ಮೊನ್ನೆಯಷ್ಟೇ ಚಂದ್ರಯಾನ ಯಶಸ್ವಿಯಾಗಿದೆ. ಚಂದ್ರನ ನೆಲದಲ್ಲಿ ವಿಕ್ರಮ್ ಲ್ಯಾಂಡರ್ ಕಾಲೂರಿದೆ. ಆ ಸಾಧನೆ, ಯಶಸ್ಸಿನ ಹಿಂದೆ ಕೆಲಸ ಮಾಡಿದ ವಿಜ್ಞಾನಿಗಳು, ಎಂಜಿನಿಯರ್ಗಳಲ್ಲಿ ಮಹಿಳೆಯರೂ ಇದ್ದರು. ಇದು ಸ್ತ್ರೀಕುಲವೇ ಸಂಭ್ರಮಿಸುವ ವಿಚಾರ. ಇಂತಹ ಸಮಯದಲ್ಲಿ ಹೆಣ್ಣುಮಕ್ಕಳನ್ನು ಹೆಚ್ಚು ಹೆಚ್ಚು ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದ ಕಡೆಗೆ ಸೆಳೆಯುವಂಥ ಯೋಜನೆಗಳನ್ನು ತರಬೇಕೆ ಹೊರತು, ದೇವಸ್ಥಾನಕ್ಕೆ ಹೋಗುವಂತೆ ಪ್ರೋತ್ಸಾಹಿಸುವ ಕಾರ್ಯಕ್ರಮಗಳು ಸರ್ಕಾರದ ಕೆಲಸವಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ದಿನಗಳ ಹಿಂದೆ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಕರೆದು, ʼಮೌಢ್ಯ, ಕಂದಾಚಾರರಹಿತವಾದ ವೈಜ್ಞಾನಿಕ, ವೈಚಾರಿಕ ಶಿಕ್ಷಣ ನೀಡಬೇಕು. ಜಾತ್ಯತೀತ ವಿರೋಧಿ ಮನಸ್ಥಿತಿಯನ್ನು ಪುರಸ್ಕರಿಸಬಾರದುʼ ಎಂದು ಹೇಳಿರುವುದು ಅಪೇಕ್ಷಣೀಯ. ಈಗಾಗಲೇ ಕೋಮುವಾದಿ, ಜಾತೀವಾದಿ ಮನಸ್ಥಿತಿಯ ಶಿಕ್ಷಕರು ವಿಶ್ವವಿದ್ಯಾಲಯಗಳಲ್ಲಿ ತುಂಬಿ ಹೋಗಿದ್ದಾರೆ. ಪ್ರತಿಷ್ಠಿತ ಎಂಐಟಿ, ಐಐಟಿ ಗಳಂಥ ಕ್ಯಾಂಪಸ್ಗಳಲ್ಲಿ ದಲಿತ ವಿದ್ಯಾರ್ಥಿಗಳು ಸಹಪಾಠಿಗಳು ಮತ್ತು ಪ್ರಾಧ್ಯಾಪಕರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಸಿದ್ದರಾಮಯ್ಯನವರ ಈ ನಿಲುವು ಪ್ರಶ್ನಾತೀತ.
ಇದೇ ಸಮಯದಲ್ಲಿ ರಾಜ್ಯದ ಮುಜರಾಯಿ ಇಲಾಖೆಯು ಹಬ್ಬಗಳ ದಿನ ದೇವಸ್ಥಾನಗಳಿಗೆ ಬರುವ ಮಹಿಳೆಯರಿಗೆ ಅರಿಶಿಣ, ಕುಂಕುಮ, ಕಸ್ತೂರಿ, ಹಸಿರು ಗಾಜಿನ ಬಳೆ ನೀಡುವ ಹಳೆ ಸರ್ಕಾರದ ಯೋಜನೆಯನ್ನು ಮುಂದುವರಿಸುವ ಸುತ್ತೋಲೆ ಹೊರಡಿಸಿರುವುದು ಹಾಸ್ಯಾಸ್ಪದ. ಸರ್ಕಾರ ಮಾಡಬೇಕಿರುವುದು ಹೆಣ್ಣು ಮಕ್ಕಳಿಗೆ ಘನತೆಯ ಬದುಕು ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡುವುದು. ಅದು ಬಿಟ್ಟು ಮನೆಯಲ್ಲಿ ದಿನಾ ಹಚ್ಚಿಕೊಳ್ಳುವ ಅರಿಶಿಣ, ಕುಂಕುಮ, ಗಾಜಿನ ಬಳೆಗಳನ್ನು ದೇವಸ್ಥಾನಕ್ಕೆ ಬರುವ ಮಹಿಳೆಯರಿಗೆ ಸರ್ಕಾರ ಕೊಡುವುದು ಯಾವ ಕಾರಣಕ್ಕೂ ಅಪೇಕ್ಷಣೀಯವಲ್ಲ.
ಭಾರತೀಯ ಸಂಸ್ಕೃತಿ, ಸನಾತನ ಪದ್ಧತಿ ಎಂಬುದೆಲ್ಲ ಹೆಣ್ಣುಮಕ್ಕಳನ್ನು ಕಂದಾಚಾರ, ಮೌಢ್ಯಗಳಲ್ಲಿ ಬಂಧಿಸುವ ಮಾದರಿಗಳು. ಅವುಗಳ ಭಾಗವಾಗಿ ಗಂಡನ ಪಾದ ಪೂಜೆ ಮಾಡುವುದು, ಆತನ ಆಯಸ್ಸಿಗಾಗಿ ವ್ರತಗಳನ್ನು ಮಾಡುವುದು ಇವೆಲ್ಲ ಹೆಣ್ಣನ್ನು ಗಂಡನ ಅಧೀನಳು ಎಂಬುದನ್ನು ಬಿಂಬಿಸುವ ವಿಧಾನಗಳು. ಗಂಡ ಬದುಕಿರುವಾಗ ಮಾತ್ರ ತಾಳಿ, ಕುಂಕುಮ, ಗಾಜಿನ ಬಳೆ ಧರಿಸಬೇಕು. ಆತ ಸತ್ತ ನಂತರ ಅದನ್ನೆಲ್ಲ ತ್ಯಜಿಸಬೇಕು, ಶುಭ ಕಾರ್ಯಗಳಲ್ಲಿ ವಿಧವೆಯರು ಭಾಗಿಯಾಗುವಂತಿಲ್ಲ, ಶಾಸ್ತ್ರಗಳನ್ನು ಮಾಡುವಂತಿಲ್ಲ ಎಂಬ ನಿಯಮಗಳನ್ನು ಈಗಲೂ ಪಾಲಿಸುವವರಿದ್ದಾರೆ. ಅಂತಹ ಅಮಾನವೀಯ ಮೌಢ್ಯಗಳನ್ನು ನಿವಾರಿಸಲು ಒಂದು ಪ್ರಗತಿಪರ, ಸ್ತ್ರೀಪರ ಸರ್ಕಾರ ಕೆಲಸ ಮಾಡಬೇಕು. ಅದು ಬಿಟ್ಟು ಮತ್ತೆ ಅರಿಶಿಣ, ಕುಂಕುಮ, ಗಾಜಿನ ಬಳೆಗಳೆಂಬ ಭ್ರಮಾಲೋಕದಲ್ಲಿ ಬಂಧಿಸಿಡುವುದಲ್ಲ.
ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಶಕ್ತಿ, ಗೃಹಲಕ್ಷಿಯಂತಹ ಯೋಜನೆಗಳನ್ನು ಜಾರಿಗೊಳಿಸಿದ್ದು ದೇಶದ ಮಾತ್ರವಲ್ಲ, ವಿದೇಶದ ಅರ್ಥಶಾಸ್ತ್ರಜ್ಞರೂ ಮೆಚ್ಚಿ ಚರ್ಚಿಸುತ್ತಿದ್ದಾರೆ. ಶಕ್ತಿ ಯೋಜನೆ ಶುರುವಾದ ಒಂದು ತಿಂಗಳಿನಲ್ಲಿಯೇ ಅದರ ಪರಿಣಾಮವಾಗಿ ಮುಜರಾಯಿ ಸಹಿತ ಎಲ್ಲ ದೇವಾಲಯಗಳಲ್ಲಿ ಕಾಣಿಕೆ ರೂಪದ ಆದಾಯ ಹೆಚ್ಚಿದೆ. ಸುತ್ತಮುತ್ತಲ ವ್ಯಾಪಾರಿಗಳಿಗೂ ಆದಾಯ ಹೆಚ್ಚಿದೆ. ಆದರೆ, ಉಚಿತ ಬಸ್ ಪ್ರಯೋಜನವನ್ನು ಪಡೆದು ಉಳಿದ ಚೂರುಪಾರು ಹಣವನ್ನು ದೇವಸ್ಥಾನದ ಹುಂಡಿಗೆ ಹಾಕುವುದನ್ನು ಪ್ರೋತ್ಸಾಹಿಸುವುದು ಯಾವ ಕಾರಣಕ್ಕೂ ಸರಿಯಲ್ಲ. ಹಾಗೆಯೇ ದೇವಸ್ಥಾನಗಳಲ್ಲಿ ಅರಿಶಿಣ, ಕುಂಕುಮ, ಬಳೆ ಕೊಡುವುದು ಅಧಿಕಾರಿಗಳ ಹುಂಡಿಗೆ ಮತ್ತಷ್ಟು ಹಣ ಜಮೆಯಾಗುವ ಯೋಜನೆಗಳಷ್ಟೇ. ಅದರಾಚೆಗೆ ನಯಾ ಪೈಸೆಯ ಪ್ರಯೋಜನ ಮಹಿಳೆಯರಿಗೂ ಇಲ್ಲ, ಸರ್ಕಾರಕ್ಕೂ ಇಲ್ಲ.
ಮೊನ್ನೆಯಷ್ಟೇ ಚಂದ್ರಯಾನ ಯಶಸ್ವಿಯಾಗಿದೆ. ಚಂದ್ರನ ನೆಲದಲ್ಲಿ ವಿಕ್ರಮ್ ಲ್ಯಾಂಡರ್ ಕಾಲೂರಿದೆ. ಆ ಸಾಧನೆ, ಯಶಸ್ಸಿನ ಹಿಂದೆ ಕೆಲಸ ಮಾಡಿದ ವಿಜ್ಞಾನಿಗಳು, ಎಂಜಿನಿಯರ್ಗಳಲ್ಲಿ ಮಹಿಳೆಯರೂ ಇದ್ದರು. ಇದು ಸ್ತ್ರೀಕುಲವೇ ಸಂಭ್ರಮಿಸುವ ವಿಚಾರ. ಇಂತಹ ಸಮಯದಲ್ಲಿ ಹೆಣ್ಣುಮಕ್ಕಳನ್ನು ಹೆಚ್ಚು ಹೆಚ್ಚು ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದ ಕಡೆಗೆ ಸೆಳೆಯುವಂಥ ಯೋಜನೆಗಳನ್ನು ತರಬೇಕೆ ಹೊರತು, ದೇವಸ್ಥಾನಕ್ಕೆ ಹೋಗುವಂತೆ ಪ್ರೋತ್ಸಾಹಿಸುವ ಕಾರ್ಯಕ್ರಮಗಳು ಸರ್ಕಾರದ ಕೆಲಸವಲ್ಲ.
ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾದಾಗ ಅದನ್ನು ವಿರೋಧಿಸಿ ʼಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸʼ ಎಂದು ಬೊಬ್ಬೆ ಹೊಡೆದ ಬಿಜೆಪಿ ತನ್ನ ಅವಧಿಯಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಅದನ್ನು ಈ ಸರ್ಕಾರ ಮುಂದುವರಿಸದಿದ್ದರೆ ಅದಕ್ಕಾಗಿ ಗೋಳಾಡುವವರು ಯಾರೂ ಇರಲಿಲ್ಲ. ಯಕಶ್ಚಿತ್ ಅರಿಶಿಣ, ಕುಂಕುಮದಂತಹ ವಸ್ತುಗಳನ್ನು ಕೊಟ್ಟು ಹೆಣ್ಣುಮಕ್ಕಳನ್ನು ಗೌರವಿಸಿದ್ದೇವೆ ಎಂಬ ಭ್ರಮೆ ಬೇಡ. ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆಯ ಜೊತೆಗೆ ಅವರಿಗೊಂದು ಘನತೆಯ ಬದುಕು ಕಲ್ಪಿಸಲು ಏನೆಲ್ಲ ಮಾಡಬಹುದು ಅದನ್ನುಸರ್ಕಾರ ಮಾಡಬೇಕು. ಇಂತಹ ಅನಗತ್ಯ ಯೋಜನೆಯನ್ನು ರದ್ದುಪಡಿಸುವ ನಿಟ್ಟಿನಲ್ಲಿ ಆಯಾ ಇಲಾಖೆಯ ಸಚಿವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ.
