ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸುವ ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ. ಆದರೆ, ಅದೆಲ್ಲವೂ ರಾಜಕಾರಣದ ಭಾಗವಾಗಿರುವುದರಿಂದ, ಅದನ್ನು ಅವರು ರಾಜಕೀಯವಾಗಿಯೇ ಎದುರಿಸಬೇಕಿದೆ.
ಸದ್ಯಕ್ಕೆ ಕರ್ನಾಟಕದ ರಾಜಕೀಯ ವಿದ್ಯಮಾನ ಅನೇಕ ಅನಿರೀಕ್ಷಿತ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೈದ್ಧಾಂತಿಕವಾಗಿ ಬಿಜೆಪಿಯನ್ನು ವಿರೋಧಿಸುತ್ತಾರೆ. ಕಟು ಶಬ್ದಗಳಿಂದ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಾರೆ. ಕೇಂದ್ರ ಸರ್ಕಾರ ಎಸಗುತ್ತಿರುವ ದ್ರೋಹವನ್ನು ದೊಡ್ಡ ದನಿಯಲ್ಲಿ ಎತ್ತಿ ಆಡುತ್ತಾರೆ. ರಾಜ್ಯ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರ ಭ್ರಷ್ಟಾಚಾರವನ್ನು ಬಯಲುಗೊಳಿಸಿ ಬೆವರಿಳಿಸುತ್ತಾರೆ.
ಇದು ಸಹಜವಾಗಿಯೇ ಅಧಿಕಾರವಿಲ್ಲದೆ ಹಪಾಹಪಿಸುತ್ತಿರುವ ಮೈತ್ರಿ ನಾಯಕರನ್ನು ಕೆರಳಿಸಿದೆ. ಅದಕ್ಕೆ ಲಿಂಗಾಯತ-ಒಕ್ಕಲಿಗ ಎಂಬ ಫ್ಯೂಡಲ್ ಬುದ್ಧಿ ಮತ್ತು ಜಾತಿ ಅಹಂಕಾರವೂ ಜೊತೆಯಾಗಿದೆ. ಇವರಿಗೆ ಈಗ, ಹಿಂದುಳಿದ ವರ್ಗದಿಂದ ಬಂದ ಸಿದ್ದರಾಮಯ್ಯನವರನ್ನು ಕಟ್ಟಿಹಾಕಲು, ಅವರ ಬಾಯಿ ಮುಚ್ಚಿಸಲು, ಕುರ್ಚಿಯಿಂದ ಕೆಳಗಿಳಿಸಲು, ಸರ್ಕಾರವನ್ನು ಕೆಡವಲು- ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಮತ್ತು ಮುಡಾ ಹಗರಣಗಳೆಂಬ ಕಾರಣ ಸಿಕ್ಕಿದೆ.
ಯುದ್ಧಕ್ಕೆ ಸಿದ್ಧರಾದಂತೆ, ಮುಂಗಾರು ಅಧಿವೇಶನವನ್ನೇ ಯುದ್ಧಭೂಮಿಯನ್ನಾಗಿ ಮಾಡಿಕೊಂಡ ಬಿಜೆಪಿ ನಾಯಕರು ಕೊಂಚ ಏರು ದನಿಯಲ್ಲಿಯೇ ಸದನದಲ್ಲಿ ಕಾದಾಟಕ್ಕಿಳಿದರು. ಅದು ವಸ್ತುಶಃ ಕಾದಾಟವೇ ಆಗಿತ್ತು. ತರ್ಕಬದ್ಧ ಚರ್ಚೆ ಇಲ್ಲದೆ, ಸಂಸದೀಯ ಪಟುಗಳ ವಾದ ಮಂಡನೆಯಿಲ್ಲದೆ, ವಿಪಕ್ಷ ನಾಯಕನಿಗೆ ನೈತಿಕತೆ ಇಲ್ಲದೆ, ಬರೀ ಕೂಗಾಟ, ಕಿರುಚಾಟಗಳಿಗೇ ಸೀಮಿತವಾಯಿತು. ಹಾಗೆಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವರ್ತನೆ ಮತ್ತು ಸಮರ್ಥನೆ ಕೂಡ ಉಡಾಫೆಯಿಂದ ಕೂಡಿತ್ತು. ಚರ್ಚೆಗೆ ಆಸ್ಪದ ಕೊಡದ ಸ್ಪೀಕರ್ ಮತ್ತು ಸಭಾಪತಿಗಳ ನಡೆ ಕೂಡ ಅಸಮಂಜಸವಾಗಿತ್ತು. ಒಟ್ಟಾರೆ ವಿರೋಧ ಪಕ್ಷಗಳು ಆಳುವ ಸರ್ಕಾರದ ವಿರುದ್ಧ ಮೊದಲ ಬಾರಿಗೆ ಮೇಲುಗೈ ಸಾಧಿಸಿದಂತೆ ಕಾಣಲಾರಂಭಿಸಿತು.
ಅದರ ಮುಂದುವರೆದ ಭಾಗವಾಗಿ ಮುಡಾ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂಬ ಒತ್ತಾಯವನ್ನು ಮುನ್ನೆಲೆಗೆ ತಂದ ಬಿಜೆಪಿ – ಜೆಡಿಎಸ್ ಮೈತ್ರಿ ಪಕ್ಷಗಳು, ಸೋಮವಾರ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿವೆ. ಇದೇ ಸಂದರ್ಭದಲ್ಲಿ ದೂರದ ದೆಹಲಿಯಲ್ಲಿ ಆರಂಭವಾಗಿರುವ ಬಜೆಟ್ ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್ ಸಂಸದರು, ರಾಜ್ಯ ಸರ್ಕಾರದ ಹಗರಣಗಳ ಬಗ್ಗೆ ದನಿ ಎತ್ತಿದ್ದಾರೆ. ಸಂಸತ್ತಿನ ಹೊರಗೆ ಸಾಂಕೇತಿಕವಾಗಿ ಪ್ರತಿಭಟಿಸಿದ್ದಾರೆ. ದೇಶದ ಗಮನ ಸೆಳೆದಿದ್ದಾರೆ.
ಇವುಗಳ ನಡುವೆಯೇ ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಹಗರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಅದು ತನಿಖೆ ಚುರುಕುಗೊಳಿಸಿ ಹಗರಣದಲ್ಲಿ ಪಾಲ್ಗೊಂಡವರನ್ನು, ಹಣವನ್ನು ವಶಕ್ಕೆ ಪಡೆದಿದೆ. ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದ ಸಚಿವ ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದಾರೆ. ಇಷ್ಟಾದರೂ, ಅಂತರ ರಾಜ್ಯ ಹಣ ವರ್ಗಾವಣೆ ವಿಷಯವನ್ನು ಮುಂದಿಟ್ಟು ಕೇಂದ್ರದ ಜಾರಿ ನಿರ್ದೇಶನಾಲಯ ಮಧ್ಯೆ ಪ್ರವೇಶಿಸಿದೆ. ನಾಗೇಂದ್ರ, ನಿಗಮದ ಅಧ್ಯಕ್ಷ ದದ್ದಲ್ ಹಾಗೂ ಅಧಿಕಾರಿಗಳನ್ನು ಇಡಿ ವಿಚಾರಣೆ ಕರೆದು ಒತ್ತಡ ಹಾಕುತ್ತಿರುವ ಸುದ್ದಿಗಳು ಕೇಳಿಬರತೊಡಗಿವೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಗರಣಗಳಲ್ಲಿ ಅಧಿಕಾರಸ್ಥರು; ಅತ್ಯಾಚಾರಕ್ಕೆ ಬಲಿಯಾಗುತ್ತಿರುವ ಮಕ್ಕಳು
ಅದಕ್ಕೆ ಪೂರಕವಾಗಿ, ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಸಿಎಂ, ಡಿಸಿಎಂ ಹೆಸರು ಹೇಳಿ, ನಾವು ನಿಮ್ಮನ್ನು ಕಾನೂನಾತ್ಮಕವಾಗಿ ರಕ್ಷಿಸುತ್ತೇವೆ ಎಂದು ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ. ಇದು ಬರೀ ಆರೋಪವಲ್ಲ, ಕೇಂದ್ರ ಸರ್ಕಾರ ತನ್ನ ಅಧಿಕಾರ ಬಳಸಿ, ಕೇಂದ್ರದ ಏಜೆನ್ಸಿಗಳಾದ ಸಿಬಿಐ, ಇಡಿಗಳನ್ನು ದುರುಪಯೋಗಪಡಿಸಿಕೊಂಡು ದೆಹಲಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳನ್ನು ಕುರ್ಚಿಯಿಂದ ಕೆಳಗಿಳಿಸಿ, ಕಂಬಿ ಹಿಂದೆ ಕೂರಿಸಿ ಅವಮಾನಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಏತನ್ಮಧ್ಯೆ, ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ. ದೇವೇಗೌಡರ ರಾಜಕೀಯ ನಡೆಗಳನ್ನು, ರಾಜ್ಯಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಎತ್ತುತ್ತಿರುವ ಪ್ರಶ್ನೆಗಳನ್ನು, ಕೇಂದ್ರ ಸರ್ಕಾರದ ಪರ ವಹಿಸಿಕೊಂಡು ಮಾತನಾಡುತ್ತಿರುವ ಪರಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ- ಈ ಭೇಟಿ ಸಾಮಾನ್ಯದ್ದಲ್ಲ. ಇದರ ಉದ್ದೇಶ ಮತ್ತು ಗುರಿ ಸಿದ್ದರಾಮಯ್ಯ ಎನ್ನುವುದು ಎಂತಹವರಿಗೂ ಅರ್ಥವಾಗುತ್ತದೆ.
ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸುವ ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ. ಆದರೆ, ಅದೆಲ್ಲವೂ ರಾಜಕಾರಣದ ಭಾಗವಾಗಿರುವುದರಿಂದ, ಅದನ್ನು ಅವರು ರಾಜಕೀಯವಾಗಿಯೇ ಎದುರಿಸಬೇಕಿದೆ.
ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಮತ್ತು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸದನದಲ್ಲಿ ಸಮರ್ಥ ಕಾರಣಗಳನ್ನಿಟ್ಟು ಉತ್ತರಿಸುವುದು ಮತ್ತು ಪತ್ರಿಕಾಗೋಷ್ಠಿ ಕರೆದು ವಿವರಿಸುವುದು ರಾಜಕೀಯವಾಗಿ ಸರಿಯಾದ ಕ್ರಮ. ಆದರೆ, ಎರಡೆರಡು ಸಲ ಪತ್ರಿಕೆಗಳಿಗೆ ಪೂರ್ಣ ಪುಟದ ಜಾಹೀರಾತು ನೀಡುವುದು, ಮುಖ್ಯಮಂತ್ರಿಯೇ ಮುಂದಾಗಿ ಸಮರ್ಥಿಸಿಕೊಳ್ಳುವುದು- ಸರಿಯಾದ ಕ್ರಮವಲ್ಲ.
ಸಿದ್ದರಾಮಯ್ಯನವರು ಮತ್ತವರ ಸರ್ಕಾರ ಜನಪರವಾಗಿದ್ದರೆ, ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುತ್ತಿದ್ದರೆ, ಹೀಗೆ ಜಾಹೀರಾತಿನ ಮೂಲಕ ಸಮರ್ಥಿಸಿಕೊಳ್ಳುವ ಅಗತ್ಯವಿತ್ತೇ, ಅದು ಸಾರ್ವಜನಿಕರ ತೆರಿಗೆಯ ಹಣವಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಇದಕ್ಕೆ ಉತ್ತರಿಸುವ ಅನಿವಾರ್ಯತೆ ಇದೆ.
