ಈಗ ಕೊಬ್ಬರಿಗೂ ಕಂಟಕ ಎದುರಾಗಿದೆ. ಕ್ವಿಂಟಲ್ ಕೊಬ್ಬರಿಗೆ ರೂ. 20 ಸಾವಿರ ಸಿಗುತ್ತಿದ್ದುದು, 7 ಸಾವಿರಕ್ಕೆ ಕುಸಿದಿದೆ. ಕೇಂದ್ರ ಸರ್ಕಾರದ 12 ಸಾವಿರಕ್ಕೆ ರಾಜ್ಯ ಸರ್ಕಾರ 1,500 ಸಾವಿರ ಸೇರಿಸಿ, ಖರೀದಿ ಕೇಂದ್ರಗಳಲ್ಲಿ ನೋಂದಣಿಗೆ ಅನುವು ಮಾಡಿಕೊಟ್ಟಿದೆ. ಆದರೆ ಅಧಿಕಾರಿಗಳ ಅಸಡ್ಡೆ, ಅವ್ಯವಸ್ಥೆಯಿಂದ ರೈತರು ಸರತಿ ಸಾಲಿನಲ್ಲಿ ಸೊರಗಿ, ಬಯಲಿನಲ್ಲಿಯೇ ಮಲಗುವಂತಾಗಿದೆ…
ಏಷ್ಯಾದಲ್ಲಿಯೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆಯನ್ನು ಹೊಂದಿರುವ ತಿಪಟೂರನ್ನು ಕಲ್ಪತರು ನಾಡು ಎನ್ನುತ್ತಾರೆ. ಬೇರೆ ಭಾಗದ ಕೊಬ್ಬರಿಗಿಂತಲೂ, ತಿಪಟೂರಿನ ಕೊಬ್ಬರಿಗೆ ಭಾರೀ ಬೇಡಿಕೆ ಇದೆ. ಇಲ್ಲಿನ ಮಣ್ಣು, ಆ ಮಣ್ಣಿನಲ್ಲಿ ಬೆಳೆಯುವ ತೆಂಗಿನ ಮರದ ಕೊಬ್ಬರಿಗೆ ವಿಶೇಷ ರುಚಿ ಇದೆ. ಹಾಗೆಯೇ ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಕೆಲ ಭಾಗವನ್ನು ತೆಂಗಿನ ನಾಡು ಎಂದೇ ಕರೆಯಲಾಗುತ್ತದೆ.
ಈ ಭಾಗದ ರೈತರನ್ನು ತೆಂಗು ಬೆಳೆ ಕಾಪಾಡಿದೆ. ಮಳೆ – ಬೆಳೆಯಾಗದಿದ್ದರೂ ಬದುಕನ್ನು ನೂಕಿದೆ. ಎಳನೀರು, ಕಾಯಿ, ಕೊಬ್ಬರಿ, ಎಡೆಮಟ್ಟೆ, ತೆಂಗಿನಗರಿ, ಕಾಯಿ ಸಿಪ್ಪೆ, ಕರಟ… ಎಲ್ಲದರಿಂದಲೂ ದುಡ್ಡಿದೆ. ಒಂದಲ್ಲ ಒಂದು ರೈತರ ಕೈ ಹಿಡಿದಿದೆ, ಕಾಪಾಡಿದೆ.
ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಬೋರ್ ವೆಲ್ ಕೊರೆಯುವುದರಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ, ನೀರಿನ ಒರತೆ ಬತ್ತಿಹೋಗಿದೆ, ತೆಂಗಿನ ಇಳುವರಿ ಕಡಿಮೆಯಾಗುತ್ತಲಿದೆ. ಜೊತೆಗೆ ತೆಂಗಿನ ಮರಕ್ಕೆ ಅಂಟುವ ನುಸಿ ರೋಗ, ಸುಳಿ ಕೊಳೆ ರೋಗ, ಎಲೆ ಚುಕ್ಕೆ ರೋಗ, ಕಾಂಡ ಸೋರುವ ರೋಗಗಳಿಂದಾಗಿ ಇಳುವರಿಯಲ್ಲಿ ಭಾರೀ ಏರುಪೇರು ಆಗಿದೆ.
ಇವುಗಳ ನಡುವೆಯೇ ಕಷ್ಟಪಟ್ಟು ಕಾಪಾಡಿಕೊಂಡ ತೆಂಗಿನ ಮರಗಳಿಂದ ಬಂದ ಇಳುವರಿಗೆ ಬೆಲೆಯೇ ಇಲ್ಲವಾಗಿದೆ. ಅದರಲ್ಲೂ ಕೊಬ್ಬರಿ ಕ್ವಿಂಟಲ್‌ಗೆ ರೂ. 7 ಸಾವಿರಕ್ಕಿಳಿದಿರುವುದು ರೈತರನ್ನು ಕಂಗಾಲಾಗಿಸಿದೆ. ಎಳನೀರು, ಕಾಯಿ ಬೆಲೆಯಲ್ಲಿ ಏರುಪೇರಾಗುವುದು ಸಹಜವಾಗಿತ್ತು. ಆದರೆ ಕೊಬ್ಬರಿ ಬೆಲೆ ಎಲ್ಲ ಕಾಲಕ್ಕೂ ಏರುಗತಿಯಲ್ಲಿಯೇ ಇತ್ತು, ರೈತರಿಗೆ ಉತ್ತಮ ಬೆಲೆ ಸಿಗುತ್ತಿತ್ತು.
ಈಗ ಕೊಬ್ಬರಿಗೂ ಕಂಟಕ ಎದುರಾಗಿದೆ. ಕ್ವಿಂಟಲ್ ಕೊಬ್ಬರಿಗೆ ರೂ. 20 ಸಾವಿರ ಸಿಗುತ್ತಿದ್ದುದು, 7 ಸಾವಿರಕ್ಕೆ ಕುಸಿದಿದೆ. ಒಂದು ಕ್ವಿಂಟಲ್ ಕೊಬ್ಬರಿಯ ಉತ್ಪಾದನಾ ವೆಚ್ಚವೇ ರೂ. 18,500 ಆಗುತ್ತದೆ. ಅಂಥದ್ದರಲ್ಲಿ, ಉತ್ಪಾದನಾವೆಚ್ಚದ ಅರ್ಧದಷ್ಟೂ ಇಲ್ಲವೆಂದರೆ, ರೈತರು ಬದುಕುವುದು ಹೇಗೆ? ಹೀಗಾಗಿಯೇ ಕೊಬ್ಬರಿ ಉತ್ಪಾದಿಸುವ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ 20 ಸಾವಿರವಾದರೂ ಕೊಡಿ ಎಂದು ಆಗ್ರಹಿಸುತ್ತಲೇ ಬಂದಿದ್ದಾರೆ. ಮೇಲಿಂದ ಮೇಲೆ ಪ್ರತಿಭಟನೆಗಳನ್ನು ಮಾಡಿ ಮನವಿ ಅರ್ಪಿಸಿದ್ದಾರೆ.
ರೈತರ ಆಗ್ರಹಕ್ಕೆ ಮಣಿದ ರಾಜ್ಯ ಸರ್ಕಾರ, ಕೇಂದ್ರ ಕೃಷಿ ವೆಚ್ಚ ಮತ್ತು ದರ ಆಯೋಗಕ್ಕೆ ಪತ್ರ ಬರೆದು ಕ್ವಿಂಟಲ್ ಬೆಲೆಯನ್ನು ರೂ. 16,730ಕ್ಕೆ ನಿಗದಿಪಡಿಸಬೇಕು ಎಂದು ಶಿಫಾರಸು ಮಾಡಿತ್ತು. ಬೆಂಬಲ ಬೆಲೆ ನಿಗದಿಪಡಿಸುವಾಗ ಸ್ವಾಮಿನಾಥನ್ ವರದಿ ಶಿಫಾರಸು ಮಾಡಲಾಗಿದೆ ಎಂಬುದನ್ನು ಉಲ್ಲೇಖಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರಾಜ್ಯ ಸರ್ಕಾರದ ಮನವಿಯನ್ನು ಕಸದ ಬುಟ್ಟಿಗೆ ಹಾಕಿ, ರೈತರ ಮನವಿಗಳಿಗೆ ಕಿವುಡಾಗಿ ಕೇವಲ ರೂ. 250 ಮಾತ್ರ ಹೆಚ್ಚಿಸಿದೆ. ಅಂದರೆ, ಈಗಾಗಲೇ ನಿಗದಿ ಮಾಡಿದ್ದ ರೂ. 11,750ಕ್ಕೆ ರೂ. 250ನ್ನು ಹೆಚ್ಚಿಗೆ ಮಾಡಿ, ಕ್ವಿಂಟಲ್ ಕೊಬ್ಬರಿಗೆ ರೂ. 12 ಸಾವಿರ ಮಾಡಿದೆ.
ಆದರೆ, ಅದೇ ಕೇಂದ್ರ ಸರ್ಕಾರ ಕಳೆದ ಏಳೆಂಟು ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳ 15 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನು ಬ್ಯಾಂಕ್‌ಗಳ ಮೂಲಕ ರೈಟ್ ಆಫ್ ಮಾಡಿದೆ. ಬಂಡವಾಳಶಾಹಿಗಳಿಗೆ ತೆರಿಗೆ ರಿಯಾಯಿತಿ ಜತೆಗೆ ಲಕ್ಷ ಕೋಟಿಗಳ ಲೆಕ್ಕದಲ್ಲಿ ಸಾಲ ಮನ್ನಾ ಮಾಡಿ, ರೈತರನ್ನು ನಿರ್ಲಕ್ಷಿಸಿದೆ.
ಈಗ ರಾಜ್ಯ ಸರ್ಕಾರ ತೆಂಗು ಬೆಳೆಗಾರರ ನೆರವಿಗೆ ಬಂದು, ಕೇಂದ್ರ ಸರ್ಕಾರ ನಿಗದಿ ಮಾಡಿರುವ ರೂ. 12 ಸಾವಿರಕ್ಕೆ ಹೆಚ್ಚುವರಿಯಾಗಿ 1,500 ರೂ. ನೀಡುವುದರೊಂದಿಗೆ ಕ್ವಿಂಟಲ್‌ಗೆ ಒಟ್ಟು 13,500 ರೂ. ಸಿಗುವಂತೆ ಮಾಡಿದೆ. ಮತ್ತು ಫೆ. 5ರಿಂದ ಪ್ರತಿ ಎಕರೆಗೆ 6 ಕ್ವಿಂಟಲ್ ಇಳುವರಿ ನಿಗದಿಪಡಿಸಿ, ಪ್ರತಿ ರೈತರಿಂದ 15 ಕ್ವಿಂಟಲ್‌ವರೆಗೆ ಖರೀದಿಸಲು ಸರ್ಕಾರ ಮುಂದಾಗಿದೆ. ಖರೀದಿ ಕೇಂದ್ರಗಳಲ್ಲಿ ರೈತರು ನೋಂದಣಿ ಮಾಡಿಕೊಳ್ಳಲು ತಿಳಿಸಿದೆ.
ನೋಂದಣಿ ಎಂದಾಕ್ಷಣ ರೈತರು ಎದ್ದುಬಿದ್ದು ಖರೀದಿ ಕೇಂದ್ರದತ್ತ ಧಾವಿಸಿದ್ದಾರೆ. ಆದರೆ ಎಪಿಎಂಸಿಯ ಖರೀದಿ ಕೇಂದ್ರಗಳಲ್ಲಿ ನೋಂದಣಿಗೆ ಬೇಕಾದ ಕಂಪ್ಯೂಟರ್, ಸರ್ವರ್, ನಿರಂತರ ಇಂಟರ್ನೆಟ್ ಮತ್ತು ವಿದ್ಯುತ್ ವ್ಯವಸ್ಥೆಯೇ ಇಲ್ಲ. ಸಿಬ್ಬಂದಿಗಳಿದ್ದಾರೆ, ಅವರಿಗೆ ಸೂಕ್ತ ತರಬೇತಿ ಇಲ್ಲ. ಸರ್ಕಾರದ ಮಾನದಂಡಗಳು ಗೊತ್ತಿಲ್ಲ. ರೈತರ ನೂಕುನುಗ್ಗಲನ್ನು ತಡೆಯುವ ಪೊಲೀಸರಿದ್ದಾರೆ, ತಡೆಯಲು ಶಕ್ತರಲ್ಲ.
ಚನ್ನರಾಯಪಟ್ಟಣದ ಹಿರೀಸಾವೆ, ನುಗ್ಗೇಹಳ್ಳಿ, ಅರಸೀಕೆರೆಯ ಬಾಣಾವರ, ಗಂಡಸಿ, ತಿಪಟೂರಿನ ಕೊನೆಹಳ್ಳಿ, ಕರಡಾಳುಗಳ ರೈತರು ಸೋಮವಾರ ತೆರೆಯುವ ಕಚೇರಿಗೆ ಭಾನುವಾರ ಮಧ್ಯಾಹ್ನದಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಬಿಸಿಲ ಬೇಗೆಗೆ ಬಳಲಿದಾಗ, ಸರತಿ ಸಾಲಿಗೆ ಕಲ್ಲು, ಚಪ್ಪಲಿ, ಚೀಲ ಇಟ್ಟು ನೆರಳಿನ ಆಶ್ರಯ ಪಡೆದಿದ್ದಾರೆ. ಕತ್ತಲಾಗುತ್ತಿದ್ದಂತೆ ಚಾಪೆ-ದಿಂಬು ತಂದು ಬಯಲಿನಲ್ಲಿಯೇ ಮಲಗಿದ್ದಾರೆ.
ದೇಶಕ್ಕೇ ಅನ್ನ ನೀಡುವ ರೈತ, ಪ್ರಾಣಿಗಳಿಗಿಂತಲೂ ಕಡೆಯಾಗಿ ಬಯಲಿನಲ್ಲಿ ಮಲಗುವ ಸ್ಥಿತಿ ಬಂದೊದಗಿದರೂ, ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಸೂಕ್ತ ವ್ಯವಸ್ಥೆ ಮಾಡಿದ್ದಿಲ್ಲ. ಸರ್ಕಾರ ಮುಂದಿನ 45 ದಿನಗಳ ವರೆಗೆ ಕೊಬ್ಬರಿ ನೋಂದಣಿ ಮತ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದರೂ, ಮಂಡಿ ವರ್ತಕರು ಮತ್ತು ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕುವವರಿಲ್ಲ. ಇಷ್ಟೆಲ್ಲ ಕೊರತೆಗಳ ನಡುವೆ ನೋಂದಣಿಯಾದರೂ, ತಕ್ಷಣಕ್ಕೆ ರೈತನ ಕೈಗೆ ಕಾಸು ಸಿಗುವ ಗ್ಯಾರಂಟಿ ಇಲ್ಲ. ಅಧಿಕಾರಿಗಳ ಅಸಡ್ಡೆ ರೈತರಲ್ಲಿ ವಿಶ್ವಾಸ ಹುಟ್ಟಿಸುತ್ತಿಲ್ಲ. ಸರ್ಕಾರ ಸರಿಯಿದ್ದರೂ, ಜಾರಿ ಮಾಡುವ ಅಧಿಕಾರಿಗಳು ಸರಿ ಇಲ್ಲವೆಂದರೆ, ಕೆಟ್ಟ ಹೆಸರು ತಪ್ಪಿದ್ದಲ್ಲ.
