ಈ ದಿನ ಸಂಪಾದಕೀಯ | ಗೋಸುಂಬೆಯನ್ನೂ ನಾಚಿಸಿದ ಕುಮಾರಸ್ವಾಮಿ

Date:

Advertisements
ರಾಜಕಾರಣದಲ್ಲಿರುವವರಿಗೆ ಅವಕಾಶವಾದಿತನ ಅನಿವಾರ್ಯವಾಗಿರಬಹುದು. ಆದರೆ ಕುಮಾರಸ್ವಾಮಿಯವರ ಮಾತುಗಳು ಆ ಅನಿವಾರ್ಯತೆಯನ್ನೂ ಮೀರಿದ್ದು. ಅಧಿಕಾರ-ಹಣವನ್ನೂ ಅರಗಿಸಿಕೊಂಡು ಹದ್ದುಮೀರಿದ್ದು. ಗೋಸುಂಬೆಯನ್ನೂ ನಾಚಿಸಿದ್ದು.

ನಿನ್ನೆ ಹಾಸನದಲ್ಲಿ ‘ಈ ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಇಲ್ಲಿ ಯಾರಿಗೂ ಪ್ರಾಮಾಣಿಕತೆ, ನಿಷ್ಠೆ ಎನ್ನುವುದೇ ಉಳಿದಿಲ್ಲ. ಅವರವರ ಸ್ವಾರ್ಥಕ್ಕೆ ಏನೇನು ಆಗಬೇಕೋ ಅದನ್ನು ಮಾಡಿಕೊಂಡು ಹೋಗುತ್ತಾರೆ ಅಷ್ಟೆ. ಇವತ್ತು ಇಲ್ಲಿ ಇರುತ್ತಾರೆ, ಅನುಕೂಲ ಆಗಬೇಕಾದರೆ ಇನ್ನೊಂದು ಕಡೆ ಹೋಗುತ್ತಾರೆʼ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ.

ಇದಕ್ಕೂ ಮುಂಚೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಮಾತನಾಡುತ್ತಾ, ‘ಈ ಮುಂಚೆ ಕಲ್ಲಡ್ಕ ಪ್ರಭಾಕರ ಭಟ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಕೆಲವರು ದಾರಿ ತಪ್ಪಿಸಿದ್ದರು. ಇಂದು ನನ್ನ ಕಣ್ಣು ತೆರೆದಿದೆ. ಮನಸ್ಸು ಪರಿವರ್ತನೆಯಾಗಿದೆ. ತಪ್ಪು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದಿದ್ದಾರೆ.

ಒಂದು, ತಮ್ಮ ಕುಟುಂಬವನ್ನು ಕಳೆದ ಅರವತ್ತು ವರ್ಷಗಳಿಂದ ಪೊರೆಯುತ್ತ ಬಂದಿರುವ ಹಾಸನ ಜಿಲ್ಲೆಯ ಜನತೆಯ ಮುಂದೆ ಆಡಿದ ಮಾತು. ಮತ್ತೊಂದು, ತಮ್ಮನ್ನು ಇಲ್ಲಿಯವರೆಗೂ ಪೊರೆದ ಶೂದ್ರ ಸಮುದಾಯವನ್ನು ತುಚ್ಛವಾಗಿ ಕಾಣುವ, ಗುಲಾಮರನ್ನಾಗಿ ನೋಡುವ, ಬ್ರಾಹ್ಮಣ್ಯ ಬಲಪಡಿಸುವ ಆರೆಸ್ಸೆಸ್ ಮುಖಂಡನ ಮುಂದೆ ವಿಧೇಯ ವಿದ್ಯಾರ್ಥಿಯಂತೆ ವರ್ತಿಸಿದ್ದು.

Advertisements

ಎರಡೂ ಹೇಳಿಕೆಗಳಲ್ಲಿ ಒಂದು ಸಾಮ್ಯವಿದೆ. ಅದು ಅವಕಾಶವಾದಿತನ. ರಾಜಕಾರಣದಲ್ಲಿರುವವರಿಗೆ ಅದು ಅನಿವಾರ್ಯವಾಗಿರಬಹುದು. ಆದರೆ ಕುಮಾರಸ್ವಾಮಿಯವರ ಮಾತುಗಳು ಆ ಅನಿವಾರ್ಯತೆಯನ್ನೂ ಮೀರಿದ್ದು. ಅಧಿಕಾರ-ಹಣವನ್ನೂ ಅರಗಿಸಿಕೊಂಡು ಹದ್ದುಮೀರಿದ್ದು. ಗೋಸುಂಬೆಯನ್ನೂ ನಾಚಿಸಿದ್ದು.

ಕುಮಾರಸ್ವಾಮಿಯವರ ತಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರದು ಕೃಷಿಕ ಕುಟುಂಬ. ಹೊಲ ಉಳುತ್ತಿದ್ದರು, ದನ-ಎಮ್ಮೆ ಮೇಯಿಸುದ್ದರು. ಬಡತನ, ಹಸಿವು, ಅವಮಾನಗಳನ್ನು ಉಂಡವರು. ತಾಲೂಕು ಬೋರ್ಡ್ ಮೆಂಬರ್ ಆಗುವ ಮೂಲಕ ರಾಜಕಾರಣಕ್ಕೆ ಧುಮುಕಿ ಏಳು-ಬೀಳುಗಳನ್ನು, ಸೋಲು-ಗೆಲುವುಗಳನ್ನು ಕಂಡವರು. ಕಷ್ಟಪಟ್ಟು ಅಧಿಕಾರಕ್ಕೆ ಏರಿದವರು. ಹಳ್ಳಿಯ ಹೈದನೊಬ್ಬ ಪ್ರಧಾನಿ ಪಟ್ಟದಂತಹ ಉನ್ನತ ಹುದ್ದೆ ಏರಿ, ಪ್ರಜಾಪ್ರಭುತ್ವದ ಸೊಗಸನ್ನು ಸಾರಿದವರು.

ಈ ಅರವತ್ತು ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಅವರು ಹೊಂದಾಣಿಕೆ ಮಾಡಿಕೊಂಡಿರಬಹುದು, ಪಕ್ಷಾಂತರ ಮಾಡಿರಬಹುದು, ಭ್ರಷ್ಟರಾಗಿರಬಹುದು, ದ್ವೇಷಾಸೂಯೆಗಳ ಮೂಟೆ ಎನಿಸಿಕೊಂಡಿರಬಹುದು, ವಿರೋಧಿಗಳನ್ನು ಹಣಿಯಲು ತಂತ್ರ-ಕುತಂತ್ರಗಳಿಗೆ ಕೈ ಹಾಕಿರಬಹುದು. ಆದರೆ ತಾವು ನಂಬಿದ ತತ್ವ-ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟವರಲ್ಲ. ಅಧಿಕಾರಕ್ಕಾಗಿ-ಹಣಕ್ಕಾಗಿ ರಾಜಕಾರಣವನ್ನು ಕುಲಗೆಡಿಸಿದವರಲ್ಲ.

ಇದೇ ಮಾತುಗಳನ್ನು ಅವರ ಪುತ್ರ ಕುಮಾರಸ್ವಾಮಿಯವರಿಗೆ ಹೇಳಲಾಗುವುದಿಲ್ಲ. ಏಕೆಂದರೆ, ಕುಮಾರಸ್ವಾಮಿಯವರು ರಾಜಕಾರಣಕ್ಕೆ ಧುಮುಕುವ ಸಂದರ್ಭಕ್ಕೆ ಅಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಂತೆಯೇ, ಅಪ್ಪ ದೇಶದ ಪ್ರಧಾನಿ ಪಟ್ಟದಲ್ಲಿ ಕೂತಿದ್ದರು. ಹರದನಹಳ್ಳಿಯಿಂದ ಬಂದವರಿಗೆ ಬೆಂಗಳೂರಲ್ಲ, ದಿಲ್ಲಿಯ ದರ್ಬಾರೇ ದಕ್ಕಿತ್ತು. ತಮ್ಮನ್ನು ಅಲ್ಲಿ ಕೂರಿಸಿದ್ದು ಪ್ರಜಾತಂತ್ರ ವ್ಯವಸ್ಥೆ ಎನ್ನುವುದು ಮರೆತುಹೋಗಿತ್ತು.

ಇದರ ಮುಂದುವರೆದ ಭಾಗವಾಗಿ, 2004ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಗೆದ್ದ ಕುಮಾರಸ್ವಾಮಿಯವರು, ಅಪ್ಪನನ್ನು ಅರುಗಿಸಿ ಬಿಜೆಪಿಯನ್ನು ಬಿಗಿದಪ್ಪಿಕೊಂಡಿದ್ದರು. ಅಡ್ಡದಾರಿಯಲ್ಲಿ ಮುಖ್ಯಮಂತ್ರಿಯಾಗಿದ್ದರು. 2004ರಲ್ಲಿ ಕುಮಾರಸ್ವಾಮಿಯವರು ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸುವಾಗ, ತಮ್ಮ ಆಸ್ತಿ 3 ಕೋಟಿ ಎಂದು ಅಧಿಕೃತವಾಗಿ ಘೋಷಿಸಿಕೊಂಡಿದ್ದರು. 2008ರ ಚುನಾವಣೆಯಲ್ಲಿ ಅದು 53 ಕೋಟಿಯಾಗಿತ್ತು. 2013ಕ್ಕೆ 103 ಕೋಟಿಯಾಗಿ, 2018ಕ್ಕೆ 112 ಕೋಟಿ, 2023ಕ್ಕೆ 189.28 ಕೋಟಿ ರೂ.ಗಳ ಒಡೆಯರಾಗಿದ್ದರು. ಇದು ಅಧಿಕೃತ, ಲೆಕ್ಕದ ಪ್ರಕಾರವೇ ಪ್ರತಿ ಚುನಾವಣೆಗೆ, 5 ವರ್ಷಕ್ಕೆ 50 ಕೋಟಿ ಸಂಪಾದಿಸಿದ್ದಾರೆ. ಮಗನಿಗೆ ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಕೊಡಿಸಿದ್ದಾರೆ. ಕೇವಲ ಒಂದು ಚಿತ್ರಕ್ಕೆ 65 ಕೋಟಿ ಖರ್ಚು ಮಾಡಿ ‘ಹೀರೋ’ ಮಾಡಿದ್ದಾರೆ.

1994ರಲ್ಲಿ, ‘ಒಂದೇ ಒಂದು ಸಲ ಮುಖ್ಯಮಂತ್ರಿಯಾದರೆ ಸಾಕು, ಇಲ್ಲದಿದ್ದರೆ ಈ ದೇವೇಗೌಡ ಹುಚ್ಚ ಆದರೂ ಆಶ್ಚರ್ಯವಿಲ್ಲ’ ಎಂಬ ಮಾತಿತ್ತು. ಜನತೆಯ ಆಶೀರ್ವಾದದಿಂದ ಗೌಡರು ಮುಖ್ಯಮಂತ್ರಿಯಾದರು. ಆದರೆ ಮಗ ಕುಮಾರಸ್ವಾಮಿಯವರು, ಅಪ್ಪ ಮತ್ತು ಜನತೆಯ ಆಶೀರ್ವಾದವನ್ನು ಪಕ್ಕಕ್ಕಿಟ್ಟು, ಅವಕಾಶವಾದಿ ರಾಜಕಾರಣವನ್ನು ಅಪ್ಪಿಕೊಂಡು ಒಂದಲ್ಲ, ಎರಡು ಸಲ ಮುಖ್ಯಮಂತ್ರಿಯಾದರು. ಕುಮಾರಸ್ವಾಮಿಯವರ ಅನೈತಿಕ ರಾಜಕಾರಣ ಕಂಡು ಮೊದಲು ಮೂದಲಿಸಿದ್ದ ದೇವೇಗೌಡರು, ನಂತರ ಚಾಣಾಕ್ಷ ಎಂದರು; ಅವರು ಸಂಪಾದಿಸಿದ ಆಸ್ತಿ ಕಂಡು ಜಾಣ ಎಂದರು. ಕೊನೆಗೆ ಕುಮಾರಸ್ವಾಮಿಯವರ ರಾಜಕಾರಣವೇ ಸರಿ ಎಂದರು, ಅವರ ದಾರಿಗೇ ಬಂದರು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಕರೆ ಕೊಟ್ಟರು.

ಇದನ್ನು ಕೆಲವರು ಆಧುನಿಕ ಕರ್ನಾಟಕದ ಅತ್ಯಂತ ನಿರ್ಲಜ್ಜ ರಾಜಕಾರಣ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಇದೇ ಸಮಯದಲ್ಲಿ ಆಧುನಿಕ ಕುಬೇರ ಅದಾನಿ ವಿರುದ್ಧ ಮಾತನಾಡಿದವರನ್ನು ಅವರ ಆಪ್ತ ಪ್ರಧಾನಿ ನರೇಂದ್ರ ಮೋದಿಯವರು ಅಡ್ಡಡ್ಡ ಮಲಗಿಸುತ್ತಿದ್ದಾರೆ. ಇದನ್ನು ಕಂಡ ಚಿಂತಕ ರಾಮ ಪುನಿಯಾನಿಯವರು, ”ಚಂಗೀಸ್ ಖಾನ್ ತನ್ನ ಜೀವಿತಾವಧಿಯಲ್ಲಿ ನಾಲ್ಕು ಕೋಟಿ ಜನರನ್ನು ಹತ್ಯೆಗೈದಿದ್ದ. ಮರಣದ ಸಮಯ ಸಮೀಪ ಬಂದಾಗ ಆತ ತನ್ನ ಅತ್ಯಂತ ಬುದ್ಧಿವಂತ ಮಂತ್ರಿಯನ್ನು ಕರೆದು, ‘ಮಂತ್ರಿ, ಈ ಜಗತ್ತಿನಲ್ಲಿ ಎಲ್ಲಾದರೂ ನನಗೆ ಕ್ಷಮೆ ಸಿಗುವ ಸ್ಥಳ ಇದೆಯೆ?’ ಎಂದ. ಆಗ ಮಂತ್ರಿ ನೀಡಿದ ಉತ್ತರವನ್ನು ಮಂಗೋಲಿಯಾದಲ್ಲಿರುವ ಚಂಗೀಸ್ ಖಾನ್‌ನ ಸಮಾಧಿಯ ಮೇಲೆ ಸೊಗಸಾಗಿ ಕೆತ್ತಲಾಗಿದೆಯಂತೆ… ‘ನನ್ನ ದೊರೆಯೆ, ದೂರದಲ್ಲೊಂದು ದೇಶವಿದೆ. ಅದರ ಹೆಸರು ಭಾರತ. ಅಲ್ಲೊಂದು ನಗರವಿದೆ, ಅದರ ಹೆಸರು ದೆಹಲಿ. ನೀವು ಅಲ್ಲಿಗೆ ಹೋಗಿ ಭಾರತೀಯ ಜನತಾ ಪಕ್ಷ ಸೇರಿಕೊಂಡರೆ ಅವರು ನೀವು ಮಾಡಿದ ದೌರ್ಜನ್ಯವನ್ನು ಸಹ ನ್ಯಾಯ ಎಂದು ಸಾಬೀತು ಮಾಡುತ್ತಾರೆ. ಆಗ ನಿಮಗೆ ಕ್ಷಮೆ ಕೇಳುವ ಅಗತ್ಯವೂ ಇರುವುದಿಲ್ಲ ಹುಝೂರ್”’ ಎಂದಿರುವುದು ಕಾಕತಾಳೀಯವೇ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X