ಈ ದಿನ ಸಂಪಾದಕೀಯ | ಪತ್ರಿಕೋದ್ಯಮದ ಪಾವಿತ್ರ್ಯವನ್ನು ಪಾತಾಳಕ್ಕಿಳಿಸಿದ ‘ಪತ್ರಕರ್ತರು’!

Date:

Advertisements
ಸುಶಾಂತ್-ರಿಯಾ ಕೇಸಿನಲ್ಲಿ ಕೊನೆಪಕ್ಷ ಝೀ ಟಿವಿ ಮಾಲೀಕ ಕ್ಷಮೆಯನ್ನಾದರೂ ಕೇಳಿದರು. ಆದರೆ 2000 ನೋಟಿನಲ್ಲಿ ಚಿಪ್ ಇದೆ ಎಂದು ಸುಳ್ಳು ಹೇಳಿ ಹತ್ತು ವರ್ಷವಾಗುತ್ತ ಬಂದರೂ, ಆ 'ಹಿರಿಯ' ಪತ್ರಕರ್ತನಿಗೆ ಕ್ಷಮೆ ಕೇಳಬೇಕು ಎನ್ನಿಸದಿರುವುದು, ಮಾಧ್ಯಮಗಳು-ಪತ್ರಕರ್ತರು ತಲುಪಿರುವ ಪತನದ ಪಾತಾಳವನ್ನು ಸೂಚಿಸುವುದಿಲ್ಲವೇ?

‘ನಮ್ಮ ಚಾನಲ್‌ನಿಂದ ದೊಡ್ಡ ಪ್ರಮಾದವಾಗಿದೆ. ನಾವೇ ಶುರು ಮಾಡಿದ ಅಪಪ್ರಚಾರ ಅಭಿಯಾನವನ್ನು ಇತರ ಚಾನಲ್‌ಗಳು ಅನುಸರಿಸಿದರು. ಅದರಿಂದ ದೊಡ್ಡ ಪ್ರಮಾದವಾಗಿದೆ. ನಾನು ನೇರವಾಗಿ ಅದರಲ್ಲಿ ಭಾಗಿಯಾಗಿರಲಿಲ್ಲವಾದರೂ ರಿಯಾ ಚಕ್ರವರ್ತಿ ಅವರಲ್ಲಿ ಕ್ಷಮೆಯಾಚಿಸುತ್ತೇನೆ’ ಎಂದು ಝೀ ಸುದ್ದಿ ಸಂಸ್ಥೆಯ ಮಾಲೀಕ ಸುಭಾಷ್ ಚಂದ್ರ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

2020ರಲ್ಲಿ ಹಿಂದಿ ಚಿತ್ರನಟ ಸುಶಾಂತ್ ಸಿಂಗ್‌, ಮುಂಬೈನ ತಮ್ಮ ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ವರದಿ ಮಾಡಿದ್ದರು. ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಆದರೆ ಅದು ಆತ್ಮಹತ್ಯೆಯಲ್ಲ, ಕೊಲೆ ಎಂದು ಸುದ್ದಿ ಮಾಧ್ಯಮಗಳು, ಅದರಲ್ಲೂ ಹಿಂದಿ-ಇಂಗ್ಲಿಷ್ ಚಾನಲ್‌ಗಳು, ತಾವೇ ಖುದ್ದಾಗಿ ಕಂಡವರಂತೆ, ಸುದ್ದಿ ಸೃಷ್ಟಿಸಿ ಬಿತ್ತರಿಸಿದ್ದರು. ಸುಶಾಂತ್ ಸಿಂಗ್ ಸಾವಿಗೆ ಗೆಳತಿ ರಿಯಾ ಚಕ್ರವರ್ತಿಯೇ ಕಾರಣವೆಂದು, ಆಕೆಯನ್ನು ಎಳೆದು ತಂದು, ರಾಡಿ ಎಬ್ಬಿಸಿದ್ದರು.

ಝೀ ಟಿವಿಯ ಸುಧೀರ್ ಚೌಧರಿ, ಟೈಮ್ಸ್ ನೌನ ನವಿಕಾ ಕುಮಾರ್ ಮತ್ತು ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿಯಂತಹ ಕೂಗುಮಾರಿ ಪತ್ರಕರ್ತರು ದೊಡ್ಡ ಗಂಟಲಿನಲ್ಲಿ ‘ರಿಯಾ ಮುಜೆ ಡ್ರಗ್ ದೋಹ್, ಮುಜೆ ಡ್ರಗ್ ದೋಹ್’ ಎಂದು ಗುಲ್ಲೆಬ್ಬಿಸಿದ್ದರು. ಸುಳ್ಳನ್ನು ಪದೇ ಪದೆ ಹೇಳಿ, ಸತ್ಯವೆಂದು ಪ್ರತಿಪಾದಿಸಿದ್ದರು. ಜನ ನಂಬುವಂತೆ ಮಾಡಿದ್ದರು. ಪೊಲೀಸು, ನ್ಯಾಯಾಂಗ ವ್ಯವಸ್ಥೆಯನ್ನು ದಾರಿ ತಪ್ಪಿಸಿದ್ದರು. ಇವರ ಟಿವಿ ಚರ್ಚಾಕೂಟಗಳೆಂಬ ನ್ಯಾಯ ನಿರ್ಧಾರಿತ ಕಟಕಟೆಯಲ್ಲಿ, ಚಿತ್ರನಟಿ ರಿಯಾ ಚಕ್ರವರ್ತಿಯನ್ನು ಅಪರಾಧಿಯನ್ನಾಗಿ ಮಾಡಿದ್ದರು. ಕೆಲವು ದಿನಗಳ ಕಾಲ ಜೈಲಿಗೂ ತಳ್ಳಿಸಿದ್ದರು.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪುಟ್ಟ ರಾಷ್ಟ್ರಗಳಿಂದ ಇಸ್ರೇಲ್, ರಷ್ಯಾ, ಅಮೆರಿಕ ಕಲಿಯುವುದು ಬಹಳಷ್ಟಿದೆ!

ಸುಶಾಂತ್ ಸಿಂಗ್ ಕೇಸಿನಲ್ಲಿ ಇವತ್ತಿನ ದೃಶ್ಯ ಮಾಧ್ಯಮಗಳಿಗೆ ಬಹಳ ಮುಖ್ಯವಾಗಿ ಬೇಕಾಗಿರುವ ಸೆಕ್ಸ್, ಕ್ರೈಮ್ ಮತ್ತು ಗ್ಲ್ಯಾಮರ್ ಎಂಬ ಸರಕಿತ್ತು. ಪ್ರತಿ ಸುದ್ದಿಯಲ್ಲೂ ಈ ಮೂರು ಅಂಶಗಳನ್ನು ಹುಡುಕುವ, ಇಲ್ಲದಿದ್ದರೆ ತುರುಕುವ ಮತ್ತು ಬಣ್ಣಕಟ್ಟಿ ಬಿತ್ತರಿಸುವ ದೃಶ್ಯ ಮಾಧ್ಯಮಗಳಿಗೆ ಸುಶಾಂತ್ ಸಿಂಗ್ ಕೇಸು- ಅನಾಯಾಸವಾಗಿ ಸಿಕ್ಕಿತ್ತು. ಟಿಆರ್‍‌ಪಿ ಏರಿಸಲು, ಹಣ ಗಳಿಸಲು ಸುಳ್ಳನ್ನು ಬಿತ್ತಿ ಬೆಳೆವ ಭರಾಟೆಯಲ್ಲಿ ಪತ್ರಿಕೋದ್ಯಮವನ್ನು ಪ್ರಪಾತಕ್ಕೆ ತಳ್ಳಿದ್ದರು.

ಈಗ ಸುಶಾಂತ್ ಸಿಂಗ್ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಿದ ಸಿಬಿಐ, ಐದು ವರ್ಷಗಳ ನಂತರ ರಿಯಾ ಮತ್ತವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದೆ. ಸುಶಾಂತ್ ಸಾವಿಗೂ ರಿಯಾಗೂ ಸಂಬಂಧವಿಲ್ಲ ಎಂದು ಹೇಳಿ ಪ್ರಕರಣಕ್ಕೆ ತೆರೆ ಎಳೆದಿದೆ. ಮೋದಿ ಪರ ವಕಾಲತ್ತು ವಹಿಸಿ ಗೋದಿ ಮೀಡಿಯಾ ಎಂಬ ಹೆಸರು ಗಳಿಸಿರುವ ಝೀ ಸುದ್ದಿ ಸಂಸ್ಥೆಯ ಮಾಲೀಕ ಸುಭಾಷ್ ಚಂದ್ರ, ಅಹಂ ಬದಿಗಿಟ್ಟು, ಸುಳ್ಳು ಸುದ್ದಿಯಿಂದಾದ ಅನಾಹುತದ ಅರಿವಾಗಿ ಕ್ಷಮೆ ಕೇಳಿದ್ದಾರೆ.

ಆದರೆ ಸುಳ್ಳು ಸುದ್ದಿ ಹರಡಿದ, ಜನರನ್ನು ಹಾದಿ ತಪ್ಪಿಸಿದ ಪತ್ರಕರ್ತರೆಂಬ ಹಣೆಪಟ್ಟಿ ಹೊತ್ತ ಸುಧೀರ್, ಅರ್ನಬ್, ನವಿಕಾಗಳೆಂಬ ಕಿಡಿಗೇಡಿಗಳು, ಕ್ಷಮೆ ಕೇಳುವುದಿರಲಿ, ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತಿದ್ದಾರೆ. ಅವರು ಮಾಡಿದ್ದು ಸಂಘಟಿತ ಅಪರಾಧವಲ್ಲವೇ, ಅವರಿಗೆ ಶಿಕ್ಷೆಯಾಗಬೇಕಲ್ಲವೇ, ಇರಲಿ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರು 2016 ನವೆಂಬರ್ 8ರಂದು ಎಲ್ಲಾ 500 ಮತ್ತು 1000 ರೂ.ಗಳ ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದರು. ಹೊಸದಾಗಿ ಪರಿಚಯಿಸಲಾದ 2000 ಮತ್ತು 500 ರೂ.ಗಳಿಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿದರು.

ಇದರಿಂದ ನಗದು ಅವಲಂಬಿತ ಆರ್ಥಿಕ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಬಡವರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ಮಧ್ಯಮವರ್ಗದವರು ಎಟಿಎಂ ಮತ್ತು ಬ್ಯಾಂಕುಗಳ ಮುಂದೆ ಹಳೆಯ ನೋಟುಗಳ ವಿನಿಮಯಕ್ಕೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು. ಕೆಲವರು ಪ್ರಾಣ ಕಳೆದುಕೊಂಡಿದ್ದೂ ಆಯಿತು. ಸಣ್ಣ ಉದ್ಯಮಗಳು ನೆಲಕಚ್ಚುವಂತಾಯಿತು. ಡಾಲರ್ ಎದುರು ರೂಪಾಯಿ ತೀವ್ರವಾಗಿ ಕುಸಿಯಿತು. ದೇಶದ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತವಾಯಿತು.

ನೋಟು ಅಮಾನ್ಯೀಕರಣ ಎನ್ನುವುದು ಕಪ್ಪು ಹಣದ ವಿರುದ್ಧದ ಹೋರಾಟ, ನಕಲಿ ನೋಟುಗಳಿಗೆ ಕಡಿವಾಣ, ಅಕ್ರಮ ಹಣದ ವರ್ಗಾವಣೆಗೆ ನಿರ್ಬಂಧ, ತೆರಿಗೆ ವಂಚನೆ ತಡೆಯುವ ದಿಟ್ಟ ಕ್ರಮ ಎಂದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ಎದೆಯುಬ್ಬಿಸಿ ಹೇಳಿಕೊಂಡಿದ್ದರು.

ಮೋದಿ ಮಾಡಿದ್ದೆಲ್ಲ ಸರಿ ಎಂದು ಸಾರುವ, ಅವರ ಅಮೇಧ್ಯದಲ್ಲಿ ಹೊರಳಾಡುತ್ತಿರುವ ಪತ್ರಕರ್ತರು ಸಾಮಾನ್ಯರ ಸಾವು-ನೋವನ್ನು ಬದಿಗಿಟ್ಟು, ಭಾರತ ಅಭಿವೃದ್ಧಿ ಪಥದತ್ತ ಎಂದು ಕತೆ ಕಟ್ಟಿ ಬಣ್ಣಿಸತೊಡಗಿದರು. ಡಿಮಾನಟೈಜೇಷನ್ ನಂತರ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತುಹಾಕಲಿದ್ದಾರೆ ಮೋದಿ ಎಂದು ಹಾಡಿ ಹೊಗಳತೊಡಗಿದರು. ಅದೇ ಸಂದರ್ಭದಲ್ಲಿ, ಕನ್ನಡದ ‘ಹಿರಿಯ’ ಪತ್ರಕರ್ತರೊಬ್ಬರು ಮೋದಿಯವರ ಹೊಸ 2000 ರೂ. ನೋಟಿನಲ್ಲಿ ನ್ಯಾನೋ ಚಿಪ್ ಇದೆ, ಸಮುದ್ರದ ಆಳದಲ್ಲಿದ್ದರೂ ಪತ್ತೆ ಹಚ್ಚಬಹುದಾಗಿದೆ, ಕಳ್ಳರ ಕಾಲ ಮುಗಿದಿದೆ ಎಂದು, ಹಸೀ ಸುಳ್ಳನ್ನು ಬಿತ್ತರಿಸಿ ನಾಡಿನ ಜನತೆಯನ್ನು ದಿಕ್ಕುತಪ್ಪಿಸಿದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ‘ಎಂಪುರಾನ್‌’ ವಿವಾದ: ಹಿಂದುತ್ವ ರಾಜಕಾರಣಕ್ಕೆ ಬೆಚ್ಚಿದ ಚಿತ್ರತಂಡ

ಇದಾದ ಕೆಲ ದಿನಗಳಲ್ಲಿಯೇ ಕರ್ನಾಟಕದ ಇಬ್ಬರು ಉನ್ನತಾಧಿಕಾರಿಗಳ ಮನೆ ಮೇಲೆ ದಾಳಿ ನಡೆಯಿತು. ಸುಮಾರು ಐದು ಕೋಟಿ ಮೊತ್ತದ ಎರಡು ಸಾವಿರದ ನೋಟುಗಳನ್ನು ಪತ್ತೆ ಮಾಡಲಾಯಿತು. ಆಗಲೂ ಈತ ಮೋದಿ ಇಟ್ಟ ಚಿಪ್‌ನಿಂದಲೇ ಅವರು ಸಿಕ್ಕಿಬಿದ್ದಿರುವುದು ಎಂದು ಹೇಳಿ, ಪತ್ರಿಕೋದ್ಯಮದ ಘನತೆಯನ್ನು ಮಣ್ಣುಗೂಡಿಸಿದರು.

ಅಕ್ಷರ ಬಲ್ಲವರು, ಮಾತು ಬಲ್ಲವರು ಈ ದೇಶವನ್ನು ಸರಿಯಾದ ದಾರಿಯಲ್ಲಿ ನಡೆಸುವ, ಮಾರ್ಗದರ್ಶನ ಮಾಡುವ ಹೊಣೆ ಹೊರಬೇಕಿತ್ತು. ಆದರೆ ಮತಿಗೇಡಿ ಪತ್ರಕರ್ತರ ಈ ಸುಳ್ಳುಸುದ್ದಿಗಳು ಹಣದ ಆಸೆಯಾಚೆಗೂ ಸಮಾಜವನ್ನು ವಿಭಜಿಸುವ, ಮನುಷ್ಯ-ಮನುಷ್ಯರ ನಡುವೆ ಗೋಡೆ ಕಟ್ಟುವ ಸಾಧನವಾಗಿ ಬಳಕೆಯಾಗುತ್ತಿರುವುದು ವರ್ತಮಾನದ ದುರಂತ. ಇನ್ನು ಅನ್ಯಧರ್ಮೀಯರ ಬಗ್ಗೆ ಜನರಲ್ಲಿ ಭಯ ಬಿತ್ತಲು, ಸುಳ್ಳು ಹಬ್ಬಿಸಿ ಸಾಮಾಜಿಕ ಸಹಬಾಳ್ವೆಗೆ ಕೊಳ್ಳಿ ಇಡಲು, ಕೋಮುಗಲಭೆಗಳನ್ನು ಸೃಷ್ಟಿಸಲು ಸನ್ನದ್ಧರಾಗಿರುವ ಪತ್ರಕರ್ತರೇ ನಿಜಪತ್ರಕರ್ತರಾಗಿ ವಿಜೃಂಭಿಸುತ್ತಿರುವುದು- ಮೋದಿ ಮಹಿಮೆ.

ಸುಶಾಂತ್-ರಿಯಾ ಕೇಸಿನಲ್ಲಿ ಕೊನೆಪಕ್ಷ ಝೀ ಟಿವಿ ಮಾಲೀಕ ಕ್ಷಮೆಯನ್ನಾದರೂ ಕೇಳಿದರು. ಆದರೆ 2000 ನೋಟಿನಲ್ಲಿ ಚಿಪ್ ಇದೆ ಎಂದು ಸುಳ್ಳು ಹೇಳಿ ಹತ್ತು ವರ್ಷವಾಗುತ್ತ ಬಂದರೂ, ಆ ‘ಹಿರಿಯ’ ಪತ್ರಕರ್ತನಿಗೆ ಕ್ಷಮೆ ಕೇಳಬೇಕು ಎನ್ನಿಸದಿರುವುದು, ಮಾಧ್ಯಮಗಳು-ಪತ್ರಕರ್ತರು ತಲುಪಿರುವ ಪತನದ ಪಾತಾಳವನ್ನು ಸೂಚಿಸುತ್ತಿದೆ- ಇದು ಕೂಡ ಮೋದಿ ಮಹಿಮೆಯೇ!

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X