ಕಳೆದ ಏಪ್ರಿಲ್ ತಿಂಗಳಿನಲ್ಲೇ ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳಿಗೆ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಿತ್ತು. 45 ದಿನಗಳ ಕಾಲಾವಕಾಶ ನೀಡಿದ ಮೇಲೂ ಸರಿಪಡಿಸಿಕೊಳ್ಳುವಲ್ಲಿ ಈ ಶಾಲೆಗಳು ವಿಫಲವಾಗಿವೆ. ಅಷ್ಟೇ ಅಲ್ಲ ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸದಂತೆ ಪೋಷಕರಿಗೆ ಮಾಹಿತಿ ನೀಡುವಲ್ಲಿ ಡಿಡಿಪಿಐಗಳು ವಿಫಲರಾಗಿದ್ದಾರೆ
ರಾಜ್ಯದಲ್ಲಿ ಶಾಲೆಗಳು ಶುರುವಾಗಿ ಎರಡೂವರೆ ತಿಂಗಳಾಗಿದೆ. ಇನ್ನೊಂದು ತಿಂಗಳಲ್ಲಿ ಅರ್ಧವಾರ್ಷಿಕ ಪರೀಕ್ಷೆ ನಡೆಯಲಿದೆ. ಆಗಸ್ಟ್ 15ರಂದು ಈ ಶೈಕ್ಷಣಿಕ ವರ್ಷದ ಮೊದಲ ಸಂಭ್ರಮವಾದ ಸ್ವಾತಂತ್ರ್ಯೋತ್ಸವಕ್ಕೆ ಶಾಲೆಗಳು ಸಿದ್ಧತೆ ನಡೆಸುತ್ತಿವೆ. ಇಂತಹ ಸಮಯದಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಬಂದಿರುವ ಆದೇಶ ನಿಜಕ್ಕೂ ಆತಂಕ, ಅಚ್ಚರಿ ಮೂಡಿಸುತ್ತಿದೆ. ನಮ್ಮ ಅಧಿಕಾರಿ ವರ್ಗದ ಕಾರ್ಯ ವೈಖರಿಯ ಬಗ್ಗೆ ವಾಕರಿಕೆ ತರಿಸುವಂತಿದೆ.
ಇನ್ನು ಮೂರೇ ಮೂರು ದಿನಗಳಲ್ಲಿ ಅಂದ್ರೆ ಸ್ವಾತಂತ್ರೋತ್ಸವದ ಮುನ್ನಾ ದಿನ ಆಗಸ್ಟ್ 14ರಂದು ರಾಜ್ಯದ 1,316 ಅನಧಿಕೃತ ಖಾಸಗಿ ಶಾಲೆಗಳಿಗೆ ಇಲಾಖೆ ಬೀಗ ಜಡಿಯುವ ಆದೇಶ ನೀಡಿತ್ತು. ಆದರೆ ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳಾದ ರುಪ್ಸಾ, ಕ್ಯಾಮ್ಸ್, ಕುಸುಮ ಸಂಘಟನೆಗಳು ಸಚಿವ ಮಧು ಬಂಗಾರಪ್ಪ ಅವರ ಜೊತೆ ಸಭೆ ನಡೆಸಿದ ನಂತರ ಶಾಲೆ ಮುಚ್ಚುವ ಗಡುವು ವಿಸ್ತರಿಸುವ ಭರವಸೆ ನೀಡಿದ್ಧಾರೆ ಎಂದು ವರದಿಯಾಗಿದೆ.
ಇಲಾಖೆಯ ನಿಯಮ ಮೀರಿ ಕಪ್ಪು ಪಟ್ಟಿಗೆ ಸೇರಿರುವ ಶಾಲೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರಾದ ಬಿ ಬಿ ಕಾವೇರಿ ಅವರು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ(ಡಿಡಿಪಿಐ)ರಿಗೆ ಆದೇಶ ನೀಡಿದ್ದರು. ಸಾರ್ವಜನಿಕ ಪ್ರಕಟಣೆ ಮೂಲಕ ಶಾಲೆಗಳನ್ನು ಮುಚ್ಚುವ ವಿಷಯವನ್ನು ಪೋಷಕರಿಗೆ ತಿಳಿಸಬೇಕು ಎಂದು ಸೂಚಿಸಿದ್ದರು.
ಕಳೆದ ಏಪ್ರಿಲ್ ತಿಂಗಳಿನಲ್ಲೇ ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳಿಗೆ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಿತ್ತು. 45 ದಿನಗಳ ಕಾಲಾವಕಾಶ ನೀಡಿದ ಮೇಲೂ ಸರಿಪಡಿಸಿಕೊಳ್ಳುವಲ್ಲಿ ಈ ಶಾಲೆಗಳು ವಿಫಲವಾಗಿವೆ. ಅಷ್ಟೇ ಅಲ್ಲ ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸದಂತೆ ಪೋಷಕರಿಗೆ ಮಾಹಿತಿ ನೀಡುವಲ್ಲಿ ಡಿಡಿಪಿಐಗಳು ವಿಫಲರಾಗಿದ್ದಾರೆ. ಈ ಮಾತನ್ನು ಆಯುಕ್ತರೇ ಅಸಮಾಧಾನದಿಂದ ಹೇಳಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಇಷ್ಟೊಂದು ಅನಧಿಕೃತ ಶಾಲೆಗಳು ತಲೆಯೆತ್ತಲು ಯಾರು ಕಾರಣ? ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಎಂಥದ್ದು? ಇಷ್ಟೊಂದು ಅನಧಿಕೃತ ಶಾಲೆಗಳು ಯಾವುದೇ ನೀತಿ ನಿಯಮಾವಳಿ, ಕಾಯಿದೆ ಕಾನೂನಿನ ಅಂಕೆ ಶಂಕೆ ಇಲ್ಲದೆ ನಡೆಯುತ್ತಿದ್ದಾಗ ಶಿಕ್ಷಣ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದರು? ನಿಯಮ ಉಲ್ಲಂಘನೆಯ ಹಿಂದೆ ಭ್ರಷ್ಟ ಅಧಿಕಾರಿಗಳ ಕೃಪಾಕಟಾಕ್ಷ ಇತ್ತೇ ಎಂಬುದು ತನಿಖೆಯಾಗಬೇಕು. ಶಿಸ್ತು ಕ್ರಮ ಶಾಲೆಗಳ ಆಡಳಿತ ಮಂಡಳಿಯ ಮೇಲಷ್ಟೇ ಕೈಗೊಂಡರೆ ಸಾಲದು, ಈ ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ಮೇಲೂ ಕಠಿಣ ಕ್ರಮ ಆಗಬೇಕು. ಆಗಷ್ಟೇ ವ್ಯವಸ್ಥೆಯ ಮೇಲೆ ನಂಬಿಕೆ ಮೂಡಲು ಸಾಧ್ಯ.
ಇಡೀ ಬೆಳವಣಿಗೆಯನ್ನು ಗಮನಿಸಿದರೆ ಅಧಿಕಾರಿಗಳು ಅದೆಷ್ಟು ನಿರ್ಲಜ್ಜರು, ಭ್ರಷ್ಟರು ಎಂಬುದು ಯಾರಿಗಾದರೂ ತಿಳಿಯುತ್ತದೆ. ಒಟ್ಟು 35 ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐಗಳಿಗೆ ಅನಧಿಕೃತ ಶಾಲೆಗಳ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚಿಸಲಾಗಿತ್ತು. ಆದರೆ ಅವರಲ್ಲಿ ಕೇವಲ 16 ಡಿಡಿಪಿಐಗಳು ಮಾತ್ರ ವರದಿ ನೀಡಿದ್ದಾರೆ. ಮಿಕ್ಕವರು ಆಯುಕ್ತರ ಆದೇಶವನ್ನು ಧಿಕ್ಕರಿಸಿದ್ದಾರೆಯೇ? ಇದೇ ಆಗಸ್ಟ್ 16ರ ಒಳಗಾಗಿ ಆಯಾ ಜಿಲ್ಲೆಯ ಅನಧಿಕೃತ ಶಾಲೆಗಳ ಪಟ್ಟಿ ನೀಡುವಂತೆ ಆಯುಕ್ತರು ಪುನಃ ಗಡುವು ವಿಧಿಸಿದ್ದಾರೆ. ಉಳಿದ ಜಿಲ್ಲೆಗಳ ವರದಿ ಬಂದ ನಂತರ ಇನ್ನೆಷ್ಟು ಶಾಲೆಗಳು ಮುಚ್ಚಲಿವೆ ಎಂಬುದು ಗೊತ್ತಾಗಲಿದೆ.
ಊರಿಗೊಂದು ಶಾಲೆ ಇದ್ದರೆ ಆ ಊರು ಉದ್ಧಾರ ಆಗುತ್ತೆ, ಮನೆಯಲ್ಲೊಬ್ಬರು ಅಕ್ಷರಸ್ಥರಿದ್ದರೆ ಇಡೀ ಕುಟುಂಬವೇ ಉದ್ಧಾರ ಆಗುತ್ತೆ ಎಂಬ ಮಾತು ಇಲಾಖೆಗೂ ಅನ್ವಯಿಸಿಕೊಳ್ಳಬೇಕು. ಭ್ರಷ್ಟ, ಬೇಜವಾಬ್ದಾರಿ ಅಧಿಕಾರಿಗಳು ಶಿಕ್ಷಣ ಇಲಾಖೆಯಂತಹ ಪ್ರಮುಖ ಜಾಗಗಳಲ್ಲಿ ಸೇರಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ.
ನಗರ ಪ್ರದೇಶಗಳು ಮಾತ್ರವಲ್ಲ, ಸಣ್ಣ-ಪುಟ್ಟ ಪಟ್ಟಣಗಳಲ್ಲಿಯೂ ಖಾಸಗಿ ಶಾಲೆಗಳು ಬಡವರ ರಕ್ತ ಹೀರುವ ಕೇಂದ್ರಗಳಾಗಿವೆ. ಖಾಸಗಿ ಶಾಲೆಗಳೆಂದರೆ ಗುಣಮಟ್ಟದ ಶಿಕ್ಷಣ ನೀಡುತ್ತವೆ ಎಂಬ ಭಾವನೆ ಎಲ್ಲ ವರ್ಗದ ಜನರಲ್ಲೂ ಮನೆ ಮಾಡಿದೆ. ಎಷ್ಟೇ ಹಣ ಸುಲಿಗೆ ಮಾಡಿದರೂ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸಿದರೆ ಮಾತ್ರ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬ ಭಾವನೆ ಬಡ ಕಾರ್ಮಿಕ ವರ್ಗದಲ್ಲೂ ಆವರಿಸಿದೆ. ಅದಕ್ಕೆ ಸರ್ಕಾರಿ ಶಾಲೆಗಳ ದುರವಸ್ಥೆಯೂ ಕಾರಣ. ಸರ್ಕಾರದ ವೈಫಲ್ಯಗಳ ಲಾಭವನ್ನು ಹಣದಾಸೆಯ ಪಟ್ಟಭದ್ರ ಹಿತಾಸಕ್ತಿಗಳು ದುರುಪಯೋಗ ಮಾಡಿಕೊಳ್ಳುತ್ತಿವೆ.
ಒಂದೆಡೆ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯದ ಕೊರತೆ, ಜೊತೆಗೆ ಸರ್ಕಾರಿ ಶಾಲೆಗಳೆಂದರೆ ಕನ್ನಡ ಶಾಲೆಗಳು ಎಂಬ ಜನರ ನಿರ್ಲಕ್ಷ್ಯ ಕೂಡಾ ಈ ದುರುಳ ದಂಧೆಕೋರರಿಗೆ ವರದಾನವಾಗಿದೆ. ನಿಯಮ ಉಲ್ಲಂಘಿಸುವ ಶಾಲೆಗಳನ್ನು ಮುಚ್ಚುವುದು ಸಂಬಂಧಪಟ್ಟ ಶಾಲೆಗಳ ಆಡಳಿತವರ್ಗಗಳಿಗೆ ಹಾಗೂ ಪೋಷಕರಿಗೆ ಎಚ್ಚರಿಕೆಯ ಗಂಟೆ. ಆದರೆ ಈ ಅಧ್ವಾನಕ್ಕೆ ಸಹಕರಿಸುವ ಅಧಿಕಾರಿಗಳ ಮೇಲೆಯೂ ಕಠಿಣ ಕ್ರಮ ಜರುಗಲೇಬೇಕು. ಇಲ್ಲವಾದರೆ ಇದು ಪ್ರತಿವರ್ಷವೂ ನಡೆಯುವ ಪ್ರಹಸನ ಆದೀತು. ಶಿಕ್ಷಣ ವ್ಯವಸ್ಥೆಗೆ ಸಮಗ್ರ ಶಸ್ತ್ರಚಿಕಿತ್ಸೆಯೇ ಜರುಗಬೇಕಿದೆ.
