ರಾಜಕಾರಣದತ್ತ ಮುಖ ಮಾಡುವ ಯುವಜನತೆಗೆ; ಮೆರೆಯುತ್ತಿರುವ ಕುಟುಂಬರಾಜಕಾರಣದ ಕುಡಿಗಳಿಗೆ; ಪ್ರಾದೇಶಿಕ ಪಕ್ಷವನ್ನು ಬಲಿಕೊಟ್ಟ ಅನೈತಿಕ ರಾಜಕಾರಣಕ್ಕೆ ಪ್ರಜ್ವಲ್ ಪ್ರಕರಣ ದೊಡ್ಡ ಪಾಠ. ಅಹಂಕಾರದ ಮೊಟ್ಟೆಯಂತಿರುವ ಪ್ರಜ್ವಲ್ ಪಾಠ ಕಲಿಯದಿರಬಹುದು. ಆದರೆ ಪ್ರಜ್ವಲ್‌ರನ್ನು ಪೋಷಿಸಿದವರು ಖಂಡಿತ ಕಲಿಯುತ್ತಾರೆ.
ಇಂದು, ಜುಲೈ 5, ಪ್ರಜ್ವಲ್ ರೇವಣ್ಣ ಜನ್ಮದಿನ. 35ಕ್ಕೆ ಕಾಲಿಡುತ್ತಿರುವ ಪ್ರಜ್ವಲ್, ಈ ವಯಸ್ಸಿಗೇ ಕಾಣಬಾರದ್ದನ್ನೆಲ್ಲ ಕಂಡು, ಮಾಡಬಾರದ್ದನ್ನೆಲ್ಲ ಮಾಡಿ, ಜೀವಾವಧಿ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದಾರೆ.
ಕೇವಲ ಆರು ವರ್ಷಗಳ ಕೆಳಗೆ, 2019ರ ಲೋಕಸಭಾ ಚುನಾವಣೆಯಲ್ಲಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳಾಗಿ ಹಾಸನದಿಂದ ಮಾಜಿ ಮಂತ್ರಿ ಎಚ್.ಡಿ. ರೇವಣ್ಣರ ಪುತ್ರ ಪ್ರಜ್ವಲ್ ರೇವಣ್ಣ, ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿತ್ತು. ಅದು ಸಹಜವಾಗಿಯೇ ಗೌಡರ ಕುಟುಂಬಪ್ರೇಮ ಮತ್ತು ವಂಶಪಾರಂಪರ್ಯ ರಾಜಕಾರಣ ಕುರಿತ ಟೀಕೆಗಳಿಗೆ ಎಡೆಮಾಡಿಕೊಟ್ಟಿತ್ತು. ಪಕ್ಷಕ್ಕಾಗಿ ಬೆವರು ಸುರಿಸಿದ ಕಾರ್ಯಕರ್ತರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಆಗ ಹಾಸನಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ‘…ಬೆಳಗಿನಿಂದ ಮಾಧ್ಯಮಗಳಲ್ಲಿ ದೇವೇಗೌಡ, ರೇವಣ್ಣ, ಕುಮಾರಸ್ವಾಮಿ ಮತ್ತು ಅವರ ಪುತ್ರರ ಬಗ್ಗೆ ಹಲವು ಆರೋಪಗಳಿವೆ. ತಮ್ಮ ವಿರುದ್ಧದ ವಂಶಪಾರಂಪರ್ಯ ರಾಜಕಾರಣದ ಆರೋಪಗಳಿಂದ ನೋವಾಗಿದೆ’ ಎಂದು ನೆರೆದ ಜನರೆದುರು ಕಣ್ಣೀರು ಹಾಕಿದ್ದರು. ಆ ಕಣ್ಣೀರಿನ ಮೂಲಕ ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಪ್ರತಿಷ್ಠಾಪಿಸುವ, ಹಾಸನವನ್ನು ಪರಂಪರಾಗತವಾಗಿ ಆಳುವ ಆಸೆ ಈಡೇರಿಸಿಕೊಂಡಿದ್ದರು.
ಇದನ್ನು ಓದಿದ್ದೀರಾ?: ಗಾಜಾದ ಮಾನವೀಯ ದುರಂತಕ್ಕೆ ಜಗತ್ತಿನ ನಿರ್ಲಜ್ಜ ಕುರುಡು-ಮೌನ
ಜನಸ್ತೋಮದೆದುರು ನಿಂತು, ‘ನೋಡಿ, ಯುವನಾಯಕ ಪ್ರಜ್ವಲ್ ಮೆರಿಟ್ ವಿದ್ಯಾರ್ಥಿ. ಎಂಜಿನಿಯರಿಂಗ್ ಓದಬೇಕು ಅಂದ. ಫಾರಿನ್‌ಗೆ ಕಳಿಸಬಹುದಿತ್ತು. ಆದ್ರೆ, ಅವನು ಇಲ್ಲೇ ಮಾಡ್ತೀನಿ ಅಂದ. ಈಗ ನಿಮ್ಮ ಸೇವೆ ಮಾಡ್ತೀನಿ ಅಂತಿದಾನೆ, ಒಂದು ಅವಕಾಶ ಮಾಡಿಕೊಡಿ’ ಎಂದು ದೈನ್ಯದಿಂದ ಕೈ ಮುಗಿದು ಬೇಡಿಕೊಂಡರು. ಹಾಸನದ ಜನ ಗೌಡರ ಕಣ್ಣೀರಿಗೆ ಕರಗಿದರು, ಪ್ರಜ್ವಲ್ ಗೆಲ್ಲಿಸಿ ದಿಲ್ಲಿಗೆ ಕಳುಹಿಸಿಕೊಟ್ಟರು.
ಅದೇ ವೇದಿಕೆಯ ಮೇಲೆ, ವಿಧೇಯ ವಿದ್ಯಾರ್ಥಿಯಂತೆ ಗೌಡರ ಪಕ್ಕದಲ್ಲಿ ನಿಂತಿದ್ದ ಪ್ರಜ್ವಲ್‌ಗೆ, ಗೌಡರ ಕಣ್ಣೀರು ಮತ್ತು ಕರುಣಾಜನಕ ಸ್ಥಿತಿ ಬೇರೆಯದೇ ಸಂದೇಶ ರವಾನಿಸಿದ್ದವು. ಅಸಲಿಗೆ ಪ್ರಜ್ವಲ್ ಮೆರಿಟ್ ವಿದ್ಯಾರ್ಥಿ ಆಗಿರಲಿಲ್ಲ. ಮೊದಲು ಆರ್.ವಿ ಕಾಲೇಜು ಸೇರಿ, ಫೇಲಾಗಿ ಆನಂತರ ಬಿಐಟಿ(ಒಕ್ಕಲಿಗರ ಸಂಘದ ಕಾಲೇಜು) ಸೇರಿ, ಹೇಗೋ ಪಾಸು ಮಾಡಿದ್ದರು.
ಈ ಸತ್ಯ ದೊಡ್ಡಗೌಡರಿಗೆ ಗೊತ್ತಿತ್ತು. ಗೊತ್ತಿದ್ದೂ ಗೌಡರು ಸಾರ್ವಜನಿಕವಾಗಿ ಸುಳ್ಳು ಹೇಳಿದ್ದರು. ಪ್ರಜ್ವಲ್‌ಗೆ ರಾಜಕಾರಣದಲ್ಲಿ ಸುಳ್ಳು ಹೇಳುವುದು ಸಹಜ, ತಾತ ಮಾಡಿದ್ದು ತಪ್ಪಲ್ಲ ಎನ್ನಿಸಿತು.
ಪ್ರಜ್ವಲ್ ರೇವಣ್ಣ ಚುನಾವಣಾ ಆಯೋಗಕ್ಕೆ ಪ್ರಮಾಣ ಪತ್ರ ಸಲ್ಲಿಸುವಾಗ ಬೆಂಗಳೂರು ಮೂಲದ ಕಂಪನಿಗೆ ಹಣ ಹೂಡಿಕೆ ಮಾಡಿದ್ದರು. ಎಷ್ಟು ಹಣ ಹೂಡಿಕೆ ಮಾಡಿದ್ದಾರೆಂದು ಉಲ್ಲೇಖಿಸಿರಲಿಲ್ಲ. ದೇವೇಗೌಡ ಎಂಬುವರ ಬಳಿ 26 ಲಕ್ಷ ಹಣವನ್ನ ಸಾಲ ಪಡೆದಿರುವುದಾಗಿ ತಿಳಿಸಿದ್ದರು. ಒಂದರಲ್ಲಿ ಎಚ್.ಡಿ. ದೇವೇಗೌಡ, ಮತ್ತೊಂದರಲ್ಲಿ ಖಾಲಿ ದೇವೇಗೌಡ ಎಂದು ನಮೂದಿಸಿದ್ದರು. ಇದನ್ನು ಅಂದಿನ ಬಿಜೆಪಿ ಅಭ್ಯರ್ಥಿ ಎ.ಮಂಜು ಆಯೋಗಕ್ಕೆ ದೂರು ನೀಡಿದ್ದರು, ಕೋರ್ಟ್ ಮೆಟ್ಟಿಲು ಹತ್ತಿದ್ದರು.
ಚುನಾವಣಾ ಆಯೋಗಕ್ಕೆ ಪ್ರಜ್ವಲ್ ಸಲ್ಲಿಸಿದ ಸುಳ್ಳು ದಾಖಲೆಗಳ ಬಗ್ಗೆ ದೊಡ್ಡಗೌಡರು ಕರೆದು ಕಿವಿಹಿಂಡಿ ಬುದ್ಧಿ ಹೇಳಲಿಲ್ಲ. ಬದಲಿಗೆ ವಕೀಲರನ್ನಿಟ್ಟು ಕೇಸು ನಡೆಯಲಿ ಎಂದು ಧೈರ್ಯ ತುಂಬಿದರು. ಇದು ಕೂಡ ರಾಜಕಾರಣದಲ್ಲಿ ಸಹಜ, ತಪ್ಪಲ್ಲ ಎನ್ನುವ ಪ್ರಜ್ವಲ್ ನಂಬಿಕೆಯನ್ನು ಗಟ್ಟಿಗೊಳಿಸಿತು.
ಸಂಸದನಾಗಿ ದೆಹಲಿಗೆ ಹೋಗುತ್ತಿದ್ದಂತೆ, ಮಾಜಿ ಪ್ರಧಾನಿಗಳ ಮೊಮ್ಮಗ ಎಂಬ ವಿಶೇಷ ಗೌರವ, ಗಣ್ಯರಿಂದ ಹಸ್ತಲಾಘವ, ಯುವನಾಯಕನೆಂಬ ಹೊಗಳಿಕೆ ಪ್ರಜ್ವಲ್‌ರನ್ನು ಅಟ್ಟಕ್ಕೇರಿಸಿತು. ಜೊತೆಗೆ ಅಪರಿಮಿತ ಹಣ, ಅನಾಯಾಸವಾಗಿ ದಕ್ಕಿದ ರಾಜಕೀಯ ಅಧಿಕಾರ, ಕುಟುಂಬದ ಪ್ರತಿಷ್ಠೆ, ಫ್ಯೂಡಲ್ ಗತ್ತು ತಲೆಗೇರಿತು.
ಸಂಸದನಾದ ಹೊಸತರಲ್ಲಿ, 2019ರಲ್ಲಿಯೇ ತಮಗೆ ಊಟ ಹಾಕಿದ 47 ವಯಸ್ಸಿನ ಮನೆಕೆಲಸದಾಕೆಯನ್ನು ಮಂಚಕ್ಕೆ ಕರೆದದ್ದಲ್ಲದೆ, ಹೀನ ಕೃತ್ಯವನ್ನು ತಾವೇ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡರು. ಇದು ಅಪ್ಪ ರೇವಣ್ಣ, ಅಮ್ಮ ಭವಾನಿ, ಸಹೋದರ ಸೂರಜ್ ವಾಸಿಸುವ ಮನೆಯಲ್ಲಿಯೇ ನಡೆದ ಹೀನ ಕೃತ್ಯ. ಮನೆಕೆಲಸದಾಕೆ ಅಸಹಾಯಕಿ, ಬಡವಿ. ಆಕೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಹೇಳಿಕೊಳ್ಳಲಾಗದ, ಹೇಳಿಕೊಂಡರೂ ಜಗತ್ತು ನಂಬದ ವಿಷಯವಾಗಿತ್ತು. ಅದು ಕೂಡ ಪ್ರಜ್ವಲ್ ತಪ್ಪು ಮಾಡಲು, ಮುಂದುವರೆಸಲು ಪುಷ್ಟಿ ನೀಡಿತು.
ಮುಂದುವರೆದು, ಪಕ್ಷದ ಕಾರ್ಯಕರ್ತರು, ಪುರಸಭಾ ಸದಸ್ಯೆಯರು, ಕೆಲಸ ಕೇಳಿಕೊಂಡು ಬಂದ ಅಸಹಾಯಕ ಮಹಿಳೆಯರು, ವರ್ಗಾವಣೆ ಸಹಾಯ ಬೇಡಿ ಬಂದ ಮಹಿಳಾ ಅಧಿಕಾರಿಗಳು- ಹೀಗೆ ಸುಮಾರು 70 ಮಹಿಳೆಯರನ್ನು ತಮ್ಮ ತೆವಲಿಗೆ ಬಳಸಿಕೊಂಡರು. ಪ್ರಜ್ವಲ್ ದೌರ್ಜನ್ಯಕ್ಕೆ ಬಲಿಯಾದ ಅಸಹಾಯಕ ಮಹಿಳೆಯರು ಬಾಯಿ ಬಿಡದಿದ್ದರೂ, ಪೋಷಕರಿಗೆ ಪುತ್ರನ ‘ಪ್ರತಾಪ’ ಗೊತ್ತಾಯಿತು. ಕುಟುಂಬದೊಳಗೆ ಗುಸುಗುಸು ಶುರುವಾಯಿತು. ಅದು ದೊಡ್ಡಗೌಡರಿಗೂ ಮುಟ್ಟಿತು.
ಆದರೆ ದೊಡ್ಡಗೌಡರಿಗೆ ಇದು ಹೀನ ಕೃತ್ಯ, ಅಸಹ್ಯ, ತಲೆ ತಗ್ಗಿಸುವ ವಿಚಾರ ಎನಿಸಲಿಲ್ಲ. ತಮಗೆ, ತಮ್ಮ ಕುಟುಂಬಕ್ಕೆ ಮತ ನೀಡಿ ಅಧಿಕಾರದ ಸ್ಥಾನಗಳಲ್ಲಿ ಕೂರಿಸಿದ ಹೆಣ್ಣುಮಕ್ಕಳು, ನಮ್ಮ ಅಕ್ಕ-ತಂಗಿಯರು ಅನಿಸಲಿಲ್ಲ. ಬದಲಿಗೆ, ಅಂತಹ ಅಸಹ್ಯಕರ ವ್ಯಕ್ತಿಯನ್ನೇ, 2024ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನಾಗಿಸಿದರು. ಬಿಜೆಪಿ ನಾಯಕರಿಗೂ ಮಂಕುಬೂದಿ ಎರಚಿದರು. ಇದೆಲ್ಲ ಗೊತ್ತಿದ್ದೂ, ಪ್ರಧಾನಿ ಮೋದಿಯವರು ಮೈಸೂರಿಗೆ ಬಂದು ಪ್ರಜ್ವಲ್ ರೇವಣ್ಣನ ಕೈ ಎತ್ತಿದರು, ಗೆಲ್ಲಿಸಿ ಎಂದು ಮತದಾರರಿಗೆ ಕರೆ ಕೊಟ್ಟರು. ಬಲಕ್ಕೆ ಪ್ರಧಾನಿ, ಎಡಕ್ಕೆ ಮಾಜಿ ಪ್ರಧಾನಿ- ಇದು ಪ್ರಜ್ವಲ್‌ಗೆ, ತಾನು ಏನು ಮಾಡಿದರೂ ನಡೆಯುತ್ತದೆ ಎಂಬ ದುರಹಂಕಾರವನ್ನು ದುಪ್ಪಟುಗೊಳಿಸಿತು.
ಇದನ್ನು ಓದಿದ್ದೀರಾ?: ಬಲಾಢ್ಯರೊಂದಿಗೆ ಜೊತೆಯಾಗುವುದು ಜನದ್ರೋಹ
ಆದರೆ, ಶೋಷಿತ ಮಹಿಳೆಯರ ಕಣ್ಣೀರು, ನೋವು, ಸಂಕಟ ಕತ್ತಲಲ್ಲಿ ಕರಗಿ ಹೋಗಲಿಲ್ಲ. ಕತ್ತಲಿನ ನಡುವಿನ ಪುಟ್ಟ ಬೆಳಕಿನಂತೆ, 2024ರ ಲೋಕಸಭಾ ಚುನಾವಣೆಗೂ ಮುನ್ನ ಪೆನ್‌ಡ್ರೈವ್ ರೂಪದಲ್ಲಿ ಪ್ರಜ್ವಲಿಸಿತು. ಆ ಕೂಡಲೇ ಸರ್ಕಾರ ಎಸ್‌ಐಟಿ ರಚಿಸಿದ್ದು, ದಕ್ಷ ಅಧಿಕಾರಿಗಳನ್ನು ನೇಮಿಸಿದ್ದು, ಆ ತಂಡ ಯಾವುದೇ ರಾಜಕೀಯ ಪ್ರಭಾವಕ್ಕೂ ಒಳಗಾಗದೆ ಮಾಹಿತಿ ಕಲೆಹಾಕಿದ್ದು, ಅದನ್ನು ಅಷ್ಟೇ ಜವಾಬ್ದಾರಿಯುತವಾಗಿ ಜಾಣ್ಮೆಯಿಂದ ವಕೀಲರು ನಿಭಾಯಿಸಿದ್ದು ಶ್ಲಾಘನೀಯ ಕ್ರಮ. ಹಾಗೆಯೇ ಶೋಷಿತ ಮಹಿಳೆ, ಆರಂಭದಿಂದ ಇಲ್ಲಿಯವರೆಗೆ ಗಟ್ಟಿಯಾಗಿ ನಿಂತಿದ್ದು; ನ್ಯಾಯಾಂಗ ತ್ವರಿತಗತಿಯಲ್ಲಿ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ, ಪ್ರಜ್ವಲ್ ದೋಷಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿದ್ದು ಐತಿಹಾಸಿಕ ತೀರ್ಪು.
ಇದು, ಸುಲಭವಾಗಿ ಹಣ ಮಾಡುವ ಆಸೆಯಿಂದ ರಾಜಕಾರಣದತ್ತ ಮುಖ ಮಾಡುವ ಯುವಜನತೆಗೆ; ಹಣ, ಅಧಿಕಾರದಿಂದ ಮೆರೆಯುತ್ತಿರುವ ಕುಟುಂಬರಾಜಕಾರಣದ ಕುಡಿಗಳಿಗೆ; ಪ್ರಾದೇಶಿಕ ಪಕ್ಷವನ್ನು ಬಲಿಕೊಟ್ಟ ಅನೈತಿಕ ರಾಜಕಾರಣಕ್ಕೆ ಬಹಳ ದೊಡ್ಡ ಪಾಠ. ಅಹಂಕಾರದ ಮೊಟ್ಟೆಯಂತಿರುವ ಪ್ರಜ್ವಲ್ ಪಾಠ ಕಲಿಯದಿರಬಹುದು. ಆದರೆ ಪ್ರಜ್ವಲ್‌ರನ್ನು ಪೋಷಿಸಿದವರು ಖಂಡಿತ ಕಲಿಯುತ್ತಾರೆ.
