ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

Date:

Advertisements
ಹಿಟ್ಲರ್ ಮತ್ತು ಪುಟಿನ್ ಮಾಡಿದಂತೆ, ಮೋದಿ ಅವರು ದೇಶದಲ್ಲಿ ವಿರೋಧ ಪಕ್ಷಗಳಿಲ್ಲದಂತೆ, ಪ್ರಶ್ನಿಸುವವರ ಸೊಲ್ಲಡಗುವಂತೆ ಸರಕಾರಿ ಏಜೆನ್ಸಿಗಳ ಮೂಲಕ ದಾಳಿ ಮಾಡಿಸುತ್ತಿಲ್ಲವೇ? ದಾಳಿಗೆ ಹೆದರಿ ದೇಣಿಗೆ ಕೊಟ್ಟವರಲ್ಲಿ ಕೇವಲ ಕಾರ್ಪೊರೇಟ್ ಕಂಪನಿಗಳಷ್ಟೇ ಅಲ್ಲ, ಹೈದರಾಬಾದಿನ ‘ತೆಲುಗು ಟಿವಿ9’ ಸುದ್ದಿ ಸಂಸ್ಥೆ ಕೂಡ ಇದೆ. ಈ ಸುದ್ದಿ ಸಂಸ್ಥೆಗೆ ಎದುರಾದ ಸಂಕಷ್ಟ, ದೇಶದ ಸುದ್ದಿ ಸಂಸ್ಥೆಗಳಿಗೆ ಎದುರಾಗುವುದು ಎಷ್ಟು ದಿನ? ಅವರಿಗಾದದ್ದು ನಮಗಾಗುವುದಿಲ್ಲವೇ?

ಸಾಮಾಜಿಕ ಹೊಣೆಗಾರಿಕೆಯಿಂದ ಸುದ್ದಿ ಮಾಧ್ಯಮಗಳು ನುಣುಚಿಕೊಂಡಾಗ, ಸತ್ಯ ಹೇಳಬೇಕಾದ ಪತ್ರಕರ್ತರು ಸುಳ್ಳು ಸಾರತೊಡಗಿದಾಗ; ಪ್ರಭುತ್ವದ ವೈಫಲ್ಯವನ್ನು ಪ್ರಶ್ನಿಸುವ ಕೆಲಸವನ್ನು ಪ್ರಜೆಗಳೇ ಕೈಗೆತ್ತಿಕೊಳ್ಳಬೇಕಿದೆ. ಅಂತಹ ಸ್ಥಿತಿ ಈಗ ಎದುರಾಗಿದೆ.

ಹತ್ತು ವರ್ಷಗಳ ಮೋದಿಯವರ ಆಡಳಿತವನ್ನು ಸುವರ್ಣಯುಗವೆಂದು ತುತ್ತೂರಿ ಊದುತ್ತಿರುವ ಪತ್ರಕರ್ತರನ್ನು ತೆಗೆದು ಪಕ್ಕಕ್ಕಿಟ್ಟ ಸಿಟಿಜನ್ ಜರ್ನಲಿಸ್ಟ್‌ಗಳು ಸಾಮಾಜಿಕ ಜಾಲತಾಣಗಳ ಮೂಲಕ, ಜನರಿಗೆ ಸತ್ಯ ಸಾರುತ್ತಿದ್ದಾರೆ. ಸರಕಾರದ ಜೀವವಿರೋಧಿ ನೀತಿಗಳನ್ನು, ಆಡಳಿತದ ಹಳವಂಡಗಳನ್ನು ಬಯಲು ಮಾಡುತ್ತಿದ್ದಾರೆ. ಅದರಲ್ಲೂ ಬೃಹತ್ ಬಾಂಡ್ ಹಗರಣದಲ್ಲಿ ಮುಳುಗೇಳುತ್ತಿರುವ ಮಹಾನುಭಾವನ ಮುಖವಾಡವನ್ನು ಕಳಚುತ್ತಿದ್ದಾರೆ.

ದೇಶದ ಜನ ಈಗಲೂ ಸುದ್ದಿ ಮಾಧ್ಯಮಗಳನ್ನು ನಂಬುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಪೇಪರ್ ಓದುತ್ತಾರೆ, ತಕ್ಷಣದ ಆಗುಹೋಗುಗಳಿಗಾಗಿ ಟಿವಿ ಚಾನೆಲ್ ಆಶ್ರಯಿಸುತ್ತಾರೆ. ಆದರೆ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಮಾಧ್ಯಮಗಳು, ಮೋದಿಯ ಸುಳ್ಳುಗಳನ್ನು, ಬಾಂಡ್ ಭ್ರಷ್ಟಾಚಾರವನ್ನು ಹೇಳದೆ ದ್ರೋಹ ಬಗೆಯುತ್ತಿವೆ. ಜಾತಿ ಪ್ರೀತಿಗೋ, ಹಿಂದೂರಾಷ್ಟ್ರವೆಂಬ ಭ್ರಮೆಗೋ, ಹಣಕ್ಕೋ ಸುದ್ದಿ ಸಂಸ್ಥೆಗಳು ಮಂಡಿಯೂರಿವೆ, ಮಾರಾಟವಾಗಿವೆ. ಸತ್ಯ ಸಾರಬೇಕಾದ ಪತ್ರಕರ್ತರು ಸುಳ್ಳು ಸುದ್ದಿ ಸೃಷ್ಟಿಸುವ ಕಾರಕೂನರಾಗಿದ್ದಾರೆ.

Advertisements

ಇದು ದೇಶದ ಜನರೇ ಜರ್ನಲಿಸ್ಟ್‌ಗಳಾಗುವ ಸಂದರ್ಭವನ್ನು ಸೃಷ್ಟಿಸಿದೆ. ಆ ನಿಟ್ಟಿನಲ್ಲಿ ರವೀಶ್ ಕುಮಾರ್, ಧ್ರುವ್ ರಾಠಿ, ಆಕಾಶ್ ಬ್ಯಾನರ್ಜಿಗಳಂತಹ ನೂರಾರು ಸಾಮಾನ್ಯರು ಇಂದು ಮೋದಿಯ ಸುಳ್ಳಿನ ಕೋಟೆಯನ್ನು ಭೇದಿಸುತ್ತಿದ್ದಾರೆ. ಮುಖ್ಯವಾಹಿನಿಗಳು ಮುಚ್ಚಿಟ್ಟ ಸುದ್ದಿಗಳನ್ನು ಸಿಟಿಜನ್ ಜರ್ನಲಿಸ್ಟ್‌ಗಳು ಫೇಸ್ಬುಕ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ವಾಟ್ಸಾಪ್, ಯುಟ್ಯೂಬ್‌ಗಳಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಬಿಚ್ಚಿಡುತ್ತಿದ್ದಾರೆ. ಜನರನ್ನು ಜಾಗೃತರನ್ನಾಗಿಸುತ್ತಿದ್ದಾರೆ.

‘ಎನ್‌ಡಿಟಿವಿ’ಯನ್ನು ಮೋದಿಯವರ ಆಪ್ತ ಅದಾನಿ ಖರೀದಿಸಿದ ಮೇಲೆ, ಅಲ್ಲಿಂದ ಹೊರಬಂದ ರವೀಶ್ ಕುಮಾರ್, ಯುಟ್ಯೂಬ್ ಚಾನೆಲ್ ಮೂಲಕ ಸತ್ಯ ಸಾರತೊಡಗಿದರು. ಇಂದು ಅದಕ್ಕೆ ಕೋಟಿಗೂ ಮೀರಿದ ಚಂದಾದಾರರಿದ್ದಾರೆ. ಅದೇ ರೀತಿ ಧ್ರುವ್ ರಾಠಿ ಎಂಬ ಯುವಕ ಯುಟ್ಯೂಬ್ ಮೂಲಕ ಮೋದಿ ಸರಕಾರದ ಬೃಹತ್ ಬಾಂಡ್ ಹಗರಣದ ಹಿಂದಿರುವ ಸತ್ಯ ಸಂಗತಿಗಳನ್ನು ಸರಳ ಭಾಷೆಯ ಮೂಲಕ, ಅಂಕಿ ಅಂಶಗಳ ಸಮೇತ ಜನರ ಎದೆಗೆ ದಾಟಿಸುತ್ತಿದ್ದಾರೆ. ಮೋದಿ ಸರಕಾರದ ಸರ್ವಾಧಿಕಾರಿ ನೀತಿಯನ್ನು ತರ್ಕಬದ್ಧವಾಗಿ ತಿಳಿಸುತ್ತಿದ್ದಾರೆ. ಇವರಿಬ್ಬರೇ ಅಲ್ಲ, ಕಪಿಲ್ ಸಿಬಲ್‌ರನ್ನು ಒಳಗೊಂಡ ಇಂತಹ ನೂರಾರು ಸಿಟಿಜನ್ ಜರ್ನಲಿಸ್ಟ್‌ಗಳು ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡುತ್ತಿದ್ದಾರೆ. ದೇಶ ಸರ್ವಾಧಿಕಾರಿಯ ಕೈಗೆ ಹೋಗದಂತೆ ತಡೆಯಲು ಶ್ರಮಿಸುತ್ತಿದ್ದಾರೆ.

ಸಾವಿರಾರು ಪತ್ರಕರ್ತರಿರುವ ಹೆಸರಾಂತ ಸುದ್ದಿ ಸಂಸ್ಥೆಗಳು ಮಾಡದ ಕೆಲಸವನ್ನು ಒಬ್ಬ ಧ್ರುವ್ ರಾಠಿ ಮಾಡಿ ತೋರಿಸಿದ್ದಾರೆ. ಅವರ ಸರ್ವಾಧಿಕಾರಿ ವಿಡಿಯೋ ವೈರಲ್ ಆಗಿ, ದೇಶದ ಜನರಲ್ಲಿ ಸಂಚಲನ ಉಂಟು ಮಾಡಿದೆ.

ಧ್ರುವ್ ರಾಠಿಯ ಸರ್ವಾಧಿಕಾರಿ ವಿಡಿಯೋ ಬಗ್ಗೆ ಆಕಾಶ್ ಬ್ಯಾನರ್ಜಿ ಎಂಬ ಮತ್ತೊಬ್ಬ ಯುಟ್ಯೂಬರ್, ‘ಮೋದಿಯವರು ಸರ್ವಾಧಿಕಾರಿಯೇ, ಜನ ನಂಬುತ್ತಾರೆಯೇ, ಅದರಿಂದ ಏನಾಗುತ್ತದೆ’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಧ್ರುವ್ ರಾಠಿ, ‘ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕೇಂದ್ರದ ಬಿಜೆಪಿ ಸರಕಾರ 2019ರಲ್ಲಿ ತೆಗೆದುಹಾಕಿದಾಗ, ಲಡಾಖ್‌ನ ಜನ ಸ್ವಾಗತಿಸಿದ್ದರು. ಈಗ ಅದೇ ಜನ ನಮ್ಮ ಹಕ್ಕು ಮತ್ತು ಅಧಿಕಾರಗಳನ್ನು ಸರಕಾರ ಕಸಿದುಕೊಳ್ಳುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಬೀದಿಗೆ ಇಳಿದಿದ್ದಾರೆ. ಆದರೆ ಕೇಂದ್ರ ಸರಕಾರ ಲಡಾಖ್‌ನಲ್ಲಿ ನಿಷೇಧಾಜ್ಞೆ ಹೇರಿ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ. ಇದನ್ನು ಏಕೆ ಹೇಳುತ್ತಿದ್ದೇನೆಂದರೆ, ರಷ್ಯಾದಲ್ಲಿ ಪುಟಿನ್ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ, ವಿರೋಧ ಪಕ್ಷಗಳು, ಮಾಧ್ಯಮಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕಲಾಗಿದೆ. ಪ್ರಶ್ನಿಸುವ, ಪ್ರತಿಭಟಿಸುವ ಹಕ್ಕನ್ನು ಕಳೆದುಕೊಂಡ ಅಲ್ಲಿಯ ಜನ, ನಾವು ಆಗ ಸುಮ್ಮನಿದ್ದು, ಈಗ ಹಳಹಳಿಸುವಂತಾಗಿದೆ ಎನ್ನುತ್ತಿದ್ದಾರೆ. ಇಂತಹ ಸ್ಥಿತಿ ಭಾರತಕ್ಕೆ ಬರಬಾರದು ಎಂದು ನಾನು ಜನರನ್ನು ಜಾಗೃತರನ್ನಾಗಿಸುತ್ತಿದ್ದೇನೆ’ ಎಂದಿದ್ದಾರೆ.

ಇದು ಏನನ್ನು ಸೂಚಿಸುತ್ತದೆ?

ಜರ್ಮನಿಯ ಹಿಟ್ಲರ್‌ನಿಂದ ಜೈಲಿನಲ್ಲಿದ್ದು ಬಿಡುಗಡೆಗೊಂಡ ಜರ್ಮನ್ ಕವಿ ಮಾರ್ಟಿನ್ ನಿಮೋಲರ್, ‘ಅವರು ಮೊದಲು ಯಹೂದಿಯರನ್ನು ಹಿಡಿದು ಜೈಲಿಗೆ ಹಾಕಿದರು, ನಾನು ಯಹೂದಿಯಲ್ಲದ್ದರಿಂದ ನಾನು ಮೌನವಾಗಿದ್ದೆ. ಅವರು ಬಳಿಕ ಕಮ್ಯುನಿಸ್ಟರನ್ನು ಹಿಡಿದು ಜೈಲಿಗಟ್ಟಿದರು, ನಾನು ಕಮ್ಯುನಿಸ್ಟನಾಗಿರಲಿಲ್ಲ ತಟಸ್ಥನಾಗಿದ್ದೆ. ಮತ್ತೆ ಅವರು ಕೆಥೋಲಿಕ್‌ಗಳನ್ನು ಬಂಧಿಸಿ ಜೈಲಿಗಟ್ಟಿದರು, ನಾನು ಪ್ರೊಟೆಸ್ಟೆಂಟ್ ಆಗಿದ್ದುದರಿಂದ ಪ್ರತಿಭಟಿಸಲಿಲ್ಲ, ಕೊನೆಗೆ ಅವರು ನನ್ನನ್ನು ಬಂಧಿಸಿದಾಗ ನನ್ನ ಬಗ್ಗೆ ಮಾತನಾಡಲು ಯಾರೂ ಇರಲಿಲ್ಲ’ ಎಂದಿದ್ದರು.

ಜರ್ಮನಿ ಸಂಪೂರ್ಣ ನಾಶವಾಗುವವರೆಗೂ ಹಿಟ್ಲರ್ ಮಾಡಿದ್ದೆಲ್ಲ ಸರಿ ಎಂದು, ದೇಶಭಕ್ತಿ ಎಂದು, ದೇಶದ ಉದ್ಧಾರದ ಕೆಲಸವೆಂದು ಅಲ್ಲಿನ ಜನ ನಂಬಿದ್ದರು. ಭಾರತವೂ ಅತ್ತ ದಾಪುಗಾಲು ಹಾಕುತ್ತಿಲ್ಲವೇ?

ಇಂದು ಸುದ್ದಿ ಮಾಧ್ಯಮಗಳು ಸಂಪೂರ್ಣವಾಗಿ ಮೋದಿಯವರ ಪರವಾಗಿವೆ. ಹಿಟ್ಲರ್ ಮತ್ತು ಪುಟಿನ್ ಮಾಡಿದಂತೆ, ಮೋದಿಯವರು ದೇಶದಲ್ಲಿ ವಿರೋಧ ಪಕ್ಷಗಳಿಲ್ಲದಂತೆ, ಪ್ರಶ್ನಿಸುವವರ ಸೊಲ್ಲಡಗುವಂತೆ ಸರಕಾರಿ ಏಜೆನ್ಸಿಗಳ ಮೂಲಕ ದಾಳಿ ಮಾಡಿಸುತ್ತಿಲ್ಲವೇ? ದಾಳಿಗೆ ಹೆದರಿ ದೇಣಿಗೆ ಕೊಟ್ಟವರಲ್ಲಿ ಕೇವಲ ಕಾರ್ಪೊರೇಟ್ ಕಂಪನಿಗಳಷ್ಟೇ ಅಲ್ಲ, ರಾಜಕಾರಣಿಗಳು, ಬಿಲ್ಡರ್‍‌ಗಳು, ಲಾಟರಿ ಕಿಂಗ್‌ಪಿನ್‌ಗಳು, ಐಟಿ ಕಂಪನಿ ಮಾಲೀಕರು, ಗುತ್ತಿಗೆದಾರರು, ಉದ್ಯಮಿಗಳು ಎಲ್ಲರೂ ಇದ್ದಾರೆ. ಅಷ್ಟೇ ಏಕೆ, ಮೈ ಹೋಂ ಮತ್ತು ಮೇಘಾ ಎಂಜಿನಿಯರ್ರ್ಸ್ ಒಡೆತನದಲ್ಲಿರುವ ಹೈದರಾಬಾದಿನ ‘ತೆಲುಗು ಟಿವಿ9’ ಸುದ್ದಿ ಸಂಸ್ಥೆ ಕೂಡ ಮೋದಿಯವರಿಗೆ ದೇಣಿಗೆ ನೀಡಿದೆ.

‘ತೆಲುಗು ಟಿವಿ9’ ಸಂಸ್ಥೆಗೆ ಎದುರಾದ ಸಂಕಷ್ಟ, ದೇಶದ ಸುದ್ದಿ ಸಂಸ್ಥೆಗಳಿಗೆ ಎದುರಾಗುವುದು ಎಷ್ಟು ದಿನ? ಅವರಿಗಾದದ್ದು ನಮಗಾಗುವುದಿಲ್ಲವೇ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X