ರಾಜಕಾರಣವೆನ್ನುವುದು ಕೇವಲ ಹೊಲಸಿನ ಇಳಿಜಾರು ಎನ್ನಿಸದೇ, ಪ್ರಯೋಗಶೀಲ ಸಾಧ್ಯತೆಗಳಿಗೆ ಅವಕಾಶವಿರುವ ವಿಶಿಷ್ಟ ಕ್ಷೇತ್ರವಾಗಿ ಅದನ್ನು ನೋಡುವ ಪರಿಪಾಠ ಬೆಳೆಯಬೇಕು. ಅಂತಹ ಪ್ರಯೋಗಗಳಲ್ಲಿ ಮೌಲ್ಯಗಳ ಮರುಸ್ಥಾಪನೆಯೂ ಒಂದು ಆದ್ಯತೆಯಾಗಲಿ.
ಮಹಿಳೆಯೊಬ್ಬರು ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ವಿರುದ್ಧ ದೂರೊಂದನ್ನು ಕೊಟ್ಟಿದ್ದಾರೆ. ಆ ಕುರಿತಂತೆ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಯಲ್ಲಿ ಸದರಿ ಶಾಸಕ ತನ್ನ ಮೇಲೆ ವಿಕಾಸಸೌಧದಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಶಾಸಕರ ಕುರಿತು ಸಾರ್ವಜನಿಕವಾಗಿ ಚರ್ಚೆಯಲ್ಲಿರುವ ಸಂಗತಿಗಳು ಕೇವಲ ಗಾಬರಿಗೊಳಿಸುವುದಿಲ್ಲ; ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂಬ ಬಗ್ಗೆ ಹೆದರಿಕೆಯನ್ನು ಹುಟ್ಟಿಸುತ್ತವೆ. ಇದೇ ಶಾಸಕ ಹಿಂದೆ ಕಾಂಗ್ರೆಸ್ಸಿನಲ್ಲಿದ್ದರೆಂಬುದೂ, ಇಂತಹ ಸದ್ಗುಣಗಳುಳ್ಳವರನ್ನೇ ಹೆಕ್ಕಿ ಹೆಕ್ಕಿ ಬಿಜೆಪಿ ಆಪರೇಷನ್ ನಡೆಸಿತೆಂಬುದನ್ನೂ ಮರೆಯಲಾಗದು.
ಈ ಪ್ರಕರಣದ ಕುರಿತು ತನಿಖೆ ನಡೆದ ಮೇಲೆಯೇ ಪೂರ್ಣ ಸತ್ಯ ಗೊತ್ತಾಗಲಿದೆ. ಇಂತಹ ಆರೋಪಗಳು ಎಷ್ಟರಮಟ್ಟಿಗೆ ಒಮ್ಮುಖವಾದವು, ಎಷ್ಟರಮಟ್ಟಿಗೆ ಸಾಂದರ್ಭಿಕ ಒತ್ತಡ ಹಾಗೂ ಪರಸ್ಪರ ಒಪ್ಪಿಗೆಯ ಮೇಲೆ ನಡೆದವು, ಈ ನಿರ್ದಿಷ್ಟ ಪ್ರಕರಣದಲ್ಲಿ ಇನ್ನೂ ಏನಾದರೂ ಒಳಸುಳಿಗಳಿವೆಯಾ ಎಂಬುದನ್ನು ಈಗಲೇ ಹೇಳಲಾಗದು. ಆದರೆ, ಮಹಿಳೆಯು ಇಂತಹ ಬಹುತೇಕ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬಲಿಪಶುವೇ ಆಗಿರುತ್ತಾರೆ ಎಂಬುದಂತೂ ನಿಜ.
ಅದು ನಮ್ಮ ವ್ಯವಸ್ಥೆಯ ರಚನೆಯಲ್ಲೇ ಇರುವ ಭಾರೀ ದೊಡ್ಡ ಸಮಸ್ಯೆಯಾಗಿದೆ. ಅವೆಲ್ಲವನ್ನೂ ದಾಟಿ ಈ ಆರೋಪವಿರುವುದು ರಾಜಕೀಯ ನಾಯಕನೊಬ್ಬ, ತಾನು ಸಚಿವನಾಗಿರುವ ಸಂದರ್ಭದಲ್ಲಿ ಕರ್ನಾಟಕದ ಆಡಳಿತ ಕೇಂದ್ರದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದರು ಎಂದು. ಸಹಜವಾಗಿಯೇ ಈ ಕುರಿತು ತನಿಖೆ ನಡೆಯಲಿದೆ. ತನಿಖೆಯಲ್ಲಿ ಮೇಲಿನ ಆರೋಪಕ್ಕೆ ಪುರಾವೆಗಳು ಸಿಗಬಹುದು ಅಥವಾ ಸಿಗದೇ ಇರಬಹುದು. ಈಗಾಗಲೇ ಜೈಲಿನಲ್ಲಿರುವ ಶಾಸಕ ಮುನಿರತ್ನ ನಂತರ ಹೊರಬಂದು ಎಂದಿನಂತೆ ತನ್ನ ‘ಸಾರ್ವಜನಿಕ ಸೇವೆ’ಯನ್ನು ಮುಂದುವರೆಸಲೂಬಹುದು. ಆದರೆ, ಗೂಂಡಾಗಿರಿಯ ಬಲದಿಂದ ಹಣಬಲವನ್ನೂ ಮತ್ತು ಅದರಿಂದ ರಾಜಕೀಯ ಬಲವನ್ನೂ ಪಡೆದುಕೊಂಡ ವ್ಯಕ್ತಿಯೊಬ್ಬ ಏನು ಬೇಕಾದರೂ ಮಾಡಬಹುದು ಹಾಗೂ ತನ್ನ ವಿಕೃತಿಗೆ ವಿಧಾನಸೌಧವನ್ನೂ ಬಳಸಿಕೊಳ್ಳಬಹುದು ಎಂಬ ಸಂಗತಿ ಯಾವ ಸಂದೇಶವನ್ನು ಸಮಾಜಕ್ಕೆ ನೀಡಲಿದೆ?
ಮಾನ್ಯ ಕಾನೂನು ಸಚಿವರು ವಿಧಾನಸಭೆಯ ಸ್ಪೀಕರ್‌ಗೆ ಪತ್ರ ಬರೆದು ಈ ಶಾಸಕರ ವಿಧಾನಸಭಾ ಸದಸ್ಯತ್ವವನ್ನು ರದ್ದು ಮಾಡಲು ಕೇಳಿಕೊಂಡಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೋ ಇಲ್ಲವೋ ತಿಳಿಯದು. ಅಂತಿಮವಾಗಿ ತನಿಖೆ ನಡೆದು, ಕೋರ್ಟಿನಲ್ಲಿ ವಿಚಾರಣೆ ನಡೆದು ಆರೋಪ ನಿಜವೇ ಇಲ್ಲವೇ ಎಂಬುದೂ ಸಾಬೀತಾಗಬೇಕು. ಅದಕ್ಕೆ ಮುಂಚೆಯೇ ತೀರ್ಪು ನೀಡುವುದು ಸಾಧುವಲ್ಲವಂದೇ ತೋರುತ್ತದೆ. ಕೇವಲ ಆರೋಪಗಳ ಕಾರಣಕ್ಕೆ ಮೊದಲೇ ತೀರ್ಮಾನಕ್ಕೆ ಬರುವುದು ತಪ್ಪು ಬೆಳವಣಿಗೆಗಳಿಗೆ ದಾರಿ ಮಾಡಿಕೊಡುತ್ತದೆ.
ಆದರೆ, ಸಾರ್ವಜನಿಕ ನಡವಳಿಕೆಯಲ್ಲಿ ಸಜ್ಜನಿಕೆ, ಖಾಸಗೀ ಬದುಕಿನಲ್ಲೂ ಮೌಲ್ಯಗಳ ಪಾಲನೆ, ವ್ಯಕ್ತಿಗತ ಶುದ್ಧತೆಯ ಮೇಲ್ಪಂಕ್ತಿ ಹಾಕಿಕೊಡುವುದು ವಿಧಾನಸೌಧದಿಂದಲೇ ಆರಂಭವಾಗಬೇಕಿದೆ. ವಿಧಾನಸೌಧದಲ್ಲೇ ಅತ್ಯಂತ ವಿಕೃತ ಮತ್ತು ಆಘಾತಕಾರಿ ಕೆಲಸ ನಡೆದಿದೆಯೆಂಬ ಆರೋಪ ಬಂದಿರುವ ಹೊತ್ತಿನಲ್ಲಿ ಇದನ್ನು ಸರಿ ಮಾಡುವುದೂ ಸಹ ಅಲ್ಲಿಂದಲೇ ಶುರುವಾಗಬೇಕಿದೆ. ಸಾರ್ವಜನಿಕ ವಾಗ್ವಾದದ ಭಾಷೆ, ಚೌಕಟ್ಟುಗಳೆಲ್ಲವೂ ತೀರಾ ಪಾತಾಳಕ್ಕಿಳಿದಿವೆ. ಒಂದು ದಿನವೂ ತಪ್ಪದಂತೆ ರಾಜಕೀಯ ವಿರೋಧದ ಘೋಷಣೆಗಳು ಮತ್ತು ಹುನ್ನಾರಗಳೇ ಚಾಲ್ತಿಯಲ್ಲಿವೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಡೆಗೂ ಗೆದ್ದ ಬಿಲ್ಕಿಸ್; ದಶಕದಿಂದ ಅತ್ಯಾಚಾರಿಗಳ ರಕ್ಷಣೆಗೆ ನಿಂತ ಗುಜರಾತ್ ಸರ್ಕಾರ ನೀಡಿದ ಸಂದೇಶವೇನು?
2014ರಿಂದೀಚೆಗೆ ನರೇಂದ್ರಮೋದಿಯವರ ನೇತೃತ್ವದಲ್ಲಿ ದೇಶಾದ್ಯಂತ ಹರಿಯಬಿಟ್ಟ ಎಲ್ಲೆ ಮೀರಿದ ಸಾರ್ವಜನಿಕ ಆರೋಪಗಳು, ಸುಳ್ಳು ಸುದ್ದಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಸುನಾಮಿಯಂತೆ ವ್ಯಾಪಿಸಿದ ದ್ವೇಷದ ಮಾತುಗಳೇ ಈಗ ನಿರಂತರವಾಗಿ ಹರಿದಾಡುತ್ತಿರುವ ಸಂಗತಿಯಾಗಿವೆ. ಇದಕ್ಕೆ ಎಲ್ಲೋ ಒಂದು ಕಡೆ ತಡೆ ನೀಡಬೇಕು. ಆದರೆ, ಒಂದು ಪಕ್ಷ ಇದನ್ನು ನಿಲ್ಲಿಸದೇ ಇದ್ದಲ್ಲಿ ಉಳಿದವರು ಅದರಿಂದ ಹೊರಬರುವ ಸಾಧ್ಯತೆ ಬಹಳ ಕಡಿಮೆ. ಯಾರು ಕಡಿಮೆ ದುಷ್ಟರಾಗಿರುತ್ತಾರೋ ಅವರು ಸೋಲುವ ಸಾಧ್ಯತೆ ಹೆಚ್ಚು. ಹೀಗಾಗಿ ಇದೊಂದು ವಿಷವ್ಯೂಹ.
ಅದನ್ನು ಬದಲಿಸಿ ಮೌಲ್ಯಗಳನ್ನು ಸಾರ್ವಜನಿಕ ಜೀವನದಲ್ಲಿ ತರುವ ಕೆಲಸ ಎಲ್ಲಿಂದಲಾದರೂ ಶುರುವಾಗಲಿ. ಇಲ್ಲವಾದರೆ ವಿಧಾನಸೌಧಕ್ಕೂ, ಸಂಸತ್ತಿಗೂ, ಸುಪ್ರೀಂಕೋರ್ಟಿಗೂ ಇರುವ ಎಲ್ಲಾ ಮೌಲ್ಯಗಳೂ ಕಾಲಕಸದಂತೆ ಆಗಿಬಿಡುತ್ತವೆ. ತನಿಖೆಯಲ್ಲಿ ಯಾರ ತಪ್ಪು, ಯಾರ ಸರಿ ಎಷ್ಟರಮಟ್ಟಿಗೆ ತೀರ್ಮಾನವಾಯಿತು ಎಂಬುದನ್ನು ಪಕ್ಕಕ್ಕಿಟ್ಟು ಎಲ್ಲರೂ ಸೇರಿ ಪಕ್ಷಾತೀತವಾಗಿ ನಡೆಸಬೇಕಾದ ಪ್ರಯತ್ನ ಇದಾಗಿದೆ. ಕನಿಷ್ಠ ಮುನಿರತ್ನ ಪ್ರಕರಣ ಅದಕ್ಕೊಂದು ನಾಂದಿ ಹಾಡಿ, ಪ್ರಸಕ್ತ ರಾಜಕೀಯ ವ್ಯವಸ್ಥೆಯಿಂದಲೇ ಅಂತಹದೊಂದು ಪ್ರಯತ್ನ ಶುರುವಾಗಲಿ ಎಂದು ಬಯಸುವುದು ದುಬಾರಿ ಇರಬಹುದು.
ಆದರೆ, ನಾಗರಿಕ ಸಮಾಜದ ವತಿಯಿಂದಲಾದರೂ ಹೊಸ ರಾಜಕಾರಣದ ಮೌಲ್ಯಗಳಿಗೆ ಒತ್ತಾಯ ಹಾಗೂ ಒತ್ತಾಸೆ ರೂಪುಗೊಳ್ಳಬೇಕು. ರಾಜಕಾರಣವೆನ್ನುವುದು ಕೇವಲ ಹೊಲಸಿನ ಇಳಿಜಾರು ಎನ್ನಿಸದೇ, ಪ್ರಯೋಗಶೀಲ ಸಾಧ್ಯತೆಗಳಿಗೆ ಅವಕಾಶವಿರುವ ವಿಶಿಷ್ಟ ಕ್ಷೇತ್ರವಾಗಿ ಅದನ್ನು ನೋಡುವ ಪರಿಪಾಠ ಬೆಳೆಯಬೇಕು. ಅಂತಹ ಪ್ರಯೋಗಗಳಲ್ಲಿ ಮೌಲ್ಯಗಳ ಮರುಸ್ಥಾಪನೆಯೂ ಒಂದು ಆದ್ಯತೆಯಾಗಲಿ. ಇಂತಹ ಸದ್ಭಾವನೆಗಳನ್ನು ಸಿನಿಕತೆಯಿಂದ ಎದುರಾಗದೇ ಕ್ರಿಯೆಗಿಳಿಸುವ ಒಂದು ಸಣ್ಣ ಗುಂಪಾದರೂ ಈ ರಾಜ್ಯದಲ್ಲಿದೆ ಎಂಬ ಸದಾಶಯ ನಮ್ಮದು.
