ಕೋವಿಡ್ ಕಾಲದಲ್ಲಿ ₹40 ಸಾವಿರ ಕೋಟಿ ಲೂಟಿ ಮಾಡಲಾಗಿದೆ ಎನ್ನುವುದು ಅತ್ಯಂತ ಗಂಭೀರ ಆರೋಪ. ಅದು ಕಡಿಮೆ ಮೊತ್ತವೇನಲ್ಲ. ರಾಜ್ಯದ ಕೋಟ್ಯಂತರ ಜನರ ಬದುಕುಗಳನ್ನು ನೇರ್ಪುಗೊಳಿಸಲು ಬಳಸಬಹುದಾದ ಮೊತ್ತ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ, ಯತ್ನಾಳ್ ತಮ್ಮ ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ‘ನ ಖಾವೂಂಗಾ ನ ಖಾನೇದೂಂಗಾ’ ಎನ್ನುವ ಪ್ರಧಾನಿ ಮೋದಿ ಅವರು ಈ ಬಗ್ಗೆ ಕನಿಷ್ಠ ಪಕ್ಷ ಮೌನ ಮುರಿಯುವರೇ?
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಹಣ ಖರ್ಚು ಮಾಡುವ ಬಗ್ಗೆ ಬಿಜೆಪಿ ಭಾರಿ ಟೀಕೆ ಮಾಡಿತ್ತು. ಗ್ಯಾರಂಟಿಗಳ ಜಾರಿಗಾಗಿ ಸುಮಾರು 50 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆಂದೂ, ಅದರಿಂದ ಬೊಕ್ಕಸ ಬರಿದಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಣವೇ ಉಳಿಯುವುದಿಲ್ಲವೆಂದು ಪ್ರಚಾರ ಮಾಡಿತ್ತು. ಆದರೆ, ಈಗ ಬಿಜೆಪಿ ವಿರುದ್ಧ ಸರಿಸುಮಾರು ಅಷ್ಟೇ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಎಸಗಿರುವ ಆರೋಪ ವ್ಯಕ್ತವಾಗಿದೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕೋವಿಡ್ ಹೆಸರಿನಲ್ಲಿ 40 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.
45 ರೂಪಾಯಿ ಮಾಸ್ಕ್‌ಗೆ 485 ರೂಪಾಯಿ ಖರ್ಚು ಮಾಡಲಾಗಿತ್ತು. ಒಂದು ಬೆಡ್‌ಗೆ 20 ಸಾವಿರ ರೂಪಾಯಿ ಬಾಡಿಗೆಯಂತೆ 10 ಸಾವಿರ ಬೆಡ್‌ಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ಎಲ್ಲದಕ್ಕೂ ಮನ ಬಂದಂತೆ ದರ ನಿಗದಿಪಡಿಸಿ ಲೂಟಿ ಮಾಡಲಾಗಿದೆ ಎಂದು ಕೂಡ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಬಸನಗೌಡ ಯತ್ನಾಳ್ ಬಿಜೆಪಿಯ ಮಟ್ಟಿಗೆ ನುಂಗಲಾರದ ತುತ್ತಾಗಿದ್ದಾರೆ. ಅವರ ಪಕ್ಷದೊಳಗಿನ ಅಂತಃಕಲಹದ ಭಾಗವಾಗಿಯೇ ಅವರು ಈ ಆರೋಪಗಳನ್ನು ಮಾಡಿದ್ದಾರೆ ಎನ್ನುವುದು ನಿಜ. ಆದರೆ, ಯಾವ ಕಾರಣಕ್ಕೆ ಆರೋಪ ಮಾಡಿದ್ದಾರೆ ಎನ್ನುವುದಕ್ಕಿಂತಲೂ ಅವರ ಆರೋಪ ಅತ್ಯಂತ ಗಂಭೀರವಾಗಿರುವುದರಿಂದ ಅದರ ಸತ್ಯಾಸತ್ಯತೆಯನ್ನು ತನಿಖೆ ಮಾಡುವುದು ಅತ್ಯಂತ ಅವಶ್ಯಕ.
ಬಿಜೆಪಿ ಸರ್ಕಾರ ಕೋವಿಡ್ ನಿಯಂತ್ರಣದ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡಿದೆ ಎನ್ನುವ ಆರೋಪ ಬಂದಿರುವುದು ಇದೇ ಮೊದಲೇನಲ್ಲ. ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸ್ವಾಯತ್ತ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಶಿಫಾರಸು ಮಾಡಿತ್ತು. ಔಷಧಿ, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ವೈದ್ಯಕೀಯ ಸಾಧನಗಳ ಖರೀದಿ, ಬಳಕೆ, ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆ, ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ಶುಲ್ಕ ಪಾವತಿ ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆರೋಗ್ಯ ಇಲಾಖೆಯು ಸಮಿತಿಯೊಂದಿಗೆ ಹಂಚಿಕೊಂಡಿರಲಿಲ್ಲ. ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದೂ ಕೂಡ ಪಿಎಸಿ ಹೇಳಿತ್ತು.
ಕೋವಿಡ್ ನಂತರದ ದಿನಗಳಲ್ಲಿ ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಹಲವು ಬಾರಿ ಕೋವಿಡ್ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಿದ್ದರು. ಅದಕ್ಕೆ ಆಗ ಆರೋಗ್ಯ ಸಚಿವರಾಗಿದ್ದ ಕೆ ಸುಧಾಕರ್, ಭ್ರಷ್ಟಾಚಾರದ ಆರೋಪಗಳನ್ನು ತಳ್ಳಿ ಹಾಕಿದ್ದರು. ಆದರೆ, ಕಳಪೆ ಸಾಮಗ್ರಿ, ಬಳಕೆಗೆ ಅರ್ಹವಿಲ್ಲದ ವೆಂಟಿಲೇಟರ್ ಇತ್ಯಾದಿ ಸಾಧನಗಳನ್ನು ಹಲವು ಪಟ್ಟು ಹೆಚ್ಚಿನ ದರ ಕೊಟ್ಟು ತಂದ ಬಗ್ಗೆ ಹಲವು ದೂರುಗಳು, ಮಾಧ್ಯಮ ವರದಿಗಳು ಬಂದವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ಅಧಿಸೂಚನೆ ಹೊರಡಿಸಲಾಗಿತ್ತು.
ಯತ್ನಾಳ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ತಮ್ಮನ್ನು ಚೌಕಿದಾರ ಎಂದು ಬಣ್ಣಿಸಿಕೊಳ್ಳುವ, ನ ಖಾವೂಂಗ ನ ಖಾನೇದೂಂಗ ಎಂದು ಗುಟುರು ಹಾಕುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಪಕ್ಷದ ನಾಯಕ ಮಾಡುತ್ತಿರುವ ಆರೋಪಗಳ ಬಗ್ಗೆ ಮೌನವಾಗಿರುವುದು ನಿಗೂಢವಾಗಿದೆ’ ಎಂದಿದ್ದಾರೆ. ಹೌದು, ತಾವು ಭ್ರಷ್ಟಾಚಾರ ಸಹಿಸಲ್ಲ ಎನ್ನುವ ಪ್ರಧಾನಿಗಳು ಇಂಥ ದೊಡ್ಡ ಹಗರಣದ ಬಗ್ಗೆ ಯಾಕೆ ಸುಮ್ಮನಿದ್ದಾರೆ? ಈ ಎಲ್ಲ ಆರೋಪಗಳು ಯಡಿಯೂರಪ್ಪ ಅವರ ಕಡೆಗೆ ಕೈ ತೋರಿಸುತ್ತವೆ ಎಂದೇ? ಯಡಿಯೂರಪ್ಪರನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ರಾಜಕಾರಣ ಮಾಡಲಾಗುವುದಿಲ್ಲ ಎಂದೇ? ಇದನ್ನು ಬಿಜೆಪಿ ವರಿಷ್ಠರು ಸ್ಪಷ್ಟಪಡಿಸಬೇಕು. ಇದು ನಿಜವೇ ಆದರೆ, ತಮ್ಮ ರಾಜಕೀಯ ಲಾಭಕ್ಕಾಗಿ ಒಂದು ರಾಜ್ಯದ ಹಿತವನ್ನೇ ಬಿಜೆಪಿ ಬಲಿಕೊಡುತ್ತಿದೆ ಎಂಬುದು ಖಾತ್ರಿಯಾಗುತ್ತದೆ.
ಕಾಂಗ್ರೆಸ್ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದಾಗ, ಮನೆ ಯಜಮಾನಿ ಖಾತೆಗೆ 2000 ರೂಪಾಯಿ ಹಾಕಿದಾಗ, ಬಡವರಿಗೆ ಹೆಚ್ಚುವರಿ ಅಕ್ಕಿಯ ಹಣ ಕೊಟ್ಟಾಗ ಬೊಕ್ಕಸವೇ ಖಾಲಿಯಾಯಿತು ಎನ್ನುವಂತೆ ಬೊಬ್ಬೆ ಹೊಡೆದಿದ್ದ ಬಿಜೆಪಿ, ಈಗ ಅಷ್ಟು ಪ್ರಮಾಣದ ಹಣ ತನ್ನ ನಾಯಕರ ತಿಜೋರಿ ಸೇರಿದೆ ಎನ್ನುವ ಆರೋಪಗಳು ಬಂದಾಗ ಸುಮ್ಮನಿರುವುದು ಏನನ್ನು ಸೂಚಿಸುತ್ತದೆ?
ಇದು ಅತ್ಯಂತ ಗಂಭೀರ ಆರೋಪ. ₹40 ಸಾವಿರ ಕೋಟಿ ಲೂಟಿ ಸಣ್ಣ ಸಂಗತಿಯೇನಲ್ಲ. ರಾಜ್ಯದ ಕೋಟ್ಯಂತರ ಜನರ ಬದುಕುಗಳನ್ನು ನೇರ್ಪುಗೊಳಿಸಲು ಬಳಸಬಹುದಾದ ಮೊತ್ತ ಅದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ, ಯತ್ನಾಳ್ ಅವರು ಈ ವಿಚಾರದಲ್ಲಿ ಹಿಟ್ ಅಂಡ್ ರನ್ ಎನ್ನುವಂತೆ ಮಾಡಬಾರದು. ತಮ್ಮ ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಹಗರಣದ ಬಗ್ಗೆ ತಮಗಿರುವ ಮಾಹಿತಿ ಹಾಗೂ ದಾಖಲೆಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ ಸಲ್ಲಿಸಬೇಕು. ರಾಜ್ಯದ ಜನರ ಹಿತದೃಷ್ಟಿಯಿಂದಲಾದರೂ ಯತ್ನಾಳ್ ಈ ಕೆಲಸ ಮಾಡಬೇಕು. ಇನ್ನು ಬಿಜೆಪಿಗೆ ಕನಿಷ್ಠ ಮಟ್ಟದ ಮೌಲ್ಯ, ನೈತಿಕತೆ ಉಳಿದಿದ್ದರೆ, ತಕ್ಷಣವೇ ಪ್ರಧಾನಿ ಸೇರಿದಂತೆ ವರಿಷ್ಠರು ಈ ಬಗ್ಗೆ ಮೌನ ಮುರಿಯಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು.