ಮಲ ಮೂತ್ರ ಬಳಿಸುವ ಮತ್ತು ಹೊರಿಸಿ ಸಾಗಿಸುವ ಅನಿಷ್ಟ ಪದ್ಧತಿಯನ್ನು ಅಂದಿನ ಪೌರಾಡಳಿತ ಮಂತ್ರಿ ಬಿ.ಬಸವಲಿಂಗಪ್ಪ ಅವರು 1972ರಲ್ಲಿಯೇ ನಿಷೇಧಿಸಿದ್ದರು.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸಿರುವ ಕೃತ್ಯ ಅಮಾನವೀಯ. ಧರಿಸಲು ಯಾವುದೇ ಸುರಕ್ಷತಾ ಸಾಧನಗಳನ್ನು ನೀಡದೆ ಬರಿಗೈ- ಬರಿಮೈಯಲ್ಲಿ ಇಳಿಸಿದ್ದು ಮಹಾಪರಾಧ.
ಭಾರತದ ಜಾತಿಪದ್ಧತಿಯ ಎಣೆಯಿಲ್ಲದ ಈ ಕ್ರೌರ್ಯಕ್ಕೆ ಎಚ್.ಡಿ.ಕೋಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಚಿತ್ರೀಕರಿಸಲಾಗಿರುವ ವಿಡಿಯೋ ಜೀವಂತ ಸಾಕ್ಷಿ. ಎಚ್.ಡಿ.ಕೋಟೆ ಘಟನೆಗೆ ಕಾರಣರಾದ ಗುತ್ತಿಗೆದಾರರು-ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಸಂಬಂಧಪಟ್ಟವರಿಗೆ ಎರಡು ದಿನಗಳ ಹಿಂದೆಯಷ್ಟೇ ಆದೇಶ ನೀಡಿದೆ.
ಮಲ ಮೂತ್ರ ಬಳಿಸುವ ಮತ್ತು ಹೊರಿಸಿ ಸಾಗಿಸುವ ಅನಿಷ್ಟ ಪದ್ಧತಿಯನ್ನು ಅಂದಿನ ಪೌರಾಡಳಿತ ಮಂತ್ರಿ ಬಿ.ಬಸವಲಿಂಗಪ್ಪ ಅವರು 1972ರಲ್ಲಿಯೇ ನಿಷೇಧಿಸಿದ್ದರು. 2013ರ ಕರ್ನಾಟಕ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ ಕಾಯಿದೆ ಪ್ರಕಾರ ಸೂಕ್ತ ಸಲಕರಣೆಗಳು ಮತ್ತು ಸುರಕ್ಷತಾ ಸಾಧನಗಳಿಲ್ಲದೆ ಮಲ ಬಳಿಸುವುದು ಮತ್ತು ಒಣ ಪಾಯಿಖಾನೆಗಳನ್ನು ನಿರ್ಮಿಸುವುದು ಕಾನೂನಿನ ಪ್ರಕಾರ ನಿಷಿದ್ಧ ಮತ್ತು ಶಿಕ್ಷಾರ್ಹ ಅಪರಾಧ. ಆದರೆ ಹತ್ತು ವರ್ಷಗಳ ನಂತರವೂ ಈ ಕಾಯಿದೆಯ ಬಿಡುಬೀಸು ಉಲ್ಲಂಘನೆ ಆಗುತ್ತಿದೆ.
ಎಗ್ಗಿಲ್ಲದ ಈ ಉಲ್ಲಂಘನೆಯ ಕುರಿತು ರಾಜ್ಯ ಸರ್ಕಾರವೇ ಒಂದೂವರೆ ತಿಂಗಳ ಹಿಂದೆ ಸುತ್ತೋಲೆ ಹೊರಡಿಸಿದೆ ಎಂದರೆ ನಿರ್ದಿಷ್ಟ ಜಾತಿ ಸಮುದಾಯದ ಮಾನವ ಘನತೆ, ಆರೋಗ್ಯ, ಸುರಕ್ಷತೆಯನ್ನು ಕುರಿತು ನಮ್ಮ ಸಮಾಜದ ಹೃದಯಹೀನತೆ ಮತ್ತು ಘೋರ ನಿರ್ಲಕ್ಷ್ಯ ಯಾವ ಪಾತಾಳಕ್ಕೆ ಕುಸಿದಿದೆ ಎಂದು ಊಹಿಸಲು ಬಂದೀತು. ರಾಜ್ಯದಲ್ಲಿ ಮ್ಯಾನ್ ಹೋಲ್, ಪಿಟ್ ಗುಂಡಿ, ತೆರೆದ ಚರಂಡಿ, ಒಳಚರಂಡಿ, ಮಲದ ಗುಂಡಿ ಮತ್ತು ಗಟಾರಗಳನ್ನು ಸುರಕ್ಷತಾ ಪರಿಕರಗಳಿಲ್ಲದೆ ಸ್ವಚ್ಛತಾ ಕಾರ್ಯ ನಿರ್ವಹಿಸಿ, 2013ರ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಕಾಯಿದೆ ಉಲ್ಲಂಘನೆಯಾಗಿರುವ ಪ್ರಕರಣಗಳು ಹೆಚ್ಚಾಗಿವೆ ಎಂದು ಇತ್ತೀಚೆಗೆ ಹೊರಡಿಸಲಾಗಿರುವ ರಾಜ್ಯ ಸರ್ಕಾರದ ಸುತ್ತೋಲೆ ಸಾರಿದೆ.
ಪ್ರಕರಣಗಳು ಹೆಚ್ಚುತ್ತಿವೆ. ಆದರೂ ಸಂಬಂಧಪಟ್ಟ ಇನ್ಸ್ಪೆಕ್ಟರುಗಳು ಅವುಗಳನ್ನು ದಾಖಲು ಮಾಡಿ ಸಬ್ ಡಿವಿಷನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕಳುಹಿಸಿ ಕ್ರಮ ವಹಿಸುತ್ತಿಲ್ಲ. ಹೀಗಾಗಿ ಎಫ್.ಐ.ಆರ್.ಗಳು ದಾಖಲಾಗದೆ, ಹಾಗೂ ದಾಖಲಾದ ಪ್ರಕರಣಗಳು ಕೂಡ ಖುಲಾಸೆಯಾಗುತ್ತಿವೆ ಎಂದು ರಾಜ್ಯ ಸರ್ಕಾರ ಇದೇ ಆಗಸ್ಟ್ 31ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಕಳವಳ ವ್ಯಕ್ತಪಡಿಸಿದೆ.
2013ರ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಕಾಯಿದೆ ಸೆಕ್ಷನ್ 20ರ ಪ್ರಕಾರ ಇನ್ಸ್ಪೆಕ್ಟರುಗಳನ್ನು ನೇಮಕ ಮಾಡಲಾಗಿದೆ. ಘಟನೆಗಳು ನಡೆದ ಕ್ಷಣವೇ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವುದು ಈ ನೇಮಕದ ಉದ್ದೇಶ. ಈ ಶೋಷಿತ ಕಾರ್ಮಿಕರು ಒಂದು ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದರೆ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯಿದೆಯ ಪ್ರಕಾರ ಎಫ್.ಐ.ಆರ್. ದಾಖಲಿಸಬೇಕು. ಹೀಗೆ ದಾಖಲಿಸಿದ ಎಫ್.ಐ.ಆರ್. ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಕೆ ಆಗುವ ತನಕ ಕ್ರಮವಹಿಸಬೇಕು. ಈ ಕೆಲಸದಲ್ಲಿ ನಿರ್ಲಕ್ಷ್ಯ ತೋರುವ ಇನ್ಸ್ಪೆಕ್ಟರುಗಳ ಮೇಲೆಯೇ ಎಫ್.ಐ.ಆರ್. ದಾಖಲಿಸುವಂತೆ ಸುತ್ತೋಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಬಿಗಿ ನಿರ್ದೇಶನ ನೀಡಲಾಗಿದೆ.
ಈ ಅಂಶವನ್ನು ಕುರಿತು ನಮ್ಮ ಘನತೆವೆತ್ತ ಬಹುತೇಕ ಪತ್ರಿಕೆಗಳು ಮತ್ತು ಸುದ್ದಿ ಚಾನೆಲ್ ಗಳು ವರದಿ ಮಾಡಿವೆಯೇ, ಮಾಡಿದ್ದರೆ ಎಷ್ಟರಮಟ್ಟಿಗೆ ಪ್ರಾಮುಖ್ಯತೆ ನೀಡಿ ಮಾಡಿವೆ ಎಂಬುದು ಗಮನಾರ್ಹ. ನಮ್ಮ ನಿಮ್ಮ ಹೊಲಸನ್ನು ಗುಡಿಸಿ ಸಾಗಿಸಿ ಸ್ವಚ್ಛಗೊಳಿಸುವ ಕಾಯಕಜೀವಿಗಳ ಬದುಕುಗಳಿಗೆ ಘನತೆ ನೀಡದೆ ಹೋದರೆ ಚಂದ್ರಯಾನ ಸೂರ್ಯಯಾನ ಮಂಗಳಯಾನಗಳನ್ನು ‘ಸಾಧನೆ’ಯೆಂದು ಯಾವ ಬಾಯಿಯಲ್ಲಿ ಕರೆಯಬೇಕು? ಈ ಯಾನಗಳನ್ನು ರಾಷ್ಟ್ರೀಯ ಹೆಮ್ಮೆ ಎಂದು ಸಂಭ್ರಮಿಸುತ್ತದೆ ನಮ್ಮ ಸಮಾಜ. ಸಾಧನೆಯೇ ಇದ್ದೀತು. ಆದರೆ ಅಳೆತ್ತರದ ಮಲದ ಗುಂಡಿಗೆ ಮನುಷ್ಯರನ್ನು ಇಳಿಸಿ ಸ್ವಚ್ಛ ಮಾಡಿಸುವುದು ಅದ್ಯಾವ ನಾಗರಿಕತೆ?
ಬಾಹ್ಯಾಕಾಶ ಸಂಶೋಧನೆಗಾಗಿ ಸಾವಿರಾರು ಕೋಟಿ ರುಪಾಯಿ ವ್ಯಯಿಸಿ ಪ್ರತ್ಯೇಕ ಸಂಸ್ಥೆಯೊಂದನ್ನೇ ನಡೆಸುತ್ತ ಬಂದಿದೆ ಭಾರತ ಸರ್ಕಾರ. ಅತ್ಯುತ್ತಮ ವಿಜ್ಞಾನಿಗಳು ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭೂಮಿ ಮತ್ತು ಚಂದ್ರನ ನಡುವಣ ದೂರ 3,84,400 ಕಿ.ಮೀ.ಗಳು. ಚಂದ್ರನ ಅಂಗಳಕ್ಕೆ ಭಾರತೀಯರು ಇಳಿಯುವ ದಿನಗಳು ಸನ್ನಿಹಿತವೆಂದು ಮಾನ್ಯ ಪ್ರಧಾನಿ ಮೋದಿಯವರು ಎದೆಯುಬ್ಬಿಸಿ ಮಾತಾಡುತ್ತಿದ್ದಾರೆ. ಆದರೆ ಅವರು ಆಲೋಚಿಸಲಿ, ಮೂರೂಮುಕ್ಕಾಲು ಲಕ್ಷ ಕಿ.ಮೀ. ದೂರದ ಚಂದ್ರನ ಅಂಗಳಕ್ಕೆ ಉಪಗ್ರಹ ಇಳಿಸಲು ಸಮರ್ಥರಾದ ನಾವು ಆಳೆತ್ತರದ ಮಲದ ಗುಂಡಿಗಳನ್ನು, ಕೊಳಚೆಕೂಪಗಳಾಗಿರುವ ಒಳಚರಂಡಿಗಳನ್ನು ಸ್ವಚ್ಛ ಮಾಡುವ ದಕ್ಷ ಯಂತ್ರೋಪಕರಣಗಳನ್ನು ತಯಾರು ಮಾಡಲಾರದಷ್ಟು ಅಸಮರ್ಥರೇ? ಖಂಡಿತ ಅಲ್ಲ.
ಸಹಸ್ರಮಾನಗಳಷ್ಟು ಹಳೆಯ ಮೇಲು- ಕೀಳುಗಳ ಮನುವಾದವನ್ನೇ ಉಸಿರಾಡುತ್ತಿರುವ ನಮಗೆ ಕಟ್ಟಿಕೊಂಡ ಮಲದ ಗುಂಡಿಗಳನ್ನು ಬಿಡಿಸಿ ಸಲೀಸು ಮಾಡುವ ಯಂತ್ರಗಳನ್ನು ರೂಪಿಸಲು ಮನಸ್ಸಿಲ್ಲ ಅಷ್ಟೇ. ಯಂತ್ರಗಳ ಮೇಲೆ ಲಕ್ಷಾಂತರ ಕೋಟ್ಯಂತರ ಹಣ ಸುರಿಯಬೇಕು. ಅವುಗಳನ್ನು ನಡೆಸುವವರನ್ನು ಇಟ್ಟುಕೊಂಡು ಅವರಿಗೆ ಸಂಬಳ ಅಥವಾ ದಿನಗೂಲಿ ಕೊಡಬೇಕು. ಯಂತ್ರಗಳ ರಿಪೇರಿಯ ವೆಚ್ಚ ಭರಿಸಬೇಕು. ಯಂತ್ರಗಳಿಗಿಂತ ಈ ಸಾಮಾಜಿಕ ವ್ಯವಸ್ಥೆಯ ಕಟ್ಟಕಡೆಯ ಮನುಷ್ಯಳ ಶ್ರಮ ಮತ್ತು ಆಕೆಯ ಪ್ರಾಣಗಳು ಅಗದೀ ಅಗ್ಗ ಅಲ್ಲವೇ?
