ರಾಹುಲ್ ಗಾಂಧಿ, ಬಿಜೆಪಿಗರ ಕೇಸುಗಳಿಗಾಗಿ ಖುದ್ದು ನ್ಯಾಯಾಲಯಗಳಿಗೆ ಹೋಗಬೇಕಾದಾಗ, ಮಾರ್ಗ ಮಧ್ಯದಲ್ಲಿ ಸಿಗುವ ಜನರನ್ನು ಮುಟ್ಟಿ ಮಾತನಾಡಿಸುತ್ತಿದ್ದಾರೆ. ಅವರ ಕಷ್ಟ ಕೋಟಲೆಗಳನ್ನು ಅರಿತು ಅರಗಿಸಿಕೊಳ್ಳುತ್ತಿದ್ದಾರೆ. ಅದನ್ನು ಸಂಸತ್ತಿನಲ್ಲಿ ಪ್ರಶ್ನೆಗಳ ಮೂಲಕ ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ. ಆ ಮೂಲಕ ಜನರಿಗೆ ಬೇಕಾದ ವ್ಯಕ್ತಿಯಾಗಿ, ಜನನಾಯಕನಾಗಿ ಹೊರಹೊಮ್ಮುತ್ತಿದ್ದಾರೆ.
ಆಗಸ್ಟ್ 5ರಂದು ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪುಟ್ಟ ವಿಡಿಯೋವೊಂದನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅವರು ರಸ್ತೆ ಬದಿಯ ಗೂಡಂಗಡಿಗೆ ಭೇಟಿ ನೀಡಿದ್ದರ ಪುಟ್ಟ ವಿವರವಿದೆ.
2018ರ ಮೇನಲ್ಲಿ ಚುನಾವಣೆ ಪ್ರಚಾರಕ್ಕಾಗಿ ಕರ್ನಾಟಕ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ, ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ದೂರಿ, ಉತ್ತರ ಪ್ರದೇಶದ ಸುಲ್ತಾನಪುರದ ಬಿಜೆಪಿ ಮುಖಂಡ ವಿಜಯ್ ಮಿಶ್ರಾ ಎಂಬುವವರು 2018ರ ಆಗಸ್ಟ್ 4ರಂದು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಸಂಸದರ–ಶಾಸಕರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ಹಾಜರಾಗುವುದಕ್ಕೆ ರಾಹುಲ್ ಗಾಂಧಿ ಸುಲ್ತಾನಪುರಕ್ಕೆ ತೆರಳಿದ್ದರು.
ಸುಲ್ತಾನಪುರದ ಹೊರವಲಯದ ವಿಧಾಯಕನಗರದ ರಸ್ತೆ ಬದಿಯಲ್ಲಿ ಚಮ್ಮಾರ ರಾಮಚೇತ್ ಗೂಡಂಗಡಿ ಇಟ್ಟುಕೊಂಡಿದ್ದಾರೆ. ಜುಲೈ 26ರಂದು ಆ ಮಾರ್ಗವಾಗಿ ತೆರಳುತ್ತಿದ್ದ ರಾಹುಲ್ ಗಾಂಧಿ, ರಾಮಚೇತ್ ಅಂಗಡಿಗೆ ಭೇಟಿ ನೀಡಿ, ಅವರ ಕುಟುಂಬ, ಕಷ್ಟಕರ ಬದುಕು, ಕೆಲಸ, ಕಮಾಯಿಗಳ ಕುರಿತು ಮಾತನಾಡಿದ್ದರು. ಅವರೊಂದಿಗೆ ಕೂತು ತಂಪುಪಾನೀಯ ಕುಡಿದಿದ್ದರು. ಅವರಿಂದ ಚಪ್ಪಲಿ ಹೊಲಿಯುವುದನ್ನು ಕಲಿತು, ಚಪ್ಪಲಿ ಕೂಡ ಹೊಲಿದಿದ್ದರು. ಶೂ ಕೂಡ ಸಿದ್ಧಪಡಿಸಿದ್ದರು.
ಆ ನಂತರ ಚಮ್ಮಾರ ರಾಮಚೇತ್ ಬದುಕಿನಲ್ಲಿ ಭಾರಿ ಬದಲಾವಣೆಗಳಾದವು. ಅಂಗಡಿಗೆ ಬರುವವರು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರು, ಫೋನ್ ಕರೆ ಮಾಡಿ ಮಾತನಾಡಲು ಅಪೇಕ್ಷಿಸುವವರು ಹೆಚ್ಚಾದರು. ಅಧಿಕಾರಿಗಳೂ ಕೂಡ ಬಂದು ವಿಚಾರಿಸಿ, ವಿವರ ಪಡೆದುಕೊಂಡು ಹೋದರು. ರಾಹುಲ್ ಗಾಂಧಿ ಹೊಲಿದು ಸಿದ್ಧಪಡಿಸಿದ ಬೂಟುಗಳನ್ನು ಕೊಳ್ಳಲು ಕೆಲವರು ಮುಂದೆ ಬಂದರು. ಆದರೆ ಆ ಬಡ ರಾಮಚೇತ್, ‘ಹತ್ತು ಲಕ್ಷ ಕೊಟ್ಟರೂ ಆ ಬೂಟುಗಳನ್ನು ಮಾರುವುದಿಲ್ಲ. ಅವು ನನ್ನ ಪಾಲಿಗೆ ಅದೃಷ್ಟದ ಪಾದರಕ್ಷೆಗಳು’ ಎಂದು ಅಭಿಮಾನ ಮೆರೆದರು.
ಇಷ್ಟಕ್ಕೇ ರಾಹುಲ್ ಗಾಂಧಿ ಸುಮ್ಮನಾಗಲಿಲ್ಲ. ಚಮ್ಮಾರ ರಾಮಚೇತ್‌ರಲ್ಲಿ ಇರುವ ಕುಶಲತೆ, ಅನುಭವ ಮತ್ತು ಕಾಯಕಶ್ರದ್ಧೆ ಕಂಡು, ಅವರಿಗೊಂದು ಮಷೀನ್ ಕಳುಹಿಸಿಕೊಟ್ಟರು. ಅವರು ಆ ಮಷೀನ್‌ನಿಂದ ಒಂದು ಜೊತೆ ಬೂಟು ತಯಾರಿಸಿ, ರಾಹುಲ್ ಗಾಂಧಿಗೆ ಕಳುಹಿಸಿಕೊಟ್ಟರು. ಅವುಗಳನ್ನು ಧರಿಸಿ ಓಡಾಡಿದ ರಾಹುಲ್ ಗಾಂಧಿ, ‘ನೀವು ತಯಾರಿಸಿದ ಬೂಟುಗಳು ತುಂಬಾ ಚೆನ್ನಾಗಿವೆ, ಧನ್ಯವಾದಗಳು’ ಎಂದರು. ಅದಕ್ಕೆ ಆತ ‘ಹಾ, ಮಾಲೀಕ್’ ಎಂದರು. ‘ನಾನು ನಿಮ್ಮ ಮಾಲೀಕನಲ್ಲ, ಸಹೋದರ. ಇನ್ನುಮುಂದೆ ಸಹೋದರನೆಂದೇ ಸಂಬೋಧಿಸಿ’ ಎಂದರು. ಅವರು ‘ಆಗಲಿ’ ಎಂದರು.
ಇದು ಯಾರು ಬೇಕಾದರೂ ಮಾಡಬಹುದು. ಸಮಸಮಾಜದ ಕನಸು ಕಂಡ ಹಲವರು ಇಂಥದ್ದನ್ನು ಈಗಾಗಲೇ ಮಾಡಿರಬಹುದು. ರಾಹುಲ್ ಗಾಂಧಿ ಮಾಡಿರುವುದರಲ್ಲ ಅಂತಹ ವಿಶೇಷವೇನಿಲ್ಲದಿರಬಹುದು. ವಿಶೇಷವಿರುವುದು, ಅವರ ಮಾನವೀಯ ತುಡಿತಗಳಲ್ಲಿ; ಕಾಳಜಿ ಮತ್ತು ಪ್ರೀತಿಯ ನಡವಳಿಕೆಯಲ್ಲಿ; ಅದು ಮತ್ತಷ್ಟು ಜನ ಮಾಡುವಂತೆ ಮಾದರಿಯಾಗಿರುವುದರಲ್ಲಿ.
ಸುಲ್ತಾನಪುರದ ಚಮ್ಮಾರ ರಾಮಚೇತ್, ಹೇಳಿಕೇಳಿ ಬಡವರು. ಶೋಷಿತ ಸಮುದಾಯದಿಂದ ಬಂದವರು. ದನಿ ಎತ್ತರಿಸಿ ಮಾತನಾಡದವರು. ಅವರಲ್ಲಿ ಕಸುಬುಗಾರಿಕೆ ಇದೆ, ಬೇಕಾದ ಬಂಡವಾಳವಿಲ್ಲ. ಬುದ್ಧಿ ಇದೆ, ಬೆನ್ನಿಗೆ ಜಾತಿಬಲವಿಲ್ಲ. ನಮ್ಮ ಶ್ರೇಣೀಕೃತ ಸಮಾಜ ಇಂತಹವರನ್ನು ಮುಟ್ಟುವುದಿಲ್ಲ, ಮನೆಯೊಳಕ್ಕೆ ಬಿಟ್ಟುಕೊಳ್ಳುವುದಿಲ್ಲ, ಕ್ಷೌರ ಮಾಡುವುದಿಲ್ಲ, ದೇವಸ್ಥಾನದೊಳಕ್ಕೆ ಸೇರಿಸುವುದಿಲ್ಲ, ಅವರೊಂದಿಗೆ ಸಂಬಂಧ ಬೆಳೆಸುವುದಿಲ್ಲ. ಅಂತಹವರ ಸಮ ಸಮಕ್ಕೆ ಕೂತು, ಅವರೊಂದಿಗೆ ಕಲೆತು, ಕಷ್ಟ-ಸುಖ ಹಂಚಿಕೊಂಡ, ಸಹೋದರ ಎಂದ ರಾಹುಲ್- ಈಗ ಎಲ್ಲರ ರಾಹುಲ್ ಆಗುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ಕಾಯಕಲ್ಪದ ಅಗತ್ಯವಿದೆ
ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಮೋದಿ ಮತ್ತು ಅಮಿತ್ ಶಾ ಅವರು, ವಿರೋಧ ಪಕ್ಷಗಳೇ ಇಲ್ಲದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಐಟಿ ಸೆಲ್ ಬಳಸಿ ‘ಪಪ್ಪು’ ಮಾಡಿದರು. ಮಡಿಲ ಮಾಧ್ಯಮಗಳನ್ನು ಬಳಸಿ ಕವರೇಜ್ ಸಿಗದಂತೆ ನೋಡಿಕೊಂಡರು. ಸಾಲದು ಎಂದು, ‘ಮೋದಿ’ ಎಂಬ ಹೆಸರು ತೆಗೆದುಕೊಂಡು ಮಾತನಾಡಿದ್ದಕ್ಕೆ; ‘ಅಮಿತ್ ಶಾ’ ಎಂದು ಉಸುರಿದ್ದಕ್ಕೆ ದೇಶದ ನಾನಾ ಭಾಗಗಳಲ್ಲಿ ರಾಹುಲ್ ಗಾಂಧಿ ವಿರುದ್ಧ 20ಕ್ಕೂ ಹೆಚ್ಚು ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದರು. ನ್ಯಾಯಾಲಯಗಳಿಗೆ ಅಲೆದು, ಸವೆದು ಹೋಗಲಿ ಎಂಬ ಆಶೆ ಅವರಲ್ಲಿತ್ತು.
ಆದರೆ, ರಾಹುಲ್ ಗಾಂಧಿ ಆ ಕೇಸುಗಳಿಗಾಗಿ ಖುದ್ದು ನ್ಯಾಯಾಲಯಗಳಿಗೆ ಹೋಗಬೇಕಾದಾಗ, ಮಾರ್ಗ ಮಧ್ಯದಲ್ಲಿ ಸಿಗುವ ಜನರನ್ನು ಮುಟ್ಟಿ ಮಾತನಾಡಿಸುತ್ತಿದ್ದಾರೆ. ಅವರ ಕಷ್ಟ ಕೋಟಲೆಗಳನ್ನು ಅರಿತು ಅರಗಿಸಿಕೊಳ್ಳುತ್ತಿದ್ದಾರೆ. ಅದನ್ನು ಸಂಸತ್ತಿನಲ್ಲಿ ಪ್ರಶ್ನೆಗಳ ಮೂಲಕ ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ. ಆ ಮೂಲಕ ಜನರಿಗೆ ಬೇಕಾದ ವ್ಯಕ್ತಿಯಾಗಿ, ಜನನಾಯಕನಾಗಿ ಹೊರಹೊಮ್ಮುತ್ತಿದ್ದಾರೆ.
ಒಂದು ಕಡೆ, ಜನರಿಂದ ಬಹಳ ದೂರ ಇರುವ ಪ್ರಧಾನಿ ಮೋದಿ; ಇನ್ನೊಂದೆಡೆ ಜನರ ನಡುವೆಯೇ ಹೊಕ್ಕಾಡುವ ರಾಹುಲ್ ಗಾಂಧಿ. ಇಬ್ಬರು ನಾಯಕರ ವ್ಯಕ್ತಿತ್ವವನ್ನು ಒರೆಹಚ್ಚಿ ನೋಡುವುದಕ್ಕೆ ಬಿಜೆಪಿಯವರೇ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಕುಹಕಿಗಳ ಕೆಡಕನ್ನು ಕೂಡ ಒಳಿತಿನ ಹಾದಿಯನ್ನಾಗಿ ಪರಿವರ್ತಿಸಿರುವ ರಾಹುಲ್ ಗಾಂಧಿಯ ನಡೆ, ಮೋದಿಯವರ ಮುಖವಾಡವನ್ನು ಕಳಚುತ್ತಿದೆ. ಬಿಜೆಪಿಯ ಬಂಡವಾಳವನ್ನು ಬಯಲು ಮಾಡುತ್ತಿದೆ. ಜನಾಭಿಪ್ರಾಯವನ್ನು ಬದಲಿಸುತ್ತಿದೆ. ಹಾಗೆಯೇ ‘ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ’ ನೆನಪಿಸುತ್ತಿದೆ.
