ಅಧಿಕಾರದ ಹಗ್ಗ ಜಗ್ಗಾಟವು ಪಕ್ಷದ ನಾಯಕತ್ವವನ್ನು ಅಲ್ಲಾಡಿಸದಿದ್ದರೂ, ಆಡಳಿತವನ್ನು ಹಳಿತಪ್ಪಿಸದೇ ಇರುವುದಿಲ್ಲ. ಸಹಜವಾಗಿಯೇ ಅದು ಆರಿಸಿ ಕಳಿಸಿದ ಜನತೆಗೆ ಒಳಿತನ್ನೂ ಮಾಡುವುದಿಲ್ಲ. ಸರ್ಕಾರ ಇದ್ದೂ ಸತ್ತಂತಲ್ಲವೇ?
ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿದೇಶಕ್ಕೆ ತೆರಳುವ ಮುನ್ನ ಆಯ್ದ ಆಪ್ತ ಪತ್ರಕರ್ತರಿಗೆ ಫೋನಾಯಿಸಿ, ‘ಸಂಕ್ರಾಂತಿ ಹಬ್ಬದೊಳಗೆ ಯಾರ್‍ಯಾರು ಏನೇನು ಆಟ ಆಡ್ತರೋ… ನೋಡ್ತಿರಿ’ ಎಂಬ ಸಂದೇಶ ರವಾನಿಸಿದ್ದರಂತೆ.
ಅಂದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದ ಹಗ್ಗ ಜಗ್ಗಾಟದ ಮುನ್ಸೂಚನೆ ಮೊದಲೇ ಮೂಗಿಗೆ ಬಡಿದಿತ್ತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ, ರಾಜಕಾರಣದ ಪಡಸಾಲೆಯಲ್ಲಿ ಗುಂಪುಗಾರಿಕೆ, ಜಾತಿ ಸಭೆಗಳು, ಚರ್ಚೆಗಳು ಗರಿಗೆದರುತ್ತವೆ ಎಂಬ ಸುಳಿವಿತ್ತು ಎಂಬುದನ್ನೂ ಹೇಳುತ್ತದೆ.
ಡಿ.ಕೆ. ಶಿವಕುಮಾರ್ ಅಂದುಕೊಂಡಂತೆಯೇ, ಅವರು ಅತ್ತ ವಿದೇಶಕ್ಕೆ ತೆರಳುತ್ತಿದ್ದಂತೆ ಇತ್ತ ರಾಜ್ಯದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸೇರಿ ಕೆಲ ಸಚಿವರು, ಶಾಸಕರನ್ನೊಳಗೊಂಡ ಅಹಿಂದ ಸಭೆ- ಔತಣಕೂಟದ ನೆಪದಲ್ಲಿ ಜರುಗಿದೆ. ಅಲ್ಲಿ ಮೊದಲ ಬಾರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಅಧಿಕಾರ ಹಂಚಿಕೆ ಕುರಿತು ನೇರವಾಗಿ ಮಾತನಾಡದಿದ್ದರೂ, ಸುಳಿವು ಬಿಟ್ಟುಕೊಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಿದ್ದರಾಮಯ್ಯನವರು ಕೊಟ್ಟ ಸುಳಿವಿಗೆ ಸಂಬಂಧಿಸಿದಂತೆಯೇ, ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಚರ್ಚೆ ಮುನ್ನೆಲೆಗೆ ಬಂದಿದೆ. ಅದು ನೇರವಾಗಿ ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿದೆ. ಸದ್ಯಕ್ಕೆ ಅವರು ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಖಾತೆ ಸಚಿವರೂ ಆಗಿದ್ದಾರೆ. ಸಾಲದೆಂದು ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರೆದಿದ್ದಾರೆ. ಒಬ್ಬರಿಗೆ ಒಂದು ಹುದ್ದೆಗೆ ಅವರನ್ನು ಸೀಮಿತಗೊಳಿಸಿ, ತೆರವಾಗುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರುವುದು, ಆ ಮೂಲಕ 2028ರಲ್ಲಿ ಮುಖ್ಯಮಂತ್ರಿಯಾಗುವುದು ಸತೀಶ್ ಜಾರಕಿಹೊಳಿಯವರ ದುರಾಲೋಚನೆಯಾಗಿದೆ.
ಅದಾದ ನಂತರ, ಹಸ್ತಕ್ಷೇಪದ ವಿಚಾರ. ಇತ್ತೀಚೆಗೆ ಬೆಳಗಾವಿ ಸುವರ್ಣಸೌಧದಲ್ಲಾದ ಸಿ.ಟಿ. ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಪ್ರಕರಣದಲ್ಲಿ ಬೆಳಗಾವಿ ಉಸ್ತುವಾರಿ ಸಚಿವರನ್ನೇ ಸೈಡಿಗೆ ಸರಿಸಿ ಪೊಲೀಸರಿಗೆ ಮಾರ್ಗದರ್ಶನ ನೀಡಿದ್ದು ಚರ್ಚೆಯಾಗಿದೆ. ಅದು ಸತೀಶ್ ಜಾರಕಿಹೊಳಿಗೆ ಜಿಲ್ಲೆಯ ಮೇಲಿನ ಹಿಡಿತ ಕೈತಪ್ಪುವ ಸೂಚನೆಯಂತೆ ಕಂಡಿದೆ. ಈ ಹಿಂದೆ ಇದೇ ರೀತಿ, ಸಹೋದರ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಹಗ್ಗ ಜಗ್ಗಾಟದಲ್ಲಿ; ಲಕ್ಷ್ಮೀ ಪರ ಡಿಕೆ ವಕಾಲತ್ತು ವಹಿಸಿದ್ದು, ಸಿಡಿ ಕೇಸಲ್ಲಿ ರಮೇಶ್ ಜಾರಕಿಹೊಳಿ ಸಿಲುಕಿಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿದ್ದು ಹಾಗೂ ರಾಜಕಾರಣದಿಂದ ದೂರ ಸರಿಯುವಂತಾಗಿದ್ದು- ತಳಕು ಹಾಕಿಕೊಂಡಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಾವೋವಾದಿಗಳು ಮುಖ್ಯವಾಹಿನಿಗೆ ಮರಳುತ್ತಿರುವುದು ಸ್ವಾಗತಾರ್ಹ
ಬೆಳಗಾವಿ ಪೊಲೀಸರಿಗೆ ಮಾರ್ಗದರ್ಶನ ನೀಡಿದ್ದಕ್ಕೆ ಸತೀಶ್ ಜಾರಕಿಹೊಳಿ ಸೆಟಗೊಂಡಿದ್ದರೆ; ಅದೇ ಕಾರಣಕ್ಕೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್, ‘ನನ್ನನ್ನೇ ಕಡೆಗಣಿಸಿ ಸೂಚನೆ ನೀಡುವುದಾದರೆ, ನಾನ್ಯಾಕೆ ಗೃಹ ಸಚಿವನಾಗಿರಬೇಕು’ ಎಂದು ಸಿಟ್ಟಾಗಿದ್ದಾರೆ. ಇಬ್ಬರೂ ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿರುವುದಕ್ಕೆ ಬೇಸರಗೊಂಡಿದ್ದಾರೆ. ಒಂದಾಗಿದ್ದಾರೆ. ಅದು ಸಹಜವಾಗಿಯೇ ಸಿದ್ದರಾಮಯ್ಯನವರ ಅಹಿಂದಕ್ಕೆ ಬಲ ತುಂಬಿದಂತೆ ಕಾಣತೊಡಗಿದೆ.
ಇಷ್ಟೆಲ್ಲ ಆದಮೇಲೆ, ಔತಣಕೂಟದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಆ ಸಭೆಯಲ್ಲಿ ರಾಜಕೀಯ ಏನೂ ಚರ್ಚೆ ಆಗಿಲ್ಲ. ಮಾಧ್ಯಮದಲ್ಲಿ ಬಂದಿರುವಂತೆ ಅಲ್ಲಿ ಏನೂ ನಡೆದಿಲ್ಲ. ನೀವು ಊಹೆ ಮಾಡಿ ಬರೆದರೆ ಏನು ಮಾಡುವುದು. ಊಹೆ ತುಂಬಾ ಅಪಾಯ. ನಡೆಯುವುದೇ ಬೇರೆ ಊಹಿಸಿಕೊಳ್ಳುವುದೇ ಬೇರೆ’ ಎಂದು ತೇಲಿಸಿದ್ದಾರೆ.
ಈತನ್ಮಧ್ಯೆ, ಸಚಿವ ಸತೀಶ್ ಜಾರಕಿಹೊಳಿ ಮನೆ ಔತಣಕೂಟದ ನಂತರ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಚಿವರು, ಶಾಸಕರನ್ನು ಕರೆದು, ತಮ್ಮ ಮನೆಯಲ್ಲಿ ಔತಣಕೂಟ ಏರ್ಪಡಿಸಿದ್ದಾರೆ.
ಕುತೂಹಲಕರ ಸಂಗತಿ ಎಂದರೆ, ಈ ಎಲ್ಲ ರಾಜಕೀಯ ಬೆಳವಣಿಗೆಗಳು ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ಇಲ್ಲದಾಗ ನಡೆದಿವೆ. ಬೆಂಗಳೂರಿಗೆ ಬರುತ್ತಿದ್ದಂತೆ, ಮಾಧ್ಯಮಗಳು ಶಿವಕುಮಾರ್ ಸುತ್ತುವರೆದು ಪ್ರಶ್ನೆಗಳ ಸುರಿಮಳೆ ಸುರಿಸಿದರೆ, ‘ರಾಜಕಾರಣದಲ್ಲಿ ಔತಣಕೂಟ ಸರ್ವೇಸಾಮಾನ್ಯ. ಎಲ್ಲರೂ ಊಟಕ್ಕೆ ಸೇರಿದರೆ ತಪ್ಪೇನು’ ಎಂದು ಪ್ರಶ್ನಿಸಿದವರನ್ನೇ ಪ್ರಶ್ನಿಸಿದ್ದಾರೆ. ಸಭೆ ಸೇರಿದವರನ್ನೇ ಸಮರ್ಥಿಸಿಕೊಂಡಿದ್ದಾರೆ.
ಈ ನಡೆ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಚಾಣಾಕ್ಷತೆಗೆ ಹಿಡಿದ ಕನ್ನಡಿಯಂತೆ ಕಾಣುತ್ತಿದೆ. ಹಾಗೆಯೇ ಈ ನಡೆಗೆ ವ್ಯತಿರಿಕ್ತವಾಗಿ, ಹೈಕಮಾಂಡ್ ಸಂಪರ್ಕಿಸಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮನೆಯಲ್ಲಿ ವ್ಯವಸ್ಥೆಯಾಗಿದ್ದ ಔತಣಕೂಟಕ್ಕೆ ತಡೆಯೊಡ್ಡಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?
ಔತಣಕೂಟ ರದ್ದಾಗಿದ್ದರ ಬಗ್ಗೆ ಪರಮೇಶ್ವರ್, ‘ಡಿನ್ನರ್ ಬಗ್ಗೆ ಏನೇನೋ ವ್ಯಾಖ್ಯಾನ ಮಾಡಲಾಗುತ್ತಿದೆ. ಎಸ್‌ಸಿ, ಎಸ್‌ಟಿ ಸಮಾವೇಶದ ಕುರಿತು ಚರ್ಚೆ ಮಾಡಲು ಸಭೆ ಕರೆದಿದ್ದೆ. ಒಂದು ವೇಳೆ ಸಭೆ ಮಾಡಿದರೆ ಸಹಿಸುವುದಿಲ್ಲ ಅಂತ ಯಾರಾದರು ಹೇಳಿದರೆ ಅದಕ್ಕೆ ಸರಿಯಾಗಿ ಉತ್ತರ ಕೊಡುತ್ತೇವೆ. ಆ ಶಕ್ತಿ ನಮಗಿದೆ’ ಎಂದು, ಅವರ ವ್ಯಕ್ತಿತ್ವಕ್ಕೆ ಮೀರಿದ ಮಾತುಗಳನ್ನಾಡಿದ್ದಾರೆ. ಆ ತಕ್ಷಣವೇ ಸಚಿವ ಕೆ.ಎನ್. ರಾಜಣ್ಣರನ್ನು ಭೇಟಿ ಮಾಡಿ ಮುಂದಿನ ನಡೆಗಳ ಬಗ್ಗೆ ಚರ್ಚಿಸಿದ್ದಾರೆ.
ಈ ಎಲ್ಲ ರಾಜಕೀಯ ಬೆಳವಣಿಗೆಗಳ ನಡುವೆಯೇ, ನಿನ್ನೆ ಐದು ಗಂಟೆಗೆ ಕೆಪಿಸಿಸಿ ಕಚೇರಿಯ ಪತ್ರಿಕಾಗೋಷ್ಠಿಗೆ ಡಿಸಿಎಂ ಡಿ.ಕೆ. ಶಿವಕುಮಾರ್, ಅಕ್ಕಪಕ್ಕ ಸತೀಶ್ ಜಾರಕಿಹೊಳಿ ಮತ್ತು ಪರಮೇಶ್ವರ್ ಅವರನ್ನೇ ಕೂರಿಸಿಕೊಂಡು, ‘ನಮ್ಮಲ್ಲಿ ಯಾವ ಭಿನ್ನಾಬಿಪ್ರಾಯಗಳೂ ಇಲ್ಲ’ ಎಂದಿದ್ದಾರೆ. ಅವರಿಬ್ಬರೂ ಉಸಿರೆತ್ತದೆ ಉಗುಳು ನುಂಗಿದ್ದಾರೆ.
ಸಾಲದು ಎಂದು ಗೃಹ ಖಾತೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಮೇಶ್ವರ್ ಅವರನ್ನು ದೇವರ ಮಟ್ಟಕ್ಕೆ ಏರಿಸಿ ಹೊಗಳಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಪಾಲ್ಗೊಂಡಿದ್ದ ಚಾಮರಾಜಪೇಟೆ ಪೊಲೀಸ್ ಠಾಣೆ ಉದ್ಘಾಟನೆ ಮತ್ತು ನಕ್ಸಲೀಯರ ಶರಣಾಗತಿ ಸಭೆಯಲ್ಲೂ ಕಾಣಿಸಿಕೊಂಡಿದ್ದಾರೆ. ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾದ ಸಹನೆ ಪ್ರದರ್ಶನ ಮಾಡಿದ್ದಾರೆ.
ಪಕ್ಷ ಸಂಘಟನೆ, ಚುನಾವಣಾ ಉಸ್ತುವಾರಿ, ಸಮಸ್ಯೆ ನಿವಾರಣೆ, ಪಾರ್ಟಿ ಫಂಡ್ ಎಂದಾಗ ಡಿ.ಕೆ. ಶಿವಕುಮಾರ್‍ರತ್ತ ನೋಡುವುದು; ಹಸ್ತಕ್ಷೇಪ, ದರ್ಬಾರು, ದಬ್ಬಾಳಿಕೆ ಹೆಚ್ಚಾದಾಗ ಹದ್ದುಬಸ್ತಿನಲ್ಲಿಡಲು ಹವಣಿಸುವುದು- ಕಾಂಗ್ರೆಸ್ಸಿನ ರೋಗವಾಗಿದೆ.
ಅಸಲಿಗೆ, ಸಿದ್ದರಾಮಯ್ಯನವರು ಮತ್ತು ಡಿ.ಕೆ. ಶಿವಕುಮಾರ್ ನಡುವೆ ಯಾವ ರೀತಿ ಅಧಿಕಾರ ಹಂಚಿಕೆಯಾಗಿದೆ, ಏನು ಮಾತುಕತೆಯಾಗಿದೆ ಎಂದು ಹೇಳಬೇಕಾದ ಹೈಕಮಾಂಡ್, ಮಹಾರಾಷ್ಟ್ರ-ಹರಿಯಾಣ ಸೋತು ಸುಸ್ತಾಗಿ ಕೂತಿದೆ. ಮಾಧ್ಯಮಗಳು ಊಹಾತ್ಮಕ ಸುದ್ದಿಗಳನ್ನು ಸೃಷ್ಟಿಸುತ್ತ ಜನರನ್ನು ದಾರಿ ತಪ್ಪಿಸುತ್ತಿವೆ.
ಒಟ್ಟಿನಲ್ಲಿ ಅಧಿಕಾರದ ಹಗ್ಗ ಜಗ್ಗಾಟವು ಪಕ್ಷದ ನಾಯಕತ್ವವನ್ನು ಅಲ್ಲಾಡಿಸದಿದ್ದರೂ, ಆಡಳಿತವನ್ನು ಹಳಿತಪ್ಪಿಸದೇ ಇರುವುದಿಲ್ಲ. ಸಹಜವಾಗಿಯೇ ಅದು ಆರಿಸಿ ಕಳಿಸಿದ ಜನತೆಗೆ ಒಳಿತನ್ನೂ ಮಾಡುವುದಿಲ್ಲ. ಸರ್ಕಾರ ಇದ್ದೂ ಸತ್ತಂತಲ್ಲವೇ?
