ಬಾಂಡ್ ಹಗರಣದಿಂದ ಬಚಾವಾಗಲು ಬಿಜೆಪಿ ಸೋಮವಾರ ಸಂಜೆ ಸಿಎಎ ಭೂತವನ್ನು ಬಡಿದೆಬ್ಬಿಸಿದೆ. ದೇಶವನ್ನು ಇಬ್ಭಾಗ ಮಾಡಿ, ಚುನಾವಣೆಯಲ್ಲಿ ಅದರ ಲಾಭ ಪಡೆಯಲು ಹವಣಿಸುತ್ತಿದೆ. ಈಗ ಸಮಯ ಬಂದಿದೆ, ‘ಮೋಶಾ’ಗಳ ಮೋಸವನ್ನು ಪ್ರಶ್ನಿಸಬೇಕಿದೆ. ಬಿಟ್ಟರೆ, ಗುಜರಾತಿಗೆ ಹಚ್ಚಿದ ಬೆಂಕಿ ಭಾರತಕ್ಕೂ ಹಬ್ಬಲಿದೆ.
ಸಂಸತ್‌ನ ಉಭಯ ಸದನಗಳಲ್ಲೂ 2019ರಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆಯು ಅಂಗೀಕಾರವಾಗಿ ರಾಷ್ಟ್ರಪತಿಗಳ ಅಂಕಿತ ಬಿದ್ದಿತ್ತು. ಆದರೂ ಅನುಷ್ಠಾನಕ್ಕೆ ಬಂದಿರಲಿಲ್ಲ. ನಾಲ್ಕು ವರ್ಷ ಸುಮ್ಮನಿದ್ದ ಕೇಂದ್ರ ಸರ್ಕಾರ, ಮಾ. 11ರ ಸೋಮವಾರ ಸಿಎಎ ಜಾರಿ ಮಾಡಿ ಆದೇಶ ಹೊರಡಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿದೇಶಿ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶ ಮಾಡಿಕೊಡುತ್ತದೆ. ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಮುಸ್ಲಿಮೇತರರಿಗೆ ಧರ್ಮದ ಆಧಾರದಲ್ಲಿ ಪೌರತ್ವ ನೀಡುತ್ತದೆ. 2014ರ ಡಿಸೆಂಬರ್ 31ಕ್ಕೂ ಮುನ್ನ ಈ ಮೂರು ದೇಶಗಳಿಂದ ಅಕ್ರಮವಾಗಿ ವಲಸೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರಿಗೆ ಮಾತ್ರ ಇದರ ಅನುಕೂಲ ದೊರೆಯಲಿದೆ. ಹಾಗೂ ದೇಶವಾಸಿಗಳಾದ ಮುಸ್ಲಿಮರನ್ನು ಅನ್ಯರಂತೆ ಭಾವಿಸಲು, ಪ್ರತ್ಯೇಕಿಸಲು ಪ್ರಚೋದನೆ ನೀಡುತ್ತದೆ. ಮತ ಧ್ರುವೀಕರಣಕ್ಕೆ ಕಾರಣವಾಗುತ್ತದೆ. ಅದು ಬಿಜೆಪಿಗೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡುತ್ತದೆ
ಹಾಗಾಗಿ, ಸಿಎಎ ವಿರುದ್ಧ ಸೋಮವಾರ ಮಧ್ಯರಾತ್ರಿಯಿಂದಲೇ ಕೇರಳದ ಎಡಪಕ್ಷಗಳಿಂದ ಪ್ರತಿಭಟನೆ ಶುರುವಾಗಿದೆ. ಅಸ್ಸಾಂ ರಾಜ್ಯದಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ವಿರೋಧ ಪಕ್ಷಗಳು ಕರೆ ಕೊಟ್ಟ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.
ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ವಿರೋಧಪಕ್ಷ ಎಐಡಿಎಂಕೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಎಎ ವಿರೋಧಿಸಿ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆಗೊಳಿಸಿದ್ದಾರೆ.
ಅಲ್ಲಿಗೆ ಬಿಜೆಪಿಯ ಉದ್ದೇಶ ಈಡೇರಿದೆ. ‘ಮೋಶಾ’ಗಳಿಗೆ ಬೇಕಾಗಿದ್ದು ಇದೇ. ಅಂದರೆ ಇಡೀ ದೇಶ ಸಿಎಎ ಬಗ್ಗೆ ಮಂಗಳವಾರ ಮಾತನಾಡಬೇಕು. ವಿರೋಧ ಪಕ್ಷಗಳು ತಲೆಗೊಂದು ಹೇಳಿಕೆ ನೀಡಬೇಕು. ಅದನ್ನು ‘ಮೋಶಾ’ಗಳ ಬೂಟು ನೆಕ್ಕುವ ಪತ್ರಕರ್ತರು ಜ್ವಲಂತ ಸಮಸ್ಯೆ ಎಂಬಂತೆ ಬಿಂಬಿಸಿ, ದಿನವಿಡೀ ತೋರಿಸಿ, ದೇಶದ ಜನರ ಗಮನ ಬೇರೆಡೆಗೆ ಸೆಳೆಯಬೇಕು.
ಏಕೆಂದರೆ, ‘ಮಂಗಳವಾರ ಚುನಾವಣಾ ಬಾಂಡ್ ಗಳ ಸಂಪೂರ್ಣ ಮಾಹಿತಿಯನ್ನು ನೀಡಬೇಕು, ನೀಡದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಎಸ್‌ಬಿಐಗೆ ಖಡಕ್ಕಾಗಿ ಆದೇಶಿಸಿತ್ತು. ಕೇಂದ್ರ ಸರ್ಕಾರದ ಅಡಿಯಾಳಿನಂತೆ ವರ್ತಿಸುತ್ತಿರುವ ಎಸ್‌ಬಿಐ, ಮಾಹಿತಿ ನೀಡದೆ, ಕಾಲಾವಕಾಶ ಕೋರಿ ಕಳ್ಳಾಟ ಆಡುತ್ತಿತ್ತು. ಸುಪ್ರೀಂ ಕೋರ್ಟಿನ ಎಚ್ಚರಿಕೆಗೆ ಬೆಚ್ಚಿದ ಎಸ್‌ಬಿಐ ಇಂದು, ‘ಮಾಹಿತಿ ಸಿದ್ಧವಿದೆ, ಮ್ಯಾಪಿಂಗ್ ಮಾಡಲಾಗುತ್ತಿದೆ’ ಎಂದು ಸಬೂಬು ಹೇಳಿದೆ.
ಇಲ್ಲಿಯೂ ಕೂಡ ಬಿಜೆಪಿಯ ‘ಮೋಶಾ’ಗಳು ದೇಶದ ಜನತೆಯ ಕಣ್ಣಿಗೆ ಮಣ್ಣೆರಚುವ ಮರೆಮೋಸದಾಟವನ್ನು ಮುಂದುವರೆಸಿದ್ದಾರೆ. ಈಗಾಗಲೇ ಕೆಲವು ಗೋದಿ ಮೀಡಿಯಾಗಳು, ಎಸ್‌ಬಿಐ ಮಾಹಿತಿ ರವಾನಿಸಿದೆ ಎಂದು ಆ ಸುದ್ದಿಯನ್ನು ಅಲ್ಲಿಗೇ ಬಿಟ್ಟು, ಸಿಎಎ ಬಗ್ಗೆ ದೇಶದ ಮೂಲೆ ಮೂಲೆಗಳಿಂದ ವ್ಯಕ್ತವಾಗುವ ಸಣ್ಣ ವಿರೋಧವನ್ನು ದೊಡ್ಡದು ಮಾಡಲು ಶಕ್ತಿ ಮೀರಿ ಶ್ರಮಿಸುತ್ತಿವೆ.
ಸಾವಿರಾರು ಕೋಟಿಗಳ ಚುನಾವಣಾ ಬಾಂಡ್ ಹಗರಣವನ್ನು ಬಿಜೆಪಿ ಹಿನ್ನೆಲೆಗೆ ಸರಿಸಬೇಕಿದೆ. ದೇಶದ ಜನ ಬಾಂಡ್ ಬಗ್ಗೆ ಮಾತನಾಡದಂತೆ, ವಿರೋಧ ಪಕ್ಷಗಳು ಪ್ರಶ್ನೆ ಎತ್ತದಂತೆ, ಅದನ್ನು ಮಾಧ್ಯಮಗಳು ಸುದ್ದಿ ಮಾಡದಂತೆ ನೋಡಿಕೊಳ್ಳಬೇಕಿದೆ. ಅದಕ್ಕಾಗಿ ‘ಮೋಶಾ’ಗಳು ಎಸ್‌ಬಿಐಯನ್ನು ಇಕ್ಕಳಕ್ಕೆ ಸಿಕ್ಕಿಸಿಕೊಂಡು, ಅದು ಸುಳ್ಳು ಹೇಳುವಂತೆ ಮಾಡಿ, ಅದರ ವಿಶ್ವಾಸಾರ್ಹತೆಯನ್ನು ಮಣ್ಣುಪಾಲು ಮಾಡಿದ್ದಾರೆ.
ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದಾಗ, ದೇಶದ ದುಡ್ಡೆಲ್ಲ ಕಪ್ಪು ಹಣವಾಗಿ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿದೆ, ಅದನ್ನು ಹೊರಗೆಳೆಯುತ್ತೇವೆ ಎಂದವರು, ಈಗ ದೇಸಿ ಬ್ಯಾಂಕ್ ಖಾತೆಗಳನ್ನು ಭದ್ರ ಮಾಡುವತ್ತ ಹೋರಾಡುತ್ತಿದ್ದಾರೆ. ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣವನ್ನೂ ತರಲಿಲ್ಲ, ಖಾಸಗಿ ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ಕೊಟ್ಟ ಕಪ್ಪು ಹಣದ ಮಾಹಿತಿಯನ್ನು ಬಯಲು ಮಾಡಲೂ ಬಿಡುತ್ತಿಲ್ಲ.
ಬಾಂಡ್ ಬಹಿರಂಗವಾದರೆ ಬಿಜೆಪಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಯಾವ್ಯಾವ ಖಾಸಗಿ ಕಂಪನಿಗಳ ಮೇಲೆ ಸರ್ಕಾರಿ ಏಜೆನ್ಸಿಗಳನ್ನು ಛೂ ಬಿಟ್ಟಿದೆ, ದಾಳಿಗೊಳಗಾದ ಕಂಪನಿಗಳು ದೇಣಿಗೆಯ ರೂಪದಲ್ಲಿ ಎಷ್ಟೆಷ್ಟು ಕೋಟಿಗಳನ್ನು ಕೊಟ್ಟಿವೆ, ಆ ಅನೈತಿಕ ಹಣದಿಂದ ಬಿಜೆಪಿ ಹೇಗೆ ಚುನಾವಣೆಗಳನ್ನು ಗೆದ್ದಿದೆ ಎಂಬ ಸತ್ಯ ದೇಶದ ಜನರಿಗೆ ತಿಳಿಯುತ್ತದೆ. ಬಿಜೆಪಿಯ ‘ದೇಶಪ್ರೇಮ’ ಬಟಾಬಯಲಾಗುತ್ತದೆ.
ಹಾಗಾಗಿ, ಬಾಂಡ್ ಹಗರಣದಿಂದ ಬಚಾವಾಗಲು, ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಸೋಮವಾರ ಸಂಜೆ ಸಿಎಎ ಭೂತವನ್ನು ಬಡಿದೆಬ್ಬಿಸಿದೆ. ದೇಶವನ್ನು ಇಬ್ಭಾಗ ಮಾಡಿ, ಚುನಾವಣೆಯಲ್ಲಿ ಅದರ ಲಾಭ ಪಡೆಯಲು ಹವಣಿಸುತ್ತಿದೆ. 2002ರಲ್ಲಿ ಗುಜರಾತ್ ಗೆಲ್ಲಲು ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ‘ಮೋಶಾ’ಗಳು, ಹತ್ಯಾಕಾಂಡವನ್ನೇ ಅರಗಿಸಿಕೊಂಡು ಪ್ರಧಾನಿ-ಗೃಹಮಂತ್ರಿಗಳಾಗಿ ಮೆರೆಯುತ್ತಿದ್ದಾರೆ. ಚುನಾವಣೆ ಗೆಲ್ಲುವುದಕ್ಕಾಗಿ ಮತ್ತದೇ ಮಂತ್ರ-ತಂತ್ರಗಳಿಗೆ ಮೊರೆಹೋಗಿದ್ದಾರೆ. ಈಗ ಸಮಯ ಬಂದಿದೆ, ಚುನಾವಣಾ ಬಾಂಡ್ ಒಂದೇ ಅಲ್ಲ, ‘ಮೋಶಾ’ಗಳ ಮೋಸಗಳ ಬಗ್ಗೆ ಪ್ರಶ್ನಿಸಬೇಕಿದೆ. ಬಿಟ್ಟರೆ, ಗುಜರಾತಿಗೆ ಹಚ್ಚಿದ ಬೆಂಕಿ ಭಾರತಕ್ಕೂ ಹಬ್ಬಲಿದೆ.

💯 Nan modle gues madidde,,,,,, ivardu ide chilre buddhi ivardu.
ಸಿಎಎ ಇಂದ ವಲಸೆ ಬಂದಿರೊ ಮುಸಲ್ಮಾನರಿಗೆ ಆಗುವ ಅಪಾಯದ ಬಗ್ಗೆ ಮತ್ತು ಯಾವ ಕಾರಣಕ್ಕಾಗಿ ಜನರು ವಲಸೆ ಬರುತ್ತಾರೆ? ಬರೇ ಧಾರ್ಮಿಕ ಕಿರುಕುಳ ಅಷ್ಟೇನಾ? ಈ ಎಲ್ಲದರ ಬಗ್ಗೆ ಕೂಡ ಉಲ್ಲೇಕಿಸಬಹುದಿತ್ತು