ಈ ದಿನ ಸಂಪಾದಕೀಯ | ಪ್ರಧಾನಿಗೆ 9 ವರ್ಷಗಳಿಂದ ಕಾಣದ ಅಕ್ಕತಂಗಿಯರ ಸಂಕಟ ಈಗ ಕಂಡಿದ್ದು ಹೇಗೆ?

Date:

Advertisements
ಮೋದಿ ಸರ್ಕಾರವು ಕಳೆದ ಒಂಭತ್ತು ವರ್ಷಗಳಿಂದ ದೇಶದ ಜನರ ಬದುಕುಗಳೊಂದಿಗೆ ಮನಸೋ ಇಚ್ಛೆ ವರ್ತಿಸಿದೆ. ಹಿಂದೆಂದೂ ಇಲ್ಲದಷ್ಟು ಪ್ರಮಾಣದ, ಅಮಾನುಷ, ಕ್ರೌರ್ಯ ಎನ್ನಬಹುದಾದ ರೀತಿಯ ಬೆಲೆ ಏರಿಕೆ ಮೋದಿಯವರ ಕಾಲದಲ್ಲಿ ಆಗಿದೆ. ಅದೆಲ್ಲವನ್ನೂ ಮರೆಮಾಚುವಂತೆ ಈಗ ಕೇವಲ ಅಡುಗೆ ಅನಿಲದ ಬೆಲೆ 200 ರೂಪಾಯಿ ಇಳಿಸಿ ಜನರ ಮನ ಗೆಲ್ಲಬಹುದೆಂದು ಮೋದಿಯವರು ಭಾವಿಸಿದರೆ ಅದು ಮೂರ್ಖತನವಾದೀತು.

ಗೃಹ ಬಳಕೆಯ ಅಡುಗೆ ಅನಿಲ ಸಬ್ಸಿಡಿಯಾಗಿ 200 ರೂಪಾಯಿ ಕೊಡುವ ಕೇಂದ್ರ ಸರ್ಕಾರದ ನಿರ್ಧಾರವು ತೀರಾ ಅನಿರೀಕ್ಷಿತವೇನೂ ಅಲ್ಲ. ಗೋದಿ ಮೀಡಿಯಾ ಇದು ಜನರ ಕಣ್ಣೀರೊರೆಸುವ ಅಭೂತಪೂರ್ವ ಕ್ರಮ ಎನ್ನುವಂತೆ ಬಿಂಬಿಸಲು ವಿಫಲ ಪ್ರಯತ್ನ ನಡೆಸಿದರೂ, ಇದು ಬರಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ತೆಗೆದುಕೊಂಡ ಕ್ರಮ ಎಂದು ಬಹುತೇಕ ಎಲ್ಲ ವಿಶ್ವಾಸಾರ್ಹ ಮಾಧ್ಯಮಗಳೂ ವಿಶ್ಲೇಷಿಸಿವೆ. ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮೋದಿ ಸರ್ಕಾರ ಅಡುಗೆ ಅನಿಲಕ್ಕೆ 200 ರೂಪಾಯಿ ಸಬ್ಸಿಡಿ ನೀಡಲು ಮುಂದಾಗಿದೆ ಎನ್ನುವುದು ಈಗ ಸರ್ವವೇದ್ಯ.

ಮೋದಿ ಸರ್ಕಾರ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ನಿಲ್ಲಿಸಿದ್ದು 2020ರಲ್ಲಿ. ಅದೂ ಯಾವ ಪೂರ್ವಸೂಚನೆಯೂ ಇಲ್ಲದೇ, ಜನರಿಗೆ ಮಾಹಿತಿಯೇ ನೀಡದೇ ಅಡುಗೆ ಅನಿಲದ ಸಬ್ಸಿಡಿಯನ್ನು ದಿಢೀರ್ ನಿಲ್ಲಿಸಲಾಗಿತ್ತು. ನಂತರ ಅದನ್ನು ಜನ ನಿಧಾನಕ್ಕೆ ತಮ್ಮಷ್ಟಕ್ಕೆ ತಾವು ಕಂಡುಕೊಂಡರೆ ವಿನಾ ಸರ್ಕಾರ ಅದನ್ನು ಅಧಿಕೃತವಾಗಿ ಪ್ರಕಟಿಸಲೇ ಇಲ್ಲ. ಮೊದಲ ಬಾರಿಗೆ ಸರ್ಕಾರವೊಂದು ಈ ರೀತಿ ಜನರಿಗೆ ಉತ್ತರದಾಯಿಯಲ್ಲದ ರೀತಿ ವರ್ತಿಸಿತ್ತು. ಈ ಮೂಲಕ ಮೋದಿಯವರ ಆಡಳಿತದ ಅವಧಿ ಎಂದರೆ, ಜನರ ಮತ್ತು ಸರ್ಕಾರದ ನಡುವೆ ಇರಬೇಕಾದ ಮೂಲಭೂತ ಸಂವಹನವೇ ಇಲ್ಲವಾಗಿದ್ದ ಗುಮಾನಿಯ ಕಾಲ ಎನ್ನುವ ಭಾವನೆ ಮೂಡಿತು.      

ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‌ಎಸ್‌ಎಸ್‌ಒ) ಸಮೀಕ್ಷೆಯ ಪ್ರಕಾರ, ಗ್ರಾಮೀಣ ಪ್ರದೇಶದ ಶೇ.50ರಷ್ಟು ಮತ್ತು ನಗರ ಪ್ರದೇಶಗಳ ಶೇ.90ರಷ್ಟು ಜನರಿಗೆ ಅಡುಗೆ ಅನಿಲವೇ ಪ್ರಮುಖ ಇಂಧನ ಮೂಲವಾಗಿದೆ. ಜನ ವ್ಯಾಪಕವಾಗಿ ಬಳಸುವ ಅಡುಗೆ ಅನಿಲದ ಬೆಲೆಯನ್ನು ಕಳೆದ ಕೆಲ ವರ್ಷಗಳಲ್ಲಿ ವಿಪರೀತವಾಗಿ, ಅತಾರ್ಕಿಕವಾಗಿ ಹೆಚ್ಚಿಸಲಾಗಿತ್ತು. ಫೆಬ್ರವರಿ 2021ರಿಂದ ಅಕ್ಟೋಬರ್ 2022ರವರೆಗೆ ಒಟ್ಟು 13 ಬಾರಿ ಹೆಚ್ಚಿಸಲಾಗಿತ್ತು; ಎರಡೇ ವರ್ಷಗಳಲ್ಲಿ ಅಡುಗೆ ಅನಿಲದ ಬೆಲೆ 328 ರೂಪಾಯಿ ಹೆಚ್ಚಾಗಿತ್ತು ಎಂದರೆ, ಏರಿಕೆಯ ಪ್ರಮಾಣ ಯಾವ ಮಟ್ಟದಲ್ಲಿತ್ತು ಎನ್ನುವುದು ಅರ್ಥವಾಗುತ್ತದೆ. ಜನ ಬೆಲೆ ಏರಿಕೆಯಿಂದ ಹೈರಾಣಾದರು.   

Advertisements

ಸರ್ಕಾರ ಯಾವಾಗ ಅಡುಗೆ ಅನಿಲದ ಬೆಲೆ ಏರಿಕೆ ಮಾಡಿದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಆಗಿದೆ ಎನ್ನುವ ಗುಮ್ಮನನ್ನು ಜನರ ಮುಂದಿಡುತ್ತದೆ. ಆದರೆ, ಅದು ಅಪ್ಪಟ ಸುಳ್ಳಿನ ಕಂತೆ. 2022ರ ಮೇನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 118 ಡಾಲರ್ ಆಗಿತ್ತು. ಕಳೆದ ಏಳು ತಿಂಗಳಿನಿಂದ ಅದು 60 ರಿಂದ 80 ಡಾಲರ್‌ಗೆ ಇಳಿದಿದೆ. ಆದರೂ ಅಡುಗೆ ಅನಿಲದ ಬೆಲೆ ಇಳಿಕೆಯಾಗಲೇ ಇಲ್ಲ. ಅನೇಕ ಜನ ಇದನ್ನು ಆಗಿಂದಾಗ್ಗೆ ಪ್ರಶ್ನಿಸುತ್ತಲೇ ಇದ್ದಾರೆ. ಆದರೆ, ಸರ್ಕಾರ ಸುಳ್ಳುಗಳಿಂದ ಅದನ್ನು ಸಮರ್ಥಿಸಿಕೊಳ್ಳುತ್ತಲೇ ಸಾಗಿತ್ತು.

ಕೇವಲ 400-500 ರೂಪಾಯಿ ಆಸುಪಾಸಿನಲ್ಲಿದ್ದ ಅಡುಗೆ ಅನಿಲದ ಬೆಲೆ ಮೋದಿಯವರು ಪ್ರಧಾನಿಯಾದ 1150 ರೂಪಾಯಿಗೆ ಮುಟ್ಟಿತು. ಈಗ ಅದರಲ್ಲಿ ಕೇವಲ 200 ರೂಪಾಯಿ ಇಳಿಕೆ ಮಾಡಿದ್ದಾರೆ. ಯಥಾಪ್ರಕಾರ, ಮೋದಿ ಏನೇ ಮಾಡಿದರೂ ಅದೊಂದು ಅಭೂತಪೂರ್ವ ಕ್ರಮ ಎಂದು ಕೊಂಡಾಡುವ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಈ ಕ್ರಮವನ್ನೂ ಹೊಗಳುತ್ತಿದ್ದಾರೆ. ‘ಮೋದಿಯವರು ಸಹೋದರಿಯರಿಗೆ ರಕ್ಷಾ ಬಂಧನದ ಕೊಡುಗೆ ನೀಡಿದ್ದಾರೆ’ ಎಂದು ಸಚಿವೆ ಸ್ಮೃತಿ ಇರಾನಿ, ಸಚಿವ ಹರ್ದೀಪ್ ಪುರಿ ಬಣ್ಣಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರಂತೂ ಜನರ ಪರವಾಗಿ ಮೋದಿಯವರಿಗೆ ಕೃತಜ್ಞತೆಯನ್ನೇ ಸಲ್ಲಿಸಿದ್ದಾರೆ.             

ಆದರೆ, ಮೋದಿ ಸರ್ಕಾರದ ಈ ಕ್ರಮದ ಹಿಂದಿನ ಲೆಕ್ಕಾಚಾರಗಳನ್ನು ವಿರೋಧ ಪಕ್ಷಗಳು ಸರಿಯಾಗಿಯೇ ಬಣ್ಣಿಸಿವೆ.

ಬಿಜು ಜನತಾ ದಳ ‘ಇದು ಚುನಾವಣಾ ಗಿಮಿಕ್’ ಎಂದಿದೆ. “ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾದಾಗ ಕೇಂದ್ರ ಸರ್ಕಾರವು ಗ್ರಾಹಕರಿಗೆ ಅದರ ಲಾಭವನ್ನು ವರ್ಗಾಯಿಸಲಿಲ್ಲ. ಕೇಂದ್ರಕ್ಕೆ ಆಗ ಮಹಿಳೆಯರ ಕಣ್ಣೀರು ಕಾಣಲಿಲ್ಲ. ಈಗ ಅವರಿಗೆ ಜನರ ನೋವು ಕಾಣುತ್ತಿದೆ” ಎಂದು ಬಿಜೆಡಿ ಟೀಕಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ‘ಮತ ಪ್ರಮಾಣ ಕಡಿಮೆಯಾಗತೊಡಗಿದಂತೆ ಕೊಡುಗೆ ನೀಡಿಕೆ ಆರಂಭವಾಗುತ್ತದೆ. ಜನರ ಕಷ್ಟದ ದುಡಿಮೆಯನ್ನು ನಿರ್ದಯವಾಗಿ ಲೂಟಿ ಮಾಡಿದ ಮೋದಿಯವರ ಸರ್ಕಾರವು ಈಗ ತಾಯಿ ಮತ್ತು ತಂಗಿಯರ ಬಗ್ಗೆ ಕಾಳಜಿ ತೋರುವಂತೆ ನಟಿಸುತ್ತಿದೆ’ ಎಂದು ಕಿಡಿ ಕಾರಿದ್ದಾರೆ. ಎನ್‌ಸಿಪಿ ಮುಖಂಡರಾದ ಸುಪ್ರಿಯಾ ಸುಳೆ, ‘ಇದು ಕರ್ನಾಟಕದಲ್ಲಿ ಕಾಂಗ್ರೆಸ್‌ ಎದುರು ಬಿಜೆಪಿ ಸೋತದ್ದರ ಪರಿಣಾಮ’ ಎಂದಿದ್ದಾರೆ.

ವಿರೋಧ ಪಕ್ಷಗಳ ಎಲ್ಲ ಹೇಳಿಕೆಗಳೂ ಸತ್ಯಾಂಶದಿಂದ ಕೂಡಿವೆ. ಮೋದಿ ಸರ್ಕಾರವು ಕಳೆದ ಒಂಭತ್ತು ವರ್ಷಗಳಿಂದ ದೇಶದ ಜನರ ಬದುಕುಗಳೊಂದಿಗೆ ಮನಸೋ ಇಚ್ಛೆ ವರ್ತಿಸಿದೆ. ಹಿಂದೆಂದೂ ಇಲ್ಲದಷ್ಟು ಪ್ರಮಾಣದ, ಅಮಾನುಷ, ಕ್ರೌರ್ಯ ಎನ್ನಬಹುದಾದ ರೀತಿಯ ಬೆಲೆ ಏರಿಕೆ ಮೋದಿಯವರ ಕಾಲದಲ್ಲಿ ಆಗಿದೆ. ಜನ ಇನ್ನಿಲ್ಲದಂತೆ ಬಳಲಿ ನರಳಿ ಸಂಕಟ ಅನುಭವಿಸಿದ್ದಾರೆ. ನೂರುಗಳ ಲೆಕ್ಕದಲ್ಲಿದ್ದ ವಸ್ತುಗಳು, ಸೇವೆಗಳ ಬೆಲೆ ಸಾವಿರಗಳ ಹಂತ ದಾಟಿ ಮುಂದೆ ಹೋಗಿದೆ. ಅದೆಲ್ಲವನ್ನೂ ಮರೆಮಾಚುವಂತೆ ಈಗ ಕೇವಲ ಅಡುಗೆ ಅನಿಲದ ಬೆಲೆ 200 ರೂಪಾಯಿ ಇಳಿಸಿ ಜನರ ಮನ ಗೆಲ್ಲಬಹುದೆಂದು ಮೋದಿಯವರು ಭಾವಿಸಿದರೆ ಅದು ಮೂರ್ಖತನವಾದೀತು. ಅವರ ಬಂಡವಾಳಿಗ ಮಿತ್ರರಿಗೆ ನೀಡಿದ ಶತಕೋಟಿಗಳ ವಿನಾಯಿತಿ, ಸಹಾಯಧನ, ಪ್ರೋತ್ಸಾಹವನ್ನು ಈ ದೇಶದ ಬಡವರು, ಶ್ರಮಿಕರು, ಕೂಲಿ ಕಾರ್ಮಿಕರು ಮರೆತಿಲ್ಲ ಎನ್ನುವುದನ್ನು ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದಲ್ಲಿರುವವರು ಮರೆಯದಿರಲಿ. ಚುನಾವಣಾ ಕಾಲದ ಕೆಲವು ವಿನಾಯಿತಿಗಳು, ಸಬ್ಸಿಡಿಗಳು ಕೇಂದ್ರ ಸರ್ಕಾರದ ಒಂಭತ್ತು ವರ್ಷದ ಬೆಲೆ ಏರಿಕೆಯ ಸಂಕಟಗಳನ್ನು ಮರೆಮಾಚುವುದಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X