ಈಗಾಗಲೇ ಹಂಪಿ ಉತ್ಸವ ಮತ್ತು ಮೈಸೂರು ದಸರಾವನ್ನು ಸರಳವಾಗಿ ನಡೆಸಲು ಸರ್ಕಾರ ತೀರ್ಮಾನಿಸಿರುವುದು ಸರಿಯಾದ ನಡೆ. ಹಾಗೆಯೇ ಸರ್ಕಾರದ ಅನುದಾನದಲ್ಲಿ ನಡೆಯುವ ಎಲ್ಲ ಉತ್ಸವಗಳನ್ನು ಸಾಂಕೇತಿಕವಾಗಿ ನಡೆಸಬೇಕು. ಹಾಗೂ ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಿ ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳನ್ನು ನಡೆಸದಿರುವ ತೀರ್ಮಾನಕ್ಕೆ ಸರ್ಕಾರ ಬರಬೇಕು.
ರಾಜ್ಯವು ಗಂಭೀರ ಬರಗಾಲದ ದವಡೆಗೆ ಸಿಲುಕಿದೆ. ಜುಲೈನಲ್ಲಿ ಬಿದ್ದ ಮಳೆ ನಂಬಿ ಬೆಳೆಯಲು ಹೊರಟ ರೈತರಿಗೂ ಆಘಾತವಾಗಿದೆ. ಕಾವೇರಿ ಮೈತುಂಬದ ಕಾರಣ ಕೆಆರ್ಎಸ್ ಒಡಲು ಬರಿದಾಗಿದೆ. ಭತ್ತದ ಗದ್ದೆಗಳೆಲ್ಲ ನೀರಿಲ್ಲದೆ ಬಾಯಿ ಬಿಟ್ಟಿವೆ. ರಾಜ್ಯದ ಬಹುತೇಕ ನದಿಗಳ ಜುಳು ಜುಳು ನಿನಾದ ಕೇಳದಾಗಿದೆ. ಈ ನಡುವೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗು ಸುಪ್ರೀಂ ಕೋರ್ಟಿನ ನಿರ್ದೇಶನ ಸರ್ಕಾರವನ್ನು ಅಡಕತ್ತರಿಗೆ ಸಿಲುಕಿಸಿದೆ. ನಿರ್ದೇಶನ ಪಾಲಿಸಿದರೆ ರಾಜ್ಯದ ರೈತರಿಗೆ ದ್ರೋಹ ಬಗೆದ ಅಪವಾದ, ಬಿಡದಿದ್ದರೆ ನ್ಯಾಯಾಂಗ ನಿಂದನೆಯ ಆರೋಪ. ಇಂತಹ ಸಂದಿಗ್ಧ ಕಾಲದಲ್ಲಿ ರಾಜ್ಯ ಸರ್ಕಾರ ಪ್ರತಿ ಹೆಜ್ಜೆಯನ್ನೂ ಅತ್ಯಂತ ಎಚ್ಚರಿಕೆಯಿಂದ ಇಡಬೇಕಾಗಿದೆ.
ಈಗಾಗಲೇ ರಾಜ್ಯ ಸರ್ಕಾರ ಹಂಪಿ ಉತ್ಸವ ಮತ್ತು ಮೈಸೂರು ದಸರಾವನ್ನು ಸರಳವಾಗಿ ನಡೆಸಲು ತೀರ್ಮಾನಿಸಿರುವುದು ಜವಾಬ್ದಾರಿಯ ನಡೆ. ಸರ್ಕಾರದ ಈ ತೀರ್ಮಾನವನ್ನು ಬಿಜೆಪಿ ಟೀಕಿಸಿರುವುದರಲ್ಲಿ ಅಚ್ಚರಿಯೇನಿಲ್ಲ. ಅವರು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಬೇಕು ಎಂಬ ಜಾಯಮಾನದವರು. ಜನರನ್ನು ಭಾವೋನ್ಮಾದದಲ್ಲಿ ಹಿಡಿದಿಟ್ಟುಕೊಳ್ಳುವ ಹಳೆಯ ಅನೈತಿಕ ತಂತ್ರ ಅವರದು.
ಅದ್ಧೂರಿ ವಿಲಾಸ ವೈಭವದ ಆಚರಣೆಯ ಹೆಸರಿನಲ್ಲಿ ಪೋಲಾಗುವುದು ಸರ್ಕಾರಿ ಹಣವೆಂಬ ತಾತ್ಸಾರ ಸಲ್ಲದು. ಸರ್ಕಾರಿ ಹಣ ಜನರೇ ತೆತ್ತ ತೆರಿಗೆಯ ಹಣ ಎಂಬುದನ್ನು ಮರೆಯಕೂಡದು. ಸರ್ಕಾರದ ಹಣದಲ್ಲಿ ನಡೆಯುವ ಉತ್ಸವ, ಸಮ್ಮೇಳನ, ಜಯಂತಿಗಳೆಲ್ಲ ಮಂತ್ರಿಗಳ ಸುತ್ತ ಮುತ್ತ ಇರುವವರು ಮತ್ತು ಅಧಿಕಾರಿಗಳಿಗೆ ಹಣ ಲೂಟಿ ಹೊಡೆಯುವ ಹಸಿರು ಹುಲ್ಲುಗಾವಲುಗಳಾಗಿ ಪರಿಣಮಿಸಿವೆ. ಅಧಿಕಾರಿಗಳು ಇಂತಹ ಹಬ್ಬಗಳು ಉತ್ಸವಗಳು ಆಚರಣೆಗಳಿಗಾಗಿಯೇ ಬಾಯಿ ಬಿಟ್ಟುಕೊಂಡು ಜೇಬು ತೆರೆದುಕೊಂಡು ಕಾತರಿಸಿರುತ್ತಾರೆ. ಪುಟ್ಟದೊಂದು ಹೂಗುಚ್ಛದಿಂದ ಹಿಡಿದು, ವೇದಿಕೆ, ಪೆಂಡಾಲ್, ಅತಿಥಿ ಸತ್ಕಾರ, ಸ್ಮರಣಿಕೆ ಇತರೆ ಇತ್ಯಾದಿ ಎಲ್ಲದರಲ್ಲೂ ಹಣ ನುಂಗುವ ಬಿಲ್ವಿದ್ಯಾ ಪ್ರವೀಣ ಅಧಿಕಾರಿಗಳೇ ತುಂಬಿ ಹೋಗಿದ್ದಾರೆ. ಸರ್ಕಾರಿ ಉತ್ಸವಗಳು ಹಣ ಹೊಡೆಯುವ ಹಬ್ಬಗಳೆಂಬುದು ಜನಜನಿತ. ಬರ ಬಿದ್ದರೇನು, ನೆರೆ ಬಂದರೇನು ಇವರ ಆತ್ಮಗಳು ಕರಗದ ಕಲ್ಲುಗಳು. ಕಾಂಚಾಣದ ಝಣ ಝಣದ ನಾದದ ವಿನಾ ಇನ್ನೇನೂ ಕೇಳಿಸದು ಮತ್ತು ಕಾಣಿಸದು. ರಾಜ್ಯದ ನೂರಾರು ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿರುವಾಗ ಬರ ಪರಿಹಾರ ಕೊಡುವುದು ಮಾತ್ರವಲ್ಲ, ಈಗಾಗಲೇ ಕಂಗೆಟ್ಟಿರುವ ರೈತರು ಆತ್ಮಹತ್ಯೆ ಹಾದಿ ಹಿಡಿಯದಂತೆ ತಡೆಯುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲು. ಹೀಗಿರುವಾಗ ಹಬ್ಬ, ಉತ್ಸವ, ಜಾತ್ರೆಗಳನ್ನು ಸರ್ಕಾರ ಮಾತ್ರವೇ ಅಲ್ಲದೆ ಸಮಾಜವೂ ಸರಳವಾಗಿ ಆಚರಿಸುವ ಅಗತ್ಯವಿದೆ. ಅನ್ನದಾತನ ಅಸಹಾಯಕತೆಗೆ ಸ್ಪಂದಿಸಬೇಕಿದೆ.
ಸರ್ಕಾರದ ಅನುದಾನದಲ್ಲಿ ನಡೆಯುವ ಎಲ್ಲ ಉತ್ಸವಗಳ ಸಾಂಕೇತಿಕ ಆಚರಣೆಯೇ ಸಾಕು. ಹತ್ತಾರು ಕೋಟಿ ರೂಪಾಯಿ ವೆಚ್ಚದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಂತಹ ಭಾರೀ ವೆಚ್ಚದ ಕಾರ್ಯಕ್ರಮಗಳನ್ನು ಕೈಬಿಡುವ ದಿಟ್ಟ ನಿರ್ಧಾರವನ್ನು ಸರ್ಕಾರ ಪ್ರಕಟಿಸಬೇಕು. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಆಡಳಿತ ಸುಧಾರಣೆ, ಜನಪರ ಯೋಜನೆಗಳ ಅನುಷ್ಠಾನ, ಶಿಕ್ಷಣ-ಆರೋಗ್ಯ ಸೇವೆಗಳ ಸುಧಾರಣೆಗೆ ಹಾಗೂ ಬೊಕ್ಕಸ ಬರಿದಾಗದಂತೆ ಕಾಯುವ ನಿಟ್ಟಿನಲ್ಲಿ ವಿವೇಕದ ನಡೆಯಾದೀತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟದ ಎಲ್ಲ ಸಚಿವರೂ ಈ ನಿಟ್ಟಿನಲ್ಲಿ ಸಂವೇದನಾಶೀಲತೆ ಪ್ರದರ್ಶಿಸುವುದು ಕಾಲದ ತುರ್ತು.
ಕೊರೋನಾ ಮಹಾಸಾಂಕ್ರಾಮಿಕದಿಂದ ದೇಶವೇ ತತ್ತರಿಸಿದ್ದಾಗ ಸಕಲ ದೇವಾಲಯಗಳು, ಪ್ರಾರ್ಥನಾ ಮಂದಿರಗಳು ತಿಂಗಳುಗಳ ಕಾಲ ಮುಚ್ಚಿರಲಿಲ್ಲವೇ? ಯಾವುದೇ ಪೂಜೆ, ನಿಯಮ, ನೇಮ, ನಮಾಜು ನಡೆಯದ ಕಾರಣ ದೇವರುಗಳೇನಾದರೂ ಸಿಟ್ಟುಗೊಂಡರೇ? ಇಲ್ಲವಲ್ಲ? ಕೊರೊನಾ ಕಾಲದಲ್ಲಿ ಅದೆಷ್ಟೋ ಮದುವೆಗಳು ಸರಳವಾಗಿ ಮನೆಗಳಲ್ಲಿಯೇ ಬೆರಳೆಣಿಕೆಯ ಕುಟುಂಬ ಸದಸ್ಯರ ಮುಂದೆ ನಡೆದವು. ಯಾವುದೇ ಪುರೋಹಿತ, ವೇದ ಮಂತ್ರೋಚ್ಛಾರ, ಹೋಮ ಹವನಗಳ ಗೊಡವೆ ಇಲ್ಲದೆಯೇ ಜರುಗಿದವು. ಊರ ಹಬ್ಬಗಳು, ಜಾತ್ರೆಗಳು ನಡೆಯಲೇ ಇಲ್ಲ ಎಂಬುದನ್ನು ನಾವೆಲ್ಲ ಒಮ್ಮೆ ನೆನೆಯಲೇಬೇಕಿದೆ. ಕೊರೋನಾ ಸಂಕಟಪರ್ವದಿಂದ ಪಾರಾಗಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಮಿತವ್ಯಯದ ಪಾಠಗಳನ್ನು ಸಮಾಜ ಮರೆತೇ ಹೋಯಿತು. ಅದ್ದೂರಿ ಅತಿವ್ಯಯದ ಹಳೆಯ ಚಾಳಿಗಳತ್ತಲೇ ವಾಲಿದೆ ಜನಸಮುದಾಯ. ಅದ್ದೂರಿ ಆಚರಣೆ ಎಂಬುದೊಂದು ಟೊಳ್ಳು ಜೀವನ ಮೌಲ್ಯ. ಮಾನವನ ಆತ್ಮಘಾತಕ ದೌರ್ಬಲ್ಯ. ಬರ ಬಂದಿರುವ ಈ ಕಷ್ಟಕಾಲದಲ್ಲಿ ಎಲ್ಲ ಜನವರ್ಗವೂ ಕೊರೋನಾ ಕಾಲದ ಸರಳತೆಗೆ ಮರಳುವುದು ಮಾನವೀಯ ನಡೆ.
