ಸಮುದಾಯಗಳ ಸಂಖ್ಯಾಬಲವನ್ನು ಆಧರಿಸಿ ರಾಜಕೀಯ ಅಧಿಕಾರ ಮತ್ತು ಸಂಪತ್ತಿನ ವಿತರಣೆ ವಿಷಯದಲ್ಲಿ ಸ್ಪಷ್ಟತೆ ಸಿಗುವುದೇ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಗಳಿಂದ. ಆಯಕಟ್ಟಿನ ಜಾಗಗಳಲ್ಲಿ ಕೂತ ಪ್ರಬಲ ಜಾತಿಗಳ ಪ್ರಭಾವಿಗಳು ದುರ್ಬಲರನ್ನು ಪೋಷಿಸಬೇಕೇ ಹೊರತು ಶೋಷಿಸಬಾರದು. ಹಾಗೆಯೇ ಕರ್ನಾಟಕದ ಪ್ರಜ್ಞಾವಂತರು, ಸಾಮಾಜಿಕ ನ್ಯಾಯದ ಪರವಾಗಿರುವವರು, ಕರ್ನಾಟಕ ಸರ್ಕಾರ ಜಾತಿ ಗಣತಿಯ ವರದಿ ಸಾರ್ವಜನಿಕಗೊಳಿಸುವಂತೆ ಒತ್ತಡ ತರಬೇಕೇ ಹೊರತು, ವಿರೋಧಿಸಬಾರದು.
”ಜಾತಿ ಗಣತಿ ಮಾಡಿ ಏನು ಉಪಯೋಗ. ಇದರಿಂದ ಕಾಂಗ್ರೆಸ್ಸಿನವರು ಏನು ಸಾಧನೆ ಮಾಡುತ್ತಾರೆ. ಜನರ ಮಧ್ಯೆ ದ್ವೇಷ ಬಿತ್ತಲು, ಸಮಾಜವನ್ನು ಒಡೆಯಲು ಈ ಜಾತಿ ಗಣತಿ ಮಾಡುತ್ತಿದ್ದಾರೆʼʼ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಟೀಕಿಸಲು, ಸಿದ್ದರಾಮಯ್ಯನವರನ್ನು ದ್ವೇಷಿಸಲು ಕುಮಾರಸ್ವಾಮಿಯವರಿಗೆ ನೂರೆಂಟು ಕಾರಣಗಳಿರಬಹುದು. ಅವರ ಮೂಗಿನ ನೇರಕ್ಕೆ ಅವೆಲ್ಲ ಸಕಾರಣವಾಗಿರಲೂಬಹುದು. ಆದರೆ ‘ಜಾತಿ ಗಣತಿ ಮಾಡಿ ಏನು ಉಪಯೋಗ’ ಎನ್ನುವ ಕುಮಾರಸ್ವಾಮಿಯವರ ಪ್ರಶ್ನೆ, ಅವರ ಬಾಲಿಶತನವನ್ನು ಬಯಲುಗೊಳಿಸಿದೆ. ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರೂ, ಸಂವಿಧಾನದ ಸೊಗಸನ್ನು ಅರಿಯದ ಅರಿವುಗೇಡಿ ಎನ್ನಲು ಅನುವು ಮಾಡಿಕೊಡುತ್ತದೆ.
ಹಾಗೆಯೇ ‘ಜಾತಿ ಗಣತಿ ಮಾಡಿ ಏನು ಉಪಯೋಗ’ ಎನ್ನುವ ಕುಮಾರಸ್ವಾಮಿಯವರ ಹೇಳಿಕೆಯ ಹಿಂದೆ ಬಹುಸಂಖ್ಯಾತ, ಬಲಾಢ್ಯ ಒಕ್ಕಲಿಗ ಜಾತಿ ಅಹಂಕಾರವಿದೆ. ಅದಕ್ಕೆ ಮಾಜಿ ಪ್ರಧಾನಮಂತ್ರಿಗಳ ಪುತ್ರರಾಗಿರುವುದು, ಶಾಸಕರಾಗಿ ಗೆದ್ದ ಮೊದಲ ಬಾರಿಗೇ ಮುಖ್ಯಮಂತ್ರಿಯಾಗಿದ್ದು, ಅಪರಿಮಿತ ಆಸ್ತಿಗಳ ಒಡೆಯರಾಗಿ ಯಾರನ್ನು ಬೇಕಾದರೂ ಖರೀದಿಸಬಲ್ಲೆ, ಯಾವ ಸರ್ಕಾರವನ್ನಾದರೂ ಕೆಳಗಿಸಬಲ್ಲೆ ಎಂಬುದೆಲ್ಲವೂ ತಳಕು ಹಾಕಿಕೊಂಡಿದೆ.
ಮೇಲ್ಜಾತಿ ಜನಕ್ಕೆ, ಅದರಲ್ಲೂ ಭೂಮಿಯ ಒಡೆತನ ಹೊಂದಿರುವ ಫ್ಯೂಡಲ್ ಜಾತಿಯ ಜನಕ್ಕೆ ತಮಗಿಂತ ಕೆಳಗಿರುವ ಜಾತಿಯ ಜನ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎನ್ನುವುದು ತುಟಿಯಂಚಿನ ಮಾತೇ ಹೊರತು, ಆಂತರ್ಯದ ತುಡಿತವಲ್ಲ. ಅದರಲ್ಲೂ ರಾಜಕಾರಣಿಗಳು ಸಾರ್ವಜನಿಕವಾಗಿ ಆಡುವ ಮಾತುಗಳು ಆ ಕ್ಷಣಕ್ಕೆ, ಆ ವೇದಿಕೆಗೇ ಹೊರತು ಆಗುಮಾಡುವ ಹಂಬಲವಲ್ಲ. ಕೆಳಜಾತಿಯ ಜನ ಎಲ್ಲ ಕಾಲಕ್ಕೂ ತಮ್ಮ ಕಾಲಕೆಳಗಿರಬೇಕು, ಗುಲಾಮರಾಗಿರಬೇಕು, ನಡುಬಗ್ಗಿಸಿ ನಡೆದುಕೊಳ್ಳಬೇಕು ಎಂದು ಬಯಸುವ ಜನ ಇವರು. ಇನ್ನು ಈ ಕೆಳವರ್ಗದ ಜನ ರಾಜಕೀಯವಾಗಿ ಮುಂದೆ ಬರುವುದನ್ನು, ಅಧಿಕಾರ ರಾಜಕಾರಣದ ಭಾಗವಾಗುವುದನ್ನು ಸಹಿಸುವುದು ಸಾಧ್ಯವೇ?
ಹಾಗೆ ಸಹಿಸಿದವರು, ಸಮ ಸಮಾಜದ ಕನಸು ಕಂಡವರು ದೇವರಾಜ ಅರಸು ಮಾತ್ರ. ಅರಸು ಅಧಿಕಾರಕ್ಕೇರಿದ ಆರೇ ತಿಂಗಳಲ್ಲಿ, 1972ರಲ್ಲಿ ಬೇಡ ಸಮುದಾಯದ ಮೇಧಾವಿ ವಕೀಲ ಎಲ್.ಜಿ ಹಾವನೂರ್ ನೇತೃತ್ವದಲ್ಲಿ ಹಾವನೂರು ಆಯೋಗ ರಚಿಸಿದ್ದರು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಗುರುತಿಸಿ ಪ್ರತಿಯೊಂದು ಜಾತಿಯ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸಿ, ಅಧ್ಯಯನ ನಡೆಸಿ ನಿರ್ಣಾಯಕ ಮಾನದಂಡಗಳನ್ನು ರೂಪಿಸಿ, ಅವರ ಉನ್ನತಿಗಾಗಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸ್ಸು ಮಾಡಲು ಸೂಚಿಸಿದ್ದರು.
ಆದರೆ ಹಾವನೂರ್ ಆಯೋಗದ ವರದಿಯಿಂದ ಏನಾಗುತ್ತದೆ ಎಂಬುದನ್ನು ಗ್ರಹಿಸಿದ್ದ, ರಾಜಕೀಯ ಅಧಿಕಾರವನ್ನು, ಸರಕಾರಿ ಸವಲತ್ತನ್ನು ನಿರಂತರವಾಗಿ ಅನುಭವಿಸುತ್ತಿದ್ದ ಮೇಲ್ಜಾತಿಯ ಪಟ್ಟಭದ್ರರಿಗೆ ಕೆಳಜಾತಿಗಳ ಸಬಲೀಕರಣ ನುಂಗಲಾರದ ತುತ್ತಾಯಿತು. ಇನ್ನುಮುಂದೆ ನಮ್ಮ ಆಟ ನಡೆಯುವುದಿಲ್ಲವೆಂದು ಭಾವಿಸಿ, ಲಿಂಗಾಯತರು, ಒಕ್ಕಲಿಗರು ಮತ್ತು ಬ್ರಾಹ್ಮಣರು ಒಂದಾದರು. ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡರು. ಹಾವನೂರರು ಅಪಾರ ಪರಿಶ್ರಮ ಹಾಕಿ ಸಂಗ್ರಹಿಸಿದ್ದ ಮಾಹಿತಿಯನ್ನೇ ಕದಿಯಲಾಯಿತು. ಹತ್ಯೆಯ ಮಾತುಗಳೂ ಕೇಳಿ ಬಂದವು. ಅಂದು ಪ್ರತಿಪಕ್ಷದ ನಾಯಕರಾಗಿದ್ದವರು ಎಚ್.ಡಿ ದೇವೇಗೌಡರು. ಈ ಬೆಳವಣಿಗೆಗಳನ್ನು ಅವರು ನಿಚ್ಚಳ ನುಡಿಗಳಲ್ಲಿ ಖಂಡಿಸಿದ ವರದಿಗಳಿಲ್ಲ.
ಹಾಗೆಯೇ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ವೆಂಕಟಸ್ವಾಮಿ ಆಯೋಗ ರಚನೆಯಾಯಿತು. ಆಯೋಗ ವರದಿಯನ್ನೂ ನೀಡಿತು, ಆದರೆ ಅದನ್ನು ಜಾರಿಗೆ ತರಬಾರದೆಂದು ಅವರ ಸರಕಾರದಲ್ಲೇ ಇದ್ದ ಮುಂದುವರಿದ ಜಾತಿಯ ಸಚಿವರನ್ನೆಲ್ಲ ಸೇರಿಸಿ ವಿರೋಧ ವ್ಯಕ್ತಪಡಿಸಿದ್ದವರು ಇದೇ ಎಚ್.ಡಿ ದೇವೇಗೌಡರು ಎಂಬುದನ್ನು ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರು ಹೇಳಿದ್ದೂ ಇದೆ.
ಇವತ್ತು ಕಾಂಗ್ರೆಸ್ ಪಕ್ಷ ನೇಮಿಸಿದ್ದ ಕಾಂತರಾಜ ಆಯೋಗದ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿರುವವರು ಅದೇ ಮೇಲ್ಜಾತಿಯ, ಅದೇ ದೇವೇಗೌಡರ ಪುತ್ರ ಕುಮಾರಸ್ವಾಮಿಯವರು. ಹಾಗಾಗಿ ಈ ಜಾತಿ ಗಣತಿ, ಮೀಸಲಾತಿ ವಿಷಯ ಬಂದಾಗಲೆಲ್ಲ ಮೇಲ್ಜಾತಿಯ ಜನ ವಿರೋಧಿಸಿದ್ದನ್ನು, ತಳಸಮುದಾಯಗಳಿಗೆ ವಂಚಿಸಿದ್ದನ್ನು ಕರ್ನಾಟಕ ಕಂಡಿದೆ.
ʻಕಾಂಗ್ರೆಸ್ ಜಾತ್ಯತೀತ ಎನ್ನುತ್ತಾರೆ. ಜಾತಿ ಗಣತಿ ವರದಿ ಇಟ್ಟುಕೊಂಡು ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಲು ಹೊರಟಿದ್ದಾರೆʼ ಎಂದಿದ್ದಾರೆ ಕುಮಾರಸ್ವಾಮಿಯವರು. ಜಾತ್ಯತೀತ ಎಂದರೆ ಜಾತಿ ಇಲ್ಲದ ಸಮಾಜವಲ್ಲ; ಎಲ್ಲ ಜಾತಿ-ಜನಾಂಗಗಳನ್ನು ಸಮಾನವಾಗಿ ಕಾಣುವುದು. ಜಾತ್ಯತೀತಕ್ಕೂ ಜಾತಿ ಗಣತಿಗೂ ಸಂಬಂಧವಿಲ್ಲ; ಅದು ಸಂವಿಧಾನದ ಆಶಯವನ್ನು ಆಗುಮಾಡುವ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಸಂಬಂಧಿಸಿದ್ದು. ಜಾತಿ ಗಣತಿ ಅಗತ್ಯ ಇರುವುದು ಸಂಖ್ಯಾಬಲ ಇಲ್ಲದ, ದನಿ ಇಲ್ಲದ ಸಣ್ಣಪುಟ್ಟ ಜಾತಿಗಳಿಗೆ, ಅವಕಾಶ ವಂಚಿತ ಸಮುದಾಯಗಳಿಗೆ. ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಸೇರಿದಂತೆ ಪ್ರಬಲ-ಪ್ರಭಾವಿ ಜಾತಿಗಳಿಗಲ್ಲ.
ಇದನ್ನು ಓದಿದ್ದೀರಾ?: ‘ಈ ದಿನ’ ಸಂಪಾದಕೀಯ | ಗುಜರಾತನ್ನು ಮೆರೆಸಲು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮುಳುಗಿಸಿತೇ ಬಿಸಿಸಿಐ?
ಬಹುಸಂಖ್ಯಾತರು, ಬಲಾಢ್ಯರೇ ಎಲ್ಲ ನಿರ್ಧರಿಸುವಾಗ ಜಾತಿ ಗಣತಿಗಳ ಅಗತ್ಯವಿದೆ. ಸಮುದಾಯಗಳ ಸಂಖ್ಯಾಬಲವನ್ನು ಆಧರಿಸಿ ರಾಜಕೀಯ ಅಧಿಕಾರ ಮತ್ತು ಸಂಪತ್ತಿನ ವಿತರಣೆ ವಿಷಯದಲ್ಲಿ ಸ್ಪಷ್ಟತೆ ಸಿಗುವುದೇ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಗಳಿಂದ. ಆಯಕಟ್ಟಿನ ಜಾಗಗಳಲ್ಲಿ ಕೂತ ಪ್ರಬಲ ಜಾತಿಗಳ ಪ್ರಭಾವಿಗಳು ದುರ್ಬಲರನ್ನು ಪೋಷಿಸಬೇಕೇ ಹೊರತು ಶೋಷಿಸಬಾರದು. ಹಾಗೆಯೇ ಕರ್ನಾಟಕದ ಪ್ರಜ್ಞಾವಂತರು, ಸಾಮಾಜಿಕ ನ್ಯಾಯದ ಪರವಾಗಿರುವವರು, ಕರ್ನಾಟಕ ಸರ್ಕಾರ ಜಾತಿ ಗಣತಿಯ ವರದಿ ಸಾರ್ವಜನಿಕಗೊಳಿಸುವಂತೆ ಒತ್ತಡ ತರಬೇಕೇ ಹೊರತು, ವಿರೋಧಿಸಬಾರದು.
