ಈ ದಿನ ಸಂಪಾದಕೀಯ | ಆನ್‌ಲೈನ್‌ ಗೇಮಿಂಗ್:‌ ಹದ್ದುಬಸ್ತಿನಲ್ಲಿಡುವುದು ಸಾಧ್ಯವೇ?

Date:

Advertisements
ಆನ್‌ಲೈನ್‌ ಗೇಮಿಂಗ್ ನಿಷೇಧ ಮೇಲ್ನೋಟಕ್ಕೇ ಮೋದಿ ಸರ್ಕಾರದ ಮಹತ್ವದ ನಡೆ ಎನಿಸುತ್ತದೆ. ಆದರೆ, ಆನ್‌ಲೈನ್ ಎನ್ನುವುದು ಆಕಾಶದಷ್ಟೇ ಆಳ-ಅಗಲವಿದೆ, ಅರಿಯುವುದು, ಹದ್ದುಬಸ್ತಿನಲ್ಲಿಡುವುದು ಕಷ್ಟವಿದೆ. ಈ ಕಾನೂನು ಕೂಡ ಇಡಿ, ಐಟಿ, ಸಿಬಿಐಗಳಂತೆ ಬಳಕೆಯಾಗಬಹುದೇ?   

ಚಿಕ್ಕಮಕ್ಕಳ ಕೈಯಲ್ಲೂ ಮೊಬೈಲ್‌ ಕುಣಿದಾಡುವ ಕಾಲವಿದು. ಆ ಮಕ್ಕಳು ಅದರಲ್ಲಿ ಏನು ನೋಡುತ್ತಾರೆ, ಏನು ಮಾಡುತ್ತಾರೆ ಎಂದು ಅರಿಯುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ಮಕ್ಕಳು ಒಬ್ಬರೇ ಇದ್ದಾಗ, ಇಡೀ ಜಗತ್ತೇ ಅವರ ಬೆರಳತುದಿಯಲ್ಲಿ ಬಿಚ್ಚಿಕೊಳ್ಳುವಾಗ- ಏನಾಗಲಿದೆ ಎಂಬುದು ಯಾರ ಊಹೆಗೂ ನಿಲುಕುವುದಿಲ್ಲ.

ಅದು ಆನ್‌ಲೈನ್‌ ಆಟವಾಗಿರಬಹುದು, ಪೋರ್ನ್‌ ಸೈಟ್‌ಗಳಾಗಿರಬಹುದು, ರೀಲ್ಸ್‌-ಮೀಮ್ಸ್‌ಗಳಾಗಿರಬಹುದು, ತಮಾಷೆಯ ವಿಡಿಯೋಗಳಾಗಿರಬಹುದು ಅಥವಾ ಬೇರಾವುದೇ ಆಗಿರಬಹುದು- ನೋಡುತ್ತ, ನೋಡುತ್ತ ಅಫೀಮಿನಂತೆ ಅಡಿಕ್ಟ್‌ ಆಗುತ್ತಾರೆ. ಅದರಿಂದ ಮಕ್ಕಳನ್ನು ಹೊರತರುವುದು ತುಂಬಾ ತ್ರಾಸದಾಯಕ ಕೆಲಸ.

ಅದರಲ್ಲೂ ಆನ್‌ಲೈನ್‌ ಗೇಮ್‌ಗಳ- ಮಕ್ಕಳಲ್ಲಿ ಥ್ರಿಲ್ಲಿಂಗ್ ಸೆನ್ಸೇಷನ್ ಕ್ರಿಯೇಟ್ ಮಾಡುವ ಆಟಗಳ ಸೆಳೆತಕ್ಕ ಸಿಕ್ಕ ಮಕ್ಕಳು ಬೇರೆಯದೇ ಗ್ರಹವಾಸಿಗಳಾಗಿ ಮಾರ್ಪಡುತ್ತಾರೆ. ಮುಂದುವರೆದು ಹಣ ಕಟ್ಟಿ ಆಡುವ ಜೂಜಾಟಕ್ಕಿಳಿಯುತ್ತಾರೆ. ತಮ್ಮ ಮನೆಯಲ್ಲಿ ತಾವೇ ಕದಿಯುವ ಕಳ್ಳರಾಗುತ್ತಾರೆ. ಸಾಲ ಮಾಡುತ್ತಾರೆ. ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಇಡೀ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುತ್ತಾರೆ. ಇಂತಹ ದಾರುಣ ಕತೆಗಳನ್ನು ಈಗ ನಾವು ಅಪರಾಧ ಸುದ್ದಿಯಾಗಿ ನೋಡುವ ಕಾಲದಲ್ಲಿದ್ದೇವೆ. ಆದರೆ, ಆ ಮಕ್ಕಳ ಪೋಷಕರ ಸಂಕಟ-ನೋವು-ನರಳಾಟ ನಮಗೆ ಕಾಣುವುದಿಲ್ಲ.

Advertisements

ಇದನ್ನು ಓದಿದ್ದೀರಾ?: ದಸರಾ | ಬಾನು ಮುಸ್ತಾಕ್‌ಗೆ ವಿರೋಧ; ಮಹಿಳಾ ವಿರೋಧಿಗಳ ಹಳಹಳಿಕೆ

ನಮ್ಮ ರಾಜ್ಯದಲ್ಲಿಯೇ ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಪ್ರಕರಣಗಳನ್ನು ಗಮನಿಸುವುದಾದರೆ: ದಾವಣಗೆರೆ ನಗರದ 25 ವರ್ಷದ ಶಶಿಕುಮಾರ್ ಎಂಬಾತ ಆನ್‌ಲೈನ್ ಗೇಮ್‌ ಚಟಕ್ಕೆ ಬಿದ್ದು 18 ಲಕ್ಷ ಕಳೆದುಕೊಂಡಿದ್ದ. ತನ್ನ ಸ್ನೇಹಿತರು, ಸಂಬಂಧಿಕರಿಂದ ಸಾಲ ಮಾಡಿದ್ದ. ಅವರು ಕೇಳಿದಾಗ, ಕೊಡಲಾಗದ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ.

ಬೆಂಗಳೂರಿನ ವಿಜಯನಗರದ ಮಲ್ಲಿಕಾರ್ಜುನ್ ಎಂಬ ಲ್ಯಾಬ್ ಟೆಕ್ನಿಷಿಯನ್ ಆನ್‌ಲೈನ್ ರಮ್ಮಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಕಳೆದುಕೊಂಡು ಸಾಲಗಾರರ ಕಾಟ ತಾಳಲಾರದೆ, ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ. ಮೈಸೂರಿನ ರಾಮನಹಳ್ಳಿಯ ಜೋಬಿ ಆಂಟನಿ ಐಪಿಎಲ್, ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ 24 ಗಂಟೆಗಳ ಅವಧಿಯಲ್ಲಿ 80 ಲಕ್ಷ ಹಣವನ್ನು ಕಳೆದುಕೊಂಡಿದ್ದ. ಸಾಲಗಾರರ ಕಿರುಕುಳ ತಾಳಲಾಗದೆ, ಜೋಶಿ, ಜೋಬಿ ಆಂಟನಿ, ಪತ್ನಿ ಶರ್ಮಿಳಾ- ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದರು.

ಕಲಬುರಗಿಯ 23 ವರ್ಷದ ವಿದ್ಯಾರ್ಥಿಯೊಬ್ಬ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್‌ನಲ್ಲಿ ಹಣ ಕಟ್ಟಿ, ಸಾಲದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೋಣಗಾಪುರದ 22 ವರ್ಷದ ಸೋಮನಾಥ ಚಿದ್ರೆ ಜಿಮ್ಸ್ ಆಸ್ಪತ್ರೆಯ ನರ್ಸಿಂಗ್ ಕೋರ್ಸ್‌ನ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ. ಆನ್‌ಲೈನ್‌ನಲ್ಲಿ ಆಟ ಆಡುವುದರಲ್ಲಿ ನಿರತನಾಗಿದ್ದ. ಇದರಿಂದ ಹೊರಬರಲಾಗದೆ ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ.

ಈ ರೀತಿಯ ಕತೆಗಳನ್ನು ಹೇಳುವುದು ಸಲಭ. ಆದರೆ ಹೊಸಕಾಲದ ಆನ್‌ಲೈನ್ ಜೂಜಾಟದ ಆಳ-ಅಗಲ ಅರಿಯುವುದು ಬಹಳ ಕಷ್ಟ. ಬಹುತೇಕ ಪ್ರಕರಣಗಳಲ್ಲಿ, ಆತ್ಮಹತ್ಯೆಗೆ ಕಾರಣವಾಗಿರುವುದು ಆನ್‌ಲೈನ್ ಗೇಮಿಂಗ್‌ನಿಂದ ಉಂಟಾದ ಬಹಳ ದೊಡ್ಡ ಸಾಲದ ಭಾರ ಮತ್ತು ಒತ್ತಡ. ಆತ್ಮಹತ್ಯೆಗೊಳಗಾದವರ ಕುಟುಂಬಗಳು ತಮ್ಮ ಉಳಿತಾಯ, ಆಸ್ತಿ ಕಳೆದುಕೊಂಡು, ಮತ್ತಷ್ಟು ಸಾಲ ಮಾಡಿ, ಇಡೀ ಬದುಕನ್ನು ಸಾಲದಲ್ಲಿಯೇ ಸವೆಸುತ್ತಿರುವ ಉದಾಹರಣೆಗಳೂ ಇವೆ.

2023ರಿಂದ 2025ರವರೆಗೆ ಕರ್ನಾಟಕದಲ್ಲಿ ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ 32 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಆತ್ಮಹತ್ಯೆಗೆ ಶರಣಾದವರಲ್ಲಿ ಹೆಚ್ಚಿನವರು, ನನಗಾಗಿದ್ದು ಮತ್ಯಾರಿಗೂ ಆಗದಿರಲಿ ಎಂದು ಡೆತ್‌ ನೋಟ್‌ ಬರೆದಿಟ್ಟಿದ್ದಾರೆ. ಇದರಿಂದ ಎಚ್ಚೆತ್ತ ಕರ್ನಾಟಕ ಸರ್ಕಾರ ಆನ್‌ ಲೈನ್‌ ಗೇಮಿಂಗ್‌ ಗೆ ನಿಷೇಧ ಹೇರಿತು. ಆದರೆ ಗೇಮಿಂಗ್‌ ನಡೆಸುವ ಕೆಲವೊಂದು ಕಂಪನಿಗಳು ಕೋರ್ಟ್‌ ಮೆಟ್ಟಿಲು ಹತ್ತಿದವು. ಆನ್‌ಲೈನ್ ಗೇಮಿಂಗ್‌ಗೆ ನಿಷೇಧ ಹೇರಿದ್ದ ಕರ್ನಾಟಕ ಪೊಲೀಸ್ ಕಾಯ್ದೆಯ ಕೆಲವು ಷರತ್ತುಗಳನ್ನು ಹೈಕೋರ್ಟ್ ರದ್ದುಗೊಳಿಸಿತು. ಇದರಿಂದ ನಿಯಂತ್ರಿಸುವುದು ಕಷ್ಟವಾಯಿತು. ಆದರೂ, ರಾಜ್ಯ ಸರ್ಕಾರ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಇದು ಕರ್ನಾಟಕದ ಕತೆ ಮಾತ್ರವಲ್ಲ, ಇಡೀ ದೇಶದಲ್ಲಿ ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗೆ ಆನ್‌ಲೈನ್ ಗೇಮಿಂಗ್‌ ಚಟಕ್ಕೆ ಬೀಳುತ್ತಿದ್ದಾರೆ. ಬದುಕನ್ನು ಬರಿದು ಮಾಡಿಕೊಳ್ಳುತ್ತಿದ್ದಾರೆ. ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳು ಮತ್ತು ರಿಯಲ್ ಮನಿ ಗೇಮ್‌ಗಳು ಈಗ ಉದ್ಯಮದ ರೂಪ ಪಡೆದಿವೆ. ಸರ್ಕಾರಕ್ಕೆ ವಾರ್ಷಿಕ 25 ಸಾವಿರ ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸುತ್ತಿವೆ. 2 ಲಕ್ಷ ಜನರಿಗೆ ಉದ್ಯೋಗ ನೀಡಿವೆ. ಕೋಟ್ಯಂತರ ರೂಪಾಯಿಗಳ ವಿದೇಶಿ ಹೂಡಿಕೆ ಹರಿದು ಬರುತ್ತಿದೆ. ಡ್ರೀಮ್‌11, ರಮ್ಮಿ, ವಿಂಜೋನಂತಹ ದೊಡ್ಡ ಕಂಪನಿಗಳಲ್ಲಿ ದೊಡ್ಡವರೇ ಬಂಡವಾಳ ಹೂಡಿದ್ದಾರೆ, ರಾಜಕೀಯ ಪ್ರಭಾವವನ್ನು ಬಳಸುವವರಾಗಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಾಲವೆಂಬ ಗಾಲಿಯಡಿ ಡಿ.ಕೆ.ಶಿ.; ಏಳುವರೇ, ಬೀಳುವರೇ?

ಆದರೂ, ಕೇಂದ್ರದ ಮೋದಿ ಸರ್ಕಾರ ಆನ್‌ಲೈನ್‌ ಗೇಮಿಂಗ್‌ಗೆ ನಿಯಂತ್ರಣ ಹೇರಲು ಮುಂದಾಗಿದೆ. ಸಚಿವ ಸಂಪುಟದ ಅನುಮೋದನೆ ಬೆನ್ನಲ್ಲೇ ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ಅನ್ನು ಮಂಡಿಸಿದೆ. ಇದು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳು ಮತ್ತು ರಿಯಲ್ ಮನಿ ಗೇಮ್‌ಗಳ ಮೂಲಕ ಹಣವನ್ನು ಪಣಕ್ಕಿಟ್ಟು ಆಡುವ ಆಟ- ಅದು ಕೌಶಲ್ಯದ ಆಟವೇ ಆಗಿರಲಿ ಅಥವಾ ಅದೃಷ್ಟದ ಆಟವೇ ಆಗಿರಲಿ- ಅಂತಹ ಆಟಗಳನ್ನು ನಿಷೇಧಿಸುವುದಾಗಿದೆ. ಇಂತಹ ಆಟಗಳ ಪರ ಸೆಲೆಬ್ರಿಟಿಗಳ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಟಿವಿ, ಡಿಜಿಟಲ್, ಮುದ್ರಣ ಮಾಧ್ಯಮಗಳಲ್ಲಿ ಇನ್ನುಮುಂದೆ ಆನ್‌ಲೈನ್‌ ಮನಿ ಗೇಮ್‌ಗಳ ಪ್ರಚಾರ ಮಾಡದಂತೆ ಎಚ್ಚರಿಸಲಾಗಿದೆ. ಜೊತೆಗೆ ಬ್ಯಾಂಕ್‌ಗಳು ಇತರ ಹಣಕಾಸು ಸಂಸ್ಥೆಗಳ ಮೂಲಕ ಅಕ್ರಮ ಹಣ ವರ್ಗಾವಣೆಗೂ ನಿಯಂತ್ರಣ ಹೇರಲಾಗಿದೆ. ಕಾನೂನನ್ನು ಉಲ್ಲಂಘಿಸಿದವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರೂಪಾಯಿವರೆಗೆ ದಂಡ ವಿಧಿಸಬಹುದು ಎಂದು ಕಾನೂನು ಹೇಳುತ್ತದೆ.

ಲೋಕಸಭೆಯಲ್ಲಿ ಐಟಿ ಸಚಿವ ಅಶ್ವಿನಿ ವೈಷ್ಣವ್‌ ಅವರು ಮಂಡಿಸಿದ ಬಿಲ್‌ ಗದ್ದಲದ ನಡುವೆ ಯಾವುದೇ ಚರ್ಚೆಯಿಲ್ಲದೇ ಪಾಸ್‌ ಆಗಿದೆ. ಈಗ ರಾಜ್ಯಸಭೆಯಲ್ಲಿಯೂ ಈ ಮಸೂದೆ ಅನುಮೋದನೆಗೊಂಡರೆ, ರಾಷ್ಟ್ರಪತಿಗಳ ಅಂಕಿತ ಬೀಳಲಿದೆ. ದೇಶಾದ್ಯಂತ ಇದು ಕಾನೂನಾಗಿ ಜಾರಿಗೆ ಬರಲಿದೆ.

ಮೇಲ್ನೋಟಕ್ಕೇ ಇದು ಮೋದಿ ಸರ್ಕಾರದ ಮಹತ್ವದ ನಡೆ ಎನಿಸುತ್ತದೆ. ಬಡ-ಮಧ್ಯಮವರ್ಗದ ಮಕ್ಕಳನ್ನು ಜೂಜಾಟದಿಂದ ಬಚಾವು ಮಾಡುವಂತೆ ಕಾಣುತ್ತದೆ. ಆದರೆ, ಆನ್‌ಲೈನ್ ಎನ್ನುವುದು ಆಕಾಶದಷ್ಟೇ ಆಳ-ಅಗಲವಿದೆ, ಅರಿಯುವುದು, ಹದ್ದುಬಸ್ತಿನಲ್ಲಿಡುವುದು ಕಷ್ಟವಿದೆ. ಅದಕ್ಕಿಂತಲೂ ಹೆಚ್ಚಾಗಿ ಅದೀಗ ಕೋಟಿಗಟ್ಟಲೆ ವಹಿವಾಟುಳ್ಳ ಉದ್ಯಮವಾಗಿದೆ. ಅದರಲ್ಲಿ ಎಲ್ಲ ಪಕ್ಷಗಳ ಪ್ರಭಾವಿಗಳ ಪಾಲುದಾರಿಕೆಯೂ ಇದೆ. ಹಾಗಾಗಿ ಈ ಕಾನೂನು ಕೂಡ ಕಾಟಾಚಾರದ ಕಾನೂನಾಗಿ; ಇಡಿ, ಐಟಿ, ಸಿಬಿಐಗಳಂತೆ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಅಸ್ತ್ರವಾಗುತ್ತದಾ, ಕಾದು ನೋಡಬೇಕಿದೆ.   

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಕೆಂಪುಕೋಟೆಯಲ್ಲಿ ನಿಂತು ಮೋದಿ ಆರ್‌ಎಸ್‌ಎಸ್‌ಅನ್ನು ಹೊಗಳುವ ದರ್ದು ಏನು?

ಪ್ರಧಾನಿ ಮೋದಿಯವರು, ತಮ್ಮ ವೈಯಕ್ತಿಕ ಮತ್ತು ಸಾಂಸ್ಥಿಕ ಲಾಭಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯ...

ಈ ದಿನ ಸಂಪಾದಕೀಯ | ಮೊಟ್ಟೆಗೆ ವಿರೋಧ; ಬಡ ಮಕ್ಕಳ ಆಹಾರದ ಸ್ವಾತಂತ್ರ್ಯಕ್ಕೆ ಕೊಕ್ಕೆ

ಮಂಡ್ಯದ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯ ವಿಚಾರದಲ್ಲಿ 84 ಮಕ್ಕಳ ಪೋಷಕರು...

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

Download Eedina App Android / iOS

X