ಹಿಂದು, ಹಿಂದುತ್ವ, ಹಿಂದೂಸ್ಥಾನವನ್ನು ತಲೆಯಲ್ಲಿಟ್ಟುಕೊಂಡು ಮೂರು ಮಕ್ಕಳನ್ನು ಹೆರಲು ಕರೆ ಕೊಡುವ ಭಾಗವತರು, ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು, ಬಡವರನ್ನು ಹಸಿವಿನಿಂದ ಮೇಲೆತ್ತಲು, ಎಲ್ಲರಿಗೂ ಸಮಾನ ಶಿಕ್ಷಣ ಮತ್ತು ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸಲು ಆಳುವ ಸರ್ಕಾರಕ್ಕೆ ಕಿವಿಮಾತು ಹೇಳಬಹುದಿತ್ತಲ್ಲವೇ?
‘ಭಾರತೀಯ ಸಮಾಜ ಉಳಿಯಬೇಕಾದರೆ ಪ್ರತಿ ದಂಪತಿ ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು’ ಎಂದು ಆರ್‍ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ನಾಗ್ಪುರದಲ್ಲಿ ನಡೆದ ‘ಕಥಲೆ ಕುಲ್ ಸಮ್ಮೇಳನ’ದಲ್ಲಿ ಮಾತನಾಡಿದ ಭಾಗವತ್, ಕೌಟುಂಬಿಕ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಜನಸಂಖ್ಯಾ ವಿಜ್ಞಾನದ ಪ್ರಕಾರ, ಭಾರತೀಯ ಸಮಾಜ, ಟಿಪಿಆರ್ (ಮಹಿಳೆ ತನ್ನ ಜೀವಿತಾವಧಿಯಲ್ಲಿ ಜನ್ಮ ನೀಡುವ ಮಕ್ಕಳ ಸರಾಸರಿ ಸಂಖ್ಯೆ) ಅಳಿವನ್ನು ಎದುರಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆರ್‍ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಈ ಕರೆ ಮತ್ತು ಎಚ್ಚರಿಕೆಯನ್ನು, ಸದ್ಯ ದೇಶ 142 ಕೋಟಿಗೂ ಮೀರಿ ಜನಸಂಖ್ಯಾ ಸ್ಫೋಟ ಸಂಭವಿಸುತ್ತಿರುವ ಸಂದರ್ಭದಲ್ಲಿ ಭಾರತೀಯ ಸಮಾಜ ಹೇಗೆ ಸ್ವೀಕರಿಸಬೇಕು ಎನ್ನುವುದೇ ಪ್ರಶ್ನೆಯಾಗಿದೆ. ಆ ಪ್ರಶ್ನೆಗೆ, ಆರ್‍ಎಸ್ಎಸ್ ಮತ್ತು ಬಿಜೆಪಿಯ ದ್ವಂದ್ವ ನಿಲುವುಗಳೇ ಉತ್ತರವನ್ನೂ ನೀಡುತ್ತಿವೆ.
ಹಿರಿಯರಾದ ಭಾಗವತ್ ಅವರು ಆರ್‍ಎಸ್ಎಸ್ ಮುಖ್ಯಸ್ಥರು. ಹೇಳಿಕೇಳಿ ಬ್ರಹ್ಮಚಾರಿಗಳು. ಅವರಿಗೆ ಮನೆ, ಮಡದಿ, ಮಕ್ಕಳಿಲ್ಲ. ಸಂಸಾರದ ಸಾಗರದಲ್ಲಿ ಈಜಿದವರಲ್ಲ, ಜಂಜಾಟದ ಜಾಡಿಗೆ ಬಿದ್ದವರಲ್ಲ, ಅದರ ಆಳ-ಅಗಲವೂ ಗೊತ್ತಿಲ್ಲ. ಅಂಥವರು ಹೆಚ್ಚು ಮಕ್ಕಳನ್ನು ಹೆರಲು ಕರೆ ಕೊಡುತ್ತಾರೆಂದರೆ, ದೇಶದ ವಾಸ್ತವಸ್ಥಿತಿಯ ಅರಿವಿಲ್ಲವೆಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಮಿತಿಮೀರಿದ ಜನಸಂಖ್ಯೆ, ದುಡಿಯುವ ಕೈಗಳಿಗಿಲ್ಲದ ಉದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರದ ಅರಿವಿದ್ದೂ ಮಾತನಾಡುತ್ತಿದ್ದಾರೋ ಅಥವಾ ಹೆಚ್ಚು ಮಕ್ಕಳನ್ನು ಹೆರುವುದು ಬಿಜೆಪಿಗೆ ಅನುಕೂಲವಾಗುತ್ತದೆಂದು ಭಾವಿಸಿದ್ದಾರೋ ಎಂಬ ಅನುಮಾನ ಕಾಡುತ್ತದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಳಿಗೆ ಬಂದ ಸರ್ಕಾರ: ಆಡಳಿತ ಚುರುಕುಗೊಳ್ಳಲಿ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿ
ಭಾಗವತ್ ಅವರು ಭಾರತೀಯ ಸಮಾಜಕ್ಕೆ ಕರೆ ಕೊಡುವ ಬದಲು, ಕಳೆದ ಹತ್ತು ವರ್ಷಗಳಿಂದ ದೇಶವನ್ನು ಆಳುತ್ತಿರುವ ತಮ್ಮದೇ ಪಕ್ಷವಾದ ಬಿಜೆಪಿ ನಾಯಕರಿಗೆ- ಮೋಶಾಗಳಿಗೆ ಬುದ್ಧಿ ಹೇಳಬಹುದಿತ್ತು. ಹಿಂದೂ ಪಕ್ಷವೇ ಅಧಿಕಾರದಲ್ಲಿದ್ದರೂ, ಹಿಂದೂಸ್ಥಾನವೇಕೆ ದಿಕ್ಕೆಟ್ಟ ಸ್ಥಿತಿಯಲ್ಲಿದೆ ಎಂದು ಪ್ರಶ್ನಿಸಬಹುದಿತ್ತು.
ಇದಾವುದನ್ನೂ ಕೇಳದಿರುವುದರಿಂದಲೇ ಅಥವಾ ಕೇಳಿಸಿಕೊಳ್ಳದಿರುವುದರಿಂದಲೇ ‘ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಮರು’ ಎಂದು ಪ್ರಧಾನಿ ಮೋದಿಯವರು ಯಾವ ಎಗ್ಗೂ ಇಲ್ಲದೆ ಮಾತನಾಡುತ್ತಿರುವುದು.
ಕಳೆದ ಲೋಕಸಭಾ ಚುನಾವಣೆಯ ವೇಳೆಯಲ್ಲಿ ರಾಜಸ್ಥಾನದಲ್ಲಿ ಮಾತನಾಡುತ್ತಾ ಮೋದಿಯವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಹಿಂದೂ ಹೆಣ್ಣುಮಕ್ಕಳಿಂದ ಮಂಗಳಸೂತ್ರಗಳು ಸೇರಿದಂತೆ ಚಿನ್ನವನ್ನು ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ’ ಎಂದು ಹೇಳಿದ್ದನ್ನು ನೆನಪು ಮಾಡಿಕೊಳ್ಳುವ ಅಗತ್ಯವಿದೆ.
ಏಕೆಂದರೆ, ಪ್ರಧಾನಿ ಮೋದಿಯವರ ಮಾತುಗಳನ್ನು ಬಿಜೆಪಿ ಭಕ್ತರ ತಂಡ ಸೋಷಿಯಲ್ ಮೀಡಿಯಾಗಳಲ್ಲಿ ಗೇಲಿಗೆ, ಟ್ರೋಲಿಗೆ ಬಳಸಿಕೊಂಡಿತ್ತು. ಆಗ ಆ ಸಮುದಾಯ ಅವಮಾನದಿಂದ ಕುಗ್ಗಿಹೋಗಿತ್ತು. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಮುಸ್ಲಿಮರೂ ಕೂಡ ಒಂದು, ಎರಡು ಮಕ್ಕಳನ್ನು ಹೊಂದುವತ್ತ ಮನಸ್ಸು ಮಾಡುತ್ತಿದ್ದಾರೆ. ಜೊತೆಗೆ ದೇಶದ ಪರಿಸ್ಥಿತಿಯೂ ಅವರನ್ನು ಅಂತಹ ಸ್ಥಿತಿಗೆ ತಳ್ಳಿದೆ. 2011ರ ಜನಸಂಖ್ಯಾ ಸಮೀಕ್ಷೆಯ ಪ್ರಕಾರ ಮುಸ್ಲಿಮರು 17.22 ಕೋಟಿ ಇದ್ದಾರೆ. ಅದು ಇಂದಿಗೆ 19.7 ಕೋಟಿಯಷ್ಟಿದೆ. ಶೇಕಡಾವಾರು ಲೆಕ್ಕದ ಪ್ರಕಾರ 13ರಿಂದ 15ರನ್ನು ದಾಟುವುದಿಲ್ಲ ಎಂದು 2023ರಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಸಚಿವೆ ಸ್ಮೃತಿ ಇರಾನಿಯವರು ಲೋಕಸಭೆಯಲ್ಲಿ, ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು. ಹೀಗಿದ್ದರೂ, ಪ್ರಧಾನಿ ಮೋದಿಯವರು, ‘ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಮರು’ ಎಂದು ಮಾತನಾಡುತ್ತಾರೆಂದರೆ; ಮೋದಿಯವರ ಮಾತು ಮಾಸುವ ಮುನ್ನವೇ, ಆರ್‍ಎಸ್ಎಸ್ ಮುಖ್ಯಸ್ಥ ಭಾಗವತ್ ಮೂರು ಮಕ್ಕಳನ್ನು ಹೆರಿ ಎಂದು ಕರೆ ಕೊಟ್ಟಿದ್ದಾರೆಂದರೆ; ಅವರ ಉದ್ದೇಶವೇನಿರಬಹುದು?
ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಮಕ್ಕಳ ಅಪೌಷ್ಟಿಕತೆ ಮತ್ತು ಕುಂಠಿತ ಬೆಳವಣಿಗೆಯ ಬಗ್ಗೆ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿಯವರು, ‘ದೇಶದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ 13.75 ಕೋಟಿ. ಅಪೌಷ್ಟಿಕತೆಯಿಂದ ಬೆಳವಣಿಗೆ ಕುಂಠಿತಗೊಂಡಿರುವ ಮಕ್ಕಳ ಪ್ರಮಾಣ ಶೇ. 35.7ರಷ್ಟು. ಹಾಗೆಯೇ ಶೇ. 32.1ರಷ್ಟು ಮಕ್ಕಳು ನಿಗದಿತ ಮಿತಿಗಿಂತ ಕಡಿಮೆ ತೂಕ ಹೊಂದಿದ್ದಾರೆ. ಶೇ. 19.3ರಷ್ಟು ಮಕ್ಕಳು ಎತ್ತರಕ್ಕೆ ಸಮನಾಗಿ ತೂಕ ಹೊಂದಿಲ್ಲ’ ಎಂದು ಉತ್ತರಿಸಿದ್ದಾರೆ. ಮತ್ತು ಅವರ ಉತ್ತರಕ್ಕೆ 2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವಿವರಗಳನ್ನು ಆಧಾರವಾಗಿಟ್ಟುಕೊಂಡಿದ್ದಾರೆ. ಈ ಅವಧಿಯಲ್ಲಿ ಅಧಿಕಾರದಲ್ಲಿದ್ದ ಪಕ್ಷ ಆರ್‍ಎಸ್ಎಸ್ ಪ್ರಣೀತ ಬಿಜೆಪಿಯೇ.
ಇದು ಏನನ್ನು ಸೂಚಿಸುತ್ತದೆ? ಇದಕ್ಕೆ ಕಾರಣರಾರು? ದೇಶವನ್ನು ಹತ್ತು ವರ್ಷಗಳಿಂದ ಆಳುತ್ತಿರುವ ಬಿಜೆಪಿಯಲ್ಲವೇ?
ಮೂರು ಮಕ್ಕಳನ್ನು ಹೆರಲು ಭಾಗವತರು ಕರೆ ಕೊಡುವ ಬದಲು, ದೇಶದ ಮಕ್ಕಳ ಸ್ಥಿತಿಗತಿ ಹೇಗಿದೆ ಎಂಬುದರತ್ತ ಯೋಚಿಸಬೇಕಾಗಿತ್ತಲ್ಲವೇ? ಮಕ್ಕಳ ಅಪೌಷ್ಟಿಕತೆ ಮತ್ತು ಕುಂಠಿತ ಬೆಳವಣಿಗೆಯ ಬಗ್ಗೆ ಸರ್ಕಾರದ ಕಿವಿ ಹಿಂಡಬಹುದಿತ್ತಲ್ಲವೇ?
ಆರ್‌ಎಸ್‌ಎಸ್ ತಾನು ರಾಜಕೀಯದಿಂದ ಆಚೆಗಿರುವ ಸಂಘಟನೆ ಎಂದು ಹೇಳಿಕೊಳ್ಳುತ್ತದೆಯಾದರೂ, ಬಿಜೆಪಿಯು ಆರ್‌ಎಸ್‌ಎಸ್‌ನ ರಾಜಕೀಯ ಅಂಗ ಎಂಬ ಮಾತನ್ನು ಹೊಸದಾಗಿ ಹೇಳಬೇಕಿಲ್ಲ. ಅಲ್ಲದೆ, ಬಿಜೆಪಿಗೆ ಸೈದ್ಧಾಂತಿಕ ತಳಹದಿಯನ್ನು ಹಾಕಿಕೊಟ್ಟಿದ್ದು ಹಾಗೂ ಸಂಘಟನಾ ಶಕ್ತಿಯನ್ನು ಒದಗಿಸುವುದು ಆರ್‌ಎಸ್‌ಎಸ್ ಎನ್ನುವುದು ಯಾರಿಗೂ ಗೊತ್ತಿಲ್ಲದ ವಿಚಾರವಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | 1991ರ ಕಾನೂನನ್ನು ಕಡೆಗಣಿಸುತ್ತವೆ ಧಾರ್ಮಿಕ ಸ್ಥಳಗಳ ಸಮೀಕ್ಷೆ ಮತ್ತು ದಾವೆಗಳು
ಹಿಂದು, ಹಿಂದುತ್ವ, ಹಿಂದೂಸ್ಥಾನವನ್ನು ತಲೆಯಲ್ಲಿಟ್ಟುಕೊಂಡು ಮೂರು ಮಕ್ಕಳನ್ನು ಹೆರಲು ಕರೆ ಕೊಡುವ ಭಾಗವತರು, ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು, ಬಡವರನ್ನು ಹಸಿವಿನಿಂದ ಮೇಲೆತ್ತಲು, ಎಲ್ಲರಿಗೂ ಸಮಾನ ಶಿಕ್ಷಣ ಮತ್ತು ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸಲು ಆಳುವ ಸರ್ಕಾರಕ್ಕೆ ಕಿವಿಮಾತು ಹೇಳಬಹುದಿತ್ತಲ್ಲವೇ?
ಮೋದಿ ಹಾಗೆ, ಭಾಗವತರು ಹೀಗೆ… ಏನೀ ಮಕ್ಕಳಾಟ?
