್ಥತೆಗಳು, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಅಲೋಹಾಲ್ ರಹಿತ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಮತ್ತು ರಕ್ತಹೀನತೆ(19-29 ವರ್ಷ ವಯಸ್ಸಿನವರಿಗೆ)ಯಂತಹ 14 ಬಗೆಯ ಆರೋಗ್ಯ ತಪಾಸಣೆಯನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ (AAM) ಉಚಿತವಾಗಿ ನಡೆಸಲಾಗುತ್ತದೆ.
ಆ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಮೂವತ್ತು ವರ್ಷ ಮೇಲ್ಪಟ್ಟ ಜನರಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಕುರಿತು ಜಾಗೃತಿ ಮೂಡಿಸುತ್ತಾರೆ. ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಜೀವನಶೈಲಿ ಮಾರ್ಪಾಡು ಕ್ರಮಗಳ ಕುರಿತು ತಿಳಿವಳಿಕೆ ತುಂಬುತ್ತಾರೆ. ರೋಗನಿರ್ಣಯವಾದ ನಂತರ, ವ್ಯಕ್ತಿಗಳನ್ನು ಹತ್ತಿರದ ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಅವರು ಆರೋಗ್ಯ ತಪಾಸಣೆ, ನಿರ್ವಹಣೆ ಮತ್ತು ಉಚಿತವಾಗಿ ಸಾಂಕ್ರಾಮಿಕವಲ್ಲದ ರೋಗಗಳ ಶಿಷ್ಟಾಚಾರದ ಔಷಧಿಗಳನ್ನು ಪಡೆಯಬಹುದಾಗಿದೆ.
ಇದು ನಿಜಕ್ಕೂ ರಾಜ್ಯ ಸರಕಾರದ ಮತ್ತೊಂದು ಜನಸ್ನೇಹಿ ಯೋಜನೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಆರನೇ ಗ್ಯಾರಂಟಿ ಎಂದರೂ ತಪ್ಪಲ್ಲ. ಗೃಹ ಆರೋಗ್ಯ ಯೋಜನೆಗಾಗಿಯೇ ಸರ್ಕಾರ ರೂ. 100 ಕೋಟಿಯನ್ನು ಎತ್ತಿಡಲಾಗಿದೆ. ಜೊತೆಗೆ 2025-26ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ರೂ. 17,473 ಕೋಟಿ ಮೀಸಲಿಡಲಾಗಿದೆ.
ಆರೋಗ್ಯ ಇಲಾಖೆಗಾಗಿಯೇ ಸಚಿವರು, ಉನ್ನತ ಅಧಿಕಾರಿಗಳನ್ನೊಳಗೊಂಡ ಸಚಿವಾಲಯ, ರಾಜ್ಯಾದ್ಯಂತ ಆಸ್ಪತ್ರೆಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿವರ್ಗ ಎಲ್ಲವೂ ಇದೆ. ಇಷ್ಟೆಲ್ಲ ಇದ್ದರೂ ರಾಜ್ಯದ ಜನತೆಗೆ ಸಮರ್ಪಕವಾಗಿ ಆರೋಗ್ಯ ಸೇವೆ ದೊರಕುತ್ತಿದೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಇವೆಲ್ಲವುಗಳ ನಡುವೆಯೇ ಈಗ ಜಾರಿ ಮಾಡಿರುವ ಗೃಹ ಆರೋಗ್ಯ ಯೋಜನೆಯ ಹೊಸ ಹೊರೆ ಯಾರ ಮೇಲೆ ಬೀಳಲಿದೆ, ಅದನ್ನು ಸಮರ್ಥವಾಗಿ ನಿರ್ವಹಿಸುವವರು ಯಾರು? ಕನಿಷ್ಠ ಸಂಬಳಕ್ಕೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ಇದಕ್ಕೆ ಸಿದ್ಧರಾಗಿದ್ದಾರೆಯೇ, ಅವರಿಗೆ ತರಬೇತಿ ನೀಡಲಾಗಿದೆಯೇ? ಮೊಬೈಲ್ ಯೂನಿಟ್, ಪ್ರತ್ಯೇಕ ಸಿಬ್ಬಂದಿ, ಹೆಚ್ಚುವರಿ ವೈದ್ಯರ ನೇಮಕಾತಿ ಆಗಿದೆಯೇ? ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಡೇಟಾ ಸೆಂಟರ್‍ಗಳು, ಸ್ಥಳದಲ್ಲೇ ಔಷಧಿಗಳನ್ನು ಉಚಿತವಾಗಿ ಒದಗಿಸುವ ಅಗತ್ಯ ವ್ಯವಸ್ಥೆ ಮಾಡಲಾಗಿದೆಯೇ ಎನ್ನುವ ಪ್ರಶ್ನೆಗಳು ಕೂಡ ಎದುರಾಗಿವೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಸೆಣಸಾಟ ಸೇನೆಯದು, ಮೆರೆದಾಟ ಮೋದಿಯದು!
ಒಂದಂತೂ ಸತ್ಯ, ಸರ್ಕಾರ ಘೋಷಿಸುವ ಯೋಜನೆಗಳು ಉತ್ತಮವಾಗಿರುತ್ತವೆ. ಜನಪರವಾಗಿರುತ್ತವೆ. ಅವುಗಳಿಗೆ ಕೋಟಿಗಟ್ಟಲೆ ಹಣವೂ ಹರಿಯುತ್ತದೆ. ಅವುಗಳ ಅನುಷ್ಠಾನಕ್ಕೆ ಅಧಿಕಾರಿ-ನೌಕರವರ್ಗವೂ ಸಿದ್ಧವಾಗಿರುತ್ತದೆ. ಆದರೆ ಜನರಿಗೆ ತಲುಪುವುದು ಎಷ್ಟು; ಜನರು ಅದರಿಂದ ಅನುಕೂಲ ಪಡೆಯುವುದು ಎಷ್ಟು ಎನ್ನುವುದು ಇವತ್ತಿಗೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ. ಗೃಹ ಆರೋಗ್ಯ ಯೋಜನೆ ಹಾಗಾಗದಿರಲಿ.
ಇದು ಗ್ರಾಮೀಣ ಭಾಗದ ಬಡವರ, ಮಹಿಳೆಯರ ಆರೋಗ್ಯ ಕಾಪಾಡುವ ಅತ್ಯವಶ್ಯಕ ಯೋಜನೆ. ಜನಸಾಮಾನ್ಯರ ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ ಮತ್ತು ಔಷಧ ತಲುಪಿಸುವ ಯೋಜನೆ. ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರಿಂದ ಹಿಡಿದು ಸಚಿವ ದಿನೇಶ್ ಗುಂಡೂರಾವ್‌ವರೆಗೆ, ಮನಸ್ಸಿಟ್ಟು ಮಾಡಿದರೆ ರಾಜ್ಯಕ್ಕೆ ಹೆಸರು ತರುವ ಯೋಜನೆ. ಯಶಸ್ವಿಯಾಗಲಿ ಎಂದು ಆಶಿಸೋಣ.
