ಈ ದಿನ ಸಂಪಾದಕೀಯ | ಮಾತಿನ ಯುದ್ಧದಲ್ಲಿ ಮಾನ ಕಳೆದುಕೊಳ್ಳುತ್ತಿರುವ ನಾಯಕರು

Date:

Advertisements
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ನಾಯಕರಾರು ಸಭ್ಯತೆಯ ಎಲ್ಲೆ ಮೀರಿದವರಲ್ಲ. ಎದುರಾಳಿಗಳನ್ನು ಎಂದೂ ಅಗೌರವದಿಂದ ಕಂಡವರಲ್ಲ. ಇಂತಹ ರಾಜಕೀಯ ಪರಂಪರೆ ನಮ್ಮ ರಾಜ್ಯಕ್ಕಿರುವಾಗ, ಇವತ್ತಿನ ನಾಯಕರು ನಾಲಗೆಯ ಮೂಲಕವೇ ನಗೆಪಾಟಲಿಗೀಡಾಗುತ್ತಿರುವುದು, ನಿಜಕ್ಕೂ ದುರಂತ

ʼಆಗಸ್ಟ್ 15ರ ಬಳಿಕ ಬಿಬಿಎಂಪಿ ದಾಖಲೆ ರಿಲೀಸ್ ಮಾಡುತ್ತೇನೆʼ ಎಂದು ಉಪ ಮುಖ್ಯಮಂತ್ರಿ, ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್‌ ಹೇಳಿಕೆ ನೀಡಿ ಬಿಬಿಎಂಪಿ ಗುತ್ತಿಗೆದಾರರ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದರು. ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು, ʼಇನ್ನೆರಡು ದಿನದಲ್ಲಿ ಬಿಬಿಎಂಪಿ ಪೇಪರ್ ಮುಂದಿಡ್ತೀನಿ, ಬಿಚ್ಚಿಡ್ತೀನಿʼ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ʼಬಿಚ್ಚಿಡೋರನ್ನ, ಬಿಚ್ಚಾಕೋರನ್ನ ತಡೆಯಕ್ಕಾಗಲ್ಲ. ಬಿಚ್ಚಿಬಿಚ್ಚಿ ಬಯಲು ಮಾಡ್ಲಿʼ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಡಿ ಕೆ ಶಿವಕುಮಾರ್‌ ಮತ್ತು ಎಚ್‌ ಡಿ ಕುಮಾರಸ್ವಾಮಿ ಅವರ ನಡುವೆ ನಡೆಯುತ್ತಿರುವ ಮಾತಿನ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎನ್ನುವುದಕ್ಕಿಂತ ಯಾರು ಹೆಚ್ಚು ಬೆತ್ತಲಾಗುತ್ತಾರೆ ಎಂಬುದು ಸದ್ಯದ ಕುತೂಹಲ.

Advertisements

ಕಳೆದ ಮೂರು ತಿಂಗಳ ಹಿಂದಷ್ಟೆ ಜನರಿಂದ ತಿರಸ್ಕರಿಸಲ್ಪಟ್ಟು ಅಧಿಕಾರ ಕಳೆದುಕೊಂಡಿರುವ, ಸೋತು ಸುಣ್ಣಾಗಿರುವ ಪ್ರತಿಪಕ್ಷಗಳ ನಾಯಕರಿಗೆ ಸಂಕಟ ಸಹಜ. ಅವರು ಆಡಳಿತ ಪಕ್ಷದ ಭ್ರಷ್ಟಾಚಾರ, ಒಲವು-ನಿಲುವುಗಳ ಕುರಿತು ಟೀಕೆ ಮಾಡುವುದು ಸಾಮಾನ್ಯ. ಅದು ಪ್ರಜಾಪ್ರಭುತ್ವದ ರೀತಿ-ನೀತಿ ಕೂಡ. ಆದರೆ ಪ್ರತಿಪಕ್ಷದ ಪ್ರಚೋದನೆಯಿಂದ ಆಳುವ ಪಕ್ಷ ಕೆರಳಬಾರದು ಎಂಬ ಸಾಮಾನ್ಯಜ್ಞಾನ ಇಲ್ಲದೇ ಹೋದರೆ, ಇಂತಹದ್ದೆಲ್ಲ ನಡೆಯುತ್ತದೆ.

ಅಸಲಿಗೆ ಇಲ್ಲಿ ನಡೆಯುತ್ತಿರುವುದಾದರೂ ಏನು? ಬಿಬಿಎಂಪಿಯ 2,700 ಕೋಟಿ ಗುತ್ತಿಗೆದಾರರ ಬಿಲ್‌ ಬಾಕಿಯನ್ನು ಆಡಳಿತ ಕಾಂಗ್ರೆಸ್‌ ಪಕ್ಷ ತಡೆಹಿಡಿದಿದೆ. ಚುನಾವಣಾ ತರಾತುರಿಯಲ್ಲಿ ಮಾಡಲಾದ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ, ಕೆಲಸ ಮಾಡದೆ ಬಿಲ್‌ ಕೊಟ್ಟ ಅಪರಾ-ತಪರಾಗಳಾಗಿರುವುದರಿಂದ ತನಿಖೆಗೊಳಪಡಿಸಿ, ಸರಿಯಾಗಿ ಕೆಲಸ ಮಾಡಿದ್ದವರ ಬಿಲ್‌ ಪಾವತಿಸಲಾಗುತ್ತದೆ ಎನ್ನುತ್ತಿದೆ ಸರ್ಕಾರ.

ಇದು ಸರ್ಕಾರ ಮತ್ತು ಗುತ್ತಿಗೆದಾರರಿಗೆ ಸಂಬಂಧಿಸಿ ವ್ಯವಹಾರ. ಇವತ್ತಲ್ಲ ನಾಳೆ ಸರ್ಕಾರ ಕೊಡಲೇಬೇಕು, ಕೊಡುತ್ತದೆ. ಸದ್ಯಕ್ಕೆ ಗುತ್ತಿಗೆದಾರರಿಗೆ ತೊಂದರೆಯಾಗಿರಬಹುದು, ತಡೆದುಕೊಳ್ಳುತ್ತಾರೆ. 

ಆದರೆ ಸಮಸ್ಯೆ ಇಷ್ಟು ಸರಳವಲ್ಲ, ಇದಷ್ಟೇ ಇದರೊಳಗಿಲ್ಲ. ಗುತ್ತಿಗೆದಾರರ ವಿಷಯವನ್ನು ವಿಕೋಪಕ್ಕೆ ತೆಗೆದುಕೊಂಡುಹೋಗಿರುವ ಶಿವಕುಮಾರ್ ಮತ್ತು ಕುಮಾರಸ್ವಾಮಿಯವರ ವಿಷಯದಲ್ಲಿ ಜಾತಿ, ಹಣ, ಪ್ರತಿಷ್ಠೆ ಮತ್ತು ಅಧಿಕಾರ ತಳುಕು ಹಾಕಿಕೊಂಡಿದೆ. ಯಾರು ಎಷ್ಟು ಪ್ರಭಾವಶಾಲಿಗಳು ಎಂಬ ಮೇಲಾಟವೂ ನಡೆಯುತ್ತಿದೆ. ಮುಂದುವರೆದು, ರಾಜ್ಯದ ಒಕ್ಕಲಿಗ ಸಮುದಾಯದ ಭವಿಷ್ಯದ ನಾಯಕ ಯಾರು ಎಂಬ ಗೌಡರ ಗದ್ದಲವೂ ಇದರಲ್ಲಿ ಅಡಗಿದೆ. ಅದಕ್ಕೆ ಗುತ್ತಿಗೆದಾರರ ಬಿಲ್ ಬಾಕಿ ನೆಪವಾಗಿದೆ, ಅಷ್ಟೇ.

ಈ ಇಬ್ಬರು ನಾಯಕರ ಕೆಸರೆರಚಾಟ ಯಾರಿಗೆ ಅನುಕೂಲವಾಗುತ್ತದೆ ಎಂಬುದು ಗೊತ್ತಿಲ್ಲದ ನಾಯಕರೇನೂ ಅಲ್ಲ. ಆದರೂ, ಕ್ಯಾಮರಾ ಕಂಡಾಕ್ಷಣ ಕೆರಳುತ್ತಿದ್ದಾರೆ, ಪತ್ರಕರ್ತರ ಪ್ರಶ್ನೆಗಳೆಂಬ ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಲಘುವಾಗಿ ಮಾತಾಡಿ, ತಮ್ಮ ವ್ಯಕ್ತಿತ್ವಕ್ಕೆ ತಾವೇ ಧಕ್ಕೆ ತಂದುಕೊಳ್ಳುತ್ತಿದ್ದಾರೆ.

ಈ ಇಬ್ಬರು ನಾಯಕರು ರಾಜಕಾರಣದಲ್ಲಿ ಸಂಪತ್ತು ಮತ್ತು ಸಮಸ್ಯೆಯನ್ನು ಕಂಡವರು. ಕಷ್ಟ-ಸುಖವನ್ನು ಕಂಡುಂಡವರು. ಕೆಟ್ಟ ನಾಲಗೆಯಿಂದ ತಮ್ಮ ಭವಿಷ್ಯಕ್ಕೆ ಕುಂದುಂಟಾಗುತ್ತದೆಂದು ಅನುಭವದಿಂದ ಅರಿತವರು. ಆದರೂ ಮತ್ತದೇ ಕೆಸರಲ್ಲಿ ಬೀಳಲು ಕಾತರಿಸುತ್ತಿದ್ದಾರೆ. ಇದರಿಂದ ಮಾಧ್ಯಮಗಳಲ್ಲಿ ಒಂದಿಷ್ಟು ಪ್ರಚಾರ ಗಿಟ್ಟಿಸಬಹುದು. ಆದರೆ, ಜನ ಅದನ್ನು ಮೆಚ್ಚುವುದಿಲ್ಲ ಎಂಬುದನ್ನು ಇಬ್ಬರೂ ತಿಳಿಯಬೇಕಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬರಗಾಲದ ನಡುವೆ ಮತ್ತೊಂದು ಸಾಹಿತ್ಯ ಸಮ್ಮೇಳನ, ಅದ್ದೂರಿ ದಸರಾ ಬೇಡ

ಇವರ ಜೊತೆಗೆ ಕೃಷಿ ಸಚಿವ ಚಲುವರಾಯಸ್ವಾಮಿ; ಮಾಜಿ ಸಚಿವರಾದ ಸಿ.ಎನ್ ಅಶ್ವತ್ಥನಾರಾಯಣ, ಸಿ ಟಿ ರವಿ, ಆರ್ ಅಶೋಕ್, ಗೋಪಾಲಯ್ಯ, ಮುನಿರತ್ನ; ಶಾಸಕರಾದ ಸುರೇಶ್ ಗೌಡ, ಸಂಸದರಾದ ಡಿ ಕೆ ಸುರೇಶ್ ಕೂಡ ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ತೀರಾ ಕೆಳಮಟ್ಟದ ಭಾಷೆ ಬಳಸಿ ವೈಯಕ್ತಿಕ ನಿಂದನೆಗಿಳಿದಿದ್ದಾರೆ. ಮಾಧ್ಯಮಗಳಿಗೆ ಆಹಾರ ಒದಗಿಸುತ್ತಿದ್ದಾರೆ. ತಮ್ಮ ಮಾನವನ್ನು ತಾವೇ ಹರಾಜು ಹಾಕಿಕೊಳ್ಳುತ್ತಿದ್ದಾರೆ.

ವಿಚಿತ್ರವೆಂದರೆ, ಈ ನಾಯಕರಾರೂ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿಶ್ಲೇಷಣೆ ಮಾಡುತ್ತಿಲ್ಲ. ನೆರೆ-ಬರದ ಬಗ್ಗೆ ಮಾತನಾಡುತ್ತಿಲ್ಲ. ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ವ್ಯವಸ್ಥೆಯಲ್ಲಿ ಬಡವರು ಹೇಗೆ ಬದುಕುತ್ತಿದ್ದಾರೆ ಎಂದು ಯೋಚಿಸುತ್ತಿಲ್ಲ. ನೆಲ-ಜಲ-ಭಾಷೆ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿಲ್ಲ. ತಮ್ಮನ್ನು ಜನ ಏಕೆ ತಿರಸ್ಕರಿಸಿದ್ದಾರೆ ಎಂದು ಕೂತು ಆತ್ಮಾವಲೋಕನವನ್ನೂ ಮಾಡಿಕೊಳ್ಳುತ್ತಿಲ್ಲ. ಆದರೂ ಇವರು ಜನನಾಯಕರು, ಸೇವಕರು ಎಂದು ಬೊಬ್ಬೆ ಹೊಡೆಯುವುದು ನಿಂತಿಲ್ಲ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ಗೋಪಾಲಗೌಡ, ದೇವರಾಜ ಅರಸು, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಎಸ್.ಎಂ. ಕೃಷ್ಣರಂತಹ ನಾಯಕರು ಎಂದೂ ನಾಲಗೆಯ ಮೇಲೆ ಹಿಡಿತ ಕಳೆದುಕೊಂಡು ಮಾತನಾಡಿದವರಲ್ಲ. ಸಭ್ಯತೆಯ ಎಲ್ಲೆ ಮೀರಿದವರಲ್ಲ. ಎದುರಾಳಿಗಳನ್ನು ಎಂದೂ ಅಗೌರವದಿಂದ ಕಂಡವರಲ್ಲ. ಇಂತಹ ರಾಜಕೀಯ ಪರಂಪರೆ ನಮ್ಮ ರಾಜ್ಯಕ್ಕಿರುವಾಗ, ಜನರ ಮುಂದೆ ಅತ್ಯಂತ ಅಸಭ್ಯತನದಿಂದ ಮಾತನಾಡುತ್ತಿರುವುದು; ಇವತ್ತಿನ ನಾಯಕ ನಾಳೆ ನಗಣ್ಯನಾಗುವ ಕಟುಸತ್ಯ ಗೊತ್ತಿದ್ದೂ, ನಾಲಗೆಯ ಮೂಲಕವೇ ನಗೆಪಾಟಲಿಗೀಡಾಗುತ್ತಿರುವುದು, ನಿಜಕ್ಕೂ ದುರಂತ. 

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X