ಪ್ರಭುತ್ವದ ಸಹಕಾರ ಧರ್ಮಾಂಧರಿಗೆ ಸಿಕ್ಕರೆ ಆಗುವ ಅನಾಹುತಗಳು ಅಪಾರ. ಹಿಂಸಾಚಾರದ ಬಳಿಕ ಮಣಿಪುರಕ್ಕೆ ಕಾಲಿಡದ ಪ್ರಧಾನಿ, ಕಣಿವೆ- ಗುಡ್ಡಗಾಡಾಗಿ ಬೇರ್ಪಟ್ಟಿರುವ ಮಣಿಪುರ, ಅತಂತ್ರವಾದ ಮಕ್ಕಳ ಭವಿಷ್ಯ, ನೆಲೆ ಕಳೆದುಕೊಂಡ 60,000 ಜನ, ಅದರ ನಡುವೆ ಮತೀಯ ಗುಂಪುಗಳ ಅಟ್ಟಹಾಸ- ಎತ್ತ ಸಾಗುತ್ತಿದೆ ಭಾರತ?
ಮಣಿಪುರ ರಾಜ್ಯವು ಗುಡ್ಡಗಾಡು ಮತ್ತು ಕಣಿವೆ ಎಂದು ಅನಧಿಕೃತವಾಗಿ ವಿಭಾಗಗೊಂಡು ಬರೋಬ್ಬರಿ ಒಂಬತ್ತು ತಿಂಗಳು ಕಳೆಯಿತು. ಜನಾಂಗೀಯವಾದಕ್ಕೆ ಸರ್ಕಾರದ ಕುಮ್ಮಕ್ಕು, ಮುಂದಾಗುವ ಪರಿಣಾಮಗಳ ಕುರಿತು ಇಲ್ಲದ ದೂರದೃಷ್ಟಿಯ ಫಲವಾಗಿ ಈಗ ಮಣಿಪುರ ಪೊಲೀಸರೇ ಶಸ್ತ್ರತ್ಯಾಗ ಮಾಡಿ ಕೈಚೆಲ್ಲಿ ಕೂರುವ ಸ್ಥಿತಿ ಬಂದೊದಗಿದೆ.
ಕುಕಿ ಮತ್ತು ಮೈತೇಯಿಗಳ ನಡುವಿನ ಕಲಹದಲ್ಲಿ ಪ್ರಮುಖ ಪಾತ್ರ ವಹಿಸಿರುವ ಮೈತೇಯಿ ದುರಭಿಮಾನದ ಎರಡು ಸಂಘಟನೆಗಳಿವೆ. ಒಂದು: ಆರಂಬೈ ತೆಂಗೋಲ್, ಎರಡು: ಮೈತೇಯಿ ಲೀಪೂನ್. ಕಳೆದ ಕೆಲವೇ ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಗುಂಪುಗಳು ಈಗ ಮೈತೇಯಿ ನಾಗರಿಕರ ನಡುವೆ ಬೇರುಬಿಟ್ಟಿವೆ. ಕಟು ಹಿಂದುತ್ವ ಪ್ರತಿಪಾದಿಸುವ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನಂತೆ ಈ ಸಂಘಟನೆಗಳು ಕೆಲಸ ಮಾಡುತ್ತಾ ಬಂದಿವೆ.
ಮಣಿಪುರ ಹಿಂಸಾಚಾರದಲ್ಲಿ ನೇರಾನೇರ ಭಾಗಿಯಾದ ಕುಖ್ಯಾತಿಯನ್ನು ಹೊಂದಿರುವ ಆರಂಬೈ ತೆಂಗೋಲ್ ಈಗ ಮಣಿಪುರ ಪೊಲೀಸರ ಮೇಲೆ ದಾಳಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಕಣ್ಣಮುಂದೆ ಅನ್ಯಾಯವಾಗುತ್ತಿದ್ದರೂ ಬಹುಸಂಖ್ಯಾತವಾದದ ಭಯಕ್ಕೆ ಪೊಲೀಸರು ತುಟಿ ಬಿಚ್ಚದೆ ಕೂರುವ ಸ್ಥಿತಿ ಬಂದೊದಗಿದೆ.
ಆರಂಬೈ ತೆಂಗೋಲ್ ಸಂಘಟನೆಯ ಕುರಿತು ಗಂಭೀರವಾಗಿ ಯೋಚಿಸಬೇಕು. ಮಣಿಪುರ ನೆಲದಲ್ಲಿ ಬೆಳೆದ ಬುಡಕಟ್ಟು ಜನರ ಸನಾಮಹಿ ಧರ್ಮ ಪ್ರಕೃತಿ ಆರಾಧನೆಯನ್ನೇ ತನ್ನ ತತ್ವವಾಗಿಸಿಕೊಂಡಿತ್ತು. ಆದರೆ ಇದನ್ನು ಹಿಂದೂವೀಕರಣಗೊಳಿಸಿ ರಾಜಕಾರಣದ ಅಸ್ತ್ರವಾಗಿಸಿಕೊಳ್ಳುವ ಪ್ರಯೋಗಗಳನ್ನು ಸಂಘಪರಿವಾರ ನಿರಂತರವಾಗಿ ಮಾಡುತ್ತಾ ಬಂದಿತು. ಅದರ ಭಾಗವಾಗಿ ಹುಟ್ಟಿದ್ದೇ ಆರಂಬೈ ತೆಂಗೋಲ್ (ಈ ಹೆಸರಿನ ಅರ್ಥ- ಭರ್ಜಿ ಚಲಾಯಿಸುವ ಅಶ್ವಸೇನೆ).
ಸನಾಮಹಿಯ ಹಿಂದಿನ ವೈಭವವನ್ನು ಪ್ರೋತ್ಸಾಹಿಸಿ, ಪುನರುತ್ಥಾನ ಮಾಡುವ ಗುರಿಯೊಂದಿಗೆ ಚಾಲ್ತಿಗೆ ಬಂದ ಆರಂಬೈ ತೆಂಗೋಲ್‌ನಲ್ಲಿ ಇರುವ ಹೆಚ್ಚಿನವರು ಹದಿನಾರರಿಂದ ಇಪ್ಪತ್ತೈದು ವರ್ಷದ ಮೈತೇಯಿ ಯುವಕರು. ಇವರು ಧರಿಸುವ ಕಪ್ಪು ಬಣ್ಣದ ಶರ್ಟ್ ಮೇಲೆ ಮೂರು ಕುದುರೆಗಳ ಚಿತ್ರಗಳಿರುತ್ತವೆ. ಹೀಗಾಗಿ ಇವರನ್ನು ‘ಕಪ್ಪು ಶರ್ಟ್ ತೊಟ್ಟ ಹುಡುಗರು’ ಎಂದೂ ಕರೆಯಲಾಗುತ್ತದೆ. ಈ ಸಂಘಟನೆಯ ಕಾರ್ಯಕರ್ತರು ಇಂಫಾಲ ಕಣಿವೆ ಮತ್ತು ಗಡಿ ಭಾಗದ ಹಳ್ಳಿಗಳಲ್ಲಿ ಕುಕಿಗಳ ಮೇಲೆ ಭೀಕರವಾಗಿ ಹಿಂಸಾಚಾರ ನಡೆಸಿದ ಕುಖ್ಯಾತಿ ಹೊಂದಿದ್ದಾರೆ. ಈಗ ‘ಮನೆಯೊಳಗಿನ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’ ಎಂಬಂತೆ ಸರ್ಕಾರಿ ಅಧಿಕಾರಿಗಳನ್ನೂ ಬಿಟ್ಟಿಲ್ಲ.
ಪೆಟ್ರೋಲ್ ಪಂಪ್‌ನಿಂದ ವಾಹನವನ್ನು ಕಸಿದುಕೊಂಡ ಆರೋಪದಲ್ಲಿ ಫೆಬ್ರುವರಿ 26ರಂದು ಆರಂಬೈ ತೆಂಗೋಲ್‌ನ ಸೆಕ್ಮೈ ಘಟಕದ ಮುಖ್ಯಸ್ಥ ಎಂ.ರಾಬಿನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಫೆಬ್ರುವರಿ 27 ರಂದು ಸುಮಾರು 200 ಶಸ್ತ್ರಸಜ್ಜಿತ ದುಷ್ಕರ್ಮಿಗಳು ಇಂಫಾಲ ಪೂರ್ವದಲ್ಲಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೊಯಿರಾಂಗ್ಥೆಮ್ ಅಮಿತ್ ಅವರ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದರು. ಪೊಲೀಸ್ ಅಧಿಕಾರಿ ಮತ್ತು ಅವರ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ಮಾಡಲಾಯಿತು. ಆದರೆ ಯಾವುದೇ ಕ್ರಮ ತೆಗೆದುಕೊಳ್ಳಬಾರದೆಂಬ ಕಟ್ಟಾಜ್ಞೆ ಮೇಲಧಿಕಾರಿಗಳಿಂದ ಬಂತು. ಇದರಿಂದ ಅಕ್ಷರಶಃ ಭದ್ರತಾ ಸಿಬ್ಬಂದಿ ಆತಂಕಿತರಾದರು. ಇಂಫಾಲ ಪಶ್ಚಿಮ, ಇಂಫಾಲ ಪೂರ್ವ ಮತ್ತು ಬಿಷ್ಣುಪುರ ಜಿಲ್ಲೆಗಳ ಪೊಲೀಸ್ ಕಮಾಂಡೋಗಳು ತಮ್ಮ ಆಯುಧಗಳನ್ನು ಕೆಳಗಿಳಿಸಿ ಸಾಂಕೇತಿಕವಾಗಿ ಪ್ರತಿರೋಧ ತೋರಿದ್ದಾರೆ. ಕಣ್ಣಮುಂದೆಯೇ ಮಿಲಿಟೆಂಟ್ ಗುಂಪುಗಳ ಅಟ್ಟಹಾಸ ಮಿತಿ ಮೀರಿದ್ದರೂ ಕ್ರಮ ಜರುಗಿಸಲಾಗದ ಅಸಹಾಯಕತೆಯನ್ನು ಹೊರಹಾಕಿದ್ದಾರೆ.
”ಯಾವುದೇ ನಾಗರಿಕ ಸಮಾಜದ ಗುಂಪುಗಳು ನಮ್ಮ ಬೆಂಬಲಕ್ಕೆ ಬಂದಿಲ್ಲ. ನಮ್ಮ ಕೈಗಳನ್ನು ಕಟ್ಟಿ ಹಾಕಲಾಗಿದೆ, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ತಡೆದಿದ್ದಾರೆ. ನಮ್ಮವರೇ ನಮ್ಮನ್ನು ಬೆಂಬಲಿಸುತ್ತಿಲ್ಲ. ನಮ್ಮ ನೈತಿಕ ಸ್ಥೈರ್ಯ ಕುಸಿದಿದೆ. ದಾಳಿಗೆ ಒಳಗಾದ ಪೊಲೀಸ್ ಅಧಿಕಾರಿಯೂ ಮೈತೇಯಿ ಸಮುದಾಯದವರು” ಎಂದು ಮಣಿಪುರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
”ಆರಂಬೈ ತೆಂಗೋಲ್ ಸದಸ್ಯರನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ ಎಂದಲ್ಲ. ಅವರ ವಿರುದ್ಧ ಭಯೋತ್ಪಾದನಾ ವಿರೋಧಿ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ಪ್ರಕರಣಗಳನ್ನು ಸಹ ದಾಖಲಿಸಲಾಗುತ್ತಿದೆ. ಆದರೆ ಅವರಿಗೆ ಸ್ಥಳೀಯರ ಬೆಂಬಲವಿದೆ. ಆರಂಬೈ ತೆಂಗೋಲ್‌ನ ಕೇಡರ್‌ಗಳನ್ನು ಬಂಧಿಸಿದಾಗಲೆಲ್ಲಾ ಜನರು ಜಮಾಯಿಸಿ ಅವರ ಬಿಡುಗಡೆಗೆ ಒತ್ತಾಯಿಸುತ್ತಾರೆ” ಎಂದೂ ಪೊಲೀಸರು ಹೇಳಿದ್ದಾರೆ.
”ಇಲ್ಲಿ ಯಾವುದೇ ಸಣ್ಣ ಘಟನೆಯು ಸಾಮೂಹಿಕ ದಂಗೆಗೆ ಕಾರಣವಾಗಬಹುದು, ಆದ್ದರಿಂದ ನಾವು ಜಾಗರೂಕರಾಗಿ ಹೆಜ್ಜೆ ಹಾಕಬೇಕು. ಪೊಲೀಸ್ ಅಧಿಕಾರಿಯನ್ನು ಹೊಡೆದು ಸಾಯಿಸಬಹುದು ಅಥವಾ ಗುಂಡಿಕ್ಕಿ ಕೊಲ್ಲಬಹುದು ಎಂಬ ಆತಂಕವೂ ಇದೆ. ಇಲ್ಲಿನ ನಾಗರಿಕರು ಹಲ್ಲೆಗೆ ಶಸ್ತ್ರಸಜ್ಜಿತರಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಇದು ಮಣಿಪುರದ ವಾಸ್ತವ. ಸಂವಿಧಾನ ಮತ್ತು ಕಾನೂನಿನ ಜಾರಿಗೆ ಬಹುಸಂಖ್ಯಾತವಾದ ಹಾಕಿರುವ ಬೆದರಿಕೆಗೆ ಮಣಿಪುರ ಜ್ವಲಂತ ಸಾಕ್ಷಿ. ಮುಖ್ಯಮಂತ್ರಿ ಬಿರೇನ್ ಸಿಂಗ್ ಪೋಷಿಸಿದ ಆರಂಬೈ ತೆಂಗೋಲ್, ಸರ್ಕಾರಿ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಶಸ್ತ್ರಾಗಾರಗಳನ್ನು ಲೂಟಿ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತದೆ. ಆದರೆ ಈ ಮಿಲಿಟೆಂಟ್ ಗ್ರೂಪ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಸರ್ಕಾರಿ ಅಧಿಕಾರಿಗಳೇ ಕೊಟ್ಟಿದ್ದಾರೆಂಬ ಸಂಗತಿಗಳೂ ಬಯಲಾಗಿವೆ. ಮೊದಲೇ ಮತೀಯವಾದದ ಮದ್ಯ ಕುಡಿದವರಿಗೆ ಬಂದೂಕಿನ ಸ್ಪರ್ಶ ಸಿಕ್ಕರೆ ಏನಾಗಬಹುದು, ಅದೇ ಈಗ ಮಣಿಪುರದಲ್ಲಿ ಆಗುತ್ತಿದೆ.
ಯಾವುದೇ ಧರ್ಮದ ವೈಭವೀಕರಣದ ಹಿಂದೆ ಬುಸುಗುಡುವ ಅಸಹನೆ, ಶ್ರೇಷ್ಠತೆಯ ಅಭಿಮಾನ ಎಲ್ಲವೂ ದುರಂತಗಳಿಗೆ ನಾಂದಿ ಹಾಡುತ್ತವೆ ಎಂಬ ಎಚ್ಚರಿಕೆ ಸಮಾಜಕ್ಕೆ ಅಗತ್ಯ. ಪ್ರಭುತ್ವದ ಸಹಕಾರ ಧರ್ಮಾಂಧರಿಗೆ ಸಿಕ್ಕರೆ ಆಗುವ ಅನಾಹುತಗಳು ಅಪಾರ. ಹಿಂಸಾಚಾರದ ಬಳಿಕ ಮಣಿಪುರಕ್ಕೆ ಕಾಲಿಡದ ಪ್ರಧಾನಿ, ಕಣಿವೆ- ಗುಡ್ಡಗಾಡಾಗಿ ಬೇರ್ಪಟ್ಟಿರುವ ಮಣಿಪುರ, ಅತಂತ್ರವಾದ ಮಕ್ಕಳ ಭವಿಷ್ಯ, ನೆಲೆ ಕಳೆದುಕೊಂಡ 60,000 ಜನ, ಅದರ ನಡುವೆ ಮತೀಯ ಗುಂಪುಗಳ ಅಟ್ಟಹಾಸ- ಎತ್ತ ಸಾಗುತ್ತಿದೆ ಭಾರತ? ನಾವೀಗ ಯೋಚಿಸಬೇಕಿದೆ.
