ಕಾನೂನನ್ನು ಬಳಸುವಾಗ ಬಡವರ ಬಗ್ಗೆ ಕೊಂಚ ಕಾಳಜಿ-ಕನಿಕರ ಇರಬೇಕಾಗುತ್ತದೆ. ವಿವೇಚನೆಯಿಂದ ಬಳಸಬೇಕಾಗುತ್ತದೆ. ಇಲ್ಲದಿದ್ದರೆ, ಯಾವ ರಾಜ್ಯದಲ್ಲೂ ಇಲ್ಲದ ತೆರಿಗೆ ವಿಧಿಸಿ, ಜನವಿರೋಧಿ ಪಟ್ಟ ಕಟ್ಟಿಕೊಳ್ಳುವುದಕ್ಕೆ ಸಿದ್ಧರಾಗಬೇಕಾಗುತ್ತದೆ.
‘ತೆರಿಗೆ ಇಲಾಖೆಯವರು ನೋಟಿಸ್ ಕೊಟ್ಟಿದ್ದಾರೆ. 41 ಲಕ್ಷ ಕಟ್ಟಬೇಕಂತೆ. ಎಲ್ಲ ಆನ್‌ಲೈನ್ ಅಂತ ಮಾಡಿ, ಸುಲಭ ಅಂತ ಹೇಳಿ, ಈಗ ತಲೆಮೇಲೆ ಚಪ್ಪಡಿ ಕಲ್ಲು ಎಳೀತಿದಾರೆ… ಎಲ್ಲಿಗೆ ಹೋಗಬೇಕು ನಾವು?’ ಬೇಕರಿ ಮಾಲೀಕರೊಬ್ಬರು ತಮ್ಮ ಅಳಲು ತೋಡಿಕೊಂಡರು.
ಅವರು ಶ್ರೀಮಂತರಲ್ಲ. ಹಾಗಂತ ಬಡವರೂ ಅಲ್ಲ. ಮಧ್ಯಮವರ್ಗದವರು. ಬೇಕರಿ ಮಾಲೀಕರಾಗಲು ಸತತ 40 ವರ್ಷಗಳ ಕಾಲ ಹಗಲುರಾತ್ರಿ ಕಷ್ಟಪಟ್ಟು ದುಡಿದವರು. ಈಗ ಇದ್ದಕ್ಕಿದ್ದಂತೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಂದು, ನೀವು ಎಷ್ಟು ಮೊಬೈಲ್ ಫೋನ್ ಹೊಂದಿದ್ದೀರಾ ಎಂದು ಕೇಳಿ; ದಿನಕ್ಕೆ ಎಷ್ಟು ವ್ಯಾಪಾರ, ತಿಂಗಳಿಗೆ ಎಷ್ಟು, ವಾರ್ಷಿಕ ವಹಿವಾಟು ಎಷ್ಟು ಎಂದೆಲ್ಲ ಲೆಕ್ಕಹಾಕಿ 41 ಲಕ್ಷ ಕಟ್ಟಿ ಎಂದು ನೋಟಿಸ್ ಕೊಟ್ಟು ಹೋಗಿದ್ದಾರೆ.
ಇಂದಿನ ವೇಗದ ಜಗತ್ತಿನಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಮೊಬೈಲ್ ಹೊಂದಿರುವ ಹೆಚ್ಚಿನವರು ಅದನ್ನೇ ಉಪಯೋಗಿಸುತ್ತಿದ್ದಾರೆ. ಕೊರೋನ ಬಂದ ಮೇಲೆ ದೇಶದಲ್ಲಿ ಹೆಚ್ಚಿನ ವ್ಯವಹಾರಗಳು ಆನ್‌ಲೈನ್ ಮೂಲಕವೇ ನಡೆಯುತ್ತಿವೆ. ಆ ಮೂಲಕ ಯುಪಿಐ (UPI-ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಹೆಚ್ಚು ಬಳಕೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು, ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಚಿನ್ನಾಭರಣ ಅಂಗಡಿಗಳವರೆಗೆ ಎಲ್ಲದಕ್ಕೂ ಸ್ಕ್ಯಾನರ್ ಮೂಲಕ ಆನ್‌ಲೈನ್ ಪಾವತಿ ಮಾಡುತ್ತಿದ್ದಾರೆ. ಯುಪಿಐ ಮೂಲಕ ಎಲ್ಲ ರೀತಿಯ ವ್ಯವಹಾರ ತುಂಬಾ ಸುಲಭವಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ, ಗೂಗಲ್ ಪೇ, ಪೇಟಿಎಂನಂತಹ ಆ್ಯಪ್‌ಗಳು ನಿರ್ವಹಿಸುತ್ತಿವೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದ್ವೀಪದ ಜನರ ಬದುಕನ್ನು ಪ್ರತಿನಿಧಿಸಲಿ ‘ತೂಗು ಸೇತುವೆ’
‘ಗ್ರಾಹಕರಿಂದ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಹಣ ಸ್ವೀಕರಿಸಿದ್ದೆವು. ವ್ಯಾಪಾರ ಆರಂಭಿಸಿದ್ದ ದಿನದಿಂದಲೂ ಯಾವುದೇ ತೊಂದರೆ ಆಗಿರಲಿಲ್ಲ. ಇದೀಗ ಆನ್‌ಲೈನ್ ಮೂಲಕ ಇದುವರೆಗೂ ವಹಿವಾಟು ನಡೆಸಿರುವುದಕ್ಕೆ ತೆರಿಗೆ ಕಟ್ಟಬೇಕು ಎಂದು ಇಲಾಖೆ ನೋಟಿಸ್‌ನಲ್ಲಿ ಸೂಚಿಸಿದ್ದಾರೆ. 41 ಲಕ್ಷ ಎಲ್ಲಿಂದ ತರುವುದು, ಬಡವರು ಬದುಕಲಿಕ್ಕಾಗುತ್ತದೆಯೇ’ ಎಂದು ಬೇಕರಿ ಮಾಲೀಕರು ಗೋಳಾಡುತ್ತಿದ್ದಾರೆ.
ನಗರದಲ್ಲಿ ರಸ್ತೆ ಬದಿ ಹಣ್ಣು-ತರಕಾರಿ ಮಾರುವವರು, ಬೇಕರಿ, ಜ್ಯೂಸ್ ಅಂಗಡಿ, ಕಾಂಡಿಮೆಂಟ್ ಸ್ಟೋರ್ ನಡೆಸುತ್ತಿರುವ ಸಣ್ಣ, ಅತಿಸಣ್ಣ ವ್ಯಾಪಾರಿಗಳಿಗೆ ಲಕ್ಷಗಟ್ಟಲೆ ತೆರಿಗೆ ಪಾವತಿಸುವಂತೆ ಸೂಚಿಸಿ ಇಲಾಖೆಯ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಪಾವತಿಸದಿದ್ದರೆ ಅಕೌಂಟ್ ಬ್ಲಾಕ್ ಮಾಡಿ ತೆರಿಗೆಗೆ ಬಡ್ಡಿ ವಿಧಿಸಲಾಗುವುದೆಂದು ಬೆದರಿಕೆ ಹಾಕಿದ್ದಾರೆ.
ಸಾಮಾನ್ಯವಾಗಿ ಸಣ್ಣ ವ್ಯಾಪಾರಿಗಳು ಅಂದಂದಿನ ವ್ಯಾಪಾರದ ಮೇಲೆ ಬದುಕುವವರು. ಅವರು ಆದಾಯ, ಬ್ಯಾಂಕ್ ಖಾತೆ, ತೆರಿಗೆ ಬಗ್ಗೆ ಕರಾರುವಾಕ್ಕಾದ ಲೆಕ್ಕಪತ್ರಗಳನ್ನು ದಾಖಲೆಗಳನ್ನು ಇಟ್ಟುಕೊಳ್ಳದವರು. ಈಗ ತೊಂದರೆಗೆ ಸಿಲುಕಿದ್ದಾರೆ. ಜೊತೆಗೆ, ವಾರ್ಷಿಕ ವಹಿವಾಟು ಪತ್ತೆಯಾಗಿ, ಸಣ್ಣ ವ್ಯಾಪಾರಿಗಳಿಗೆ ತಮ್ಮ ಬಿಪಿಎಲ್ ಕಾರ್ಡ್‌ಗಳನ್ನು ಕಳೆದುಕೊಳ್ಳುವ ಭಯ ಉಂಟಾಗಿದೆ. ಸಣ್ಣಪುಟ್ಟ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುವ ತೆರಿಗೆ ಇಲಾಖೆಯ ಈ ಕ್ರಮದಿಂದ ಅವರು ಕಂಗಾಲಾಗಿದ್ದಾರೆ. ಕೆಲವರು ಆಕ್ರೋಶ ವ್ಯಕ್ತಪಡಿಸಿ, ವಾಣಿಜ್ಯ ತೆರಿಗೆ ಕಚೇರಿಯನ್ನು ಎಡತಾಕಿದ್ದಾರೆ.
ಈ ವಾಣಿಜ್ಯ ತೆರಿಗೆ ನೋಟಿಸ್‌ನಿಂದಾಗಿ ಕೆಲವು ವ್ಯಾಪಾರಿಗಳು ಆನ್‌ಲೈನ್ ಪಾವತಿ ಸ್ವೀಕರಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಗ್ರಾಹಕರಿಗೆ ಯುಪಿಐ ಮೂಲಕ ಪಾವತಿ ಮಾಡುವುದು ಕಷ್ಟವಾಗಿದೆ. ಮತ್ತೆ ಕೆಲ ವ್ಯಾಪಾರಿಗಳು ತೆರಿಗೆಯಿಂದಾದ ತೊಂದರೆಯಿಂದ ಬಚಾವಾಗಲು ಉತ್ಪನ್ನಗಳ ಬೆಲೆ ಹೆಚ್ಚಿಸಿದ್ದಾರೆ. ಇದು ಗ್ರಾಹಕರ ಮೇಲೆ ಪರೋಕ್ಷವಾಗಿ ಆರ್ಥಿಕ ಹೊರೆ ಹೆಚ್ಚಿಸಿದೆ.
ಸಣ್ಣ, ಅತಿಸಣ್ಣ ವ್ಯಾಪಾರಸ್ಥರಿಗೆ ವಾಣಿಜ್ಯ ತೆರಿಗೆ ನೋಟಿಸ್ ನೀಡುತ್ತಿರುವುದರ ಹಿಂದೆ, ಕೇಂದ್ರ ಸರ್ಕಾರದ, ಹಣಕಾಸು ಸಚಿವರ ಹೊಸ ಜಿಎಸ್‌ಟಿ ತೆರಿಗೆ ನೀತಿ ಇದೆ, ಕಾನೂನು ಇದೆ. 2017ರ ಜುಲೈ 1ರಿಂದ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಗೆ ತಂದಾಗ, 40 ಲಕ್ಷ ವಾರ್ಷಿಕ ವಹಿವಾಟು ಇರುವ ಸಣ್ಣ ವ್ಯಾಪಾರಿಗಳಿಗೆ, ಅಂದರೆ ತಿಂಗಳಿಗೆ 3,33,333 ರೂ. ವ್ಯಾಪಾರ ಮಾಡುವವರಿಗೆ ಜಿಎಸ್‌ಟಿಯಿಂದ ರಿಯಾಯಿತಿ ನೀಡಲಾಗಿದೆ. ಇದಕ್ಕಿಂತ ಹೆಚ್ಚಿಗೆ ವ್ಯಾಪಾರ ವಹಿವಾಟು ನಡೆಸುವವರು ಜಿಎಸ್‌ಟಿ ವ್ಯಾಪ್ತಿಗೆ ಬರುವಂತಿದ್ದು, ಅವರು 1% ತೆರಿಗೆ ಕಟ್ಟಬೇಕು ಎಂಬ ಕಾನೂನು ಇದೆ. ವರ್ಷಕ್ಕೆ 40 ಲಕ್ಷ ರೂ. ವಹಿವಾಟು ಆದರೆ, ತಿಂಗಳಿಗೆ 3,33,333 ವ್ಯಾಪಾರದ ಮೇಲೆ ಶೇ. 10 ನಿವ್ವಳ ಲಾಭ ಬಂದರೆ, ಅದು ತಿಂಗಳಿಗೆ 33,333 ರೂ. ಆಗುತ್ತದೆ. ಅಕಸ್ಮಾತ್ ವ್ಯಾಪಾರ ವರ್ಷಕ್ಕೆ 1.5 ಕೋಟಿಯಾದರೆ, ಜಿಎಸ್‌ಟಿ ವ್ಯಾಪ್ತಿಗೊಳಪಟ್ಟರೆ, ಅದರ ಮೇಲೆ ಸಂಯೋಜನೆಯ ಯೋಜನೆ(composition scheme)- ರಾಜಿ ತೆರಿಗೆ ಹಾಕಲಾಗುತ್ತದೆ. ಅದನ್ನು ಬಡ ವ್ಯಾಪಾರಿಗಳು ಕಟ್ಟಬೇಕು ಎನ್ನುತ್ತದೆ ಕೇಂದ್ರದ ತೆರಿಗೆ ಕಾನೂನು.
ಆದರೆ, ಅದೇ ಕೇಂದ್ರದ ತೆರಿಗೆ ನೀತಿ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ತಿಂಗಳಿಗೆ ಒಂದು ಲಕ್ಷ ಸಂಬಳ ಪಡೆದರೆ, ಅದು ವರ್ಷಕ್ಕೆ 12 ಲಕ್ಷವಾದರೆ, 12 ಲಕ್ಷದವರೆಗೆ ಆತನಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಇದೆ ಎನ್ನುತ್ತದೆ. ವೈಟ್ ಕಾಲರ್ ಉದ್ಯೋಗಿಗೊಂದು ನ್ಯಾಯ; ಸಣ್ಣ ವ್ಯಾಪಾರಿಗೊಂದು ನ್ಯಾಯ? ಇದು ಯಾವ ತೆರಿಗೆ ನೀತಿ?
ಜಿಎಸ್‌ಟಿ ತೆರಿಗೆ ನೀತಿ ಇರುವುದು ಬಿ ಟು ಬಿ- ಬ್ಯುಸಿನೆಸ್ ಟು ಬ್ಯುಸಿನೆಸ್‌ಗೆ. ಇದರ ವ್ಯಾಪ್ತಿಗೆ ದೊಡ್ಡ ಮಟ್ಟದ ವ್ಯಾಪಾರಸ್ಥರು ಬರುತ್ತಾರೆ. ಅದೇ ಜಿಎಸ್‌ಟಿ ತೆರಿಗೆ ನೀತಿ ಬಿ ಟು ಸಿ- ಬ್ಯುಸಿನೆಸ್ ಟು ಕಸ್ಟಮರ್- ಅಂದರೆ ಸಣ್ಣ ವ್ಯಾಪಾರಸ್ಥರಿಂದ ಗ್ರಾಹಕರಿಗೆ, ಇವರು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಹಾಗೂ ವಾರ್ಷಿಕ ವಹಿವಾಟು 40 ಲಕ್ಷ ಮೀರುವ ವ್ಯಾಪಾರಸ್ಥರಿಂದ ರಾಜ್ಯಗಳು ರಾಜಿ ತೆರಿಗೆ ವಸೂಲಿ ಮಾಡಬಹುದು ಎಂಬ ಕಾನೂನು ಇದೆ. ಆದರೆ, ಇಲ್ಲಿಯವರೆಗೆ ಯಾವ ರಾಜ್ಯವೂ ಈ ರಾಜಿ ತೆರಿಗೆ ವಸೂಲಿಗೆ ಕೈಹಾಕಿದ್ದಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಯಾವುದು ನಿಜ ಮೋದಿಯವರೇ! ದೇವರ ಆಟವೇ, ದಗಲುಬಾಜಿ ಕಾಟವೇ?
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಸ್ವತಃ ಸಿದ್ದರಾಮಯ್ಯನವರೇ ಹಣಕಾಸು ಸಚಿವರೂ ಆಗಿದ್ದಾರೆ. ಅವರ ಸರ್ಕಾರಕ್ಕೆ ಅದೇನು ದುಡ್ಡಿನ ದರ್ದು ಬಂದಿದೆಯೋ ಗೊತ್ತಿಲ್ಲ. ಅಥವಾ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾದ ವಿಪುಲ್ ಬನ್ಸಾಲ್‌ರ ಐನಾತಿ ಐಡಿಯಾವೋ ತಿಳಿಯುತ್ತಿಲ್ಲ. ರಾಜ್ಯದ ಸಣ್ಣ ವ್ಯಾಪಾರಿಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಕಣ್ಣು ಬಿದ್ದಿದೆ. ನೋಟಿಸ್ ಜಾರಿ ಆಗುತ್ತಿದೆ. ಬಡವ್ಯಾಪಾರಿಗಳು ಬಸವಳಿದಿದ್ದಾರೆ.
ಕಾನೂನು ಎಂಬುದು ಅಸ್ತ್ರ; ಸುಂಕದವನ ಬಳಿ ಸುಖದುಃಖ ಹೇಳಿಕೊಳ್ಳಲಾಗುವುದಿಲ್ಲ, ನಿಜ. ಆದರೆ ಕಾನೂನನ್ನು ಬಳಸುವಾಗ ಬಡವರ ಬಗ್ಗೆ ಕೊಂಚ ಕಾಳಜಿ-ಕನಿಕರ ಇರಬೇಕಾಗುತ್ತದೆ. ವಿವೇಚನೆಯಿಂದ ಬಳಸಬೇಕಾಗುತ್ತದೆ. ಹಾಗೆಯೇ ರಾಜ್ಯವನ್ನಾಳುವ ದೊರೆ ದಯಾಳುವಾಗಿದ್ದು, ಧಾರಾಳತನದಿಂದಲೂ ವರ್ತಿಸಬೇಕಾಗುತ್ತದೆ. ಇಲ್ಲದಿದ್ದರೆ, ಯಾವ ರಾಜ್ಯದಲ್ಲೂ ಇಲ್ಲದ ತೆರಿಗೆ ವಿಧಿಸಿ, ಜನವಿರೋಧಿ ಪಟ್ಟ ಕಟ್ಟಿಕೊಳ್ಳುವುದಕ್ಕೆ ಸಿದ್ಧರಾಗಬೇಕಾಗುತ್ತದೆ.
