ಭಾರತೀಯ ಜನತಾ ಪಕ್ಷ ಎನ್ನುವುದು ರಾಜಕೀಯ ಪಕ್ಷವಾಗಿರಬಹುದು. ಆದರೆ ಅದು ಜನಪರವಲ್ಲ, ಜೀವಪರವಲ್ಲ. ಕೇವಲ ಅಧಿಕಾರದ ಪರ. ಅದನ್ನು 2002ರ ಗುಜರಾತಿನಿಂದ ಹಿಡಿದು 2023ರ ಮಣಿಪುರದವರೆಗೆ ತೆರೆದು ತೋರಿದೆ. ಕಣ್ಮುಂದಿನ ಭೀಕರತೆಯೂ ಅರ್ಥವಾಗದಿದ್ದರೆ, ದೇಶದ ಜನತೆಯನ್ನು ದಿಕ್ಕೆಡಿಸುತ್ತಿದ್ದರೂ ಸುಮ್ಮನಿದ್ದರೆ- ಇವತ್ತು ಬಸವರಾಜ ಬೊಮ್ಮಾಯಿಯವರಿಗಾದ ಸ್ಥಿತಿ ಎಲ್ಲರದೂ ಆಗಬಹುದು.
ಕಳೆದ ಗುರುವಾರ ಬಿಜೆಪಿಯ ಹತ್ತು ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ನಡೆ ಖಂಡಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ಸಲ್ಲಿಸುವಾಗ ಜೆಡಿಎಸ್ ಸದಸ್ಯರ ಜೊತೆ ಸೇರಿಕೊಂಡರು. ಬಿಜೆಪಿಯ ಅಧಿಕೃತ ಲೆಟರ್ ಹೆಡ್‌ಗೆ ಜೆಡಿಎಸ್‌ನ ಕುಮಾರಸ್ವಾಮಿ ಸಹಿ ಹಾಕಿ ದೂರು ಸಲ್ಲಿಸಿದರು.
ಅಲ್ಲಿಗೆ ಕೋಮುವಾದಿ-ಜಾತ್ಯತೀತ ಪಕ್ಷಗಳ ನಡುವೆ ಮಿಲನವೋ, ವಿಲೀನವೋ ನಡೆದುಹೋಗಿತ್ತು.
ಇದಾಗಿ ಮಾರನೆ ದಿನ ವಿಧಾನಸೌಧದ ಜೆಡಿಎಸ್ ಕಚೇರಿಯಲ್ಲಿ, ಬಿಜೆಪಿ ಮತ್ತು ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿ ನಡೆಯಿತು. ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡ ಕುಮಾರಸ್ವಾಮಿಯವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿ, ನೈಸ್ ರಸ್ತೆಯ ಅಕ್ರಮ ಕುರಿತು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ವ್ಯತಿರಿಕ್ತವಾಗಿ, ʻಎರಡು ವರ್ಷ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಒಂದಷ್ಟು ಕ್ರಮಗಳಾಗಿವೆ. ಪ್ರಾಮಾಣಿಕತೆ ಎದ್ದು ಕಾಣುತ್ತದೆ. ನೈಸ್ ವಿರುದ್ಧದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ಹಲವು ಆದೇಶಗಳು ಬಂದಿವೆ. ಹಾಗಾಗಿ, ಹಿಂದಿನ ಬಿಜೆಪಿ ಸರ್ಕಾರವನ್ನು ಅಭಿನಂದಿಸುವೆ’ ಎಂದರು.
ಅಲ್ಲಿಗೆ ಬಸವರಾಜ ಬೊಮ್ಮಾಯಿ ಇದ್ದೂ ಇಲ್ಲದಂತಾಗಿದ್ದರು. ಕುಮಾರಸ್ವಾಮಿ ಏನು ಎನ್ನುವುದು ಗೊತ್ತಿದ್ದ ಬೊಮ್ಮಾಯಿ, ಕುಮಾರಸ್ವಾಮಿಯವರ ಹೊಗಳಿಕೆಯನ್ನು ಮೆಚ್ಚಬೇಕಾ, ಅನುಮಾನಿಸಬೇಕಾ, ನಿರ್ಲಕ್ಷಿಸಬೇಕಾ- ಒಂದೂ ಗೊತ್ತಾಗದ ಗಾವಿಲರಾಗಿದ್ದರು. ಬಿಜೆಪಿ ಎಂಬ ರಾಷ್ಟ್ರೀಯ ಪಕ್ಷದ ನಾಯಕನಾಗಿ ರಾಜ್ಯಪಾಲರನ್ನು ಭೇಟಿ ಮಾಡಲಿಕ್ಕೂ, ಸ್ವತಂತ್ರವಾಗಿ ಪತ್ರಿಕಾಗೋಷ್ಠಿ ಕರೆದು ಮಾತನಾಡಲಿಕ್ಕೂ ಲಾಯಕ್ಕಲ್ಲ ಎನ್ನುವುದನ್ನು ತಮಗೆ ತಾವೇ ಸಾಬೀತು ಮಾಡಿದ್ದರು.
ಕೇವಲ ಮೂರು ತಿಂಗಳ ಹಿಂದೆ, ರಾಜ್ಯದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದ, ಇಡೀ ರಾಜ್ಯವೇ ಅವರ ಆಜ್ಞೆ- ಆದೇಶಗಳಿಗೆ ಕಾಯುತ್ತಿದ್ದ, ರಾಜ್ಯದ ದಿಕ್ಕು- ದಿಸೆಗಳನ್ನೇ ಬದಲಿಸಬಲ್ಲಷ್ಟು ʻಶಕ್ತಿವಂತʼನಾಗಿದ್ದ ವ್ಯಕ್ತಿ, ಇದ್ದಕ್ಕಿದ್ದಂತೆ ನಗಣ್ಯ, ನಿಸ್ತೇಜ ನಾಯಕನಾಗುವುದು ನಾಡಿನ ಜನತೆಯ ಕಣ್ಣಮುಂದೆಯೇ ನಡೆದುಹೋಯಿತು. 19 ಸ್ಥಾನಗಳನ್ನು ಗಳಿಸಿದ ಪ್ರಾದೇಶಿಕ ಪಕ್ಷದ ನಾಯಕನ ಪಕ್ಕದಲ್ಲಿ ಕೂತು, ಮಾತನಾಡಲು ಅವರಿಗೇ ಅವಕಾಶ ಕಲ್ಪಿಸಿಕೊಟ್ಟು, ಅವರ ಭೋಪರಾಕ್‌ಗೆ ಬೆಚ್ಚಿ ಬಿದ್ದಿದ್ದರು. ಇದು ಬಿಜೆಪಿಯಲ್ಲಿ ಉಳಿಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಬೊಮ್ಮಾಯಿಯವರಿಗೆ ಏನೂ ಅನ್ನಿಸದಿರಬಹುದು. ಆದರೆ, ಸಾರ್ವಜನಿಕ ಬದುಕಿನಲ್ಲಿ ಬೊಮ್ಮಾಯಿಗಿರುವ ‘ಬೆಲೆ’ ಬಯಲಾಗಿಹೋಯಿತು.
ಅಪ್ಪ ಎಸ್.ಆರ್ ಬೊಮ್ಮಾಯಿ ಸಿದ್ಧಾಂತಬದ್ಧ ರಾಜಕಾರಣಿ. ಎಂ.ಎನ್ ರಾಯ್ ಅವರಿಂದ ಪ್ರಭಾವಿತರಾಗಿದ್ದ ಅವರು ಯಾವತ್ತೂ ತಂತ್ರಗಾರಿಕೆ ರಾಜಕಾರಣ ಮಾಡಿದವರಲ್ಲ. ಅವರ ನೀತಿ-ನಿಲುವುಗಳು ಜನಪರ ರಾಜಕಾರಣದ ಎಲ್ಲೆ ಮೀರಲಿಲ್ಲ. ಸಿದ್ಧಾಂತ ಆಧಾರಿತ ರಾಜಕಾರಣದ ಆಚೆ ಅವರು ಎಂದೂ ಆಲೋಚಿಸಿದವರಲ್ಲ. ಅವರು ದಕ್ಷ ಆಡಳಿತಗಾರರಾಗಿ ಹೆಸರು ಮಾಡದಿದ್ದರೂ, ದೇವೇಗೌಡ-ರಾಮಕೃಷ್ಣ ಹೆಗಡೆಯವರಂತೆ ವರ್ಚಸ್ವಿ-ಪ್ರಭಾವಿ ರಾಜಕಾರಣಿ ಎನಿಸಿಕೊಳ್ಳದಿದ್ದರೂ, ತಮ್ಮತನವನ್ನು ಬಿಟ್ಟುಕೊಟ್ಟವರಲ್ಲ. 1988ರಲ್ಲಿ ಸಿಕ್ಕ ಎಂಟು ತಿಂಗಳ ಸಣ್ಣ ಅವಕಾಶದಲ್ಲಿ ಅಲ್ಪರಾಗದೇ ಉಳಿದರು.
ಆದರೆ, ಇದೇ ಮಾತುಗಳನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಲಾಗುವುದಿಲ್ಲ. ಅಪ್ಪನಂತೆ ರಾಯ್ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಬಸವರಾಜ ಬೊಮ್ಮಾಯಿ, ರಾಜಕೀಯ ಜೀವನ ಆರಂಭಿಸಿದ್ದು ಜನತಾ ದಳದಿಂದ. ನಂತರ ಜನತಾ ದಳ (ಯು) ಸೇರಿದರು. ಆಗಿನ್ನೂ ಅವರು ಸಮಾಜವಾದಿಯಾಗಿಯೇ ಇದ್ದರು. ಬಿಜೆಪಿಗೆ ಸೇರಿದ ನಂತರ ಅವರ ಸಿದ್ಧಾಂತವೆಲ್ಲ ಮಣ್ಣು ಪಾಲಾಯಿತು.
ಅಪ್ಪ ಬೊಮ್ಮಾಯಿಯವರಿಗೆ ಬಂದೊದಗಿದ ರಾಜಕೀಯ ಸಂದಿಗ್ಧವೇ ಬಸವರಾಜ ಬೊಮ್ಮಾಯಿಯವರಿಗೂ ಬಂದೊದಗಿತ್ತು. ಅವರು ದೇವೇಗೌಡ ಮತ್ತು ರಾಮಕೃಷ್ಣ ಹೆಗಡೆಯವರ ನಡುವೆ ನಜ್ಜುಗುಜ್ಜಾದಂತೆ, ಬಸವರಾಜ ಬೊಮ್ಮಾಯಿಯವರೂ ಯಡಿಯೂರಪ್ಪ ಮತ್ತು ಬಿ.ಎಲ್ ಸಂತೋಷ್ ನಡುವೆ ನಜ್ಜುಗುಜ್ಜಾದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ- ಮಣಿಪುರದ ಪೈಶಾಚಿಕ ಕೃತ್ಯ- ಸುಪ್ರೀಮ್ ಉಸ್ತುವಾರಿಯಲಿ ನಡೆಯಲಿ ನ್ಯಾಯಾಂಗ ತನಿಖೆ
ಇಬ್ಬರ ನಡುವಿನ ಜಗಳದಲ್ಲಿ ಮೂರನೆಯವನಿಗೆ ಲಾಭದಂತೆ, ಆಕಸ್ಮಿಕವಾಗಿ ಸಿಕ್ಕ ಅಧಿಕಾರದಿಂದ ಎಸ್.ಆರ್ ಬೊಮ್ಮಾಯಿಯವರು ಮತ್ತೊಬ್ಬರ ಕೈಗೊಂಬೆಯಾಗಲಿಲ್ಲ. ಅಧಿಕಾರಕ್ಕಾಗಿ ಅಂಟಿ ಕೂರಲಿಲ್ಲ. ಜನವಿರೋಧಿ ನಡೆಯಂತೂ ಇಲ್ಲವೇ ಇಲ್ಲ.
ಆದರೆ ಬಸವರಾಜ ಬೊಮ್ಮಾಯಿ, ಕುರ್ಚಿಯಲ್ಲಿ ಕೂರಿಸಿದ ಯಡಿಯೂರಪ್ಪನವರ ಮುಂದೆ ನಡುಬಗ್ಗಿಸಿ ನಿಂತುಕೊಂಡೇ, ಅವರ ನಡ ಮುರಿದರು. ಅದು ಮುಂದೊಂದು ದಿನ ತನ್ನ ನಡವನ್ನು ಮುರಿಯುತ್ತದೆಂಬ ಸಣ್ಣ ಎಚ್ಚರವನ್ನೂ ಗ್ರಹಿಸದೆ ಆರೆಸೆಸ್ಸಿನ ಕೈಗೊಂಬೆಯಾದರು. ಸಂತೋಷರ ಸಂತೋಷವೇ ತಮ್ಮದೆಂದು ಭಾವಿಸಿದರು. ಅವರ ಕಣ್ಸನ್ನೆಗಳು, ಆರೆಸೆಸ್ಸಿನ ಅಜೆಂಡಾಗಳು ಸರ್ಕಾರಿ ಆದೇಶಗಳಾದವು. ಸರ್ವಜನಾಂಗದ ಶಾಂತಿಯ ತೋಟದಂತಹ ಕರ್ನಾಟಕಕ್ಕೆ ಬೆಂಕಿ ಇಟ್ಟರು. ಆ ಬೆಂಕಿ ತಮ್ಮನ್ನೇ ಸುಡುತ್ತದೆ ಎಂಬುದನ್ನೂ ಅರಿಯದಾದರು. ಅತಂತ್ರರಾದರು. ಅಲಕ್ಷಿಸಲ್ಪಟ್ಟರು.
ಭಾರತೀಯ ಜನತಾಪಕ್ಷ ನಾಯಕನನ್ನು ನಗಣ್ಯ ಮಾಡುವ ಪಕ್ಷ ಎನ್ನುವುದು ಬಸವರಾಜ ಬೊಮ್ಮಾಯಿಯವರಿಗೆ ಗೊತ್ತಿಲ್ಲದ ಸಂಗತಿ ಅಲ್ಲ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪನವರನ್ನೇ ಮೂಲೆಗೆ ತಳ್ಳಿದ್ದು ತಿಳಿಯದ್ದೇನಲ್ಲ. ಆದರೂ ಕ್ಷಣಿಕ ಕುರ್ಚಿಯಾಸೆಗೆ ಅದರ ಬೆರಳತುದಿಯಲ್ಲಾಡುವ ಗೊಂಬೆಯಾದರು. ಅದು ಆಡಿಸಿದಂತೆ ಆಡಿದರು. ಆಡುತ್ತಲೇ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡರು. ಸಾಲದೆಂಬಂತೆ, ಈಗ ಕುಮಾರಸ್ವಾಮಿಯವರಿಗೆ ಕುರ್ಚಿ ಬಿಟ್ಟುಕೊಟ್ಟು ಬೆಪ್ಪುತಕ್ಕಡಿಯಾದರು.
ಭಾರತೀಯ ಜನತಾ ಪಕ್ಷ ಎನ್ನುವುದು ರಾಜಕೀಯ ಪಕ್ಷವಾಗಿರಬಹುದು. ಆದರೆ ಅದು ಜನಪರವಲ್ಲ, ಜೀವಪರವಲ್ಲ. ಕೇವಲ ಅಧಿಕಾರದ ಪರ. ಅದನ್ನು 2002ರ ಗುಜರಾತಿನಿಂದ ಹಿಡಿದು 2023ರ ಮಣಿಪುರದವರೆಗೆ ತೆರೆದು ತೋರಿದೆ. ಕಣ್ಮುಂದಿನ ಭೀಕರತೆಯೂ ಅರ್ಥವಾಗದಿದ್ದರೆ, ದೇಶದ ಜನತೆಯನ್ನು ದಿಕ್ಕೆಡಿಸುತ್ತಿದ್ದರೂ ಸುಮ್ಮನಿದ್ದರೆ- ಇವತ್ತು ಬಸವರಾಜ ಬೊಮ್ಮಾಯಿಯವರಿಗಾದ ಸ್ಥಿತಿ ಎಲ್ಲರದೂ ಆಗಬಹುದು.
