ಮಂಡ್ಯ ಮತ್ತು ಮೈಸೂರು ರೈತರ ಆತ್ಮಹತ್ಯೆಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳು. ಹಣದುಬ್ಬರದಿಂದಾಗಿ ರಾಜ್ಯದ ರೈತರು, ಕಾರ್ಮಿಕರು, ಬಡವರು ಬದುಕು ಕಡುಕಷ್ಟಕರವಾಗಿದೆ. ಮೊದಲು ಅವರ ಬದುಕು ಹಸನಾಗಬೇಕು. ಬದುಕಿಗಿಂತ ಸಾಹಿತ್ಯ ದೊಡ್ಡದಲ್ಲ; ದಸರಾ ದೊಡ್ಡದಲ್ಲ. ಕನ್ನಡಿಗರ ಬದುಕು ಉಳಿದರೆ ಸಾಹಿತ್ಯ, ಕಲೆ ಎಲ್ಲವೂ ಉಳಿಯುತ್ತವೆ.
ರಾಜ್ಯದಲ್ಲಿ ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರಗಾಲದ ಲಕ್ಷಣಗಳು ಗೋಚರಿಸುತ್ತಿವೆ, ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ವಾಡಿಕೆಗಿಂತ ಅತಿ ಕಡಿಮೆ ಮಳೆ ಬಿದ್ದಿದೆ. ಜಲಾಶಯಗಳಲ್ಲಿ ನೀರಿನ ಕೊರತೆ, ಮಳೆಗಾಲದಲ್ಲೂ ಬೇಸಿಗೆಯ ವಾತಾವರಣ. ಆಹಾರ ಧಾನ್ಯ, ತರಕಾರಿ ಬೆಲೆಗಳು ಆಕಾಶಕ್ಕೇರಿ ಜನ ಪರಿತಾಪ ಪಡುತ್ತಿದ್ದಾರೆ.
ಇದರ ನಡುವೆಯೇ ನಾಡಹಬ್ಬ ದಸರಾ ಮತ್ತು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಬೇಕಾದ ರೀತಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇಂಥ ಸಂಕಷ್ಟದ ಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿರುವುದು ಒಂದಿಷ್ಟು ಸಮಾಧಾನದ ವಿಷಯ. ಅವು ಬೊಕ್ಕಸದ ದೊಡ್ಡ ಮೊತ್ತವನ್ನು ಬೇಡುವ ಯೋಜನೆಗಳು. ಹಾಗಾಗಿ ಈ ಬಾರಿ ಅನಗತ್ಯ ವೆಚ್ಚಗಳಿಗೆ, ಅದ್ದೂರಿ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕೆಂಬುದು ಸರ್ಕಾರದ ಇರಾದೆ. ಈ ಹಿನ್ನೆಲೆಯಲ್ಲಿಯೇ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಬೇಕೆನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶಯ. ಆದರೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್ ಸಿ ಮಹದೇವಪ್ಪನವರು ಈ ಬಾರಿ ಕಳೆದ ಬಾರಿಗಿಂತ ಅದ್ದೂರಿಯಾಗಿ ದಸರಾ ಹಬ್ಬವನ್ನು ಆಚರಿಸಲಾಗುತ್ತೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಇದು ನಿಜಕ್ಕೂ ಸಲ್ಲದ ನಡೆ. ಈ ವಿಚಾರದಲ್ಲಿ ಸಚಿವ ಎಚ್ ಸಿ ಮಹದೇವಪ್ಪನವರು ಮತ್ತೊಮ್ಮೆ ಯೋಚಿಸುವುದು ಅವಶ್ಯಕ.
ಮತ್ತೊಂದು ವಿಚಾರ, ಮಂಡ್ಯದಲ್ಲಿ ನಿಗದಿಯಾಗಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ್ದು. ಅದಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಶಿ ಪರಾಂಬರಿಸಿದ್ದಾರೆ. ಸಾರ್ವಜನಿಕರಿಗೆ ‘ಅವಕಾಶ ನೀಡಲಾಗಿದೆ’ ಎನ್ನುವುದು ಅವರ ಧಾರ್ಷ್ಟ್ಯವನ್ನು ತೋರುತ್ತದೆ. ಮಹೇಶ ಜೋಶಿಯವರು ಕಸಾಪ ಅಧ್ಯಕ್ಷರಾದಾಗಿನಿಂದಲೂ ಹೀಗೆಯೇ; 108 ವರ್ಷಗಳ ಇತಿಹಾಸವಿರುವ ಕನ್ನಡಿಗರ ಈ ಪ್ರಾತಿನಿಧಿಕ ಸಂಸ್ಥೆ ಸಲ್ಲದ ಕಾರಣಗಳಿಗೆ ಸುದ್ದಿಯಾಗುತ್ತಿದೆ.
ಜೋಶಿಯವರು ಕಸಾಪ ಅಧ್ಯಕ್ಷರಾಗಿ ಆಯ್ಕೆ ಆದ ತಕ್ಷಣ ಕಸಾಪ ಅಧ್ಯಕ್ಷರ ಹುದ್ದೆಯನ್ನು ಕ್ಯಾಬಿನೆಟ್ ದರ್ಜೆ ಸ್ಥಾನಮಾನಕ್ಕೆ ಏರಿಸಲಾಯಿತು. ಅದಾದ ನಂತರ ಜೋಶಿಯವರು ಪರಿಷತ್ತಿಗೆ ಸದಸ್ಯರಾಗಲು ವಿದ್ಯಾರ್ಹತೆ ಕಡ್ಡಾಯ ಮಾಡಲು ಹೊರಟಿದ್ದು ವಿವಾದವಾಗಿತ್ತು. ಅವರ ಪರಿವಾರವನ್ನು ಮಾತ್ರ ಸಾಹಿತ್ಯ ಪರಿಷತ್ತಿನಲ್ಲಿ ತುಂಬುವ ಹುನ್ನಾರ ಇದು ಎನ್ನುವ ವ್ಯಾಪಕ ಟೀಕೆ ವ್ಯಕ್ತವಾಯಿತು. ಅದರ ನಂತರ ನಡೆದದ್ದು ಸಾಹಿತ್ಯ ಸಮ್ಮೇಳನದ ಭಾನಗಡಿ.
ಚುನಾವಣೆಗೆ ಇನ್ನೇನು ಕೆಲವೇ ದಿನಗಳಿರುವಾಗ ಆಗಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರ ತವರು ಹಾವೇರಿಯಲ್ಲಿ ಅತ್ಯಂತ ಅದ್ಧೂರಿಯಾಗಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲಾಯಿತು. ಅದಕ್ಕೆ ವೆಚ್ಚವಾದ ಮೊತ್ತ ಬರೋಬ್ಬರಿ 25 ಕೋಟಿ ರೂಪಾಯಿ.
ಅದಕ್ಕೂ ಹಿಂದಿನ ಸಮ್ಮೇಳನಗಳಿಗೆ ಖರ್ಚಾಗಿದ್ದ ಮೊತ್ತಕ್ಕೆ ಹೋಲಿಸಿದರೆ, ಅದು ದಾಖಲೆಯ ವೆಚ್ಚದ ಸಮ್ಮೇಳನ. 83ನೇ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ರೂಪಾಯಿ, 84ನೇ ಸಾಹಿತ್ಯ ಸಮ್ಮೇಳನಕ್ಕೆ 10 ಕೋಟಿ ರೂಪಾಯಿ, 85ನೇ ಸಾಹಿತ್ಯ ಸಮ್ಮೇಳನಕ್ಕೆ 14 ಕೋಟಿ ರೂಪಾಯಿ ವೆಚ್ಚವಾಗಿತ್ತು. ಅದರ ನಂತರದ ಸಮ್ಮೇಳನಕ್ಕೆ 11 ಕೋಟಿ ರೂಪಾಯಿ ಹೆಚ್ಚಳ. ಕೋಟಿ ರೂಪಾಯಿ ಎನ್ನುವುದೇನು ಬರೀ ಸೊನ್ನೆಗಳ ಲೆಕ್ಕವೇ? ಸರ್ಕಾರದ ಪ್ರತಿ ಪೈಸೆಯೂ ಕನ್ನಡಿಗರ ಬೆವರಿನ ಫಲ.
ಹಾವೇರಿ ಸಮ್ಮೇಳನದಲ್ಲಿ ಊಟಕ್ಕೆ ಖರ್ಚಾಗಿದ್ದು 8 ಕೋಟಿ ರೂಪಾಯಿ. ಇನ್ನುಳಿದಂತೆ ಹೆಚ್ಚಿನ ಹಣ ಮೆರವಣಿಗೆಗೆ, ವೇದಿಕೆ ಸಿಂಗಾರಕ್ಕೆ ಹೀಗೆ ಅನಗತ್ಯವೆನ್ನಬಹುದಾದ ಬಾಬತ್ತುಗಳಿಗೆ ಖರ್ಚಾಗಿದೆ. ಇಷ್ಟೆಲ್ಲ ಖರ್ಚು ಮಾಡಿದ ನಂತರ ನಾಡಿನ ಸಾಹಿತ್ಯ, ಸಂಸ್ಕೃತಿಗೆ ಸಿಕ್ಕ ಪ್ರತಿಫಲವೇನು? ಸಮ್ಮೇಳನದ ಗೋಷ್ಠಿಗಳಲ್ಲಿ ಉಪನ್ಯಾಸಕರಿಗೆ ವಿಷಯ ಮಂಡಿಸಲು ನೀಡಿದ್ದ ಅವಧಿ 7 ನಿಮಿಷ. ಅಂದರೆ, ಜಾತ್ರೆಯೋಪಾದಿಯಲ್ಲಿ ಜನರನ್ನು ಸೇರಿಸಿ, ಭೂರಿ ಭೋಜನ ಮಾಡಿ, ಕೆಲವೇ ಕೆಲವರ ಹಿತಾಸಕ್ತಿಗೆ, ಮೇಜವಾನಿಗೆ ಸರ್ಕಾರದ ಹಣವನ್ನು ಧೂಳೀಪಟ ಮಾಡಿ ಸಮ್ಮೇಳನ ನಡೆಸಿದರು ಎನ್ನುವ ಟೀಕೆ ವ್ಯಕ್ತವಾಯಿತು.
ಸಾಹಿತ್ಯ ಸಮ್ಮೇಳನವೆಂದರೆ, ತಿಂದುಂಡು ತೇಗುವ ಹಬ್ಬವಲ್ಲ. ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಗಂಭೀರ ಚಿಂತನ ಮಂಥನ ನಡೆಯಬೇಕಾದ ಸ್ಥಳ. ಆದರೆ, ಸಮ್ಮೇಳನಗಳು ಯಾವತ್ತೋ ತಮ್ಮ ಅರ್ಥ ಮತ್ತು ಗುರಿಯನ್ನು ಕಳೆದುಕೊಂಡಿವೆ.
ಹಾವೇರಿ ಸಮ್ಮೇಳನ ನಡೆದದ್ದು 2023ರ ಜನವರಿಯಲ್ಲಿ. ಈಗ ಮತ್ತೆ ಮಂಡ್ಯದಲ್ಲಿ ಮತ್ತೊಂದು ಸಮ್ಮೇಳನ ನಡೆಸಲು ಕಸಾಪ ಮುಂದಾಗಿದೆ. ವಿಚಿತ್ರವೆಂದರೆ, ಇನ್ನೂ ಹಾವೇರಿ ಸಮ್ಮೇಳನದ ಖರ್ಚು ವೆಚ್ಚಗಳ ಲೆಕ್ಕವೇ ಚುಕ್ತಾ ಆಗಿಲ್ಲ. ಸಮ್ಮೇಳನಕ್ಕೆ ಹೆಚ್ಚುವರಿ ವೆಚ್ಚವಾಗಿರುವ ಐದು ಕೋಟಿ ರೂಪಾಯಿ ನೀಡುವಂತೆ ಹಾವೇರಿ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕೊಟ್ಟ 20 ಕೋಟಿಯಲ್ಲೇ ವೆಚ್ಚ ಸರಿದೂಗಿಸಿಕೊಳ್ಳಿ ಎಂದಿರುವ ಸಿದ್ದರಾಮಯ್ಯ ಸರ್ಕಾರ, ಹೆಚ್ಚುವರಿ ಹಣವನ್ನು ನೀಡಲಾಗದು ಎಂದು ಅವರ ಮನವಿ ತಿರಸ್ಕರಿಸಿದೆ. ಆದರೂ ಜಿಲ್ಲಾಧಿಕಾರಿಗಳು ಮತ್ತೆ ಪ್ರಸ್ತಾವ ಸಲ್ಲಿಸಿದ್ದಾರೆ. ಹೀಗೆ ಹಿಂದಿನ ಸಮ್ಮೇಳನದ ಖರ್ಚು ವೆಚ್ಚದ ಕಥೆಯೇ ಮುಗಿಯದಿರುವಾಗ, ಒಂದೇ ವರ್ಷದಲ್ಲಿ ಎರಡನೇ ಸಮ್ಮೇಳನ ಮಾಡಲು ಕಸಾಪ ಹೊರಟಿರುವುದೇಕೆ ಎನ್ನುವುದು ಅರ್ಥವಾಗದಂತಾಗಿದೆ. ಇದೇ ಹಿನ್ನೆಲೆಯಲ್ಲಿಯೇ ಕೆಲವು ಲೇಖಕರು ಮೂರು ವರ್ಷಗಳಿಗೊಮ್ಮೆ ಸಾಹಿತ್ಯ ಸಮ್ಮೇಳನ ನಡೆಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಅದು ಸಮಂಜಸವೂ ಆಗಿದೆ.
ರಾಜ್ಯದಲ್ಲಿ ಬರಗಾಲದ ಛಾಯೆ ಇದೆ. ಜೊತೆಗೆ ಸರ್ಕಾರ ಗ್ಯಾರಂಟಿಗಳಿಗಾಗಿ ಅಪಾರ ಮೊತ್ತದ ಹಣವನ್ನು ಸಂಚಯಿಸಬೇಕಾದ ಸ್ಥಿತಿಯಲ್ಲಿದೆ. ಗ್ಯಾರಂಟಿ ಯೋಜನೆಗಳು ಈ ಕಾಲದ ಅಗತ್ಯ. ಅದನ್ನು ನಿಲ್ಲಿಸಲಾಗದು. ಹೀಗಿರುವಾಗ ವರ್ಷಕ್ಕೆರಡು ಬಾರಿ ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಕೋಟಿ ಕೋಟಿ ಖರ್ಚು ಮಾಡುವುದು ಸಲ್ಲದು. ಹಾಗೆಯೇ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವುದೂ ಕೂಡ ಅನಗತ್ಯ ಖರ್ಚು ವೆಚ್ಚಗಳಿಗೆ ದಾರಿಯಾಗುತ್ತದೆ.
ಮಂಡ್ಯ ಮತ್ತು ಮೈಸೂರು ರೈತರ ಆತ್ಮಹತ್ಯೆಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳು. ಹಣದುಬ್ಬರದಿಂದಾಗಿ ರಾಜ್ಯದ ರೈತರು, ಕಾರ್ಮಿಕರು, ಬಡವರು ಬದುಕು ಕಡುಕಷ್ಟಕರವಾಗಿದೆ. ಮೊದಲು ಅವರ ಬದುಕು ಹಸನಾಗಬೇಕು. ಬದುಕಿಗಿಂತ ಸಾಹಿತ್ಯ ದೊಡ್ಡದಲ್ಲ. ಕನ್ನಡಿಗರ ಬದುಕು ಉಳಿದರೆ ಸಾಹಿತ್ಯ, ಕಲೆ ಎಲ್ಲವೂ ಉಳಿಯುತ್ತವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.
