ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಜನರೊಂದಿಗೆ ಬೆರೆತು ಕೆಲಸ ಮಾಡುವ ಜನಪ್ರತಿನಿಧಿಗಳು ಸಾರ್ವಜನಿಕ ಸಂಯಮ ಕಳೆದುಕೊಂಡರೆ ಏನಾಗುತ್ತದೆ ಎಂಬುದಕ್ಕೆ ಇತ್ತೀಚಿನ ಘಟನೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಜನ ಜಾಗೃತರಾಗದಿದ್ದರೆ, ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಣತಾಣಗಳಲ್ಲಿ ಬಂದದ್ದನ್ನು ನಿಕಷಕ್ಕೆ ಒಡ್ಡಿ ನೋಡದಿದ್ದರೆ, ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಶನಿವಾರ ಪ್ರಚಾರಸಭೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಉರ್ದುವಿನಲ್ಲಿ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಕಾಲಾ’ (ಕರಿಯ) ಎಂದು ಕರೆದಿದ್ದರು. ಜಮೀರ್ ಬಳಸಿದ ಈ ಪದ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ವಿವಾದಕ್ಕೆ ಕಾರಣವಾಯಿತು.
ಕುಮಾರಸ್ವಾಮಿ ವಿರುದ್ಧ ತಾವು ಬಳಸಿದ ‘ಕಾಲಾ’ ಪದ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಸೋಮವಾರ ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಮೀರ್, ”ಕುಮಾರಸ್ವಾಮಿ ಅವರನ್ನು ನಾನು ಯಾವಾಗಲೂ ಪ್ರೀತಿಯಿಂದ ‘ಕರಿಯಣ್ಣ’ ಎಂದೇ ಕರೆಯುವೆ. ಕುಳ್ಳಗಿರುವ ನನ್ನನ್ನು ಅವರು ಯಾವಾಗಲೂ ‘ಕುಳ್ಳ’ ಎನ್ನುತ್ತಾರೆ” ಎಂದು ಸ್ಪಷ್ಟನೆ ನೀಡಿದ್ದರು.
ಕಪ್ಪು ಬಣ್ಣ ಕೆಟ್ಟ ಕೆಲಸವನ್ನು, ಬಂಡಾಯವನ್ನು ಸಂಕೇತಿಸುತ್ತದೆ. ಕಪ್ಪು ಬಣ್ಣವನ್ನು ಜೀವವಿರೋಧಿ ಎಂದು ಪರಿಗಣಿಸಲಾಗುತ್ತದೆ. ಅಸುರರನ್ನು ದೇವತೆಗಳಿಂದ ಪ್ರತ್ಯೇಕಿಸಲು ಕಪ್ಪು ಬಣ್ಣವನ್ನು ಬಳಸಲಾಗುತ್ತದೆ. ಕಪ್ಪಗಿರುವವರನ್ನು ಶೂದ್ರರು ಎಂದು ಕರೆದು, ಮನುಷ್ಯರೆಂದು ಪರಿಗಣಿಸುವುದಿಲ್ಲ. ಅಸಲಿಗೆ, ಇದೆಲ್ಲವೂ ಆರ್ಯರ ಸೃಷ್ಟಿ. ಅದೇ ಆರ್ಯರ ಸಂತತಿಯಾದ ಕೆಲ ಪತ್ರಕರ್ತರು, ಈಗ ಜಮೀರ್ ಕರಿಯ ಅಂದದ್ದನ್ನು ಮಹಾಪರಾಧವೆಂಬಂತೆ ಬಿಂಬಿಸಿದರು. ವಿವಾದ ಹುಟ್ಟುಹಾಕಿದರು. ಕಪ್ಪು ಕನಿಷ್ಠವಲ್ಲ, ಕಡೆಗಣಿಸುವ ಬಣ್ಣವಲ್ಲ. ಕರಿಯ, ಕರಿಯಪ್ಪ, ಕಪ್ಪಣ್ಣ, ಕರಿಯಣ್ಣ, ಕರೀಗೌಡ ಎಂಬ ಹೆಸರುಗಳು ಸಮಾಜದಲ್ಲಿ ಬಳಕೆಯಲ್ಲಿದ್ದರೂ; ಸಚಿವ ಜಮೀರ್ ಅಹಮದ್ ಖಾನ್, ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಸಚಿವರನ್ನು ಅವರ ಮೈಬಣ್ಣ ಕುರಿತು ಹಂಗಿಸಿದ್ದು ಸರಿಯಲ್ಲ. ಅವರನ್ನು ಮನುಷ್ಯರು ಎನ್ನಲಾಗುವುದಿಲ್ಲ.
ಕುಮಾರಸ್ವಾಮಿ ಮತ್ತು ಜಮೀರ್- ಇಬ್ಬರೂ ಆಪ್ತ ಸ್ನೇಹಿತರಾಗಿರಬಹುದು. ಅವರಿಬ್ಬರೇ ಇದ್ದಾಗ, ಏನು ಬೇಕಾದರೂ ಮಾತನಾಡಿಕೊಳ್ಳಬಹುದು. ಆದರೆ, ಸಾರ್ವಜನಿಕ ವ್ಯಕ್ತಿಯಾದಾಗ, ವೇದಿಕೆಯಲ್ಲಿ ನಿಂತು ಮಾತನಾಡುವಾಗ ಸಾರ್ವಜನಿಕ ಸಂಯಮ ಎಂಬುದೊಂದು ಇರುತ್ತದೆ. ಅರಿತು ವರ್ತಿಸಬೇಕಾಗುತ್ತದೆ. ಅದರಲ್ಲೂ ಅವರು ಜನಪ್ರತಿನಿಧಿಗಳಾಗಿದ್ದಾಗ, ಜನರೊಂದಿಗೆ ಬೆರೆತು ಕೆಲಸ ಮಾಡುವಾಗ, ಅವರ ನಡೆ ಮತ್ತು ನುಡಿಯನ್ನು ಸಾವಿರಾರು ಕಣ್ಣು-ಕಿವಿಗಳು ಗಮನಿಸುತ್ತವೆ ಎಂಬ ಎಚ್ಚರ ಇರಬೇಕಾಗುತ್ತದೆ. ಸೋಷಿಯಲ್ ಮೀಡಿಯಾದ ಈ ಹೊಸಗಾಲದಲ್ಲಿ, ಪ್ರತಿಯೊಬ್ಬರ ಕೈಯಲ್ಲೂ ಆಂಡ್ರಾಯ್ಡ್ ಫೋನ್‌ಗಳಿರುವಾಗ, ಪ್ರತಿ ಕ್ಷಣವೂ ರೆಕಾರ್ಡ್ ಆಗುವಾಗ- ಮೈಯೆಲ್ಲ ಕಣ್ಣಾಗಿರಬೇಕಾಗುತ್ತದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಸಿ ಗಾಳಿ ಬೀಸುತ್ತಿದೆ – ತಾಪಮಾನ ಏರುತ್ತಿದೆ; ಪ್ರಕೃತಿ ತಿರುಗಿ ಬೀಳಲಿದೆ!
ಜನಪ್ರತಿನಿಧಿಗಳಿಗೆ ಈ ಎಚ್ಚರ ಇಲ್ಲದೇ ಹೋದರೆ, ಅವರಾಡಿದ ಮಾತೇ ಅವರನ್ನು ನೇಣುಗಂಬಕ್ಕೇರಿಸಬಹುದು. ಇಲ್ಲಿ ಎಲ್ಲವನ್ನು ರಾಜಕೀಯಗೊಳಿಸಲಾಗುತ್ತದೆ. ದುರುಪಯೋಗ ಸಾಮಾನ್ಯವಾಗುತ್ತದೆ. ಮಾತನಾಡಿದ ವ್ಯಕ್ತಿ ಮುಸ್ಲಿಂ ಆದರೆ, ಅದಕ್ಕೆ ಕೋಮುಬಣ್ಣ ಬಳಿಯಲಾಗುತ್ತದೆ. ಅದನ್ನು ತಮ್ಮ ಮನಸ್ಸಿಗೆ ತೋಚಿದಂತೆ ತಿರುಚಿ, ವಿವಾದವನ್ನುಂಟುಮಾಡಲಾಗುತ್ತದೆ. ಜನರ ನಡುವೆ ವಿಷ ಬಿತ್ತಿ, ಕೋಮುದ್ವೇಷ ಹರಡಿ ಸಾವು-ನೋವಿಗೂ ಕಾರಣವಾಗುತ್ತದೆ.
ಕಳೆದ ಒಂದು ತಿಂಗಳ ಹಿಂದೆ, ವಿಜಯಪುರದಲ್ಲಿ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮಾತನಾಡುತ್ತ, ‘ರಾಜ್ಯದಲ್ಲಿಯೇ ವಿಜಯಪುರದಲ್ಲಿ ಅತಿ ಹೆಚ್ಚು ವಕ್ಫ್ ಆಸ್ತಿ ಇದೆ. ವಕ್ಫ್ ಆಸ್ತಿಯ ಸದ್ಭಳಕೆ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೂರು ಕಲ್ಪಿಸುವ ಸದುದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ ಒಟ್ಟು 1.12 ಲಕ್ಷ ಎಕರೆ ವಕ್ಫ್ ಆಸ್ತಿಯಲ್ಲಿ 85 ಸಾವಿರ ಎಕರೆ ಅತಿಕ್ರಮಣವಾಗಿ ಕೇವಲ 23 ಸಾವಿರ ಎಕರೆ ಮಾತ್ರ ಉಳಿದಿದೆ. ವಕ್ಫ್ ಆಸ್ತಿ ಕಬಳಿಕೆ- ಹಗರಣಕ್ಕೆ ಮುಂದಾಗಬಾರದು. ವಕ್ಫ್ ಆಸ್ತಿ ದೇವರ ಆಸ್ತಿಯಾಗಿದ್ದು, ಪ್ರತಿಯೊಬ್ಬರು ಅದರ ಸಂರಕ್ಷಣೆಗೆ ಮುಂದಾಗಬೇಕು’ ಎಂದರು. ಅಕ್ರಮವಾಗಿ ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅಕ್ರಮ ಒತ್ತುವರಿಗೆ ನೋಟಿಸ್ ನೀಡಲು ಸೂಚಿಸಿದ್ದು ಹಿಂದೂ ಆಗಿದ್ದರೆ, ಅದು ಸುದ್ದಿಯಾಗಿ ಮರೆಯಾಗುತ್ತಿತ್ತು. ಆದರೆ ಆತ ಮುಸ್ಲಿಂ ಎಂಬ ಕಾರಣಕ್ಕೆ, ಕೆಲ ಮನು ಮನಸ್ಥಿತಿಯ ಸುದ್ದಿ ಮಾಧ್ಯಮಗಳಿಗೆ ಅಲ್ಲಿ ವಿವಾದ ಕಂಡಿತು. ಸುದ್ದಿಗೆ ಬಣ್ಣ ಬೆರೆಸಿ, ಬೆಂಕಿ ಹಚ್ಚಿ ಸ್ಫೋಟಿಸುವಂತೆ ನೋಡಿಕೊಳ್ಳಲಾಯಿತು. ಚುನಾವಣೆಯ ಕಾಲವಾದ್ದರಿಂದ ಎಲ್ಲವನ್ನು ಕೋಮು ಕನ್ನಡಕದಿಂದಲೇ ನೋಡುವ ಮನುವಾದಿ ಪಕ್ಷ, ವಿವಾದವೆಂಬ ಬೆಂಕಿಗೆ ತುಪ್ಪ ಸುರಿಯಿತು. ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿತು. ಕೇಂದ್ರದಿಂದ ಜೆಪಿಸಿ ಕರೆಸಿತು. ಅದನ್ನು ರಾಷ್ಟ್ರೀಯ ಸುದ್ದಿಯನ್ನಾಗಿಸಿತು. ಅದು ಚುನಾವಣೆಯ ಮೇಲೆ ಪರಿಣಾಮ ಬೀರಿತು. ಅಲ್ಲಿಗೆ ಅವರ ಸ್ವಾರ್ಥ ಈಡೇರಿತು.
ಇದೇ ಬಿಸಿಯಲ್ಲಿ ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಅಲ್ಲಮಪ್ರಭು ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಯತ್ನಾಳ್ ವಕ್ಫ್ ವಿಚಾರ ಪ್ರಸ್ತಾಪಿಸಿದರು. ತಕ್ಷಣ ಊರಿನ ಹಿರಿಯರು ‘ಇಲ್ಲಿ ರಾಜಕಾರಣ ಮಾಡಲು ಬರಬೇಡಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಛೀಮಾರಿ ಹಾಕಿದರು. ಇದರಿಂದ ಸಾರ್ವಜನಿಕರ ಎದುರಲ್ಲೇ ಅವಮಾನಕ್ಕೊಳಗಾದ ಯತ್ನಾಳ್, ಅರ್ಧದಲ್ಲಿಯೇ ಮಾತು ಮೊಟಕುಗೊಳಿಸಿ ವೇದಿಕೆಯಿಂದ ಇಳಿದು ಹೊರಟುಹೋದರು.
ಇದೇ ರೀತಿ ಬೀದರ್ ತಾಲೂಕಿನ ಮನ್ನಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾತೋಳಿ ಗ್ರಾಮದಲ್ಲಿ ನ.8ರಂದು ಆಸ್ತಿ ವಿಚಾರಕ್ಕೆ ಗಂಡನನ್ನು ಆತನ ಪತ್ನಿ ಮತ್ತು ಮೂವರು ಮಕ್ಕಳು ಹೊಡೆದು ಕೊಂದು ಹಾಕಿದರು. ಆದರೆ ಆ ಕೊಲೆಗೆ ವಿನಾಕಾರಣ ಕೋಮುಬಣ್ಣ ಬಳಿದ ಕೆಲ ಸುದ್ದಿ ಮಾಧ್ಯಮಗಳು, ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಒಪ್ಪದಿದ್ದಾಗ ಮೂಕ ತಂದೆಯನ್ನು ಕೊಲೆ ಮಾಡಲಾಗಿದೆ ಎಂದು ಬಿಂಬಿಸಿದವು. ಸತ್ಯ ಅರಿತ ಸ್ಥಳೀಯರು ಪತ್ರಕರ್ತರಿಗೆ ಹಿಡಿದು ಬಡಿಯುವುದೊಂದು ಬಾಕಿಯಿತ್ತು.
ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಜನರೊಂದಿಗೆ ಬೆರೆತು ಕೆಲಸ ಮಾಡುವ ಜನಪ್ರತಿನಿಧಿಗಳು ಸಾರ್ವಜನಿಕ ಸಂಯಮ, ಸಹನೆ, ಸಭ್ಯತೆ ಕಳೆದುಕೊಂಡರೆ ಏನಾಗುತ್ತದೆ ಎಂಬುದಕ್ಕೆ ಮೇಲಿನ ಎರಡುಮೂರು ಘಟನೆಗಳು ಸಾಕ್ಷಿಯಾಗಿ ನಿಲ್ಲುತ್ತವೆ.
ಜನ ಜಾಗೃತರಾಗದಿದ್ದರೆ, ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಣತಾಣಗಳಲ್ಲಿ ಬಂದದ್ದನ್ನು ನಿಕಷಕ್ಕೆ ಒಡ್ಡಿ ನೋಡದಿದ್ದರೆ, ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ.
