ಮನುವಾದಿಗಳಾದ ಭಾಗವತ್ ಮತ್ತು ತೊಗಾಡಿಯಾ- ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಿದ್ದಾರೆ. ಅಸಮಾಧಾನ, ಅವಮಾನಗಳನ್ನು ಸೈಡಿಗೆ ಸರಿಸಿ ಮಹಾರಾಷ್ಟ್ರ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಇದು ಸೈದ್ಧಾಂತಿಕವಾಗಿ ದ್ವೀಪಗಳಾಗುತ್ತಿರುವ ಎಡಪಂಥೀಯರಿಗೆ, ಜಾತ್ಯತೀತರಿಗೆ ಅರ್ಥವಾಗಬೇಕಿದೆ. ಹಾಗೆಯೇ ಸ್ವಾರ್ಥಕ್ಕಾಗಿ, ಸಣ್ಣಪುಟ್ಟ ಆಸೆ-ಆಮಿಷಗಳಿಗೆ ಬಲಿಯಾಗಿ ಒಡೆದು ಚೂರಾಗುತ್ತಿರುವ ವಿರೋಧ ಪಕ್ಷಗಳಿಗೂ ಪಾಠವಾಗಬೇಕಿದೆ.
ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಂಘ ಪರಿವಾರದ ಚಟುವಟಿಕೆಗಳಿಂದ ದೂರವಾಗಿದ್ದ ಹಿಂದುತ್ವದ ಕಟ್ಟರ್‍ವಾದಿ ಪ್ರವೀಣ್ ತೊಗಾಡಿಯಾ, ಅ.12ರಂದು ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಭೇಟಿ ನೀಡಿದ್ದಾರೆ. ಆರು ವರ್ಷಗಳ ನಂತರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಭಾಗವತ್ ಮತ್ತು ತೊಗಾಡಿಯಾ- ಇಬ್ಬರು ನಾಗಪುರದಲ್ಲಿ ಭೇಟಿ ಮಾಡಿದ್ದು ಅಕ್ಟೋಬರ್ 12 ರಂದು. ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದು ಅಕ್ಟೋಬರ್ 15ರಂದು. ಇದು ಸಂಘ ಪರಿವಾರದಲ್ಲಿ, ರಾಜಕೀಯ ವಲಯದಲ್ಲಿ ಮತ್ತು ವಿರೋಧ ಪಕ್ಷಗಳ ನಡುವೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಹಾಗೆಯೇ ಜನಮಾನಸದಲ್ಲಿ ಆತಂಕವನ್ನೂ ಸೃಷ್ಟಿಸಿದೆ.
ಇಬ್ಬರೂ ಹಿಂದುತ್ವದ ಫೈರ್‍ಬ್ರ್ಯಾಂಡ್‌ಗಳು. ಬದುಕಿನುದ್ದಕ್ಕೂ ಬಹುತ್ವ ಭಾರತವನ್ನು ಭಗ್ನಗೊಳಿಸಲು ಯತ್ನಿಸಿದವರು. ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ತಮ್ಮೆಲ್ಲ ಬುದ್ಧಿ-ಶಕ್ತಿ ಸುರಿದು ಶಾಂತಿ-ಸಹಬಾಳ್ವೆಗೆ ಧಕ್ಕೆ ತಂದವರು. ಈಗ ಇವರ ಇಚ್ಛೆಯಂತೆ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರತಿಷ್ಠಾಪಿಸಲ್ಪಟ್ಟರೂ; ಇವರ ಸೂಚನೆಗಳಂತೆ ಸರ್ಕಾರ ನಡೆಯುತ್ತಿದ್ದರೂ; ಮತ್ತೊಂದು ‘ಮಹಾ’ ಕದನಕ್ಕಾಗಿ ಸಿದ್ಧರಾಗಿದ್ದಾರೆ, ಹಿಂದುಗಳನ್ನು ಸನ್ನದ್ಧಗೊಳಿಸುತ್ತಿದ್ದಾರೆ.
67 ವರ್ಷದ ಪ್ರವೀಣ್ ತೊಗಾಡಿಯಾ ಮೂಲತಃ ಗುಜರಾತಿನವರು. ಪಟೇಲ್ ಸಮುದಾಯಕ್ಕೆ ಸೇರಿದವರು. ವೃತ್ತಿಯಲ್ಲಿ ವೈದ್ಯರು. ಆರ್‌ಎಸ್‌ಎಸ್ ಜೊತೆ ಗುರುತಿಸಿಕೊಂಡವರು. 1983ರಲ್ಲಿ ವಿಎಚ್‌ಪಿ ಸೇರಿದರೆ, ನರೇಂದ್ರ ಮೋದಿ 84ರಲ್ಲಿ ಬಿಜೆಪಿ ಸೇರಿದರು. ಇಬ್ಬರೂ ಒಂದಾಗಿ, ಹಿಂದುತ್ವವನ್ನು ಅತಿರೇಕಕ್ಕೊಯ್ದು, 1995ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೇರುವಂತೆ ನೋಡಿಕೊಂಡರು. 2001ರಲ್ಲಿ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗುವಲ್ಲಿ ತೊಗಾಡಿಯಾ ಮಹತ್ವದ ಪಾತ್ರ ವಹಿಸಿದರು. ಸರ್ಕಾರ ರಚನೆಯಾದಾಗ ‘ಹಿಂದೂ ರಾಷ್ಟ್ರ’ದ ಆರಂಭ ಎಂದು ಹಾಡಿ ಹೊಗಳಿದರು. ಅದರ ಫಲವಾಗಿ ತೊಗಾಡಿಯಾ ವಿಎಚ್‌ಪಿ ಪ್ರಧಾನ ಕಾರ್ಯದರ್ಶಿಯಾದರು. ಅವರ ಮಿತ್ರ ಗೋರ್ಧನ್ ಝಡಾಫಿಯಾರನ್ನು ಗೃಹ ಖಾತೆಯ ರಾಜ್ಯ ಸಚಿವರನ್ನಾಗಿ ನೇಮಿಸಲಾಯಿತು.
ಆದರೆ 2002ರ ಚುನಾವಣೆಯ ಗೆಲುವಿನ ನಂತರ, ಮೋದಿ ಬದಲಾದರು. ವೃತ್ತಿವಂತ ರಾಜಕಾರಣಿಯಾದರು. ಅಮಿತ್ ಶಾ ಮತ್ತು ಆರ್‌ಎಸ್‌ಎಸ್ ಬಗಲಿಗಿಟ್ಟುಕೊಂಡು ತೊಗಾಡಿಯಾರನ್ನು ದೂರ ತಳ್ಳಿದರು. ಯಾವುದೋ ಕೇಸಿನಲ್ಲಿ ಜೈಲಿಗೂ ಹಾಕಿ ಅವಮಾನಿಸಿದರು. ತೊಗಾಡಿಯ ಮಿತ್ರ ಝಡಾಫಿಯಾರನ್ನು ಸಂಪುಟದಿಂದ ಕೈಬಿಟ್ಟು ನಿರ್ಲಕ್ಷಿಸಿದರು. 2012ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತೊಗಾಡಿಯಾ ಮತ್ತು ವಿಎಚ್‌ಪಿ ಕಾರ್ಯಕರ್ತರು ಬಿಜೆಪಿ ವಿರುದ್ಧ ಗುಜರಾತ್ ಪರಿವರ್ತನ್ ಪಕ್ಷದ ಪರ ಪ್ರಚಾರ ನಡೆಸಿದರು. 2018ರಲ್ಲಿ ವಿಎಚ್‌ಪಿಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತೊಗಾಡಿಯಾ ಬೆಂಬಲಿತ ಅಭ್ಯರ್ಥಿಯನ್ನು ಮೋದಿ ಮತ್ತವರ ಗುಂಪು ಸೋಲಿಸಿ, ವಿಎಚ್‌ಪಿ ತೊರೆಯುವಂತೆ ನೋಡಿಕೊಂಡರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಹಾರಾಷ್ಟ್ರ, ಝಾರ್ಖಂಡ್ ಚುನಾವಣೆ- ಬಿಜೆಪಿ ಪಾಲಿಗೆ ವರವೇ ಅಥವಾ ಶಾಪವೇ?
ಇಲ್ಲಿಂದ ತೊಗಾಡಿಯಾ ನೇರವಾಗಿ ಮೋದಿ ಮೇಲೆ ಸಮರ ಸಾರಿದರು. ಹೋದಲ್ಲಿ ಬಂದಲ್ಲಿ, ‘ರಾಮಮಂದಿರವಿದೆ, ಎಲ್ಲಿಯೂ ರಾಮರಾಜ್ಯ ಕಾಣಿಸುತ್ತಿಲ್ಲ’, ‘ಮೋದಿ ಚಹಾ ಮಾರಲಿಲ್ಲ, ಅದು ಜನರ ಅನುಕಂಪ ಗಿಟ್ಟಿಸಲು ಮಾಡಿದ ಗಿಮಿಕ್’, ‘ಜನರ ಆಶೋತ್ತರಗಳನ್ನು ಬಿಜೆಪಿ ಪೂರ್ಣಗೊಳಿಸಿಲ್ಲ. ಹಿಂದೂಗಳು ಭ್ರಮನಿರಸನಗೊಂಡಿದ್ದಾರೆ’ ಎಂದು ಮೋದಿಯ ಮುಖವಾಡ ಕಳಚಿಟ್ಟರು. ಅಷ್ಟೇ ಅಲ್ಲ, 2019ರಲ್ಲಿ ‘ಹಿಂದೂಸ್ಥಾನ್ ನಿರ್ಮಾಣ್ ದಳ’ ಎಂಬ ಹೊಸ ಪಕ್ಷ ಕಟ್ಟಿ, ಮೋದಿ ವಿರುದ್ಧ ತೊಡೆ ತಟ್ಟಿದರು.
ಇದು ಮೋದಿ ವಿರುದ್ಧ ವಿಎಚ್‌ಪಿ ಫೈರ್‍ಬ್ರ್ಯಾಂಡ್ ತೊಗಾಡಿಯಾ ತೋರಿದ ಉಗ್ರ ಪ್ರತಾಪವಾದರೆ; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ರಂತೂ ಇತ್ತೀಚಿನ ದಿನಗಳಲ್ಲಿ ಮೋದಿಯವರ ಬಗ್ಗೆ ಮಾಡಿದ ಮೂದಲಿಕೆಗಳಿಗೆ ಲೆಕ್ಕವೇ ಇಲ್ಲ. ದೇವರು, ಮಣಿಪುರ, ಮುಸ್ಲಿಮರು, ಭಾವೈಕ್ಯತೆ, ಮೀಸಲಾತಿ ಕುರಿತು ಮೋದಿಯವರ ಮಾತಿಗೆ ತದ್ವಿರುದ್ಧ ನಿಲುವು ತಾಳಿ ‘ತಿಳಿವಳಿಕೆ’ ಹೇಳಿದ್ದರು.
ಕುತೂಹಲಕರ ಸಂಗತಿ ಎಂದರೆ, ವಿಎಚ್‌ಪಿಯ ಪ್ರವೀಣ್ ತೊಗಾಡಿಯಾ ಮತ್ತು ಆರ್‌ಎಸ್‌ಎಸ್‌ನ ಮೋಹನ್ ಭಾಗವತ್, ಪ್ರಧಾನಿ ಮೋದಿ ಮೇಲೆ ಮಾಡಿದ ಆರೋಪ ಮತ್ತು ಕಟು ಟೀಕೆಗಳಿಗೆ ಮೋದಿ ಮುನಿಸಿಕೊಳ್ಳಲಿಲ್ಲ. ಗೋದಿ ಮೀಡಿಯಾ ಕೂಡ ಸುದ್ದಿ ಮಾಡಲಿಲ್ಲ, ಚರ್ಚೆಯಾಗಲೂ ಇಲ್ಲ. ಅಕಸ್ಮಾತ್ ಇದೇ ಮುನಿಸು, ಟೀಕೆ, ಬಿರುಕು ವಿರೋಧ ಪಕ್ಷಗಳ ನಾಯಕರ ನಡುವೆ ನಡೆದಿದ್ದರೆ? ಅದನ್ನು ಹೇಗೆಲ್ಲ ತಿರುಚುತ್ತಿದ್ದರು, ಬಳಸಿಕೊಳ್ಳುತ್ತಿದ್ದರು ಎಂಬುದನ್ನು ಜಾತ್ಯತೀತರು ಅರ್ಥ ಮಾಡಿಕೊಳ್ಳಬೇಕಿದೆ.
ಬಿಜೆಪಿಗೆ ಸೈದ್ಧಾಂತಿಕ ತಳಹದಿಯನ್ನು ಹಾಕಿಕೊಟ್ಟಿದ್ದು ಹಾಗೂ ಸಂಘಟನಾ ಶಕ್ತಿಯನ್ನು ಒದಗಿಸಿದ್ದು ಮತ್ತು ಒದಗಿಸುತ್ತಿರುವುದು ಆರ್‌ಎಸ್‌ಎಸ್. 2025ಕ್ಕೆ ಆರ್‌ಎಸ್‌ಎಸ್‌ಗೆ 100 ವರ್ಷ ತುಂಬುತ್ತಿದೆ. ಪ್ರಧಾನ ಕಚೇರಿ ಇರುವ ನಾಗಪುರ, ನಾಗಪುರವಿರುವ ಮಹಾರಾಷ್ಟ್ರವನ್ನು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೇಬೇಕಾಗಿದೆ. ಆ ಮೂಲಕ ನೂರು ವರ್ಷಗಳ ಸಂಘದ ‘ಶಕ್ತಿ’ಯನ್ನು ಪ್ರದರ್ಶಿಸಬೇಕಿದೆ. ವಿಶ್ವದಾದ್ಯಂತ ಮನುವಾದವನ್ನು ಬಿತ್ತಬೇಕಿದೆ. ಅದಕ್ಕಾಗಿ ವಿರುದ್ಧ ಧ್ರುವಗಳಂತಿದ್ದ ಭಾಗವತ್ ಮತ್ತು ತೊಗಾಡಿಯಾ, ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಿದ್ದಾರೆ. ಅಸಮಾಧಾನ, ಅವಮಾನಗಳನ್ನು ಸೈಡಿಗೆ ಸರಿಸಿ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಅದು ಮನುವಾದಿಗಳ ಸಿದ್ಧತೆ ಮತ್ತು ಬದ್ಧತೆಯಾಗಿ ಬಿಂಬಿತವಾಗುತ್ತಿದೆ. ಹಿಂದೂಗಳಿಗಾಗಿ ಒಂದಾದವರು ಎಂದು ಪ್ರಚಾರ ಪಡೆಯುತ್ತಿದೆ.
ಇದು ಸೈದ್ಧಾಂತಿಕವಾಗಿ ದ್ವೀಪಗಳಾಗುತ್ತಿರುವ ಎಡಪಂಥೀಯರಿಗೆ, ಜಾತ್ಯತೀತರಿಗೆ ಅರ್ಥವಾಗಬೇಕಿದೆ. ಹಾಗೆಯೇ ಸ್ವಾರ್ಥಕ್ಕಾಗಿ, ಸಣ್ಣಪುಟ್ಟ ಆಸೆ-ಆಮಿಷಗಳಿಗೆ ಬಲಿಯಾಗಿ ಒಡೆದು ಚೂರಾಗುತ್ತಿರುವ ವಿರೋಧ ಪಕ್ಷಗಳಿಗೂ ಪಾಠವಾಗಬೇಕಿದೆ.
