ಪ್ರಜಾಸತ್ತೆಯ ಮೂಲ ಉದ್ದೇಶವೇ, ಪ್ರಶ್ನೆ ಮಾಡುವುದು. ಪ್ರಭುತ್ವವನ್ನು ಪ್ರಶ್ನಿಸುವ ಹಕ್ಕನ್ನು ನಮ್ಮ ಸಂವಿಧಾನವೇ ನಮಗೆ ಕಲ್ಪಿಸಿಕೊಟ್ಟಿದೆ. ಪ್ರಶ್ನಿಸುವ ವಿವೇಕವನ್ನು ಕಳೆದುಕೊಂಡ ಸಮಾಜ ಸಾಂಸ್ಕೃತಿಕವಾಗಿ ಜಡ್ಡುಗಟ್ಟಿ ಹೋಗಲಿದೆ. ಜಡ್ಡಾಗದ ಜನ ಪ್ರಶ್ನಿಸಬೇಕಾಗಿದೆ.
ಘನತೆವೆತ್ತ ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದ 2025–26ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾಗ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರು ಗಾಢ ನಿದ್ರೆಯಲ್ಲಿದ್ದರು.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ, ರಾಜ್ಯವನ್ನು ಪ್ರತಿನಿಧಿಸುವ, ಕೇಂದ್ರ ಸಚಿವರಾಗಿರುವ ಪ್ರಲ್ಹಾದ್ ಜೋಶಿಯವರು, ದೇಶದ ಜನರ ಹಣೆಬರಹ ಬಿಡಿಸಿಡುವ ಕೇಂದ್ರ ಬಜೆಟ್ ಮಂಡನೆಯಾಗುವಾಗ ನಿದ್ರೆಗೆ ಜಾರುವುದು ಸರಿಯೇ ಎನ್ನುವ ಪ್ರಶ್ನೆ ಏಳುವುದು ಸಹಜ.
ಅದಕ್ಕೆ ಉತ್ತರವೆಂಬಂತೆ, ‘ಕೇಂದ್ರದ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಏನೂ ಸಿಗುವುದಿಲ್ಲ ಎನ್ನುವುದು ಸಚಿವ ಪ್ರಲ್ಹಾದ್ ಜೋಶಿಯವರಿಗೆ ಮೊದಲೇ ಗೊತ್ತಿತ್ತು. ಗೊತ್ತಿದ್ದರಿಂದಲೇ, ಗಾಢ ನಿದ್ರೆಗೆ ಜಾರಿದ್ದರು’ ಎಂದು ವಿರೋಧ ಪಕ್ಷಗಳ ನಾಯಕರು ವ್ಯಂಗ್ಯವಾಡಿದರು. ನಿದ್ರೆಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಮಾಡಿದರು. ಅವರಿಗೆ ಗೊತ್ತಿರುವುದು ಅಷ್ಟೇ. ಅಷ್ಟು ಮಾಡಿ, ತಮ್ಮ ಕರ್ತವ್ಯ ಮುಗಿಯಿತೆಂದು ಮುಂದಕ್ಕೆ ಹೋದರು. ಇದಕ್ಕೆ ಉತ್ತರಿಸದಿದ್ದರೆ ತಪ್ಪಾಗುತ್ತದೆಂದು ಭಾವಿಸಿದ ಬಿಜೆಪಿ ನಾಯಕರು, ‘ಇಲ್ಲ, ಸಚಿವರು ದೇಶದ ಭವಿಷ್ಯದ ಬಗೆಗಿನ ಗಾಢ ಚಿಂತನೆಯಲ್ಲಿ ಮುಳುಗಿದ್ದರು’ ಎಂದು ಸಮರ್ಥಿಸಿಕೊಂಡರು.
ನಿದ್ರೆಯ ಮಂಪರಿನಲ್ಲಿ ಮಾಧ್ಯಮಗಳ ಮುಂದೆ ನಿಂತ ಸಚಿವ ಪ್ರಲ್ಹಾದ್ ಜೋಶಿಯವರು, ‘ಕರ್ನಾಟಕಕ್ಕೆ ಏನೇನು ಕೊಡಬೇಕೋ ಅದೆಲ್ಲವನ್ನೂ ಕೊಡಲಾಗಿದೆ’ ಎಂದು ಕನಸಿನಲ್ಲಿ ಕಂಡದ್ದನ್ನು ಬಿಚ್ಚಿಟ್ಟರು. ಕನಸಿನೊಳಗಿನ ಗಂಟನ್ನು ಮಡಿಲ ಮಾಧ್ಯಮಗಳ ಪತ್ರಕರ್ತರು ಬಣ್ಣಿಸಿ ಬರೆದು ಕರ್ನಾಟಕದ ಜನತೆಗೆ ತಲುಪಿಸಿದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಯೋಧ್ಯೆ ಅತ್ಯಾಚಾರ ಪ್ರಕರಣ; ಶೋಷಿತ ಸಮುದಾಯಕ್ಕೆ ಸಿಗದ ರಕ್ಷಣೆ
ಇನ್ನು, ಕರ್ನಾಟಕದಿಂದಲೇ ರಾಜ್ಯಸಭೆಗೆ ಆರಿಸಿ ಹೋಗಿರುವ, ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್, ಆರ್ಥಿಕ ಬಿಕ್ಕಟ್ಟಿನ ಕಾಲದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಆಧಾರವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂಬ ಬೇಡಿಕೆಗೆ ಬೆಲೆ ಕೊಡಲಿಲ್ಲ. ಆದ್ಯತಾ ವಲಯಗಳಾದ ಶಿಕ್ಷಣ, ವಸತಿ, ಆರೋಗ್ಯದಂತಹ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಯೋಜನೆಗಳನ್ನೇನು ಘೋಷಿಸಲಿಲ್ಲ. ಕೃಷಿ, ಗ್ರಾಮೀಣಾಭಿವೃದ್ಧಿ, ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಅನುದಾನವನ್ನು ನೀಡಲಿಲ್ಲ. ಬೆಳೆ ವಿಮೆ, ರಸಗೊಬ್ಬರ ಸಹಾಯಧನಕ್ಕೂ ಸ್ಪಂದಿಸಲಿಲ್ಲ.
ಬದಲಿಗೆ, ‘ಕರ್ನಾಟಕ ಸರ್ಕಾರದಲ್ಲಿ ದುಡ್ಡೇ ಇಲ್ಲ. ಕಾಂಗ್ರೆಸ್ ಆಳ್ವಿಕೆಯ ರಾಜ್ಯ ದೊಡ್ಡ ದೊಡ್ಡ ಭರವಸೆ ನೀಡಿ, ಅವನ್ನು ಈಡೇರಿಸಲು ಹೆಣಗಾಡುತ್ತಿದೆ. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದ ಈ ರಾಜ್ಯ ಈಗ ಹಣಕಾಸಿನ ಸಮಸ್ಯೆ ಎದುರಿಸುತ್ತಿದೆ’ ಎಂದು, ಕಷ್ಟದಲ್ಲಿರುವ ಕರ್ನಾಟಕ ಕಂಡು ‘ಕನಿಕರ’ ವ್ಯಕ್ತಪಡಿಸಿದರು.
ಹಣಕಾಸು ಸಚಿವೆಯ ಇಂತಹ ನಡವಳಿಕೆಯನ್ನು ಒಕ್ಕೂಟ ವ್ಯವಸ್ಥೆಗೆ ಎಸಗಿದ ದ್ರೋಹವೆಂದೇ ಭಾವಿಸಬೇಕಾಗುತ್ತದೆ. ಏಕೆಂದರೆ, ಕರ್ನಾಟಕಕ್ಕೆ ಕೊಡಬೇಕಾಗಿರುವ ಅನುದಾನದ ಬಗ್ಗೆ ಹಣಕಾಸು ಸಚಿವರಿಗೂ ಅರಿವಿತ್ತು. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 28 ಅಂಶಗಳಿರುವ ಬೇಡಿಕೆಯನ್ನೂ ನೀಡಿದ್ದರು. ಆದರೂ ಸಹ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ, ಬೇರೆ ರಾಜ್ಯಗಳಿಗೆ ನೀಡಿದಷ್ಟನ್ನೂ ನೀಡದೆ ಅನ್ಯಾಯ ಮಾಡಿದರು.
ಕೇಂದ್ರ ಸರ್ಕಾರದ ಆಯಕಟ್ಟಿನ ಸ್ಥಾನದಲ್ಲಿರುವ ಪ್ರಲ್ಹಾದ್ ಜೋಶಿ ಮತ್ತು ನಿರ್ಮಲಾ ಸೀತಾರಾಮನ್, ಕರ್ನಾಟಕದ ಬಗ್ಗೆ ತಮ್ಮ ‘ಪ್ರೀತಿ’ ಮತ್ತು ‘ಕಾಳಜಿ’ಯನ್ನು ಹೀಗೆ ವ್ಯಕ್ತಪಡಿಸಿದರು. ಇದೆಲ್ಲವೂ ತಮ್ಮ ಕಣ್ಣಮುಂದೆಯೇ ನಡೆಯುತ್ತಿದ್ದರೂ, ತಮ್ಮದೇ ಸರ್ಕಾರವಿದ್ದರೂ ಬಿಜೆಪಿಯ ಮಿಕ್ಕ 18 ಸಂಸದರು ಬಾಯಿಗೆ ಬೆಣೆ ಜಡಿದುಕೊಂಡು ಕೂತಿದ್ದರು. ರಾಜ್ಯದ ಜನತೆಯಿಂದ ಆಯ್ಕೆಯಾಗಿರುವ ಇವರು, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ದನಿ ಎತ್ತಬೇಕಲ್ಲವೇ? ಕರ್ನಾಟಕದ ಹಿತ ಕಾಪಾಡುವುದು ಅವರ ಜವಾಬ್ದಾರಿಯಲ್ಲವೇ?
ರಾಜ್ಯದ ಪರ ವಕಾಲತ್ತು ವಹಿಸಿ ಕೇಂದ್ರದಿಂದ ಆಗುತ್ತಿರುವ ತೆರಿಗೆ ವಂಚನೆ, ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ, ಕನ್ನಡ ಶಾಸ್ತ್ರೀಯ ಸ್ಥಾನಮಾನ, ಭದ್ರಾ ಮೇಲ್ದಂಡೆ-ಮೇಕೆದಾಟು-ಮಹದಾಯಿ ಯೋಜನೆಗಳು, ಮನರೇಗಾ ಬಾಕಿ ಬಿಡುಗಡೆ, ರೈತರಿಗೆ ಎಂಎಸ್‌ಪಿ ಮತ್ತು ಅನುದಾನವನ್ನು ಕೇಳಬೇಕಲ್ಲವೇ?
ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರದಿಂದ ಬಡವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಲ-ಬಡ್ಡಿ-ತೆರಿಗೆ ಕಟ್ಟಿ ಮಧ್ಯಮವರ್ಗ ಬಸವಳಿದುಹೋಗಿದೆ. ದೇಶದ ಸಂಪತ್ತೆಲ್ಲವೂ ಬೆರಳೆಣಿಕೆಯಷ್ಟು ಶ್ರೀಮಂತರ ಪಾಲಾಗುತ್ತಿದೆ. ಅವರ ರಕ್ಷಣೆಗೆ ಇಡೀ ಸರಕಾರವೇ ನಿಂತಿದೆ. ಇದು, ಪ್ರಧಾನಿ ಮೋದಿಯವರ ಮಂತ್ರವಾದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ಗೆ ವಿರುದ್ಧವಾಗಿಲ್ಲವೇ?
ಇದನ್ನು ದೇಶದ ಜನತೆ ಗಮನಿಸದೇ ಇದ್ದರೆ, ಸಂಸದರು ಆಳುವ ಸರ್ಕಾರವನ್ನು ಪ್ರಶ್ನಿಸದೇ ಇದ್ದರೆ ದೇಶಕ್ಕೆ ಉಳಿಗಾಲವಿದೆಯೇ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಹಾ ಕುಂಭಮೇಳವೆಂಬ ಸನಾತನ ಗರ್ವ, ಕಾಲ್ತುಳಿತದ ಪರ್ವ
ಸಂಸದರು ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತಿರಬಹುದು. ಆದರೆ ಕರ್ನಾಟಕದ ಹಿತಾಸಕ್ತಿಯ ವಿಷಯ ಬಂದಾಗ ಎಲ್ಲರೂ ಒಂದಾಗಬೇಕಿದೆ. ನೆಲ, ಜಲ, ಭಾಷೆ, ಸಂಸ್ಕೃತಿ, ಸಂಪನ್ಮೂಲ, ಅಸ್ಮಿತೆಯ ವಿಚಾರಗಳು ಬಂದಾಗ ದನಿ ಎತ್ತಬೇಕಿದೆ. ಕರ್ನಾಟಕ ಹಿತಾಸಕ್ತಿಯ ರಕ್ಷಣೆ ನಮ್ಮ ಆದ್ಯತೆಯಾಗಬೇಕಿದೆ.
ಪ್ರಜಾಸತ್ತೆಯ ಮೂಲ ಉದ್ದೇಶವೇ, ಪ್ರಶ್ನೆ ಮಾಡುವುದು. ಪ್ರಭುತ್ವವನ್ನು ಪ್ರಶ್ನಿಸುವ ಹಕ್ಕನ್ನು ನಮ್ಮ ಸಂವಿಧಾನವೇ ನಮಗೆ ಕಲ್ಪಿಸಿಕೊಟ್ಟಿದೆ. ಪ್ರಶ್ನಿಸುವ ವಿವೇಕವನ್ನು ಕಳೆದುಕೊಂಡ ಸಮಾಜ ಸಾಂಸ್ಕೃತಿಕವಾಗಿ ಜಡ್ಡುಗಟ್ಟಿ ಹೋಗಲಿದೆ. ಜಡ್ಡಾಗದ ಜನ ಪ್ರಶ್ನಿಸಬೇಕಾಗಿದೆ. ಹಾಗೆಯೇ ನಿದ್ರಿಸುವ ಸಚಿವರನ್ನು, ಪ್ರಶ್ನಿಸದ ಸಂಸದರನ್ನು ಮುಲಾಜಿಲ್ಲದೆ ಗಟಾರಕ್ಕೆ ಎಸೆಯಬೇಕಾಗಿದೆ.
